
ರಜನೀಕಾಂತ್, ಕಮಲ್ ಹಾಸನ್, ವಿಜಯ್, ಅಜಿತ್, ಸೂರ್ಯ, ಧನುಶ್, ವಿಕ್ರಂ, ಕಾರ್ತಿ ಇವರೆಲ್ಲ ಕೇವಲ ತಮಿಳುನಾಡಿನಲ್ಲಿ ಅಭಿಮಾನಿಗಳನ್ನು ಹೊಂದಿರುವ ನಟರಲ್ಲ, ದೇಶ-ವಿದೇಶಗಳಲ್ಲಿಯೂ ಸಹಸ್ರಾರು ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಹೊಂದಿರುವ ಸ್ಟಾರ್ ನಟರುಗಳು. ಸ್ಟಾರ್ ನಟರುಗಳು ಮಾತ್ರವಲ್ಲದೆ ಶಂಕರ್, ಲೋಕೇಶ್, ಗೌತಮ್ ವಾಸುದೇವ್, ವೆಟ್ರಿಮಾರನ್, ಬಾಲ ಇನ್ನೂ ಹಲವಾರು ಮಂದಿ ಪ್ರತಿಭಾವಂತ ನಿರ್ದೇಶಕರುಗಳು ಸಹ ಇದ್ದಾರೆ. ಹಾಗಿದ್ದರೂ ಸಹ ಈ ವರೆಗೆ ಒಂದೇ ಒಂದು ತಮಿಳು ಸಿನಿಮಾ ಸಹ ಬಾಕ್ಸ್ ಆಫೀಸ್ನಲ್ಲಿ 1000 ಕೋಟಿ ಹಣ ಕಲೆಕ್ಷನ್ ಮಾಡಿಲ್ಲ ಏಕೆ ಗೊತ್ತೆ?
ಭಾರತದ ಮೊದಲ ಭಾರಿ ಬಜೆಟ್ ಸಿನಿಮಾ, ಭಾರಿ ದೊಡ್ಡ ಕಲೆಕ್ಷನ್ ಮಾಡಿದ ಸಿನಿಮಾಗಳು ತಮಿಳು ಸಿನಿಮಾಗಳಾಗಿದ್ದವು. ‘ರೋಬೊ’, ‘ಇಂಡಿಯನ್’ ಸಿನಿಮಾಗಳು ಬರೆದಿದ್ದ ದಾಖಲೆ ಯಾವ ಭಾಷೆಯ ಸಿನಿಮಾಗಳೂ ಅಳಿಸಲಾಗಿರಲಿಲ್ಲ. ಆದರೆ ಇತ್ತೀಚೆಗೆ ತೆಲುಗು, ಹಿಂದಿ, ಕನ್ನಡ ಸಿನಿಮಾಗಳು ಬಾಕ್ಸ್ ಆಫೀಸ್ನಲ್ಲಿ 1000 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡುತ್ತಿವೆ. ಆದರೆ ಭಾರಿ ದೊಡ್ಡ ಸ್ಟಾರ್ ನಟರುಗಳನ್ನು ಹೊಂದಿದ್ದರೂ ತಮಿಳು ಸಿನಿಮಾಗಳ ಕೈಲಿ ಬಾಕ್ಸ್ ಆಫೀಸ್ನಲ್ಲಿ 1000 ಕೋಟಿ ಗಳಿಸಲು ಆಗುತ್ತಿಲ್ಲ.
ಈ ಬಗ್ಗೆ ತಮಿಳುನಾಡಿನ ಸಿನಿ ಪ್ರೇಮಿಗಳು, ಸಿನಿಮಾ ಮಂದಿಯ ನಡುವೆ ಚರ್ಚೆ ಪ್ರಾರಂಭವಾಗಿದೆ. ಅಸಲಿಗೆ ತಮಿಳು ಚಿತ್ರರಂಗ, 1000 ಕೋಟಿ ಕಲೆಕ್ಷನ್ ಮಾಡುವ ಶಕ್ತಿ, ಸಾಮರ್ಥ್ಯ ಉಳ್ಳ ಸಿನಿಮಾಗಳನ್ನೇ ನಿರ್ಮಾಣ ಮಾಡುತ್ತಿವೆ. ಆದರೆ ಅವರ ಸಿನಿಮಾಗಳು 1000 ಕೋಟಿ ಗಳಿಸಲು ಸಾಧ್ಯವಾಗದೇ ಇರಲು ಮುಖ್ಯ ಕಾರಣ ತಮಿಳುನಾಡಿನಲ್ಲಿರುವ ಸಿನಿಮಾಗಳ ಟಿಕೆಟ್ ದರ. ಕಡಿಮೆ ಟಿಕೆಟ್ ದರ ಇರುವ ಕಾರಣದಿಂದಾಗಿ ತಮಿಳು ಸಿನಿಮಾಗಳು ಭಾರಿ ದೊಡ್ಡ ಗಳಿಕೆಯನ್ನು ಮಾಡಲಾಗುತ್ತಿಲ್ಲ.
ಇದನ್ನೂ ಓದಿ:ತಮಿಳು ಸಿನಿಮಾ ಟ್ರೈಲರ್ ನಲ್ಲಿ ಗಮನ ಸೆಳೆದ ರುಕ್ಮಿಣಿ ವಸಂತ್
ಇಡೀ ದೇಶದಲ್ಲಿಯೇ ಅತ್ಯಂತ ಕಡಿಮೆ ಟಿಕೆಟ್ ದರ ಇರುವುದು ತಮಿಳುನಾಡಿನಲ್ಲೇ. ಚೆನ್ನೈ ಅಂಥಹಾ ನಗರದಲ್ಲಿನ ಐನಾಕ್ಸ್, ಪಿವಿಆರ್ ಅಂಥಹಾ ಮಲ್ಟಿಪ್ಲೆಕ್ಸ್ನಲ್ಲಿ ಟಿಕೆಟ್ ದರ ಪ್ರಾರಂಭ ಆಗುವುದು ಕೇವಲ 54 ರೂಪಾಯಿಗಳಿಂದ. ಮಲ್ಟಿಪ್ಲೆಕ್ಸ್ಗಳಲ್ಲಿ ಗರಿಷ್ಠ ಟಿಕೆಟ್ ದರ 160 ಕೆಲವೆಡೆ 183 ರೂಪಾಯಿಗಳು ಮಾತ್ರ. ಇನ್ನು ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳಲ್ಲಿ ಚೆನ್ನೈ ಅಂಥಹಾ ನಗರದಲ್ಲಿಯೂ ಸಹ ಟಿಕೆಟ್ ದರ 150 ದಾಟುವುದಿಲ್ಲ. ಗ್ರಾಮೀಣ ಭಾಗಗಳಲ್ಲಿ ಅಂತೂ ಇಂದಿಗೂ 30 ರೂಪಾಯಿಗೆ ಟಿಕೆಟ್ ಖರೀದಿಸಿ ಸಿನಿಮಾ ನೋಡಬಹುದು.
ತಮಿಳುನಾಡಿನಷ್ಟು ಕನಿಷ್ಟ ಟಿಕೆಟ್ ದರ ಇಡೀ ದೇಶದಲ್ಲೇ ಇಲ್ಲ. ಇಷ್ಟು ಕಡಿಮೆ ಟಿಕೆಟ್ ದರಗಳಿದ್ದರೂ ಸಹ ತಮಿಳು ಚಿತ್ರರಂಗ ಭಾರತದ ಅತ್ಯಂತ ಯಶಸ್ವಿ, ಶ್ರೀಮಂತ ಚಿತ್ರಮಂದಿರಗಳಲ್ಲಿ ಒಂದಾಗಿದೆ. ಇಂದಿಗೂ ವರ್ಷಕ್ಕೆ ಹಲವಾರು ಹಿಟ್ ಸಿನಿಮಾಗಳನ್ನು ನೀಡುತ್ತಾ ಬಂದಿದೆ. ಆದರೆ ಇದೇ ಕಡಿಮೆ ಟಿಕೆಟ್ ದರದಿಂದಾಗಿ ತಮಿಳು ಸಿನಿಮಾಗಳು ಬಾಕ್ಸ್ ಆಫೀಸ್ನಲ್ಲಿ ಭಾರಿ ದೊಡ್ಡ ಕಲೆಕ್ಷನ್ ಅನ್ನು ಮಾಡಲಾಗುತ್ತಿಲ್ಲ.‘
ಆದರೆ ತಮಿಳು ಸಿನಿಮಾಗಳಿಗೆ ವಿದೇಶಗಳಲ್ಲಿ ದೊಡ್ಡ ಮಾರುಕಟ್ಟೆ ಇದೆ. ತೆಲುಗು ಸಿನಿಮಾಗಳಿಗೆ ನಾರ್ತ್ ಅಮೆರಿಕ ದೊಡ್ಡ ಮಾರುಕಟ್ಟೆ ಹಾಗೆಯೇ ತಮಿಳು ಸಿನಿಮಾಗಳಿಗೆ ಸಿಂಗಪುರ, ಮಲೇಷ್ಯಾ, ಜಪಾನ್, ಅಮೆರಿಕಗಳಲ್ಲಿ ಬಲು ದೊಡ್ಡ ಮಾರುಕಟ್ಟೆ ಇದೆ. ಹಾಗಾಗಿ ತಮಿಳುನಾಡಿನಲ್ಲಿ ಟಿಕೆಟ್ ದರ ಕಡಿಮೆ ಇದ್ದರೂ ಪರ ರಾಜ್ಯಗಳು ಹಾಗೂ ವಿದೇಶಗಳಲ್ಲಿ ಒಳ್ಳೆಯ ಕಲೆಕ್ಷನ್ ಮಾಡಿ ಲಾಭ ಹೆಚ್ಚಿಸಿಕೊಳ್ಳುತ್ತವೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ