
ಇತ್ತೀಚಿನ ದಿನಗಳಲ್ಲಿ ಮಧುಮೇಹ (Diabetes) ಒಂದು ಗಂಭೀರ ಕಾಯಿಲೆಯಾಗಿ ಮಾರ್ಪಟ್ಟಿದೆ. ಮಾತ್ರವಲ್ಲ ಈ ಆರೋಗ್ಯ ಸಮಸ್ಯೆ ಹೆಚ್ಚಿನವರಲ್ಲಿ ಕಂಡುಬರುತ್ತಿದೆ. ಜೀವನಶೈಲಿಯ ಬದಲಾವಣೆಗಳು, ಅನಾರೋಗ್ಯಕರ ಆಹಾರ ಪದ್ಧತಿ ಮತ್ತು ಹೆಚ್ಚುತ್ತಿರುವ ಒತ್ತಡದಿಂದಾಗಿ, ಈ ರೋಗವು 40 ವರ್ಷಕ್ಕಿಂತ ಕಡಿಮೆ ವಯಸ್ಸಿನವರ ಮೇಲೂ ಪರಿಣಾಮ ಬೀರುತ್ತಿದೆ. ಆದರೆ ಅತ್ಯಂತ ಕಳವಳಕಾರಿ ವಿಷಯವೆಂದರೆ ಅನೇಕರಿಗೆ ತಮಗೆ ಮಧುಮೇಹವಿದೆ ಅಥವಾ ಅದು ಬರುವ ಅಪಾಯವಿದೆ ಎಂಬುದೇ ತಿಳಿದಿರುವುದಿಲ್ಲ. ಆದರೆ ವಾಸ್ತವದಲ್ಲಿ, ಮಧುಮೇಹ ಬರುವ ಮೊದಲು ದೇಹವು ಕೆಲವು ಸ್ಪಷ್ಟ ಸೂಚನೆಗಳನ್ನು ನೀಡುತ್ತದೆ. ಆದರೆ ಇದು ಅನೇಕರಿಗೆ ಗೊತ್ತೆ ಆಗುವುದಿಲ್ಲ. ಅದಕ್ಕಾಗಿಯೇ ಮಧುಮೇಹ ಕಂಡುಬರುವ ಮೊದಲು ಕಾಣಿಸಿಕೊಳ್ಳುವ ಲಕ್ಷಣಗಳ ಬಗ್ಗೆ ಮೊದಲು ತಿಳಿದುಕೊಳ್ಳಬೇಕು. ನಿರ್ಲಕ್ಷಿಸುವ ಬದಲು ತಡೆಗಟ್ಟುವ ಕ್ರಮಗಳ ಬಗ್ಗೆ ಯೋಚಿಸಬೇಕು. ಹಾಗಾದರೆ ಆ ಲಕ್ಷಣಗಳು ಯಾವವು, ಯಾವ ರೀತಿ ಕಂಡುಬರುತ್ತದೆ ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.
ರಕ್ತದಲ್ಲಿನ ಸಕ್ಕರೆ ಮಟ್ಟ ಹೆಚ್ಚಾದಾಗ, ಮೂತ್ರಪಿಂಡಗಳು ಅದನ್ನು ದೇಹದಿಂದ ಹೊರಹಾಕಲು ಶ್ರಮಿಸುತ್ತವೆ. ಇದು ಮೂತ್ರ ವಿಸರ್ಜನೆಯನ್ನು ಹೆಚ್ಚಿಸುತ್ತದೆ. ಮೂತ್ರದ ಮೂಲಕ ಹೆಚ್ಚಿನ ನೀರು ನಷ್ಟವಾಗುವುದರಿಂದ, ನಮಗೆ ಆಗಾಗ ಬಾಯಾರಿಕೆಯಾಗುತ್ತದೆ. ಹೆಚ್ಚು ನೀರು ಕುಡಿಯುವುದು ಪದೇ ಪದೇ ಶೌಚಾಲಯಕ್ಕೆ ಹೋಗಬೇಕಾಗಿ ಬರುತ್ತದೆ.
ಇದನ್ನೂ ಓದಿ: ಮಕ್ಕಳಲ್ಲಿ ಮಧುಮೇಹ ಬರದಂತೆ ತಡೆಯಲು ಈ ಸಲಹೆಗಳನ್ನು ಪಾಲಿಸಿ
ನಮ್ಮ ದೇಹದ ಜೀವಕೋಶಗಳು ಶಕ್ತಿಗಾಗಿ ಸಕ್ಕರೆಯನ್ನು ಬಳಸುತ್ತವೆ. ಮಧುಮೇಹದಲ್ಲಿ, ಇನ್ಸುಲಿನ್ ಸರಿಯಾಗಿ ಕೆಲಸ ಮಾಡುವುದಿಲ್ಲ. ಆದ್ದರಿಂದ, ಜೀವಕೋಶಗಳಿಗೆ ಶಕ್ತಿ ಸಿಗುವುದಿಲ್ಲ. ಪರಿಣಾಮವಾಗಿ, ನೀವು ಎಷ್ಟೇ ನಿದ್ರೆ ಮಾಡಿದರೂ ಅಥವಾ ವಿಶ್ರಾಂತಿ ಪಡೆದರೂ, ಆಲಸ್ಯವನ್ನು ಅನುಭವಿಸುತ್ತೀರಿ, ಮಾತ್ರವಲ್ಲ ದೇಹದಲ್ಲಿ ಶಕ್ತಿಯೇ ಇಲ್ಲ ಎಂಬ ಭಾವನೆ ಬರುತ್ತದೆ.
ರಕ್ತದಲ್ಲಿನ ಸಕ್ಕರೆ ಮಟ್ಟ ಹೆಚ್ಚಾದರೆ ಕಣ್ಣಿನಲ್ಲಿರುವ ಮಸೂರವು ಸ್ವಲ್ಪ ಊದಿಕೊಳ್ಳಬಹುದು. ಇದು ಕಣ್ಣುಗಳು ಸರಿಯಾಗಿ ದಿಟ್ಟಿಸಿ ನೋಡುವುದನ್ನು ತಡೆಯುತ್ತದೆ, ಇದರಿಂದಾಗಿ ದೃಷ್ಟಿ ಮಸುಕಾಗುತ್ತದೆ. ಈ ರೀತಿ ಆಗುತ್ತಿದ್ದರೆ ಮೊದಲು ವೈದ್ಯರನ್ನು ಸಂಪರ್ಕಿಸುವುದು ಮುಖ್ಯ, ಏಕೆಂದರೆ ಕೆಲವರು ಕನ್ನಡಕದ ಪ್ರಿಸ್ಕ್ರಿಪ್ಷನ್‌ನಲ್ಲಿ ಬದಲಾವಣೆ ಎಂದು ಭಾವಿಸುತ್ತಾರೆ. ಆದರೆ ಈ ತಪ್ಪು ಕಲ್ಪನೆ ದೃಷ್ಟಿ ಮಸುಕಿಗೆ ಕಾರಣವಾಗಬಹುದು. ಹಾಗಾಗಿ ಇಂತಹ ಲಕ್ಷಣಗಳನ್ನು ನಿರ್ಲಕ್ಷ್ಯ ಮಾಡಬೇಡಿ.
ಜೀವಕೋಶಗಳಿಗೆ ಶಕ್ತಿಗಾಗಿ ಸಕ್ಕರೆ ಸಿಗದಿದ್ದಾಗ, ದೇಹವು ಸ್ನಾಯುಗಳು ಮತ್ತು ಕೊಬ್ಬನ್ನು ಒಡೆಯಲು ಪ್ರಾರಂಭಿಸುತ್ತದೆ. ಇದು ಬೇಗನೆ ತೂಕ ಕಡಿಮೆಯಾಗುವುದಕ್ಕೆ ಕಾರಣವಾಗುತ್ತದೆ. ಅದರಲ್ಲಿಯೂ ಇದು ವಿಶೇಷವಾಗಿ ಟೈಪ್ 1 ಮಧುಮೇಹದಲ್ಲಿ ಸಾಮಾನ್ಯವಾಗಿದೆ.
ಸಣ್ಣ ಗಾಯವಾದರೂ ಸಹ ಅದು ವಾಸಿಯಾಗಲು ಸಾಮಾನ್ಯಕ್ಕಿಂತ ಹೆಚ್ಚು ಸಮಯ ತೆಗೆದುಕೊಂಡರೆ, ಅದು ಎಚ್ಚರಿಕೆಯ ಸಂಕೇತವಾಗಿದೆ. ಹೆಚ್ಚಿನ ಸಕ್ಕರೆ ಮಟ್ಟವು ರಕ್ತನಾಳಗಳನ್ನು ಹಾನಿಗೊಳಿಸುತ್ತದೆ ಮತ್ತು ರಕ್ತದ ಹರಿವನ್ನು ಕಡಿಮೆ ಮಾಡುತ್ತದೆ. ಅದಕ್ಕಾಗಿಯೇ ಗಾಯಗಳು ನಿಧಾನವಾಗಿ ಗುಣವಾಗುತ್ತವೆ. ಹಾಗಾಗಿ ಇತರ ಲಕ್ಷಣ ಕಂಡುಬಂದಾಗ ತಕ್ಷಣ ವೈದ್ಯರ ಸಂಪರ್ಕ ಮಾಡುವುದನ್ನು ಮರೆಯಬೇಡಿ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ