ಪೊಲೀಸ್ ಠಾಣೆ ಮೆಟ್ಟಿಲೇರಿದ ‘ವಸುದೇವ ಕುಟುಂಬ’ ಧಾರಾವಾಹಿ ಕಿರಿಕ್: ನಿರ್ಮಾಪಕರ ವಿರುದ್ಧ ಕಲಾವಿದರಿಂದ ದೂರು

Vasudeva Kutumba serial: ಸಂಭಾವನೆ ಪಾವತಿಯಾಗದಿರುವ ವಿಚಾರವಾಗಿ ಸ್ಟಾರ್ ಸುವರ್ಣದ 'ವಸುದೇವ ಕುಟುಂಬ' ಧಾರಾವಾಹಿ ಕಲಾವಿದರು ನಿರ್ಮಾಪಕರ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. ಡಿಸೆಂಬರ್‌ನಿಂದಲೇ ಸಂಭಾವನೆ ಬಾಕಿ ಉಳಿದಿದೆ ಎಂದು ಕಲಾವಿದರು ಹೇಳಿದ್ದು, ಇದನ್ನು ಪ್ರಶ್ನಸಿದ್ದಕ್ಕೆ ನಿರ್ಮಾಪಕರು ತಮ್ಮ ಮೇಲೆ ಸುಳ್ಳು ದೂರು ನೀಡಿರುವುದಾಗಿ ಆರೋಪಿಸಿದ್ದಾರೆ. ಬಾಕಿ ಹಣ ನೀಡುವಂತೆ ಮತ್ತು ಕಿರುಕುಳದಿಂದ ರಕ್ಷಣೆ ನೀಡುವಂತೆ ದೂರಿನಲ್ಲಿ ಮನವಿ ಮಾಡಲಾಗಿದೆ.

ಪೊಲೀಸ್ ಠಾಣೆ ಮೆಟ್ಟಿಲೇರಿದ ‘ವಸುದೇವ ಕುಟುಂಬ’ ಧಾರಾವಾಹಿ ಕಿರಿಕ್: ನಿರ್ಮಾಪಕರ ವಿರುದ್ಧ ಕಲಾವಿದರಿಂದ ದೂರು
ನಿರ್ಮಾಪಕರ ವಿರುದ್ಧ ದೂರು
Image Credit source: Tv9 Kannada

Updated on: May 01, 2026 | 2:28 PM

ಸ್ಟಾರ್ ಸುವರ್ಣ ಚಾನೆಲ್​​ನಲ್ಲಿ ಪ್ರಸಾರ ಕಾಣುತ್ತಿರುವ ‘ವಸುದೇವ ಕುಟುಂಬ’ ಧಾರಾವಾಹಿಯ ಕಲಾವಿದರು, ತಂತ್ರಜ್ಞರು ಮತ್ತು ನಿರ್ಮಾಪಕರ ನಡುವಿನ ಸಮರ ತೀವ್ರ ಸ್ವರೂಪ ಪಡೆದುಕೊಂಡಿದೆ. ಕೆಲವು ತಿಂಗಳುಗಳಿಂದಲೂ ಧಾರಾವಾಹಿಯ ನಿರ್ಮಾಪಕರು ಕಲಾವಿದರಿಗೆ ಸಂಭಾವನೆ ನೀಡಿಲ್ಲ. ಮಾತ್ರವಲ್ಲದೆ, ಆಹಾರ, ಇನ್ನಿತರೆಗಳನ್ನು ಸರಿಯಾಗಿ ನೀಡಿಲ್ಲ ಎಂಬ ಆರೋಪ ಕೇಳಿಬಂದಿದ್ದ ಬೆನ್ನಲ್ಲೇ ಈ ಬಗ್ಗೆ ಬ್ಯಾಟರಾಯನಪುರ ಪೊಲೀಸರಿಗೆ ಧಾರವಾಹಿಯ ಕಲಾವಿದರು ದೂರು ಸಲ್ಲಿಕೆ ಮಾಡಿದ್ದಾರೆ.

ದೂರಿನಲ್ಲಿ ತಮಗಾದ ಅನ್ಯಾಯದ ಬಗ್ಗೆ ನಟಿ ಚೈತ್ರಾ ಉಲ್ಲೇಖಿಸಿದ್ದು, ‘ವಸುದೇವ ಕುಟುಂಬ’ ಧಾರಾವಾಹಿಯಲ್ಲಿ ಕಲಾವಿದೆಯಾಗಿ ಕೆಲಸ ಮಾಡುತ್ತಿದ್ದು, ನಾವು ಕಲಾವಿದರು ಕೋರಮಂಗಲ ಟಾಕೀಸ್ ಎಂಬ ನಿರ್ಮಾಣ ಸಂಸ್ಥೆಯೊಂದಿಗೆ (ಪ್ರೊಡ್ಯೂಸರ್ ರೇಖಾ ಕೆ.ಬಿ ಮತ್ತು ನಿರ್ದೇಶಕ ಕೋರಮಂಗಲ ಅನಿಲ್) ಒಪ್ಪಂದ ಮಾಡಿಕೊಂಡಿದ್ದೇವೆ. ಆ ಒಪ್ಪಂದದ ಪ್ರಕಾರ, ನಾವು ಮಾಡಿದ ಕೆಲಸಕ್ಕೆ 30 ದಿನಗಳೊಳಗೆ ಪಾವತಿ ನೀಡಬೇಕು ಎಂದು ಉಲ್ಲೇಖಿಸಲಾಗಿದೆ. ಆದರೆ, ಡಿಸೆಂಬರ್ ತಿಂಗಳಿಂದ (2 ದಿನಗಳ ಪಾವತಿ), ಜನವರಿ, ಫೆಬ್ರವರಿ ಹಾಗೂ ಮಾರ್ಚ್ 7, 2026ರವರೆಗೆ ನನಗೆ ಯಾವುದೇ ಪಾವತಿ ಬಂದಿಲ್ಲ. ನಮ್ಮೊಂದಿಗೆ ಕೆಲಸ ಮಾಡಿದ ಇತರ ತಂತ್ರಜ್ಞರೂ ಸಹ ಡಿಸೆಂಬರ್, ಜನವರಿ, ಫೆಬ್ರವರಿ ಹಾಗೂ ಮಾರ್ಚ್ ತಿಂಗಳ ಪಾವತಿಯನ್ನು ಪಡೆಯಬೇಕಾಗಿದೆ. ಈ ಬಗ್ಗೆ ನಿರ್ಮಾಣ ಸಂಸ್ಥೆಯನ್ನು ಕರೆ ಅಥವಾ ಸಂದೇಶಗಳ ಮೂಲಕ ಸಂಪರ್ಕಿಸಲು ಪ್ರಯತ್ನಿಸಿದರೂ, ಯಾವುದೇ ಪ್ರತಿಕ್ರಿಯೆ ದೊರಕಿಲ್ಲ.  ಪಾವತಿಯ ದಿನಾಂಕದ ಕುರಿತು ಕೂಡ ಮಾಹಿತಿ ನೀಡಿಲ್ಲ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ‘ವಸುದೇವ ಕುಟುಂಬ’ ಧಾರಾವಾಹಿ ಕಿರಿಕ್, ನಿರ್ಮಾಪಕರ ನಡು ರಸ್ತೆಯಲ್ಲಿ ಅಡ್ಡ ಹಾಕಿದ ಹಂಸ

ನಾಗರಬಾವಿಯಲ್ಲಿ ನಿರ್ಮಾಪಕರು ನಡೆಸುತ್ತಿರುವ ‘ತತ್ಸವಿ ಹೋಟೆಲ್’ ಬಳಿಯೂ ಹೋಗಿ ನಾವು ಹಣ ಪಾವತಿಯಾಗದಿರುವ ಬಗ್ಗೆ ಕೇಳಿದ್ದು, ಈ ವೇಳೆ ಅವರು ಸರಿಯಾದ ರೀತಿಯಲ್ಲಿ ಪ್ರತಿಕ್ರಿಯೆ ನೀಡಿಲ್ಲ. ಬದಲಾಗಿ ಬೆದರಿಕೆ ಮತ್ತು ಕಿರುಕುಳ ನೀಡಿದ್ದೇವೆ ಎಂದು ಆರೋಪಿಸಿ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ನಮ್ಮ ಮೇಲೆಯೇ ದೂರು ನೀಡಿದ್ದಾರೆ. ಹೀಗಾಗಿ ನಮಗೆ ಪಾವತಿಸಬೇಕಿರುವ ಹಣವನ್ನು ತಕ್ಷಣ ನೀಡುವಂತೆ ಮತ್ತು ನಿರ್ಮಾಣ ಸಂಸ್ಥೆಯಿಂದ ನಮ್ಮ ಮೇಲೆ ಮಾಡಲಾಗಿರುವ ಆರೋಪಗಳಿಂದ ರಕ್ಷಣೆ ನೀಡುವಂತೆ ವಿನಂತಿಸೋದಾಗಿ ದೂರಿನಲ್ಲಿ ತಿಳಿಸಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 2:25 pm, Fri, 1 May 26

Follow Us