
ಬಾಕ್ಸಿಂಗ್ ಲೋಕದ ದಿಗ್ಗಜ ಮೈಕ್ ಟೈಸನ್ (Mike Tyson) ಅವರು ಇಂದು (ಜೂನ್ 30) 56ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ವಿಶ್ವಾದ್ಯಂತ ಜನಪ್ರಿಯತೆ ಹೊಂದಿರುವ ಅವರಿಗೆ ಎಲ್ಲರೂ ಶುಭ ಕೋರುತ್ತಿದ್ದಾರೆ. ಇದೇ ಮೊದಲ ಬಾರಿಗೆ ಅವರು ಭಾರತೀಯ ಸಿನಿಮಾದಲ್ಲಿ ನಟಿಸಿದ್ದಾರೆ. ಹೌದು, ವಿಜಯ್ ದೇವರಕೊಂಡ (Vijay Deverakonda) ನಟನೆಯ ‘ಲೈಗರ್’ ಚಿತ್ರದಲ್ಲಿ ಅವರೊಂದು ಪಾತ್ರ ಮಾಡಿದ್ದಾರೆ. ಹಾಗಾಗಿ ಅವರ ಜೊತೆ ಈ ಚಿತ್ರಕ್ಕೆ ಆತ್ಮೀಯತೆ ಬೆಳೆದಿದೆ. ಮೈಕ್ ಟೈಸನ್ ಅವರ ಜನ್ಮದಿನದ (Mike Tyson Birthday) ಪ್ರಯುಕ್ತ ಅವರಿಗೆ ‘ಲೈಗರ್’ ತಂಡದವರು ಶುಭಾಶಯ ತಿಳಿಸಿದ್ದಾರೆ. ಈ ಸಲುವಾಗಿ ವಿಶೇಷ ವಿಡಿಯೋ ಹಂಚಿಕೊಳ್ಳಲಾಗಿದೆ. ಇದರಲ್ಲಿ ಸಿನಿಮಾ ಮೇಕಿಂಗ್ ದೃಶ್ಯಗಳು ಇವೆ. ಇದನ್ನು ಕಂಡು ಫ್ಯಾನ್ಸ್ ಖುಷಿ ಆಗಿದ್ದಾರೆ.
ವಿಜಯ್ ದೇವರಕೊಂಡ ಅವರ ವೃತ್ತಿಜೀವನದಲ್ಲಿ ಈ ಸಿನಿಮಾ ಡಿಫರೆಂಟ್ ಆಗಿರಲಿದೆ. ಅವರು ಬಾಕ್ಸರ್ ಆಗಿ ಕಾಣಿಸಿಕೊಳ್ಳುತ್ತಿದ್ದು ಅವರಿಗೆ ಎದುರಾಳಿಯಾಗಿ ಮೈಕ್ ಟೈಸನ್ ಕಾದಾಡಲಿರುವುದು ವಿಶೇಷ. ಇಬ್ಬರ ನಡುವಿನ ಹಣಾಹಣಿ ಹೇಗಿರಲಿದೆ ಎಂದು ನೋಡಲು ಸಿನಿಪ್ರಿಯರು ಕಾದಿದ್ದಾರೆ. ಈ ಸಿನಿಮಾಗೆ ಪುರಿ ಜಗನ್ನಾಥ್ ಅವರು ನಿರ್ದೇಶನ ಮಾಡುತ್ತಿದ್ದಾರೆ. ಮೈಕ್ ಟೈಸನ್ ಅವರಿಗೆ ವಿಶೇಷ ಗೆಟಪ್ ಇರಲಿದೆ ಎಂಬುದು ಈ ಮೇಕಿಂಗ್ ವಿಡಿಯೋ ನೋಡಿದರೆ ತಿಳಿಯುತ್ತದೆ.
ಕರಣ್ ಜೋಹರ್, ಪುರಿ ಜಗನ್ನಾಥ್, ಚಾರ್ಮಿ ಕೌರ್ ಹಾಗೂ ಅಪೂರ್ವ ಮೆಹ್ತಾ ಅವರು ‘ಲೈಗರ್’ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ವಿಜಯ್ ದೇವರಕೊಂಡ ಅವರಿಗೆ ಜೋಡಿಯಾಗಿ ಅನನ್ಯಾ ಪಾಂಡೆ ಕಾಣಿಸಿಕೊಳ್ಳಲಿದ್ದಾರೆ. ಇವರೆಲ್ಲರೂ ಮೈಕ್ ಟೈಸನ್ ಅವರಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ. ಮೈಕ್ ಟೈಸನ್ ಅವರ ಪಾಲಿನ ದೃಶ್ಯಗಳನ್ನು ಅಮೆರಿಕದಲ್ಲಿ ಚಿತ್ರೀಕರಿಸಲಾಗಿದೆ. ಶೂಟಿಂಗ್ ವೇಳೆ ಅವರು ಚಿತ್ರತಂಡದವರ ಜೊತೆ ಎಷ್ಟು ಆಪ್ತವಾಗಿದ್ದರು ಎಂಬುದಕ್ಕೆ ಈ ವಿಡಿಯೋ ಸಾಕ್ಷಿ ಒದಗಿಸುತ್ತಿದೆ.
ಈ ವರ್ಷ ಆಗಸ್ಟ್ 25ರಂದು ‘ಲೈಗರ್’ ಸಿನಿಮಾ ಬಿಡುಗಡೆ ಆಗಲಿದೆ. ಜುಲೈ 10ರಂದು ಈ ಚಿತ್ರದ ಟ್ರೇಲರ್ ರಿಲೀಸ್ ಆಗಲಿದೆ. ಶೀಘ್ರದಲ್ಲೇ ಪ್ರಚಾರ ಕಾರ್ಯಗಳಿಗೆ ಚಾಲನೆ ನೀಡಲಾಗುವುದು. ತೆಲುಗು, ಕನ್ನಡ, ಹಿಂದಿ, ಮಲಯಾಳಂ ಹಾಗೂ ತಮಿಳಿನಲ್ಲಿ ಈ ಸಿನಿಮಾ ರಿಲೀಸ್ ಆಗಲಿದೆ. ಪ್ಯಾನ್ ಇಂಡಿಯಾ ಹೀರೋ ಆಗಿ ಸದ್ದು ಮಾಡಲು ವಿಜಯ್ ದೇವರಕೊಂಡ ಸಜ್ಜಾಗಿದ್ದಾರೆ. ಸದ್ಯ ಈ ಚಿತ್ರಕ್ಕೆ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಭರದಿಂದ ಸಾಗುತ್ತಿವೆ.
ಇದನ್ನೂ ಓದಿ: Mike Tyson: ವಿಮಾನದಲ್ಲಿ ಕಿರಿಕಿರಿ ಮಾಡಿದ ಯುವಕ; ಸಿಟ್ಟಿಗೆದ್ದ ಮೈಕ್ ಟೈಸನ್ ಮಾಡಿದ್ದೇನು? ವಿಡಿಯೋ ವೈರಲ್
Published On - 12:14 pm, Thu, 30 June 22