ಕನ್ನಡದ ನಟರು ಪರಭಾಷೆಗಳಲ್ಲಿ ಮಿಂಚುವುದು ಹೊಸತೇನಲ್ಲ. ಕನ್ನಡದ ಹಲವು ನಟರಿಗೆ ಪರಭಾಷೆಗಳಲ್ಲಿ ಒಳ್ಳೆಯ ಬೇಡಿಕೆ ಇದೆ. ಇತ್ತೀಚೆಗೆ ಆ ಬೇಡಿಕೆ ತುಸು ಹೆಚ್ಚಾಗಿದೆ. ಸುದೀಪ್ (Sudeep), ಶಿವರಾಜ್ ಕುಮಾರ್ (Shiva Rajkumar) ಅವರುಗಳು ಮಾತ್ರವೇ ಅಲ್ಲದೆ ಹಲವು ಕನ್ನಡದ ನಟರು ಪರಭಾಷೆಗಳಲ್ಲಿ ನಟಿಸುತ್ತಿದ್ದಾರೆ. ಕನ್ನಡದ ಪ್ರತಿಭಾವಂತ ನಟರಲ್ಲಿ ಒಬ್ಬರಾದ ವಸಿಷ್ಠ ಸಿಂಹ ಈಗಾಗಲೇ ಪರಭಾಷೆಯಲ್ಲಿ ನಟಿಸಿದ್ದಾರೆ. ಇದೀಗ ಜನಪ್ರಿಯ ನಟಿ, ಮಿಲ್ಕಿ ಬ್ಯೂಟಿ ಖ್ಯಾತಿಯ ತಮನ್ನಾ ಭಾಟಿಯಾ ಜೊತೆ ತೆರೆ ಹಂಚಿಕೊಳ್ಳಲಿದ್ದಾರೆ.
ವಸಿಷ್ಠ ನಟಿಸಿದ್ದ ಮೊದಲ ತೆಲುಗು ಸಿನಿಮಾ ‘ಓದೆಲ ರೈಲ್ವೆ ಸ್ಟೇಷನ್’ ಉತ್ತಮ ಪ್ರತಿಕ್ರಿಯೆ ಗಳಿಸಿಕೊಂಡಿತ್ತು. ಇದೀಗ ಆ ಸಿನಿಮಾದ ಎರಡನೇ ಭಾಗ ನಿರ್ಮಾಣಗೊಳ್ಳುತ್ತಿದ್ದು, ಸಿನಿಮಾದಲ್ಲಿ ತಮನ್ನಾ ಭಾಟಿಯಾ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮೊದಲ ಭಾಗದಲ್ಲಿ ಮುಖ್ಯ ಪಾತ್ರದಲ್ಲಿ ನಟಿಸಿದ್ದ ವಸಿಷ್ಠ ಸಿಂಹ ಎರಡನೇ ಭಾಗದಲ್ಲಿಯೂ ಮುಂದುವರೆದಿದ್ದಾರೆ.
‘ಓದೆಲ ರೈಲ್ವೆ ಸ್ಟೇಷನ್’ ಸಿನಿಮಾ ಸೀರಿಯಲ್ ಕಿಲ್ಲರ್ ಒಬ್ಬನ ಕತೆಯನ್ನು ಒಳಗೊಂಡಿತ್ತು. ಮದುವೆಯಾದ ನವ ವಧುವನ್ನು ಅಪಹರಿಸಿ ಅತ್ಯಾಚಾರ ಮಾಡಿ ಕೊಲೆ ಮಾಡುವ ವ್ಯಕ್ತಿಯ ಕತೆ ಸಿನಿಮಾದಲ್ಲಿತ್ತು. ಇದೀಗ ‘ಓದೆಲ 2’ ಸಿನಿಮಾ ರೆಡಿಯಾಗುತ್ತಿದ್ದು, ಸಿನಿಮಾದಲ್ಲಿ ತಮನ್ನಾ ತನಿಖಾಧಿಕಾರಿ ಪಾತ್ರದಲ್ಲಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ.
ಇದನ್ನೂ ಓದಿ: ನಟ ವಸಿಷ್ಠ ಸಿಂಹಗೆ ಹೊಸ ಬಿರುದು ಕೊಟ್ಟ ಅಭಿಮಾನಿಗಳು
‘ಓದೆಲ 2’ ಸಿನಿಮಾದ ಮುಹೂರ್ತ ಇತ್ತೀಚೆಗಷ್ಟೆ ವಾರಣಾಸಿಯಲ್ಲಿ ನಡೆದಿದೆ. ಸಿನಿಮಾದ ಚಿತ್ರೀಕರಣ ಸಹ ಅಲ್ಲಿಂದಲೇ ಆರಂಭವಾಗಿದೆ. ಮೊದಲ ಭಾಗದಂತೆ ಎರಡನೇ ಭಾಗವೂ ಸಹ ಸಸ್ಪೆನ್ಸ್ ಥ್ರಿಲ್ಲರ್ ಕತೆಯನ್ನು ಒಳಗೊಂಡಿದೆ ಎನ್ನಲಾಗುತ್ತಿದೆ. ಸಿನಿಮಾದ ಮುಹೂರ್ತದಲ್ಲಿ ತಮನ್ನಾ, ವಸಿಷ್ಠ ಸಿಂಹ, ನಟಿ ಹರಿಪ್ರಿಯ ಅವರುಗಳು ಭಾಗಿಯಾಗಿದ್ದರು. ಅಂದಹಾಗೆ ಸಿನಿಮಾಕ್ಕೆ ಕನ್ನಡಿಗ ಅಜನೀಶ್ ಲೋಕನಾಥ್ ಸಂಗೀತ ನೀಡಲಿದ್ದಾರೆ. ಅಜನೀಶ್ ಸಹ ಮುಹೂರ್ತ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
‘ಓದೆಲ 2’ ಸಿನಿಮಾದ ಕತೆಯನ್ನು ಸಂಪತ್ ನಂದಿ ರಚಿಸಿದ್ದು ಸಿನಿಮಾದ ನಿರ್ದೇಶನವನ್ನು ಅಶೋಕ್ ತೇಜ ಮಾಡುತ್ತಿದ್ದಾರೆ. ಮಧು ಕ್ರಿಯೇಷನ್ಸ್ ಬ್ಯಾನರ್ನಲ್ಲಿ ಡಿ ಮಧು ಬಂಡವಾಳ ಹೂಡಿದ್ದಾರೆ. ಸಿನಿಮಾದ ಬಹುತೇಕ ಭಾಗದ ಚಿತ್ರೀಕರಣ ವಾರಣಾಸಿಯಲ್ಲಿ ನಡೆಯಲಿದೆ ಎನ್ನಲಾಗುತ್ತಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ