ಹಿರಿಯ ನಟಿ ಸಾಹುಕಾರ್ ಜಾನಕಿ ನಿಧನ: 94ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ ಕಲಾವಿದೆ

ಬಹುಭಾಷಾ ನಟಿ ಸಾಹುಕಾರ್ ಜಾನಕಿ ಅವರು ಚೆನ್ನೈನಲ್ಲಿ ನಿಧನರಾಗಿದ್ದಾರೆ. ಅವರ ನಿಧನದ ಸುದ್ದಿಯನ್ನು ಕಲಾವಿದರ ಸಂಘದ ಅಧ್ಯಕ್ಷ ನಾಸರ್ ಅವರು ಖಚಿತಪಡಿಸಿದ್ದಾರೆ. ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಭಾಷೆಯ ಸಿನಿಮಾಗಳು ಸೇರಿ 400ಕ್ಕೂ ಹೆಚ್ಚು ಚಿತ್ರಗಳಲ್ಲಿ ಜಾನಕಿ ಅವರು ನಟಿಸಿದ್ದರು.

ಹಿರಿಯ ನಟಿ ಸಾಹುಕಾರ್ ಜಾನಕಿ ನಿಧನ: 94ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ ಕಲಾವಿದೆ
Sowcar Janaki

Updated on: Aug 21, 2026 | 3:44 PM

ದಕ್ಷಿಣ ಭಾರತೀಯ ಚಿತ್ರರಂಗದ ಹಿರಿಯ ನಟಿ ಸಾಹುಕಾರ್ ಜಾನಕಿ (Sowcar Janaki) ಅವರು ವಯೋಸಹಜ ಅನಾರೋಗ್ಯದಿಂದ ಶುಕ್ರವಾರ (ಆಗಸ್ಟ್ 21) ಚೆನ್ನೈನಲ್ಲಿ ನಿಧನರಾಗಿದ್ದಾರೆ. ಅವರಿಗೆ 94 ವರ್ಷ ವಯಸ್ಸಾಗಿತ್ತು. ಕಳೆದ ಕೆಲವು ದಿನಗಳಿಂದ ವಯೋಸಹಜ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ಅವರನ್ನು ಚೆನ್ನೈನ ಆಳ್ವಾರ್‌ಪೇಟೆಯಲ್ಲಿರುವ ಕಾವೇರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು, ಶುಕ್ರವಾರ ಮಧ್ಯಾಹ್ನ 1.59ಕ್ಕೆ ಕೊನೆಯುಸಿರೆಳೆದಿದ್ದಾರೆ ಎಂದು ಕಲಾವಿದರ ಸಂಘದ ಅಧ್ಯಕ್ಷ ನಾಸರ್ ತಿಳಿಸಿದ್ದಾರೆ.

ಸಾಹುಕಾರ್ ಜಾನಕಿ ಅವರ ಪಾರ್ಥಿವ ಶರೀರವನ್ನು ಸಾರ್ವಜನಿಕರ ಹಾಗೂ ಅಭಿಮಾನಿಗಳ ಅಂತಿಮ ದರ್ಶನಕ್ಕಾಗಿ ಚೆನ್ನೈನ ತೇನಾಂಪೇಟೆಯಲ್ಲಿರುವ ಸೇಂಟೋಫ್ ರಸ್ತೆಯ ನಿವಾಸದಲ್ಲಿ ಸಂಜೆ 5 ಗಂಟೆಯಿಂದ ಇರಿಸಲಾಗುವುದು ಎಂದು ನಾಸರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಜಾನಕಿ ನಿಧನಕ್ಕೆ ಅಭಿಮಾನಿಗಳು, ಆಪ್ತರು, ಸೆಲೆಬ್ರಿಟಿಗಳು ಕಂಬನಿ ಮಿಡಿಯುತ್ತಿದ್ದಾರೆ.

ಬಣ್ಣದ ಲೋಕದ ಸುದೀರ್ಘ ಪಯಣ:

1950ರಲ್ಲಿ ಎಲ್.ವಿ. ಪ್ರಸಾದ್ ನಿರ್ದೇಶನದ ತೆಲುಗಿನ ‘ಸಾಹುಕಾರು’ ಚಿತ್ರದ ಮೂಲಕ ಜಾನಕಿ ಅವರು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಈ ಚಿತ್ರ ನೀಡಿದ ಅಭೂತಪೂರ್ವ ಯಶಸ್ಸಿನಿಂದಾಗಿ ಅವರ ಹೆಸರಿನ ಮುಂದೆ ‘ಸಾಹುಕಾರ್’ ಎಂಬ ಬಿರುದು ಖಾಯಂ ಆಗಿ ಉಳಿಯಿತು. 1952ರ ‘ವಳಯಾಪತಿ’ ಚಿತ್ರದ ಮೂಲಕ ಅವರು ತಮಿಳು ಚಿತ್ರರಂಗ ಪ್ರವೇಶಿಸಿದರು.

ಕನ್ನಡ ಚಿತ್ರರಂಗದ ಜೊತೆಗಿನ ನಂಟು:

ಕನ್ನಡ ಚಿತ್ರರಂಗಕ್ಕೂ ಸಾಹುಕಾರ್ ಜಾನಕಿ ಅವರ ಕೊಡುಗೆ ಅಪಾರ. 1954ರ ‘ದೇವಕನ್ನಿಕಾ’ ಚಿತ್ರದ ಮೂಲಕ ಚಂದನವನ ಪ್ರವೇಶಿಸಿದ ಅವರು, 1959ರಲ್ಲಿ ಡಾ. ರಾಜ್‌ಕುಮಾರ್ ಅವರೊಂದಿಗೆ ಅಭಿನಯಿಸಿದ ‘ಮಹಿಷಾಸುರ ಮರ್ದಿನಿ’ ಚಿತ್ರವು ಅವರ ಜನಪ್ರಿಯತೆಯನ್ನು ಹೆಚ್ಚಿಸಿತ್ತು. ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿ 400ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿರುವ ಅವರು ತಮ್ಮ ಅದ್ಭುತ ಅಭಿನಯದಿಂದ ಕೋಟ್ಯಂತರ ಅಭಿಮಾನಿಗಳ ಮನ ಗೆದ್ದಿದ್ದರು.

ಇದನ್ನೂ ಓದಿ: ಟಾಲಿವುಡ್ ಜನಪ್ರಿಯ ಪೋಷಕ ನಟಿ ಪಾವಲ ಶಾಮಲ ನಿಧನ

ಸಾಹುಕಾರ್ ಜಾನಕಿ ಅವರ ಸುದೀರ್ಘ ಕಲಾ ಸೇವೆಯನ್ನು ಗುರುತಿಸಿ ಭಾರತ ಸರ್ಕಾರ 2022ರಲ್ಲಿ ದೇಶದ ಪ್ರತಿಷ್ಠಿತ ‘ಪದ್ಮಶ್ರೀ’ ಪ್ರಶಸ್ತಿ ನೀಡಿ ಗೌರವಿಸಿತ್ತು. ಅವರ ನಿಧನಕ್ಕೆ ಚಿತ್ರರಂಗದ ಗಣ್ಯರು ಹಾಗೂ ಅಭಿಮಾನಿಗಳು ತೀವ್ರ ಕಂಬನಿ ಮಿಡಿದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 3:40 pm, Fri, 21 August 26

Loading...
Unable to load recommendations.
Follow Us