
ಕ್ರಿಕೆಟ್ ಮತ್ತು ಸಿನಿಮಾ ನಡುವೆ ಬಲವಾದ ನಂಟು ಇದೆ. ಕ್ರಿಕೆಟ್ನಲ್ಲಿ ಮಿಂಚಿದವರು ನಂತರ ಸಿನಿಮಾಗಳಲ್ಲಿ ನಟಿಸಿದ ಉದಾಹರಣೆ ಸಾಕಷ್ಟಿದೆ. ಅದೇ ರೀತಿ, ಸಿನಿಮಾ ಮಂದಿ ಕೂಡ ಅನೇಕ ಬಾರಿ ಬ್ಯಾಟ್ ಹಿಡಿದು ಕ್ರಿಕೆಟ್ ಮೈದಾನಕ್ಕೆ ಇಳಿದಿದ್ದುಂಟು. ಯುವರಾಜ್ ಸಿಂಗ್ ಅವರ ತಂದೆ ಯೋಗರಾಜ್ ಸಿಂಗ್ (Yograj Singh) ಕೂಡ ಮಾಜಿ ಕ್ರಿಕೆಟರ್. ಅವರಿಗೂ ಬಣ್ಣದ ಲೋಕದ ಜೊತೆ ನಂಟು ಇದೆ. ಕೆಲವು ಬಾಲಿವುಡ್ ಚಿತ್ರಗಳಲ್ಲಿ ನಟಿಸಿ ಗಮನ ಸೆಳೆದಿರುವ ಅವರು ಈಗ ಕಮಲ್ ಹಾಸನ್ (Kamal Haasan) ಜೊತೆ ಅಭಿನಯಿಸುವ ಅವಕಾಶ ಪಡೆದಿದ್ದಾರೆ. ಈ ಕುರಿತು ಅವರೇ ಅಪ್ಡೇಟ್ ನೀಡಿದ್ದಾರೆ. ಬಹುನಿರೀಕ್ಷಿತ ‘ಇಂಡಿಯನ್ 2’ (Indian 2) ಚಿತ್ರತಂಡದ ಸೆಟ್ನಿಂದ ಯೋಗರಾಜ್ ಸಿಂಗ್ ಅವರು ಫೋಟೋ ಹಂಚಿಕೊಂಡಿದ್ದಾರೆ.
ಕಾರಣಾಂತರಗಳಿಂದ ‘ಇಂಡಿಯನ್ 2’ ಸಿನಿಮಾದ ಕೆಲಸಗಳು ತಡವಾಗಿವೆ. ‘ವಿಕ್ರಮ್’ ಚಿತ್ರದ ಯಶಸ್ಸಿನ ಬಳಿಕ ಕಮಲ್ ಹಾಸನ್ ಅವರು ಹೊಸ ಹುಮ್ಮಸ್ಸಿನೊಂದಿಗೆ ‘ಇಂಡಿಯನ್ 2’ ಚಿತ್ರೀಕರಣದಲ್ಲಿ ಭಾಗಿ ಆಗುತ್ತಿದ್ದಾರೆ. ಇದೇ ಚಿತ್ರದಲ್ಲಿ ಯುವರಾಜ್ ಸಿಂಗ್ ತಂದೆ ಯೋಗರಾಜ್ ಸಿಂಗ್ ಕೂಡ ಒಂದು ಪಾತ್ರ ಮಾಡುತ್ತಿದ್ದಾರೆ.
ನವೆಂಬರ್ 1ರಂದು ಚೆನ್ನೈನಲ್ಲಿ ‘ಇಂಡಿಯನ್ 2’ ಚಿತ್ರದ ಶೂಟಿಂಗ್ ಆರಂಭ ಆಗಿದೆ. ಕ್ಯಾಮೆರಾ ಎದುರಿಸಲು ಸಜ್ಜಾಗುತ್ತಿರುವ ಯೋಗರಾಜ್ ಸಿಂಗ್ ಅವರು ಕನ್ನಡಿ ಎದುರು ಕುಳಿತು ಮೇಕಪ್ ಮಾಡಿಸಿಕೊಳ್ಳುತ್ತಿರುವ ಸಂದರ್ಭದ ಫೋಟೋ ಪೋಸ್ಟ್ ಮಾಡಿದ್ದಾರೆ. ‘ಕ್ಯಾಮೆರಾ ಹಿಂದೆ ಕೆಲಸ ಮಾಡುವ ಎಲ್ಲ ದೊಡ್ಡ ಹೀರೋಗಳಿಗೆ ನನ್ನ ಕಡೆಯಿಂದ ಗೌರವ. ನನ್ನನ್ನು ಹೆಚ್ಚು ಸ್ಮಾರ್ಟ್ ಆಗಿ ಕಾಣುವಂತೆ ಮಾಡಿದ ಮೇಕಪ್ ಕಲಾವಿದರಿಗೆ ಧನ್ಯವಾದಗಳು. ‘ಇಂಡಿಯನ್ 2’ ಚಿತ್ರದಲ್ಲಿ ಲೆಜೆಂಡರಿ ನಟ ಕಮಲ್ ಹಾಸನ್ ಜೊತೆ ನಟಿಸಲು ಪಂಜಾಬ್ ಸಿಂಹ ರೆಡಿ’ ಎಂದು ಯೋಗರಾಜ್ ಸಿಂಗ್ ಅವರು ಈ ಫೋಟೋಗೆ ಕ್ಯಾಪ್ಷನ್ ನೀಡಿದ್ದಾರೆ.
ಖ್ಯಾತ ನಿರ್ದೇಶಕ ಶಂಕರ್ ಅವರು ‘ಇಂಡಿಯನ್ 2’ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ. ಆ ಕಾರಣದಿಂದ ಸಹಜವಾಗಿಯೇ ಈ ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚಿದೆ. ಪ್ರತಿಷ್ಠಿತ ಲೈಕಾ ಪ್ರೊಡಕ್ಷನ್ಸ್ ಸಂಸ್ಥೆಯು ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿದೆ. ಡಿಫರೆಂಟ್ ಗೆಟಪ್ನಲ್ಲಿ ಕಮಲ್ ಹಾಸನ್ ಅವರು ಕಾಣಿಸಿಕೊಳ್ಳುತ್ತಿದ್ದಾರೆ. ಯೋಗರಾಜ್ ಸಿಂಗ್ ಅವರ ಪಾತ್ರ ಹೇಗಿರಲಿದೆ ಎಂಬುದನ್ನು ತಿಳಿಯುವ ಕೌತುಕ ಅಭಿಮಾನಿಗಳಲ್ಲಿ ಮೂಡಿದೆ.
ಈ ಚಿತ್ರದಲ್ಲಿ ಕಮಲ್ ಹಾಸನ್ ಜೊತೆ ಕಾಜಲ್ ಅಗರ್ವಾಲ್ ಅವರು ನಟಿಸುತ್ತಿದ್ದಾರೆ. ರಾಕುಲ್ ಪ್ರೀತ್ ಸಿಂಗ್, ಸಿದ್ದಾರ್ಥ್, ಸಮುದ್ರಖಣಿ, ಬಾಬಿ ಸಿಂಹ, ವೆನ್ನೆಲಾ ಕಿಶೋರ್ ಮುಂತಾದವರು ಸಹ ಬಣ್ಣ ಹಚ್ಚುತ್ತಿದ್ದಾರೆ. ಚಿತ್ರಕ್ಕೆ ಅನಿರುದ್ಧ್ ರವಿಚಂದರ್ ಸಂಗೀತ ಇರಲಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:38 am, Wed, 2 November 22