ದೊಡ್ಡಪತ್ರೆ
Image Credit source: Getty Images
ದೊಡ್ಡ ಪತ್ರೆ, ಸಾಂಬಾರ್ ಸೊಪ್ಪು (Doddapatre), ಸಂಬಾರ ಬಳ್ಳಿ, ಸಾಂಬ್ರಾಣಿ ಎಲೆ, ಕರ್ಪೂರವಳ್ಳಿ ಹೀಗೆ ನಾನಾ ಹೆಸರುಗಳಿಂದ ಕರೆಯುವ ಈ ಗಿಡ ಅಮೃತಕ್ಕೆ ಸಮಾನವಾದ ಗುಣಗಳನ್ನು ಹೊಂದಿದೆ. ಮನೆಯ ಹಿತ್ತಲಿನಲ್ಲಿ ಈ ಒಂದು ಗಿಡವಿದ್ದರೆ ಅನೇಕ ರೀತಿಯ ಆರೋಗ್ಯ (Health) ಸಮಸ್ಯೆಗಳಿಗೆ ಪರಿಹಾರ ಪಡೆಯಬಹುದು. ಹಾಗಾಗಿಯೇ ಔಷಧೀಯ ಸಸ್ಯ (Medicinal plant) ಗಳಲ್ಲಿ ದೊಡ್ಡಪತ್ರೆಗೆ ಬಹಳ ಮಹತ್ವದ ಸ್ಥಾನವಿದೆ. ಈ ಎಲೆಯಿಂದ ಬರುವ ಪರಿಮಳವೇ ಇದರ ಆರೋಗ್ಯ ಗುಣಗಳನ್ನು ಹೇಳುತ್ತವೆ. ಇನ್ನು ಇದರ ಉಪಯೋಗ ಸಾಕಷ್ಟಿದೆ. ಮಕ್ಕಳ ಜ್ವರ (Fever) ಕಡಿಮೆ ಮಾಡುವುದರಿಂದ ಹಿಡಿದು ಚೇಳು ಕಡಿದ ಜಾಗಕ್ಕೆ ಹುಚ್ಚುವವರೆಗೂ ಇದು ಅನೇಕ ರೀತಿಯ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ. ಹಾಗಾಗಿಯೇ ಇದನ್ನು ಮನೆಯಲ್ಲಿ ಬೆಳೆಸುವುದರ ಜೊತೆಗೆ ಇವುಗಳ ಆರೋಗ್ಯ ಪ್ರಯೋಜನ ತಿಳಿದುಕೊಂಡಲ್ಲಿ ಮನೆಮದ್ದುಗಳನ್ನು ಮಾಡಿಕೊಳ್ಳುವ ಮೂಲಕ ಆರೋಗ್ಯ ಸಮಸ್ಯೆಗೆ ಗುಡ್ ಬೈ ಹೇಳಬಹುದು. ಹಾಗಾದರೆ ಇದರ ಉಪಯೋಗವೇನು? ಯಾವ ರೀತಿಯಲ್ಲಿ ಬಳಕೆ ಮಾಡಬೇಕು ಎಂಬುದನ್ನು ತಿಳಿದುಕೊಳ್ಳಿ.
ಸಾಂಬ್ರಾಣಿ ಎಲೆಯ ಆರೋಗ್ಯ ಪ್ರಯೋಜನಗಳು ಇಲ್ಲಿದೆ;
- ದೊಡ್ಡ ಪತ್ರೆ ಅಥವಾ ಸಾಂಬ್ರಾಣಿ ಎಲೆಯ ರಸವು ಶೀತ, ಕೆಮ್ಮು ಮತ್ತು ಉಸಿರಾಟದ ಸಮಸ್ಯೆಗಳಿಗೆ ತಕ್ಷಣದ ಪರಿಹಾರವನ್ನು ನೀಡುತ್ತದೆ. ಈ ರಸವನ್ನು ಹಣೆಯ ಮೇಲೆ ಮತ್ತು ಎದೆಯ ಮೇಲೆ ಹಚ್ಚುವುದರಿಂದ ಉಸಿರಾಟ ಸುಲಭವಾಗುತ್ತದೆ.
- ಈ ಎಲೆಗಳು ಜೀರ್ಣಕ್ರಿಯೆಯನ್ನು ಸುಧಾರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಅಜೀರ್ಣ, ಮಲಬದ್ಧತೆ ಮತ್ತು ಹೊಟ್ಟೆ ಉರಿಯುವಿಕೆಯಿಂದ ಬಳಲುತ್ತಿರುವವರಿಗೆ ಇದು ಉತ್ತಮ ಪರಿಹಾರವಾಗಿದೆ.
- ದೊಡ್ಡ ಪತ್ರೆ ಎಲೆಗಳು, ತೂಕ ಕಡಿಮೆ ಮಾಡಿಕೊಳ್ಳಲು ಪ್ರಯತ್ನಿಸುತ್ತಿರುವವರಿಗೆ ಮತ್ತು ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡಲು ಬಯಸುವವರಿಗೆ ಪ್ರಯೋಜನಕಾರಿಯಾಗಿದೆ.
- ಚಿಕ್ಕ ಮಕ್ಕಳಿಗೆ ಜ್ವರ ಬಂದಾಗ ಈ ಎಲೆಗಳನ್ನು ಹೆಚ್ಚಾಗಿ ಉಪಯೋಗಿಸಲಾಗುತ್ತದೆ. ಇದನ್ನು ಸಣ್ಣ ಬೆಂಕಿಯಲ್ಲಿಟ್ಟು ಬಾಡಿಸಿ, ಅದರ ರಸ ತೆಗೆದು ಮಕ್ಕಳಿಗೆ ಕುಡಿಯಲು ನೀಡಬೇಕು. ಬೇಕಾದಲ್ಲಿ ಈ ರಸಕ್ಕೆ ಸ್ವಲ್ಪ ಬೆಲ್ಲ ಬೆರೆಸಿ ಕುಡಿಯಲು ನೀಡಬಹುದು. ಇದರಿಂದ ಬೇಗ ಜ್ವರ ಕಡಿಮೆಯಾಗುತ್ತದೆ.
- ಸಾಂಬ್ರಾಣಿ ಎಲೆಯ ರಸವನ್ನು ಚೇಳು ಕಡಿದ ಜಾಗಕ್ಕೆ ಹಚ್ಚಿದರೆ ನೋವು ನಿವಾರಣೆಯಾಗುತ್ತದೆ.
- ಒಂದು ವಾರದ ವರೆಗೆ ಪ್ರತಿನಿತ್ಯ ತಪ್ಪದೆ ದೊಡ್ಡಪತ್ರೆ ಎಲೆಯ ರಸವನ್ನು ಸೇವನೆ ಮಾಡಿದಲ್ಲಿ ಹಳದಿ ರೋಗ, ಕಾಮಾಲೆ ನಿವಾರಣೆಯಾಗುತ್ತದೆ.
- ಬೇಸಿಗೆ ಕಾಲದಲ್ಲಿ ಕಂಡು ಬರುವ ತುರಿಕೆ, ಕಜ್ಜಿ ಅಥವಾ ಬೆವರು ಸಾಲೆಗಳನ್ನು ಕಡಿಮೆ ಮಾಡಲು, ಆ ಜಾಗಕ್ಕೆ ಹಸಿಯಾಗಿ ಸಾಂಬ್ರಾಣಿ ಎಲೆಗಳನ್ನು ಹಚ್ಚಿ.
- ಸಾಂಬ್ರಾಣಿ ಎಲೆಯ ರಸವನ್ನು ಮೊಸರಿನಲ್ಲಿ ಬೆರೆಸಿ ಮುಖ, ಕೈ- ಕಾಲುಗಳಿಗೆ ಹಚ್ಚಿಕೊಳ್ಳವುದರಿಂದ ಚರ್ಮ ಕಾಂತಿಯುಕ್ತವಾಗುತ್ತದೆ. ಜೊತೆಗೆ ಚರ್ಮದ ಆರೋಗ್ಯವೂ ಚೆನ್ನಾಗಿರುತ್ತದೆ.
- ದೊಡ್ಡಪತ್ರೆ ಎಲೆಗಳನ್ನು ಜಜ್ಜಿ ರಸ ತೆಗೆದು ಜೇನಿನೊಂದಿಗೆ ಬೆರೆಸಿ ಕುಡಿಯುವುದರಿಂದ ಕಫ, ಬೇಧಿ ಕಡಿಮೆಯಾಗುತ್ತದೆ.
- ಚಿಕ್ಕ ಮಕ್ಕಳಿಗೆ ಶೀತ, ಜ್ವರ ಬರಬಾರದು ಎಂದರೆ ಅಥವಾ ಕಫ ಆಗಿದ್ದರೆ ಈ ಎಲೆಯನ್ನು ಬೆಂಕಿಯಲ್ಲಿ ಬಾಡಿಸಿ ಮಕ್ಕಳ ತಲೆಯ ಮೇಲಿಟ್ಟು ಬಟ್ಟೆ ಕಟ್ಟಿ ಮಲಗಿಸಬೇಕು. ಈ ರೀತಿ ಮಾಡುವುದರಿಂದ ಎಳೆ ಮಕ್ಕಳಲ್ಲಿ ಶೀತ, ಜ್ವರ, ಕಫ ಕಂಡುಬರುವುದಿಲ್ಲ.
ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಯಾವುದೇ ರೀತಿಯಲ್ಲಿ ಅರ್ಹ ವೈದ್ಯಕೀಯ ಸಲಹೆಗೆ ಪರ್ಯಾಯವಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞರನ್ನು ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸುವುದನ್ನು ಮರೆಯಬೇಡಿ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ