
ಖ್ಯಾತ ನಟ ವಿಜಯ್ ರಾಘವೇಂದ್ರ ಅವರು ಕಿರುಚಿತ್ರದಲ್ಲೂ ನಟಿಸಿದ್ದಾರೆ. ‘ನಗು ನಗುತ’ ಎಂಬುದು ಈ ಕಿರುಚಿತ್ರದ ಶೀರ್ಷಿಕೆ. ಇದು ಸಾಮಾಜಿಕ ಕಳಕಳಿ ಇರುವ ಕಿರುಚಿತ್ರವಾಗಿದ್ದು, ಆಟೋ ಚಾಲಕರ ಆರೋಗ್ಯದ ಬಗ್ಗೆ ಎಚ್ಚರಿಕೆ ನೀಡುವ ಪಾತ್ರದಲ್ಲಿ ವಿಜಯ್ ರಾಘವೇಂದ್ರ ಅವರು ಅಭಿನಯಿಸಿದ್ದಾರೆ. ಇತ್ತೀಚೆಗೆ ‘ನಗು ನಗುತ’ ಕಿರುಚಿತ್ರವನ್ನು ರಿಲೀಸ್ ಮಾಡಲಾಯಿತು. ಆಟೋ ಚಾಲಕರ ಸಮ್ಮುಖದಲ್ಲೇ ಬಿಡುಗಡೆ ಮಾಡಿದ್ದು ವಿಶೇಷ.
ಈ ಕಿರುಚಿತ್ರದಲ್ಲಿ ವಿಜಯ್ ರಾಘವೇಂದ್ರ ಅವರು ಆಟೋ ಚಾಲಕನಾಗಿ ಕಾಣಿಸಿಕೊಂಡಿದ್ದಾರೆ. ಅವರ ಪತ್ನಿ ಪಾತ್ರದಲ್ಲಿ ನಟಿ ವರ್ಷಿತಾ ರಾಮ್ ಅಭಿನಯಿಸಿದ್ದಾರೆ. ಈ ಕಿರುಚಿತ್ರಕ್ಕೆ ಶಿವು ಜಮಖಂಡಿ ಅವರು ನಿರ್ದೇಶನ ಮಾಡಿದ್ದಾರೆ. ಜೊತೆಗೆ ಅವರೇ ಸಂಗೀತ ಸಂಯೋಜನೆಯನ್ನೂ ಮಾಡಿದ್ದಾರೆ. ನಾಸಿರ್ ಖತೀಬ್ ಮತ್ತು ಮೊಹಮ್ಮದ್ ಸಲಾವುದ್ದೀನ್ ಅವರು ಬಂಡವಾಳ ಹೂಡಿದ್ದಾರೆ. ನಾಸಿರ್ ಖತೀಬ್ ಅವರು ನಿರ್ಮಾಣದ ಜೊತೆಗೆ ಕಥೆಯನ್ನೂ ಬರೆದಿದ್ದಾರೆ.

Nagu Nagutha Short Film Team
ದಿನವೂ ವಾಹನ ಓಡಿಸುವ ಚಾಲಕರು, ವಿಶೇಷವಾಗಿ ಆಟೋ ಡ್ರೈವರ್ಗಳು ಎಷ್ಟೆಲ್ಲ ಕಷ್ಟಗಳನ್ನು ಎದುರಿಸುತ್ತಾರೆ? ಕುಟುಂಬದ ಜವಾಬ್ದಾರಿ ಒಂದೆಡೆಯಾದರೆ, ಊಟ, ನಿದ್ದೆಯನ್ನು ಲೆಕ್ಕಿಸದೆ ಆಟೋ ಓಡಿಸುವ ಭರದಲ್ಲಿ ಆರೋಗ್ಯದ ಕಡೆ ಗಮನ ಹರಿಸದೇ ಜೀವವನ್ನೆ ಕಳೆದುಕೊಳ್ಳುತ್ತಾರೆ. ಅಂತಹ ಚಾಲಕರ ಬಗ್ಗೆ ಈ ಕಿರುಚಿತ್ರ ಮೂಲಕ ಹೇಳಲಾಗಿದೆ.
ವಿಜಯ್ ರಾಘವೇಂದ್ರ ಅವರು ಕಿರುಚಿತ್ರ ರಿಲೀಸ್ ವೇಳೆ ಮಾನಾಡಿದರು. ‘ಇದಕ್ಕೆ ಆಟೋ ಚಾಲಕರು ದೊಡ್ಡ ಮಟ್ಟದಲ್ಲಿ ಪ್ರೋತ್ಸಾಹಿಸಿದ್ದಾರೆ. ಆಟೋ ಚಾಲಕರು ಅವರ ಆರೋಗ್ಯ ಹಾಗೂ ಕುಟುಂಬದ ಕಡೆ ಹೆಚ್ಚು ಗಮನ ಹರಿಸಲಿ ಎನ್ನುವ ಕಾರಣಕ್ಕೆ ಈ ಕಿರುಚಿತ್ರವನ್ನು ಮಾಡಲಾಗಿದೆ. ಹೃದಯಾಘಾತ ಇತ್ತೀಚಿನ ದಿನಗಳಲ್ಲಿ ಜಾಸ್ತಿಯಾಗಿದೆ. ನಮ್ಮ ಆರೋಗ್ಯ ನಮ್ಮ ಕೈಯಲ್ಲಿ ಇರಲಿ’ ಎಂದು ಆಟೋ ಚಾಲಕರ ಬಗ್ಗೆ ಅವರು ಕಾಳಜಿಯ ಮಾತುಗಳನ್ನು ಆಡಿದರು.
ಇದನ್ನೂ ಓದಿ: ಟ್ರೆಂಡ್ ಫಾಲೋ ಮಾಡಿದ ವಿಜಯ್ ರಾಘವೇಂದ್ರ
‘ಇದು ಕಿರುಚಿತ್ರವಾದರೂ ನನಗೆ ದೊಡ್ಡ ಸಿನಿಮಾ ಮಾಡಿದಷ್ಟು ಖುಷಿಯಾಗಿದೆ. ನನ್ನ ಮೇಲೆ ನಂಬಿಕೆ ಇಟ್ಟು ಈ ಅವಕಾಶ ಕೊಟ್ಟಿದ್ದಕ್ಕೆ ಇಡೀ ತಂಡಕ್ಕೆ ಧನ್ಯವಾದ’ ಎಂದು ನಟಿ ವರ್ಷಿತಾ ರಾಮ್ ಹೇಳಿದರು. ‘ಕಥೆ ತುಂಬಾ ಚೆನ್ನಾಗಿತ್ತು. ಹಾಗಾಗಿ ನಿರ್ದೇಶನ ಮಾಡಲು ಒಪ್ಪಿಕೊಂಡೆ. ನಿರ್ಮಾಪಕರಿಗೆ ದೊಡ್ಡ ಮಟ್ಟದಲ್ಲಿ ಮಾಡಬೇಕು ಎನ್ನುವ ಕನಸಿತ್ತು. ಅದರಂತೆ ಈ ಕಿರುಚಿತ್ರವನ್ನು ಕಟ್ಟಿಕೊಡಲಾಗಿದೆ’ ಎಂದು ನಿರ್ದೇಶಕ ಶಿವು ಜಮಖಂಡಿ ಹೇಳಿದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.