ಜಗತ್ತಿನಾದ್ಯಂತ ಇಂದು ‘ವಿಶ್ವ ತಂಬಾಕು ರಹಿತ ದಿನ’ ಆಚರಿಸಲಾಗುತ್ತಿದೆ. ತಂಬಾಕು ಸೇವನೆಯಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಜನಸಾಮಾನ್ಯರಿಂದ ಸೆಲೆಬ್ರಿಟಿಗಳವರೆಗೆ ಕೋಟ್ಯಂತರ ಜನರು ತಂಬಾಕು ಸೇವನೆಯಿಂದ ಆರೋಗ್ಯ ಕೆಡಿಸಿಕೊಂಡಿದ್ದಾರೆ. ಬೀಡಿ, ಸಿಗರೇಟ್ ಸೇದುವುದರಿಂದ ದೀರ್ಘಾವಧಿಯಲ್ಲಿ ಪ್ರಾಣಕ್ಕೂ ಅಪಾಯ ಸಂಭವಿಸುತ್ತದೆ. ಹಲವು ಸ್ಟಾರ್ ನಟರು ಒಂದು ಕಾಲದಲ್ಲಿ ಚೈನ್ ಸ್ಮೋಕರ್ಗಳಾಗಿದ್ದರು. ಆದರೆ ನಂತರದಲ್ಲಿ ಅವರಿಗೆ ತಮ್ಮ ತಪ್ಪಿನ ಅರಿವಾಗಿ ಆ ಚಟದಿಂದ ದೂರಬಂದರು.
ಬಾಲಿವುಡ್ನಲ್ಲಿ ನಟರಾದ ಅಜಯ್ ದೇವಗನ್, ಸಲ್ಮಾನ್ ಖಾನ್, ಹೃತಿಕ್ ರೋಷನ್, ಸೈಫ್ ಅಲಿ ಖಾನ್ ಮುಂತಾದವರು ಸಿಗರೇಟ್ನ ದಾಸರಾಗಿದ್ದರು. ಅವರ ಒತ್ತಡ ಜೀವನದಲ್ಲಿ ಸಿಗರೇಟ್ ಕೂಡ ಒಂದು ಭಾಗವಾಗಿತ್ತು. ಆದರೆ ನಂತರದ ದಿನಗಳಲ್ಲಿ ಅವರು ಆ ದುಷ್ಚಟದಿಂದ ಹೊರಬಂದರು. ಅಷ್ಟಕ್ಕೂ ಅವರು ಸಿಗರೇಟ್ ಬಿಡಲು ಕಾರಣ ಆಗಿದ್ದೇನು? ಮೊದಲ ಕಾರಣ ಆರೋಗ್ಯ ಸಮಸ್ಯೆ.
1. ಅರ್ಜುನ್ ರಾಮ್ಪಾಲ್
ಖ್ಯಾತ ನಟ ಅರ್ಜುನ್ ರಾಮ್ಪಾಲ್ ಅವರು ಸಿಗರೇಟ್ ವ್ಯಸನಿ ಆಗಿದ್ದರು. ಆದರೆ ಕಳೆದ ವರ್ಷ ಲಾಕ್ಡೌನ್ ಆರಂಭವಾದಾಗ ಅವರಿಗೆ ತಮ್ಮ ತಪ್ಪಿನ ಅರಿವಾಯಿತು. ಹಾಗಾಗಿ ಅವರು ಸಿಗರೇಟ್ ತ್ಯಜಿಸಿದರು. ಕಳೆದೊಂದು ವರ್ಷದಿಂದ ಅವರು ಸಿಗರೇಟ್ನಿಂದ ದೂರ ಇದ್ದಾರೆ.
2. ಸಲ್ಮಾನ್ ಖಾನ್
ಬಾಲಿವುಡ್ನ ಬಹುಬೇಡಿಕೆಯ ಸ್ಟಾರ್ ಕಲಾವಿದ ಸಲ್ಮಾನ್ ಖಾನ್ ಅವರು ಸಿಕ್ಕಾಪಟ್ಟೆ ಸಿಗರೇಟ್ ಸೇದುತ್ತಿದ್ದರು. ಆದರೆ 2010ರಲ್ಲಿ ಅವರಿಗೆ ಆರೋಗ್ಯ ಸಮಸ್ಯೆ ಉಂಟಾಯಿತು. ನಂತರ ಅವರು ಸಿಗರೇಟ್ ವ್ಯಸನ ಬಿಡುವ ನಿರ್ಧಾರ ತೆಗೆದುಕೊಂಡರು.
3. ಸೈಫ್ ಅಲಿ ಖಾನ್
ನಟ ಸೈಫ್ ಅಲಿ ಖಾನ್ ಅವರು ಫಿಟ್ನೆಸ್ ಬಗ್ಗೆ ಹೆಚ್ಚು ಗಮನ ಹರಿಸುತ್ತಾರೆ. ಆದರೆ ಅವರಿಗೆ 36ನೇ ವಯಸ್ಸಿನಲ್ಲಿ ಹೃದಯಾಘಾತ ಸಂಭವಿಸುತ್ತದೆ ಎಂದು ಯಾರೂ ಊಹಿಸಿರಲಿಲ್ಲ. 2007ರಲ್ಲಿ ಅವರಿಗೆ ಹಾರ್ಟ್ ಅಟ್ಯಾಕ್ ಆಯಿತು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆ ಘಟನೆ ನಂತರ ಅವರು ಸಿಗರೇಟ್ ತ್ಯಜಿಸುವ ನಿರ್ಧಾರ ಮಾಡಿದರು.
4. ಅಜಯ್ ದೇವಗನ್
ಅಜಯ್ ದೇವಗನ್ ಕೂಡ ಒಂದು ಕಾಲದಲ್ಲಿ ಚೈನ್ ಸ್ಮೋಕರ್ ಆಗಿದ್ದರು. ಸದಾ ಕಾಲ ಅವರ ಕೈಯಲ್ಲಿ ಸಿಗರೇಟ್ ಇರುತ್ತಿತ್ತು. ಅವರ ಕುಟುಂಬದಲ್ಲಿ ಅನೇಕರಿಗೆ ಪದೇಪದೇ ಆರೋಗ್ಯ ಸಮಸ್ಯೆ ಉಂಟಾಗುತ್ತಿತ್ತು. ಅದನ್ನು ಮನಗಂಡ ಬಳಿಕ ಅವರು ಧೂಮಪಾನದಿಂದ ದೂರ ಉಳಿಯಲು ತೀರ್ಮಾನಿಸಿದರು.
5. ಹೃತಿಕ್ ರೋಷನ್
ಬೇರೆ ನಟರಂತೆ ಹೃತಿಕ್ ರೋಷನ್ ಸಹ ಧೂಮಪಾನದ ದಾಸರಾಗಿದ್ದರು. ಆದರೆ ಅವರನ್ನು ಬದಲಾಯಿಸಿದ್ದು ಒಂದು ಪುಸ್ತಕ. ಬ್ರಿಟಿಷ್ ಲೇಖಕ ಅಲೆನ್ ಕಾರ್ ಅವರು ಬರೆದು ‘ಈಸಿ ವೇ ಟು ಸ್ಟಾಪ್ ಸ್ಮೋಕಿಂಗ್’ ಪುಸ್ತಕವನ್ನು ಓದಿದ ಬಳಿಕ ಹೃತಿಕ್ ರೋಷನ್ ಸಿಗರೇಟ್ ಚಟ ಬಿಟ್ಟರು.
ಇದನ್ನೂ ಓದಿ:
World No Tobacco Day 2021: ಕೊರೊನಾ ಸೋಂಕಿನಿಂದ ಧೂಮಪಾನಿಗಳು ಹೆಚ್ಚಿನ ಅಪಾಯದಲ್ಲಿದ್ದಾರೆಯೇ?