‘ರುದ್ರಾಭಿಷೇಕಂ’ ಸಿನಿಮಾ ವಿಮರ್ಶೆ: ಹೇಗಿದೆ ವಿಜಯ್ ರಾಘವೇಂದ್ರ ಸಿನಿಮಾ?

ರುದ್ರಾಭಿಷೇಕಂ
- Time - 162 Minutes
- Released - September 25, 2025
- Language - Kannada
- Genre - Action , Crime , Drama , Thriller
ಬೆಂಕಿಪುರ ಎಂಬ ಒಂದು ಪುಟ್ಟ ಹಳ್ಳಿ, ಆ ಹಳ್ಳಿಯಲ್ಲಿ ಒಬ್ಬ ಕ್ಷುದ್ರ ಗೌಡ ಮತ್ತು ಆತನ ಮಗ, ಅವರಿಬ್ಬರದ್ದೇ ಅಟ್ಟಹಾಸ. ಅದೇ ಊರಿನಲ್ಲಿ ಒಬ್ಬ ದೈವ ಭಕ್ತ ಯುವಕ, ದೇವರ ಸೇವೆಯೊಂದೇ ಅವನ ನಿತ್ಯ ಕರ್ಮ. ಆ ಯುವಕನಿಗೂ ದೈವ ಭಕ್ತಿಗೂ ನಂಟಿದೆ, ಆ ಯುವಕನಿಗೂ ಕ್ಷುದ್ರ ಗೌಡನ ನಡುವೆ ದ್ವೇಷದ ನಂಟೂ ಸಹ ಇದೆ. ಇವುಗಳ ಮಧ್ಯೆ ವೀರಗಾಸೆ ಕುಣಿತ, ವೀರಭದ್ರನ ಮಹಿಮೆ, ತಲೆಮಾರಿನ ಗುಟ್ಟನ್ನು ಅದುಮಿಟ್ಟುಕೊಂಡಿರುವ ಮುದುಕ, ದೆವ್ವ-ದೈವ, ಜಾತಿ-ಧರ್ಮ ಇವುಗಳೆಲ್ಲವನ್ನೂ ಒಳಗೊಂಡಿರುವ ಸಿನಿಮಾ ವಿಜಯ್ ರಾಘವೇಂದ್ರ ನಟನೆಯ ‘ರುದ್ರಾಭಿಷೇಕಂ’.
ವಿಜಯ್ ರಾಘವೇಂದ್ರ ಅವರು ಭಿನ್ನ-ಭಿನ್ನ ಲುಕ್ಗಳಲ್ಲಿ ಕಾಣಿಸಿಕೊಂಡಿರುವ ‘ರುದ್ರಾಭಿಷೇಕಂ’ ಸಿನಿಮಾ ಇಂದು (ಸೆಪ್ಟೆಂಬರ್ 25) ಬಿಡುಗಡೆ ಆಗಿದ್ದು, ನಿರ್ದೇಶಕ ವಸಂತ್ ಕುಮಾರ್ ಅವರು ಹಲವು ಜಾನರ್ಗಳನ್ನು ಒಂದೆ ಕತೆಯಲ್ಲಿ ಸೇರಿಸುವ ಪ್ರಯತ್ನವನ್ನು ‘ರುದ್ರಾಭಿಷೇಕಂ’ ಸಿನಿಮಾನಲ್ಲಿ ಮಾಡಿದ್ದಾರೆ. ಹಾರರ್, ಥ್ರಿಲ್ಲರ್, ಆಕ್ಷನ್, ಸೆಂಟಿಮೆಂಟ್, ರೂರಲ್, ಡಿವೈನ್ ಹೀಗೆ ಹಲವು ಜಾನರ್ ಅನ್ನು ಒಂದು ಕತೆಯಲ್ಲಿ ಹೆಣೆದಿದ್ದಾರೆ. ಆ ಹೆಣಿಕೆ ಇನ್ನಷ್ಟು ಬಿಗಿಯಾಗಿದ್ದಿರಬಹುದಿತ್ತು.
ಜನಪದದ ಮಹತ್ವ, ದೈವ ಭಕ್ತಿಯ ಮಹತ್ವ, ಗ್ರಾಮಗಳಲ್ಲಿ ಜೀವಂತವಾಗಿರುವ ಜಾತೀಯತೆ ಇನ್ನೂ ಕೆಲವು ವಿಷಯಗಳ ಬಗ್ಗೆ ಸಿನಿಮಾದ ಕತೆ ಚರ್ಚಿಸುತ್ತದೆ. ಸಿನಿಮಾನಲ್ಲಿ ವಿಜಯ್ ರಾಘವೇಂದ್ರ ಅವರು ದೈವ ಭಕ್ತ, ಪ್ರಗತಿಪರ ಯುವಕನಾಗಿ, ವೀರಗಾಸೆ ಕುಣಿತ ಮಾಡುವ ಕಲಾವಿದನಾಗಿ ಕಾಣಿಸಿಕೊಂಡಿದ್ದಾರೆ. ತಮ್ಮ ಪಾತ್ರಕ್ಕೆ ಅವರು ನ್ಯಾಯ ಒದಗಿಸಿದ್ದಾರೆ. ಸಿನಿಮಾದ ವಿಲನ್ ಪಾತ್ರದಲ್ಲಿ ನಟಿಸಿರುವ ರಾಜು ಬಾಲವಾಡಿ ನಟನೆ ಸಿನಿಮಾದ ಅತ್ಯುತ್ತಮ ಅಂಶಗಳಲ್ಲಿ ಒಂದು. ರಾಜು ಅವರ ನಟನೆ ಸಿನಿಮಾಗಳ ಹೈಲೆಟ್ಗಳಲ್ಲಿ ಒಂದು. ಪ್ರಿಯಾಂಕಾ ತಿಮ್ಮೇಶ್ ಅವರಿಗೆ ಮೊದಲಾರ್ಧಕ್ಕಿಂತಲೂ ದ್ವಿತೀಯಾರ್ಧದಲ್ಲಿ ಹೆಚ್ಚು ಪ್ರಾಮುಖ್ಯತೆ ಇದೆ. ಸಿಕ್ಕ ಅವಕಾಶವನ್ನು ಅವರು ಬಾಚಿಕೊಂಡಿದ್ದಾರೆ. ಅವರ ಪಾತ್ರಕ್ಕೆ ನೀಡಿರುವ ಟ್ವಿಸ್ಟ್ ಪ್ರೇಕ್ಷಕರಿಗೆ ಇಷ್ಟವಾಗಬಹುದು.
ಇದನ್ನೂ ಓದಿ: ‘ರುದ್ರಾಭಿಷೇಕಂ’ ಟ್ರೈಲರ್ ರಿಲೀಸ್, ರಗಡ್ ಲುಕ್ನಲ್ಲಿ ವಿಜಯ್ ರಾಘವೇಂದ್ರ
ಸಿನಿಮಾನಲ್ಲಿ ವೀರಗಾಸೆ ಕುಣಿತದ ಕೆಲ ದೃಶ್ಯಗಳನ್ನು ತೋರಿಸಲಾಗಿದೆ. ವೀರಗಾಸೆ ಮಹತ್ವದ ಬಗ್ಗೆ, ಜನಪದ ಕಲೆಯ ಮಹತ್ವದ ಬಗ್ಗೆ ಸಂಭಾಷಣೆಗಳು ಸಹ ಇವೆ. ವೀರಗಾಸೆಗೆ ಕುಣಿತ ಫ್ಲ್ಯಾಷ್ಬ್ಯಾಕ್ ನಲ್ಲಿ ಬಂದು ಹೋಗುತ್ತದೆ, ಅದಕ್ಕೆ ಇನ್ನಷ್ಟು ಮಹತ್ವ ಸಿಕ್ಕಿರಬಹುದಿತ್ತು. ಸಿನಿಮಾದ ಮೂರು ಹಾಡುಗಳು ಚೆನ್ನಾಗಿವೆ. ವಿಶೇಷವಾಗಿ ವಿಜಯ್ ರಾಘವೇಂದ್ರ ಮತ್ತು ಪ್ರಿಯಾಂಕಾ ತಿಮ್ಮೇಶ್ ನಡುವಿನ ಯುಗಳ ಗೀತೆ ಗುನುಗುವಂತಿದೆ. ಹಾಡಿನ ಚಿತ್ರೀಕರಣವೂ ಮುದ ನೀಡುವಂತಿದೆ.
ಸಿನಿಮಾದ ಕ್ಯಾಮೆರಾ, ಹಿನ್ನೆಲೆ ಸಂಗೀತಗಳು ಸಹ ಉತ್ತಮವಾಗಿವೆ. ವಿಜಯ್ ಅವರು ಎರಡು ಆಕ್ಷನ್ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದು, ಕತ್ತಲಲ್ಲಿ ನಡೆಯುವ ಪಂಜಿನ ಫೈಟ್ ನವಿರೇಳಿಸುವಂತಿದೆ. ಒಟ್ಟಾರೆಯಾಗಿ ಇದೊಂದು ನೋಡಬಹುದಾದ ಸಿನಿಮಾ ಎನ್ನಬಹುದಾಗಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:52 pm, Fri, 25 September 26




