
ನಟಿ ಸಮಂತಾ (Samantha) ತಮ್ಮ ಬಾಯ್ಫ್ರೆಂಡ್ ರಾಜ್ ನಿಧಿಮೋರು ಅವರೊಟ್ಟಿಗೆ ವಿವಾಹವಾಗಿದ್ದಾರೆ. ರಾಜ್ ನಿಧಿಮೋರು ನಿರ್ದೇಶಕ ಮತ್ತು ನಿರ್ಮಾಪಕರಾಗಿ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಕಳೆದೊಂದು ವರ್ಷದಿಂದಲೂ ಈ ಇಬ್ಬರ ಆತ್ಮೀಯತೆ ಬಗ್ಗೆ ಸುದ್ದಿಗಳು ಹರಿದಾಡುತ್ತಲೇ ಇದ್ದವು. ಕೊನೆಗೂ ಸಮಂತಾ ಮತ್ತು ರಾಜ್ ಅವರುಗಳು ವಿವಾಹ ಆಗಿದ್ದಾರೆ. ಸರಳವಾಗಿ ಈ ವಿವಾಹ ನಡೆದಿದೆ. ಮಾತ್ರಲ್ಲದೆ, ಸಾಮಾನ್ಯ ಮದುವೆಯ ರೀತಿ ಅಲ್ಲದೆ, ‘ಭೂತ ಶುದ್ಧಿ’ ಪದ್ಧತಿಯಲ್ಲಿ ಈ ಜೋಡಿಯ ವಿವಾಹ ನಡೆದಿರುವುದು ವಿಶೇಷ.
ಸಮಂತಾ ಹಾಗೂ ರಾಜ್ ನಿಧಿಮೋರು ಅವರ ವಿವಾಹ ಕೊಯಮತ್ತೂರಿನ ಇಶಾ ಯೋಗ ಸೆಂಟರ್ನಲ್ಲಿರುವ ಲಿಂಗ ಭೈರವಿ ದೇವಾಲಯದಲ್ಲಿ ನಡೆದಿದೆ. ಸಮಂತಾ, ನಾಗ ಚೈತನ್ಯ ಜೊತೆಗೆ ವಿಚ್ಛೇದನ ಮಾಡಿಕೊಂಡ ಬಳಿಕ ಇಶಾ ಯೋಗ ಸೆಂಟರ್ನ ಸಂಪರ್ಕಕ್ಕೆ ಬಂದರು. ಸದ್ಗುರು ಅವರನ್ನು ಗುರುವಾಗಿ ಪರಿಗಣಿಸಿ, ಲಿಂಗ ಭೈರವಿ ದೇವಿಯ ಆರಾಧಕಿ ಆದರು. ಅದೇ ಕಾರಣಕ್ಕೆ ಈಗ ಇಶಾ ಸೆಂಟರ್ನ ಲಿಂಗ ಭೈರವಿ ದೇವಾಲಯದಲ್ಲಿಯೇ ವಿವಾಹವಾಗಿದ್ದಾರೆ. ಈ ವಿವಾಹವನ್ನೂ ಸಹ ಭಿನ್ನ ರೀತಿಯ ಸಂಪ್ರದಾಯದೊಟ್ಟಿಗೆ ಮಾಡಲಾಗಿದೆ.
ಸಮಂತಾ ಹಾಗೂ ರಾಜ್ ಅವರು ‘ಭೂತ ಶುದ್ಧಿ’ ಪದ್ಧತಿಯಲ್ಲಿ ವಿವಾಹವಾಗಿದ್ದಾರೆ. ಭೂತ ಶುದ್ಧಿ ಪದ್ಧತಿಯಲ್ಲಿ ಪಂಚಭೂತಗಳಾದ ಗಾಳಿ, ನೀರು, ಅಗ್ನಿ, ಪೃಥ್ವಿ, ಆಕಾಶಗಳ ಆರಾಧನೆ ಮಾಡಲಾಗುತ್ತದೆ. ಪಂಚಭೂತಗಳ ಆರಾಧನೆ ಮತ್ತು ಕೆಲವು ಮಂತ್ರಗಳ ಮೂಲಕ ಅಧ್ಯಾತ್ಮಿಕ ಶುದ್ಧಿ, ಪೂರ್ವ ಜನ್ಮದ ಕರ್ಮಗಳ ಶುದ್ಧಿಗಳನ್ನು ಮಾಡಿ ವಿವಾಹ ಕಾರ್ಯ ಮಾಡಲಾಗುತ್ತದೆ. ಈ ರೀತಿಯ ವಿವಾಹದಿಂದ ದಂಪತಿಗಳಲ್ಲಿ ಸಾಮರಸ್ಯ, ವೈಯಕ್ತಿಕ ಪ್ರಗತಿ ಮತ್ತು ಶಾಂತಿ ನೆಲೆಸುತ್ತದೆ ಎಂಬುದು ನಂಬಿಕೆ.
ಇದನ್ನೂ ಓದಿ:ವಿಚ್ಛೇದನದ ವೇಳೆ ಸಂತ್ರಸ್ತೆ ಅನ್ನೋ ರೀತಿ ಬಿಂಬಿಸಿಕೊಂಡಿದ್ರಾ ಸಮಂತಾ? ಆಪ್ತೆಯಿಂದಲೇ ಶಾಕಿಂಗ್ ಹೇಳಿಕೆ
ನಿನ್ನೆ ಬಿಡುಗಡೆ ಆಗಿರುವ ಸಮಂತಾ ಮತ್ತು ರಾಜ್ ಅವರ ಮದುವೆಯ ಕೆಲ ಚಿತ್ರಗಳಲ್ಲಿ ಸಮಂತಾ ಹಾಗೂ ರಾಜ್ ಅವರು ಲಿಂಗ ಭೈರವಿ ದೇವಿಯ ಮೂರ್ತಿಯ ಎದುರು ಕೆಳಗೆ ಕೂತು ಪುಣ್ಯ ಅಗ್ನಿಯ ಎದುರು ಪೂಜೆಗಳನ್ನು ಮಾಡುತ್ತಿರುವ ಚಿತ್ರಗಳು ಸಹ ಇವೆ. ಸಮಂತಾ ಲಿಂಗ ಭೈರವಿ ದೇವಿಯ ಭಕ್ತೆಯಾಗಿದ್ದು, ಲಿಂಗ ಭೈರವಿ ದೇವಿಯ ಎದುರು ಕೂತು ಧ್ಯಾನ ಮಾಡುತ್ತಿರುವ ದೇವಿಗೆ ಪೂಜೆ ಮಾಡುತ್ತಿರುವ ಕೆಲ ಚಿತ್ರಗಳನ್ನು ಈ ಹಿಂದೆ ಸಮಂತಾ ಹಂಚಿಕೊಂಡಿದ್ದರು. ಈಗ ಅದೇ ದೇವಿಯ ಸನ್ನಿಧಿಯಲ್ಲಿ ವಿವಾಹವಾಗಿದ್ದಾರೆ ನಟಿ.
ಸಮಂತಾ ಮಾತ್ರವೇ ಅಲ್ಲದೆ ನಟಿ ತಮನ್ನಾ ಸಹ ಲಿಂಗ ಭೈರವಿ ದೇವಿಯ ಆರಾಧಕಿ ಆಗಿದ್ದಾರೆ. ತಮನ್ನಾ ಭಾಟಿಯಾ ಸಹ ಆಗಾಗ್ಗೆ ಇಶಾ ಯೋಗ ಸೆಂಟರ್ಗೆ ಭೇಟಿ ನೀಡಿ ಅಲ್ಲಿಯೇ ಕೆಲ ಕಾಲ ಕಳೆಯುತ್ತಾರೆ. ಸೇವೆಯಲ್ಲಿಯೂ ಸಹ ತೊಡಗಿಕೊಳ್ಳುತ್ತಾರೆ. ಲಿಂಗ ಭೈರವಿ ದೇವಿಯ ಆರಾಧನೆಯಲ್ಲಿ ಕಾಲ ಕಳೆಯುತ್ತಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ