ಭಾರತ ಕಂಡ ಜನಪ್ರಿಯ ಹಿನ್ನೆಲೆ ಗಾಯಕಿ ಲತಾ ಮಂಗೇಶ್ಕರ್ (Lata Mangeshkar) ಇಹಲೋಕ ತ್ಯಜಿಸಿದ್ದಾರೆ. ಅವರಿಗೆ 92 ವರ್ಷ ವಯಸ್ಸಾಗಿತ್ತು. ಇತ್ತೀಚೆಗೆ ಕೊರೊನಾ (Corona) ಸೋಂಕಿಗೆ ತುತ್ತಾಗಿದ್ದ ಅವರಿಗೆ ನ್ಯುಮೋನಿಯಾ ಕೂಡ ಕಾಣಿಸಿಕೊಂಡಿತ್ತು. ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಕೊರೊನಾ ಹಾಗೂ ನ್ಯುಮೋನಿಯಾದಿಂದ ಚೇತರಿಸಿಕೊಂಡಿದ್ದ ಅವರು, ವೆಂಟಿಲೇಟರ್ನಿಂದ ಹೊರಬಂದಿದ್ದರು. ಆದರೆ ನಿನ್ನೆ (ಶನಿವಾರ) ಮತ್ತೆ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು. ಇದೀಗ ಅವರು ಬಹು ಅಂಗಾಂಗ ವೈಫಲ್ಯದಿಂದ ಇಹಲೋಕ ತ್ಯಜಿಸಿದ್ದಾರೆ. ಕೇಂದ್ರ ಸಚಿವ ನಿತಿನ್ ಗಡ್ಕರಿ ಎಎನ್ಐಗೆ ಮಾಹಿತಿ ತಿಳಿಸಿದ್ದಾರೆ. ಲತಾ ಅವರ ನಿಧನದಿಂದ ದೇಶದ ಗಾಯನ ಪರಂಪರೆಯ ಹಿರಿಯ ಕೊಂಡಿ ಕಳಚಿದಂತಾಗಿದೆ.
ಎಎನ್ಐ ಹಂಚಿಕೊಂಡಿರುವ ಟ್ವೀಟ್:
Singing legend Lata Mangeshkar passes away, says Union Minister Nitin Gadkari pic.twitter.com/S1Rhc63OdI
— ANI (@ANI) February 6, 2022
ಲತಾ ಅವರು 1929ರ ಸೆಪ್ಟೆಂಬರ್ 28ರಂದು ಜನಿಸಿದ್ದರು. ಅವರ ಮೊದಲ ಹೆಸರು ಹೇಮಾ ಮಂಗೇಶ್ಕರ್ ಎಂದಾಗಿತ್ತು. 36 ಕ್ಕೂ ಅಧಿಕ ಭಾಷೆಗಳಲ್ಲಿ ಹಾಡಿದ ಕೀರ್ತಿ ಲತಾ ಅವರದ್ದು. ಸಾವಿರಕ್ಕೂ ಅಧಿಕ ಹಿಂದಿ ಚಿತ್ರಗಳಿಗೆ ಅವರು ಹಿನ್ನೆಲೆ ಗಾಯನ ಮಾಡಿದ್ದರು. ಸಂಗೀತ ನಿರ್ದೇಶಕರಾಗಿಯೂ ಲತಾ ಅವರು ಚಿತ್ರರಂಗದಲ್ಲಿ ಸೇವೆ ಸಲ್ಲಿಸಿದ್ದರು.
ಲತಾ ಮಂಗೇಶ್ಕರ್ ಅವರ ಸಾಧನೆಗೆ ಭಾರತ ಸರ್ಕಾರ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ‘ಭಾರತ ರತ್ನ’ವನ್ನು 2001ರಲ್ಲಿ ಪ್ರದಾನ ಮಾಡಿತ್ತು. ಚಿತ್ರರಂಗದಲ್ಲಿನ ಸೇವೆಗೆ ‘ದಾದಾ ಸಾಹೇಬ್ ಫಾಲ್ಕೆ’ ಪ್ರಶಸ್ತಿಯನ್ನು 1989ರಲ್ಲಿ ಲತಾ ಅವರು ಪಡೆದಿದ್ದರು. ಇವುಗಳಲ್ಲದೇ ಪದ್ಮಭೂಷಣ, ಪದ್ಮವಿಭೂಷಣ ಸೇರಿದಂತೆ ಅನೇಕ ಪ್ರಶಸ್ತಿಗಳಿಗೆ ಅವರು ಭಾಜನರಾಗಿದ್ದರು. ಲತಾ ಮಂಗೇಶ್ಕರ್ ಅವರ ನಿಧನದಿಂದ ಚಿತ್ರರಂಗ ಬಡವಾಗಿದೆ.
Published On - 9:40 am, Sun, 6 February 22