
ನಟಿ ವಿಜಯ್ ದೇವರಕೊಂಡ (Vijay Deverakonda) ಅವರ ಅಭಿಮಾನಿಗಳು ಹಿರಿಹಿರಿ ಹಿಗ್ಗುತ್ತಿದ್ದಾರೆ. ಅದಕ್ಕೆ ಕಾರಣ ‘ಲೈಗರ್’ ಚಿತ್ರದ ಟ್ರೇಲರ್. ಈ ಬಹುನಿರೀಕ್ಷಿತ ಸಿನಿಮಾ ಪ್ರತಿ ಹೆಜ್ಜೆಯಲ್ಲೂ ಹೈಪ್ ಸೃಷ್ಟಿ ಮಾಡುತ್ತಿದೆ. ಜುಲೈ 21ರಂದು ಬೆಳಗ್ಗೆ ‘ಲೈಗರ್’ ಸಿನಿಮಾದ ಟ್ರೇಲರ್ (Liger Movie Trailer) ರಿಲೀಸ್ ಮಾಡಲಾಯಿತು. 24 ಗಂಟೆ ಕಳೆಯುವುದರೊಳಗೆ 50 ಮಿಲಿಯನ್ಗಿಂತಲೂ ಹೆಚ್ಚು ಬಾರಿ ವೀಕ್ಷಣೆ ಕಂಡಿರುವುದು ಇದರ ಹೆಚ್ಚುಗಾರಿಕೆ. ಈ ಖುಷಿಯನ್ನು ಇಡೀ ಚಿತ್ರತಂಡ ಸಂಭ್ರಮಿಸುತ್ತಿದೆ. ಖ್ಯಾತ ನಿರ್ದೇಶಕ ಪುರಿ ಜಗನ್ನಾಥ್ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ವಿಜಯ್ ದೇವರಕೊಂಡ ಅವರಿಗೆ ಜೋಡಿಯಾಗಿ ಅನನ್ಯಾ ಪಾಂಡೆ ಅಭಿನಯಿಸಿದ್ದಾರೆ. ಆಗಸ್ಟ್ 25ರಂದು ತೆಲುಗು, ಕನ್ನಡ, ಹಿಂದಿ, ಮಲಯಾಳಂ, ತಮಿಳು ಮುಂತಾದ ಭಾಷೆಯಲ್ಲಿ ‘ಲೈಗರ್’ ಸಿನಿಮಾ (Liger Movie) ಬಿಡುಗಡೆ ಆಗಲಿದೆ.
‘ಅರ್ಜುನ್ ರೆಡ್ಡಿ’ ಚಿತ್ರದ ಯಶಸ್ಸಿನಿಂದ ವಿಜಯ್ ದೇವರಕೊಂಡ ಅವರಿಗೆ ದೇಶವ್ಯಾಪಿ ಜನಪ್ರಿಯತೆ ಸಿಕ್ಕಿತು. ನಂತರ ಅವರು ನಟಿಸಿದ ‘ಗೀತ ಗೋವಿಂದಂ’ ಚಿತ್ರ ಯಶಸ್ವಿ ಆಯಿತು. ಬಳಿಕ ಅವರ ‘ಡಿಯರ್ ಕಾಮ್ರೇಡ್’ ಸಿನಿಮಾ ಕೂಡ ಹಲವು ಭಾಷೆಗಳಿಗೆ ಡಬ್ ಆಗಿ ತೆರೆಕಂಡಿತಾದರೂ ನಿರೀಕ್ಷಿತ ಮಟ್ಟದ ಗೆಲುವು ಸಿಕ್ಕಿರಲಿಲ್ಲ. ಈಗ ‘ಲೈಗರ್’ ಚಿತ್ರದ ಮೂಲಕ ವಿಜಯ್ ದೇವರಕೊಂಡ ಅವರು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಅಬ್ಬರಿಸಲು ಸಜ್ಜಾಗಿದ್ದಾರೆ.
ಒಂದು ದಿನ ಕಳೆಯುವುದರೊಳಗೆ ಈ ಟ್ರೇಲರ್ ಧೂಳೆಬ್ಬಿಸಿದೆ. ಹಿಂದಿ ಪ್ರೇಕ್ಷಕರು ‘ಲೈಗರ್’ ಸಿನಿಮಾ ಮೇಲೆ ಹೆಚ್ಚು ಆಸಕ್ತಿ ತೋರಿಸಿದ್ದಾರೆ. 24 ಗಂಟೆಯಲ್ಲಿ ಹಿಂದಿ ಪ್ರೇಕ್ಷಕರು ಬರೋಬ್ಬರಿ 32 ಮಿಲಿಯನ್ ಬಾರಿ ಟ್ರೇಲರ್ ನೋಡಿದ್ದಾರೆ. ತೆಲುಗು ವರ್ಷನ್ 17 ಮಿಲಿಯನ್ ವೀವ್ಸ್ ಪಡೆದುಕೊಂಡಿದೆ. ಕನ್ನಡದಲ್ಲಿ 7 ಲಕ್ಷ, ಮಲಯಾಳಂನಲ್ಲಿ 1 ಮಿಲಿಯನ್, ತಮಿಳಿನಲ್ಲಿ 2.2 ಮಿಲಿಯನ್ ಬಾರಿ ವೀಕ್ಷಣೆ ಕಂಡಿದೆ. ಯೂಟ್ಯೂಬ್ನಲ್ಲಿ ಟ್ರೆಂಡಿಂಗ್ ನಂಬರ್ ಒನ್ ಆಗಿರುವುದಕ್ಕೆ ‘ಲೈಗರ್’ ಚಿತ್ರತಂಡ ಹೆಮ್ಮೆಪಟ್ಟುಕೊಂಡಿದೆ.
ವಿಜಯ್ ದೇವರಕೊಂಡ ಮತ್ತು ಅನನ್ಯಾ ಪಾಂಡೆ ಮಾತ್ರವಲ್ಲದೇ ರಮ್ಯಾ ಕೃಷ್ಣ, ಮಕರಂದ್ ದೇಶಪಾಂಡೆ ಮುಂತಾದವರು ಕೂಡ ‘ಲೈಗರ್’ ಸಿನಿಮಾದಲ್ಲಿ ನಟಿಸಿದ್ದಾರೆ. ವಿಶ್ವ ವಿಖ್ಯಾತ ಬಾಕ್ಸರ್ ಮೈಕ್ ಟೈಸನ್ ಅವರು ಈ ಸಿನಿಮಾದಲ್ಲಿ ಬಣ್ಣ ಹಚ್ಚಿರುವುದು ವಿಶೇಷ. ಕರಣ್ ಜೋಹರ್, ಪುರಿ ಜಗನ್ನಾಥ್, ಚಾರ್ಮಿ ಕೌರ್ ಮುಂತಾದವರು ಜತೆಗೂಡಿ ಈ ಸಿನಿಮಾವನ್ನು ನಿರ್ಮಿಸಿದ್ದಾರೆ.