ಸತತ ಸೋಲಿನ ಬಳಿಕ ಸಂಭಾವನೆಯನ್ನು ಗಣನೀಯವಾಗಿ ಇಳಿಸಿಕೊಂಡ ವಿಕ್ರಮ್
ನಟ ವಿಕ್ರಮ್ ಸತತ ಸೋಲುಗಳ ನಂತರ ತಮ್ಮ ಮುಂದಿನ 'ಚಿಯಾನ್ 63' ಚಿತ್ರಕ್ಕಾಗಿ ಸಂಭಾವನೆ ಗಣನೀಯವಾಗಿ ಇಳಿಸಿದ್ದಾರೆ. ಹಿಂದಿನ ಚಿತ್ರಗಳಿಗೆ ಹೋಲಿಸಿದರೆ ₹20 ಕೋಟಿ ಪಡೆದಿರುವುದು ಗಮನಾರ್ಹ. ಮಾರುಕಟ್ಟೆ ಸ್ಥಿತಿಗತಿ ಅರಿತುಕೊಂಡು ಈ ನಿರ್ಧಾರ ಕೈಗೊಂಡಿರುವ ವಿಕ್ರಮ್, ಸಿನಿಮಾದ ಲಾಭದಲ್ಲಿ ಪಾಲು ಪಡೆಯಲಿದ್ದಾರೆ. ಇದು ಅಭಿಮಾನಿಗಳಿಗೆ ಖುಷಿ ನೀಡಿದೆ.

ತಮಿಳು ಚಿತ್ರರಂಗದ ವರ್ಸಟೈಲ್ ನಟ ‘ಚಿಯಾನ್’ ವಿಕ್ರಮ್ ತಮ್ಮ ಮುಂದಿನ ಬಹುನಿರೀಕ್ಷಿತ ಚಿತ್ರ ‘ಚಿಯಾನ್ 63’ ಸಿನಿಮಾಕ್ಕಾಗಿ ತಯಾರಿ ನಡೆಸುತ್ತಿದ್ದಾರೆ. ಸತತವಾಗಿ ಸಿನಿಮಾ ಫ್ಲಾಪ್ ಆಗುತ್ತಿರುವುದರಿಂದ ಅವರಿಗೆ ದೊಡ್ಡ ಮಟ್ಟದಲ್ಲಿ ಸಂಭಾವನೆ ಕೊಡಲು ಯಾರೊಬ್ಬರೂ ಒಪ್ಪಿಕೊಳ್ಳುತ್ತಿಲ್ಲ. ಹೀಗಾಗಿ ಅವರು ಸಂಭಾವನೆ ಕಡಿತ ಮಾಡಿಕೊಂಡಿದ್ದಾರೆ. ಹೊಸ ಚಿತ್ರಕ್ಕಾಗಿ ವಿಕ್ರಮ್ ಅವರು ಸುಮಾರು 20 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಿದ್ದಾರೆ ಎಂದು ವರದಿ ಆಗಿದೆ. ಇದು ವಿಕ್ರಮ್ ಹಿಂದಿನ ಸಿನಿಮಾಗಳ ಸಂಭಾವನೆಗೆ ಹೋಲಿಸಿದರೆ ತುಂಬಾನೇ ಕಡಿಮೆ ಆದಂತೆ ಆಗಿದೆ.
ಸದ್ಯದ ಮಾರುಕಟ್ಟೆಯ ಏರಿಳಿತ ಹಾಗೂ ಟ್ರೆಂಡ್ ಅನ್ನು ಗಮನದಲ್ಲಿಟ್ಟುಕೊಂಡು ವಿಕ್ರಮ್ ತಮ್ಮ ಸಂಭಾವನೆಯನ್ನು ಕಡಿಮೆ ಮಾಡಿಕೊಳ್ಳಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಆದರೆ, ಇದಕ್ಕೆ ಪ್ರತಿಯಾಗಿ ಸಿನಿಮಾದ ಲಾಭದಲ್ಲಿ ಒಂದು ಪಾಲನ್ನು ಅವರು ಪಡೆಯಲಿದ್ದಾರಂತೆ. ಇದು ಅವರ ಅಭಿಮಾನಿಗಳಿಗೆ ಖುಷಿ ನೀಡಿದೆ. ಹಾಗಂತ ಸಿನಿಮಾ ಫ್ಲಾಪ್ ಆದರೆ, ಅವರಿಗೆ ತೊಂದರೆ ಕಟ್ಟಿಟ್ಟ ಬುತ್ತಿ. ಆದಾಗ್ಯೂ, ಈ ಬಗ್ಗೆ ಇನ್ನು ಯಾವುದೇ ಅಧಿಕೃತ ಪ್ರಕಟಣೆ ಹೊರಬಿದ್ದಿಲ್ಲ.
ಇತ್ತೀಚೆಗಷ್ಟೇ ‘ಚಿಯಾನ್ 63’ ಚಿತ್ರದ ಸಣ್ಣ ಝಲಕ್ ತೋರಿಸೋ ವಿಡಿಯೋ ಬಿಡುಗಡೆಯಾಗಿ ಧೂಳೆಬ್ಬಿಸಿತ್ತು. ‘ಫಸ್ಟ್ ಫ್ಲೇಮ್’ ಹೆಸರಿನ ಈ ಟೀಸರ್‌ನಲ್ಲಿ ರಗಡ್ ಸೆಟಪ್ ಮಧ್ಯೆ ವಿಕ್ರಮ್ ಅವರ ಮಾಸ್ ಎಂಟ್ರಿ ಮತ್ತು ಸಂತೋಷ್ ನಾರಾಯಣನ್ ಅವರ ಹಿನ್ನೆಲೆ ಸಂಗೀತ ಅಭಿಮಾನಿಗಳಿಗೆ ಭರಪೂರ ಮನರಂಜನೆ ನೀಡಿತ್ತು. ಇದೊಂದು ಪಕ್ಕಾ ಆಕ್ಷನ್ ಸಿನಿಮಾವಾಗಲಿದ್ದು, ಶೀಘ್ರದಲ್ಲೇ ಶೂಟಿಂಗ್ ಆರಂಭವಾಗಲಿದೆ.
‘ಸರ್ವಂ ಮಾಯಾ’ ಖ್ಯಾತಿಯ ನಟಿ ರಿಯಾ ಶಿಬು ಈ ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಇವರೊಂದಿಗೆ ಹಿರಿಯ ಕಲಾವಿದರಾದ ಎಂ.ಎಸ್. ಭಾಸ್ಕರ್ ಮತ್ತು ಊರ್ವಶಿ ಮುಖ್ಯ ಪಾತ್ರಗಳಲ್ಲಿದ್ದಾರೆ. ಚಿತ್ರದ ರಿಲೀಸ್ ಡೇಟ್ ಇನ್ನು ಫೈನಲ್ ಆಗಿಲ್ಲ. ಈ ಚಿತ್ರ 2026ರ ಕೊನೆಯಲ್ಲಿ ಅಥವಾ 2027ರ ಆರಂಭದಲ್ಲಿ ತೆರೆಗೆ ಬರುವ ಸಾಧ್ಯತೆ ಇದೆ.
ಇದನ್ನೂ ಓದಿ: 60ನೇ ವಯಸ್ಸಿನಲ್ಲೂ ಎಷ್ಟು ಯಂಗ್ ಆಗಿ ಕಾಣ್ತಾರೆ ನೋಡಿ ವಿಕ್ರಮ್
ಈ ಹಿಂದೆ ವಿಕ್ರಮ್ ಅವರು ಹೊಸ ನಿರ್ದೇಶಕ ಬೋಡಿ ರಾಜ್‌ಕುಮಾರ್ ಜೊತೆ ‘ಶಾಂತಿ ಟಾಕೀಸ್’ ಬ್ಯಾನರ್ ಅಡಿಯಲ್ಲಿ ಒಂದು ಆಕ್ಷನ್ ಥ್ರಿಲ್ಲರ್ ಸಿನಿಮಾ ಮಾಡುವುದಾಗಿ ಅನೌನ್ಸ್ ಮಾಡಿದ್ದರು. ಆದರೆ ಆ ಚಿತ್ರದ ಬಗ್ಗೆ ಸದ್ಯಕ್ಕೆ ಯಾವುದೇ ಹೊಸ ಅಪ್ಡೇಟ್ ಸಿಕ್ಕಿಲ್ಲ. ಇನ್ನು ನಿರ್ದೇಶಕ ಮಡೋನ್ ಅಶ್ವಿನ್ ಜೊತೆ ವಿಕ್ರಮ್ ಸಿನಿಮಾ ಮಾಡಲಿದ್ದಾರೆ ಎಂಬ ಮಾತುಗಳು ಕೇಳಿಬಂದಿದ್ದವು, ಆದರೆ ಸದ್ಯದ ಮಾಹಿತಿ ಪ್ರಕಾರ ಆ ಪ್ರಾಜೆಕ್ಟ್ ಡ್ರಾಪ್ ಆಗಿದೆ ಎನ್ನಲಾಗುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




