ಸಾಕಷ್ಟು ಜನರು ಜೀರ್ಣಕ್ರಿಯೆ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅನಾರೋಗ್ಯಕರ ಆಹಾರ ಪದ್ಧತಿಯ ಪಾಲನೆ ಇದಕ್ಕೆ ಪ್ರಮುಖ ಕಾರಣವೆಂದು ಹೇಳಬಹುದು. ಇದರ ಹೊರತಾಗಿಯೂ ಅನೇಕ ಜನರು ಎಣ್ಣೆಯಲ್ಲಿ ಕರಿದ ಅಥವಾ ಮಸಾಲೆಯುಕ್ತ ಆಹಾರಗಳ ಸೇವನೆ ಮಾಡದಿದ್ದರೂ ಕೂಡಾ ಜೀರ್ಣಕ್ರಿಯೆ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಜೀರ್ಣಕ್ರಿಯೆ ಸರಿಯಾಗಿ ಆಗದಿರಲು ಕಾರಣವೆಂದರೆ ಕರುಳಿನಲ್ಲಿ ಉತ್ತಮ ಬ್ಯಾಕ್ಟೀರಿಯಾದ ಕೊರತೆ. ಇದರಿಂದಾಗಿ ಆಹಾರವು ಸರಿಯಾಗಿ ಜೀರ್ಣವಾಗುವುದಿಲ್ಲ ಮತ್ತು ಇದರಿಂದ ಹೊಟ್ಟೆ ಉಬ್ಬರುವಿಕೆ ಹಾಗೂ ಗ್ಯಾಸ್ ಸಮಸ್ಯೆಯೂ ಕಾಡುತ್ತದೆ. ಈ ಸಮಸ್ಯೆ ವಿಪರೀತವಾಗಿ ಕಾಡತೊಡಗಿದಾಗ ವ್ಯಕ್ತಿಯು ಉಸಿರಾಟದ ತೊಂದರೆಯನ್ನು ಎದುರಿಸಬೇಕಾಗುತ್ತದೆ. ಅಲ್ಲದೆ ಹೊಟ್ಟೆಯಲ್ಲಿ ಊತ ಮತ್ತು ವಿಪರೀತ ಹೊಟ್ಟೆ ನೋವಿಗೂ ಕೂಡ ಇದು ಕಾರಣವಾಗುತ್ತದೆ. ಪ್ರತಿದಿನ ಊಟ ಮಾಡಿದ ಬಳಿಕ ಹೊಟ್ಟೆ ಉಬ್ಬರದ ಸಮಸ್ಯೆ ನಿಮ್ಮನ್ನು ಕಾಡುತ್ತಿದ್ದರೆ, ಈ ಒಂದು ಕಷಾಯವನ್ನು ಸೇವಿಸುವ ಮೂಲಕ ನಿಮ್ಮ ಹೊಟ್ಟೆ ಉಬ್ಬರದ ಸಮಸ್ಯೆಗೆ ವಿದಾಯ ಹೇಳಬಹುದು.
ಒಂದು ಪಾತ್ರೆಗೆ ಒಂದು ಲೋಟದಷ್ಟು ನೀರನ್ನು ಹಾಕಿ, ಅದಕ್ಕೆ ಸೋಂಪುಕಾಳುಗಳು, ನಿಂಬೆ ಹೋಳು, ಏಲಕ್ಕಿ ಮತ್ತು ಶುಂಠಿಯನ್ನು ಹಾಕಿ ಚೆನ್ನಾಗಿ ಕುದಿಸಿ. ಪಾತ್ರೆಯಲ್ಲಿ ನೀರು ಅರ್ಧದಷ್ಟು ಆವಿಯಾಗುವವರೆಗೆ ಅದನ್ನು ಕುದಿಸಿ. ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ಈ ಪಾನೀಯವನ್ನು ಕುಡಿಯಿರಿ.
ಇದನ್ನೂ ಓದಿ: ಸೋಮವಾರದಂದು ಹೆಚ್ಚು ಹೃದಯಾಘಾತ ಸಂಭವಿಸುವುದು ಯಾಕೆ? ಇಲ್ಲಿದೆ ತಜ್ಞರ ಅಭಿಪ್ರಾಯ
ಈ ಪಾನೀಯ ಅಥವಾ ಕಷಾಯದಲ್ಲಿ ಶುಂಠಿ, ನಿಂಬೆ, ಸೋಂಪು, ಏಲಕ್ಕಿ ಇವುಗಳನ್ನೆಲ್ಲಾ ಸೇರಿಸಿರುತ್ತಾರೆ. ಇವೆಲ್ಲವೂ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಅಲ್ಲದೆ ಹಿಂದಿನಿಂದಲೂ ಅನೇಕ ಮನೆಮದ್ದುಗಳಲ್ಲಿ ಈ ಪದಾರ್ಥಗಳನ್ನು ಬಳಕೆ ಮಾಡಲಾಗುತ್ತಿದೆ. ಶುಂಠಿ ಜೀರ್ಣಕ್ರಿಯೆ ಪ್ರಕ್ರಿಯೆಯನ್ನು ವೇಗಗೊಳಿಸಲು ಸಹಾಯ ಮಾಡುತ್ತದೆ. ಸೋಂಪುಕಾಳುಗಳು ಆಹಾರವನ್ನು ಜೀರ್ಣಿಸಿಕೊಳ್ಳಲು ಸಹಕಾರಿ. ಮತ್ತು ನಿಂಬೆಯ ಆಮ್ಲೀಯ ಪರಿಣಾಮವು ಆಹಾರದಲ್ಲಿರುವ ಎಣ್ಣೆ ಮತ್ತು ಕೊಬ್ಬನ್ನು ಜೀರ್ಣಿಸಿಕೊಳ್ಳಲು ಸಹಾಯ ಮಾಡುತ್ತದೆ ಈ ಕಾರಣದಿಂದಾಗಿ ಈ ಎಲ್ಲಾ ಮಿಶ್ರಣದ ಪಾನೀಯವು ಹೊಟ್ಟೆ ಉಬ್ಬುವಿಕೆಯ ಸಮಸ್ಯೆಯನ್ನು ತಡೆಯಲು ಸಹಾಯ ಮಾಡುತ್ತದೆ.
ಪ್ರತಿದಿನ ಖಾಲಿಹೊಟ್ಟೆಯಲ್ಲಿ ಈ ಪಾನೀಯವನ್ನು ಸೇವನೆ ಮಾಡುವ ಮೂಲಕ ಜೀರ್ಣಕ್ರಿಯೆಯನ್ನು ಸರಾಗಗೊಳಿಸಬಹುದು ಮತ್ತು ಮಲಬದ್ಧತೆಯ ಸಮಸ್ಯೆಯನ್ನು ಹೋಗಲಾಡಿಸಲು ಇದು ಸಹಾಯ ಮಾಡುತ್ತದೆ.
ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: