ನರೇಂದ್ರ ಮೋದಿ (Narendra Modi) ಅವರ ಜೀವನದ ಕುರಿತು ಈಗಾಗಲೇ ಸಿನಿಮಾ ಬಂದಿದೆ. ಆದರೆ ಆ ಸಿನಿಮಾ ದೊಡ್ಡ ಮಟ್ಟದ ಯಶಸ್ಸು ಕಾಣಲಿಲ್ಲ. ಈಗ ಮತ್ತೊಮ್ಮೆ ನರೇಂದ್ರ ಮೋದಿ ಬಯೋಪಿಕ್ (Narendra Modi Biopic) ಮಾಡಲು ತಯಾರಿ ನಡೆದಿದೆ. ಆ ಸಿನಿಮಾಗೆ ಪಾತ್ರವರ್ಗದ ಆಯ್ಕೆ ಪ್ರಕ್ರಿಯೆ ಕೂಡ ಚಾಲ್ತಿಯಲ್ಲಿದೆ. ವರದಿಗಳ ಪ್ರಕಾರ ಸತ್ಯರಾಜ್ ಅವರು ನರೇಂದ್ರ ಮೋದಿಯ ಪಾತ್ರವನ್ನು ನಿಭಾಯಿಸಲಿದ್ದಾರೆ. ‘ಬಾಹುಬಲಿ’ ಸಿನಿಮಾದಲ್ಲಿ ಕಟ್ಟಪ್ಪನ ಪಾತ್ರ ಮಾಡುವ ಮೂಲಕ ಸತ್ಯರಾಜ್ (Sathyaraj) ಅವರು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಖ್ಯಾತಿ ಪಡೆದಿದ್ದರು. ಈಗ ಅವರಿಗೆ ದೊಡ್ಡ ಆಫರ್ ನೀಡಲಾಗಿದೆ ಎಂಬ ಸುದ್ದಿ ಹರಡಿದೆ.
ವಿವೇಕ್ ಒಬೆರಾಯ್ ನಟಿಸಿದ ‘ಪಿಎಂ ನರೇಂದ್ರ ಮೋದಿ’ ಸಿನಿಮಾ 2019ರಲ್ಲಿ ಬಿಡುಗಡೆ ಆಗಿತ್ತು. ಆ ಚಿತ್ರದಲ್ಲಿ ವಿವೇಕ್ ಒಬೆರಾಯ್ ಅವರು ಮೋದಿಯ ಪಾತ್ರ ಮಾಡಿದ್ದರು. ವಿವೇಕ್ ಒಬೆರಾಯ್ ಅವರ ಲುಕ್ ಸರಿ ಇರಲಿಲ್ಲ ಹಾಗೂ ಅವರ ನಟನೆ ಕೂಡ ಚೆನ್ನಾಗಿಲ್ಲ ಎಂದು ಪ್ರೇಕ್ಷಕರು ಆ ಸಿನಿಮಾವನ್ನು ತಿರಸ್ಕರಿಸಿದ್ದರು. ಈಗ ಮತ್ತೆ ನರೇಂದ್ರ ಮೋದಿ ಅವರ ಜೀವನಾಧಾರಿತ ಸಿನಿಮಾವನ್ನು ನಿರ್ಮಿಸಲಾಗುತ್ತಿದೆ.
ಸತ್ಯರಾಜ್ ಅವರು ನರೇಂದ್ರ ಮೋದಿ ಪಾತ್ರಕ್ಕೆ ಬಣ್ಣ ಹಚ್ಚುತ್ತಾರೆ ಎಂದು ಹೇಳಲಾಗುತ್ತಿದೆಯಾದರೂ ಈ ಬಗ್ಗೆ ಚಿತ್ರತಂಡದ ಯಾರಿಂದಲೂ ಅಧಿಕೃತ ಹೇಳಿಕೆ ಹೊರಬಿದ್ದಿಲ್ಲ. ಹಾಗಾಗಿ ಈ ಸುದ್ದಿ ಸದ್ಯಕ್ಕೆ ಅಂತೆ-ಕಂತೆಗಳ ಹಂತದಲ್ಲೇ ಹರಿದಾಡುತ್ತಿದೆ. ಈ ಸಿನಿಮಾಗೆ ನಿರ್ದೇಶನ ಮಾಡುವವರು ಯಾರು? ನಿರ್ಮಾಣದ ಹೊಣೆಯನ್ನು ಯಾರು ಹೊತ್ತುಕೊಂಡಿದ್ದಾರೆ ಎಂಬಿತ್ಯಾದಿ ಮಾಹಿತಿಗಳು ಕೂಡ ಇನ್ನಷ್ಟೇ ಲಭ್ಯವಾಗಬೇಕಿದೆ.
ಇದನ್ನೂ ಓದಿ: ‘ಬಾಹುಬಲಿ’ ಹೊಸ ಕಥೆ; ‘ಕ್ರೌನ್ ಆಫ್ ಬ್ಲಡ್’ ಟ್ರೇಲರ್ನಲ್ಲಿದೆ ಝಲಕ್
ಬಹುಭಾಷೆಯ ಸಿನಿಮಾಗಳಲ್ಲಿ ನಟಿಸಿ ಸತ್ಯರಾಜ್ ಅವರು ಫೇಮಸ್ ಆಗಿದ್ದಾರೆ. ‘ಬಾಹುಬಲಿ’ ಸಿನಿಮಾದಿಂದ ಅವರು ಹೆಚ್ಚು ಫೇಮಸ್ ಆದರು. ಹಲವು ವರ್ಷಗಳಿಂದ ಅವರು ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಒಂದು ವೇಳೆ ಅವರಿಗೆ ಮೋದಿ ಪಾತ್ರವನ್ನು ಮಾಡುವ ಅವಕಾಶ ಸಿಕ್ಕಿದ್ದು ಹೌದಾದರೆ ಅದನ್ನು ಅವರು ಹೇಗೆ ನಿಭಾಯಿಸುತ್ತಾರೆ ಎಂಬುದನ್ನು ತಿಳಿಯುವ ಕೌತುಕ ಮೂಡಿದೆ. ಈ ಮೊದಲ ಪೆರಿಯಾರ್ ಇವಿ ರಾಮಸ್ವಾಮಿ ಅವರ ಪಾತ್ರವನ್ನು ಮಾಡಿ ಸತ್ಯರಾಜ್ ಸೈ ಎನಿಸಿಕೊಂಡಿದ್ದರು. ಆ ಪಾತ್ರಕ್ಕಾಗಿ ಅವರು ತಮಿಳುನಾಡು ಸರ್ಕಾರದ ರಾಜ್ಯ ಪ್ರಶಸ್ತಿ ಪಡೆದುಕೊಂಡಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:48 am, Sun, 19 May 24