
ಬೆಳಗ್ಗೆ ಎದ್ದ ತಕ್ಷಣವೇ ದಣಿವು, ಕೆಲಸ ಮಾಡಲು ಉತ್ಸಾಹ ಇಲ್ಲದಿರುವುದು ಅಥವಾ ಸಣ್ಣ ಕೆಲಸಕ್ಕೂ ದೇಹ ಭಾರವಾಗಿರುವಂತೆ ಅನಿಸುವುದು ಹಲವರ ಸಮಸ್ಯೆ. ನಿದ್ರೆಯ ಕೊರತೆ ಮಾತ್ರವಲ್ಲದೆ, ಆಹಾರದಲ್ಲಿ ಕೆಲವು ಪ್ರಮುಖ ಪೋಷಕಾಂಶಗಳ ಕೊರತೆ, ದೇಹದಲ್ಲಿ ನೀರಿನ ಕೊರತೆ ಮತ್ತು ಕಡಿಮೆ ದೈಹಿಕ ಚಟುವಟಿಕೆಯೂ ಸುಸ್ತಿಗೆ ಕಾರಣವಾಗಬಹುದು. ಆಹಾರದಲ್ಲಿ ವಿವಿಧ ಪೋಷಕಾಂಶಗಳನ್ನು ಸೇರಿಸುವುದು ದೇಹದ ಶಕ್ತಿ ಹೆಚ್ಚಿಸಲು ನೆರವಾಗುತ್ತದೆ. ಹಾಗಾದರೆ ಯಾವ ಆಹಾರಗಳು ಇದಕ್ಕೆ ಸಹಾಯ ಮಾಡಬಹುದು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.
ಬಿ ವಿಟಮಿನ್‌ಗಳು ನಾವು ಸೇವಿಸುವ ಆಹಾರದಿಂದ ದೇಹಕ್ಕೆ ಶಕ್ತಿ ಉತ್ಪಾದಿಸುವ ಪ್ರಕ್ರಿಯೆಗಳಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಮೊಟ್ಟೆ, ಹಾಲು, ಮೊಸರು, ಪಾಲಕ್‌ನಂತಹ ಸೊಪ್ಪುಗಳು, ಬೇಳೆಕಾಳುಗಳು, ಸಂಪೂರ್ಣ ಗೋಧಿ, ಬ್ರೌನ್ ರೈಸ್, ಬಾದಾಮಿ ಮತ್ತು ಶೇಂಗಾದಂತಹ ಆಹಾರಗಳನ್ನು ಸಮತೋಲಿತ ಆಹಾರದ ಭಾಗವಾಗಿ ಸೇರಿಸಬಹುದು.
ಸಾಮಾನ್ಯವಾಗಿ ವಿಟಮಿನ್ ಡಿ ಮೂಳೆಗಳ ಆರೋಗ್ಯ ಸೇರಿದಂತೆ ಹಲವು ದೈಹಿಕ ಕಾರ್ಯಗಳಿಗೆ ಅಗತ್ಯ. ಸೂರ್ಯನ ಬೆಳಕು ವಿಟಮಿನ್ ಡಿ ಪಡೆಯಲು ಪ್ರಮುಖ ನೈಸರ್ಗಿಕ ಮೂಲವಾಗಿದೆ. ಮೊಟ್ಟೆಯ ಹಳದಿ ಭಾಗ, ಕೆಲವು ಅಣಬೆಗಳು ಮತ್ತು ಫೋರ್ಟಿಫೈಡ್ ಹಾಲು ಅಥವಾ ಹಾಲಿನ ಉತ್ಪನ್ನಗಳಿಂದಲೂ ವಿಟಮಿನ್ ಡಿ ದೊರೆಯಬಹುದು. ವಿಟಮಿನ್ ಡಿ ಕೊರತೆ ಇದೆ ಎಂದು ಅನುಮಾನವಿದ್ದರೆ ಪರೀಕ್ಷೆ ಮತ್ತು ವೈದ್ಯರ ಸಲಹೆ ಪಡೆಯುವುದು ಸೂಕ್ತ.
ಇದನ್ನೂ ಓದಿ: ವೈರಲ್ ಜ್ವರದ ಬಳಿಕವೂ ಕೆಮ್ಮು ಕಡಿಮೆಯಾಗದಿದ್ದರೆ ವೈದ್ಯರು ತಿಳಿಸಿರುವ ಈ ಸಲಹೆಗಳನ್ನು ಫಾಲೋ ಮಾಡಿ!
ಐರನ್ ಹಿಮೋಗ್ಲೋಬಿನ್ ಉತ್ಪಾದನೆಗೆ ಅಗತ್ಯ. ಐರನ್ ಕೊರತೆಯಿಂದ ರಕ್ತಹೀನತೆ ಉಂಟಾದರೆ ದೌರ್ಬಲ್ಯ ಮತ್ತು ದಣಿವು ಕಾಣಿಸಿಕೊಳ್ಳಬಹುದು. ಬೇಳೆಕಾಳುಗಳು, ಸೊಪ್ಪುಗಳು, ಎಳ್ಳು, ರಾಗಿ, ಒಣಹಣ್ಣುಗಳು ಸೇರಿದಂತೆ ವಿವಿಧ ಆಹಾರಗಳಿಂದ ಐರನ್ ಪಡೆಯಬಹುದು. ಸಸ್ಯ ಮೂಲದ ಐರನ್‌ನ್ನು ದೇಹ ಹೀರಿಕೊಳ್ಳಲು ವಿಟಮಿನ್ ಸಿ ಸಹಾಯ ಮಾಡುತ್ತದೆ. ಆದ್ದರಿಂದ ಐರನ್ ಇರುವ ಆಹಾರದ ಜೊತೆಗೆ ನಿಂಬೆ ಅಥವಾ ಇತರ ವಿಟಮಿನ್ ಸಿ ಮೂಲಗಳನ್ನು ಸೇರಿಸಬಹುದು.
ಸಾಮಾನ್ಯವಾಗಿ ಮೆಗ್ನೀಷಿಯಂ ದೇಹದ ಹಲವು ಜೈವಿಕ ಕ್ರಿಯೆಗಳಲ್ಲಿ ಅನುವು ಮಾಡಿಕೊಡುತ್ತದೆ. ಕುಂಬಳಕಾಯಿ ಬೀಜ, ಬಾದಾಮಿ, ಗೋಡಂಬಿ, ಬಾಳೆಹಣ್ಣು, ಬೇಳೆಕಾಳುಗಳು ಮತ್ತು ಕೆಲವು ಹಸಿರು ತರಕಾರಿಗಳು ಮೆಗ್ನೀಷಿಯಂನ ಉತ್ತಮ ಆಹಾರ ಮೂಲಗಳಾಗಿವೆ. ಆದರೆ ಹೆಚ್ಚು ಮೆಗ್ನೀಷಿಯಂ ಪಡೆದರೆ ತಕ್ಷಣವೇ ಎನರ್ಜಿ ಹೆಚ್ಚುತ್ತದೆ ಎನ್ನುವುದಕ್ಕಿಂತ, ಅಗತ್ಯವಿರುವ ಪೋಷಕಾಂಶಗಳನ್ನು ಸಮತೋಲಿತವಾಗಿ ಪಡೆಯುವುದು ಮುಖ್ಯ.
ಕೋಎಂಜೈಮ್ ಕ್ಯೂ10 ದೇಹದ ಕೋಶಗಳಲ್ಲಿ ಶಕ್ತಿ ಉತ್ಪಾದನೆಗೆ ಸಂಬಂಧಿಸಿದ ಸಂಯುಕ್ತವಾಗಿದೆ. ಮೀನು, ಸೋಯಾಬೀನ್, ಬೇಳೆಕಾಳುಗಳು, ಬ್ರೊಕೊಲಿ, ಹೂಕೋಸು ಮತ್ತು ಶೇಂಗಾದಂತಹ ಆಹಾರಗಳಲ್ಲಿ ಇದು ದೊರೆಯುತ್ತದೆ. ಆದರೆ CoQ10 ಸಪ್ಲಿಮೆಂಟ್‌ಗಳನ್ನು ವೈದ್ಯರ ಸಲಹೆಯಿಲ್ಲದೆ ತೆಗೆದುಕೊಳ್ಳಬಾರದು.
ಎನರ್ಜಿ ಹೆಚ್ಚಿಸಲು ಆಹಾರ ಮಾತ್ರ ಸಾಕಾಗುವುದಿಲ್ಲ. ಪ್ರತಿದಿನ ಸಾಕಷ್ಟು ನಿದ್ರೆ ಪಡೆಯುವುದು, ನಿಯಮಿತ ದೈಹಿಕ ಚಟುವಟಿಕೆ ಮಾಡುವುದು ಹಾಗೂ ದೇಹಕ್ಕೆ ಅಗತ್ಯವಿರುವಷ್ಟು ನೀರು ಕುಡಿಯುವುದು ಮುಖ್ಯ. ಅತಿಯಾದ ಸಕ್ಕರೆ, ಅಲ್ಟ್ರಾ-ಪ್ರೊಸೆಸ್ಡ್ ಆಹಾರ ಮತ್ತು ಜಂಕ್ ಫುಡ್‌ಗಳನ್ನು ಕಡಿಮೆ ಮಾಡುವುದು ಕೂಡ ಆರೋಗ್ಯಕರ ಆಹಾರದ ಭಾಗ.
ಸೂಚನೆ: ನಿರಂತರವಾಗಿ ದಣಿವು, ಉಸಿರಾಟದ ತೊಂದರೆ, ತಲೆತಿರುಗುವಿಕೆ ಅಥವಾ ದೌರ್ಬಲ್ಯ ಇದ್ದರೆ ಕೇವಲ ಆಹಾರದಿಂದ ಸಮಸ್ಯೆ ಸರಿಪಡಿಸಲು ಪ್ರಯತ್ನಿಸದೆ ವೈದ್ಯರನ್ನು ಸಂಪರ್ಕಿಸಿ. ರಕ್ತಹೀನತೆ, ಥೈರಾಯ್ಡ್ ಸಮಸ್ಯೆ, ನಿದ್ರಾ ಸಮಸ್ಯೆಗಳು ಸೇರಿದಂತೆ ಹಲವು ಕಾರಣಗಳು ನಿರಂತರ ದಣಿವಿಗೆ ಕಾರಣವಾಗಬಹುದು.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ