
ಕಾಲಿವುಡ್ ಸ್ಟಾರ್ ನಟ ದಳಪತಿ ವಿಜಯ್ ಅವರು ಇತ್ತೀಚೆಗೆ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಅವರು ಸಿಎಂ ಆದ ಬಳಿಕ ಜನಪ್ರಿಯತೆ ಮತ್ತಷ್ಟು ಹೆಚ್ಚಿದೆ. ಈ ಬೆಳವಣಿಗೆ ಚಿತ್ರರಂಗದ ಲೆಕ್ಕಾಚಾರವನ್ನೇ ಬದಲಿಸಿದೆ. ಅವರ ಅಭಿನಯದ ‘ಜನ ನಾಯಗನ್’ ಚಿತ್ರದ ಓಟಿಟಿ ಹಕ್ಕುಗಳಿಗಾಗಿ ಈಗ ದೊಡ್ಡ ಮಟ್ಟದ ಪೈಪೋಟಿ ಆರಂಭವಾಗಿದೆ ಎಂದು ವರದಿ ಆಗಿದೆ.
ಆರಂಭದಲ್ಲಿ ಈ ಚಿತ್ರದ ಓಟಿಟಿ ಹಕ್ಕುಗಳನ್ನು ಅಮೇಜಾನ್ ಪ್ರೈಮ್ ವಿಡಿಯೋ ಸಂಸ್ಥೆ ಸುಮಾರು 120 ಕೋಟಿ ರೂ. ನೀಡಿ ಖರೀದಿಸಿತ್ತು. ಆದರೆ, ಸೆನ್ಸಾರ್ ಪ್ರಕ್ರಿಯೆ ಮುಗಿಯದ ಕಾರಣದಿಂದ ಚಿತ್ರದ ಬಿಡುಗಡೆ ವಿಳಂಬವಾಯಿತು. ಹೀಗಾಗಿ, ಅಮೇಜಾನ್ ಸಂಸ್ಥೆಯು ಈ ಹಿಂದಿನ ಡೀಲ್ನಿಂದ ಹಿಂದೆ ಸರಿದಿತ್ತು. ಇದು ಚಿತ್ರತಂಡಕ್ಕೆ ಸ್ವಲ್ಪ ಮಟ್ಟದ ಹಿನ್ನಡೆ ಉಂಟುಮಾಡಿತ್ತು.
ಆದರೆ ಈಗ ಕಾಲ ಬದಲಾಗಿದೆ. ವಿಜಯ್ ಅವರು ರಾಜಕೀಯದಲ್ಲಿ ಪಡೆದಿರುವ ಅತಿ ದೊಡ್ಡ ಯಶಸ್ಸು ಮತ್ತು ಸಿಎಂ ಮಟ್ಟದ ವರ್ಚಸ್ಸು ಚಿತ್ರಕ್ಕೆ ಹೊಸ ಕಳೆ ತಂದಿದೆ. ಚುನಾವಣೆಯ ಮೊದಲು ಮೌನವಾಗಿದ್ದ ಓಟಿಟಿ ಸಂಸ್ಥೆಗಳು ಈಗ ‘ಜನ ನಾಯಗನ್’ ಹಕ್ಕುಗಳಿಗಾಗಿ ಮುಗಿಬೀಳುತ್ತಿವೆ. ಮೂಲಗಳ ಪ್ರಕಾರ, ಮಾರುಕಟ್ಟೆಗೆ ಹೊಸದಾಗಿ ಪ್ರವೇಶಿಸಿರುವ ದೊಡ್ಡ ಓಟಿಟಿ ಸಂಸ್ಥೆಯೊಂದು ಈ ಮೊದಲು ಅಮೇಜಾನ್ ನೀಡಿದ್ದಕ್ಕಿಂತಲೂ ಭಾರಿ ಮೊತ್ತದ ಆಫರ್ ಅನ್ನು ನಿರ್ಮಾಪಕರ ಮುಂದಿಟ್ಟಿದೆ ಎನ್ನಲಾಗಿದೆ. 150 ಕೋಟಿ ರೂಪಾಯಿ ಇರಬಹುದೇ ಎಂದು ಫ್ಯಾನ್ಸ್ ಊಹಿಸುತ್ತಿದ್ದಾರೆ.
ಇದನ್ನೂ ಓದಿ: ಸಿಎಂ ಆಗಾಯ್ತು, ಚಿತ್ರರಂಗದ ಈ ಸಂಪ್ರದಾಯ ಬದಲಿಸ್ತಾರಾ ದಳಪತಿ ವಿಜಯ್?
ಈ ಹೊಸ ಡೀಲ್ ಕುದುರಿದರೆ ಅದು ಚಿತ್ರದ ನಿರ್ಮಾಪಕರಿಗೆ ದೊಡ್ಡ ಆಸರೆಯಾಗಲಿದೆ. ಅದರಲ್ಲೂ ವಿಶೇಷವಾಗಿ ‘ಟಾಕ್ಸಿಕ್’ ನಂತಹ ಬಿಗ್ ಬಜೆಟ್ ಸಿನಿಮಾಗಳ ಹಣಕಾಸಿನ ಒತ್ತಡದ ನಡುವೆ, ‘ಜನ ನಾಯಗನ್’ ತಂದುಕೊಡುವ ಈ ಲಾಭವು ನಿರ್ಮಾಪಕರಿಗೆ ದೊಡ್ಡ ಲಾಭ ತರಲಿದೆ.
‘ಜನ ನಾಯಗನ್’ ಸಿನಿಮಾ ಎರಡು ವಾರಗಳಲ್ಲಿ ರಿಲೀಸ್ ಮಾಡೋದಾಗಿ ನಿರ್ಮಾಪಕ ಕೆ. ವೆಂಕಟ್ ನಾರಾಯಣ್ ಹೇಳಿದ್ದಾರೆ.ಟ್ರೇಡ್ ಸರ್ಕಲ್ನಲ್ಲಿ ಈ ಚಿತ್ರದ ಹಕ್ಕುಗಳಿಗಾಗಿ ಹಣ ಸುರಿಯಲು ಅನೇಕ ಕಂಪನಿಗಳು ಸಿದ್ಧವಾಗಿವೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.