ನೀವು ಕೆಲಸ ಮಾಡುವಾಗ ಕುಳಿತುಕೊಳ್ಳುವಂತಹ ಭಂಗಿಯಿಂದಲೂ ಬರಬಹುದು ಬೆನ್ನು ನೋವು ಎಚ್ಚರಿಕೆ ನೀಡಿದ ಡಾ ಅಜಯ್ ಹೆಗ್ಡೆ
ಇತ್ತೀಚಿನ ದಿನಗಳಲ್ಲಿ ಕುತ್ತಿಗೆ, ಬೆನ್ನು ನೋವಿನಿಂದ ಬಳಲುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದಕ್ಕೆ ಮುಖ್ಯ ಕಾರಣ ಕುಳಿತುಕೊಳ್ಳುವ ಭಂಗಿ ಸರಿಯಾಗಿ ಇಲ್ಲದಿರುವುದು. ಹಾಗಾಗಿ ಈ ರೀತಿಯಾದಾಗ ಯಾವ ರೀತಿಯ ಸಮಸ್ಯೆಗಳು ಉಂಟಾಗುತ್ತದೆ ಎಂಬುದರ ಬಗ್ಗೆ ಸರ್ಜಾಪುರ ರಸ್ತೆಯಲ್ಲಿರುವ ಮಣಿಪಾಲ ಆಸ್ಪತ್ರೆಯ ಕನ್ಸಲ್ಟೆಂಟ್- ನ್ಯೂರೊ ಸ್ಪೈನ್ ಸರ್ಜರಿ ಡಾ ಅಜಯ್ ಹೆಗ್ಡೆ ಅವರು ಈ ಕುರಿತು ಕೆಲವು ವಿಷಯಗಳನ್ನು ಟಿವಿ9 ಕನ್ನಡ ಜೊತೆ ಹಂಚಿಕೊಂಡಿದ್ದು ಈ ಬಗ್ಗೆ ಮತ್ತಷ್ಟು ಮಾಹಿತಿ ಸ್ಟೋರಿಯಲ್ಲಿದೆ.

ಇತ್ತೀಚಿನ ವರ್ಷಗಳಲ್ಲಿ ಡೆಸ್ಕ್‌ನಲ್ಲೇ ಕುಳಿತು ಕೆಲಸ ಮಾಡುವ ವೃತ್ತಿಪರರ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದೆ. ದಿನಕ್ಕೆ ಎಂಟು ಗಂಟೆಗಳಿಗೂ ಹೆಚ್ಚು ಕಾಲ ಕಂಪ್ಯೂಟರ್ ಮುಂದೆ ಕುಳಿತುಕೊಳ್ಳುವ ಉದ್ಯೋಗಿಗಳು ಸರಿಯಾದ ಭಂಗಿಯ ಬದಲು ಮನಸ್ಸಿಗೆ ಬಂದಂತೆ ಕುಳಿತುಕೊಂಡಿರುತ್ತಾರೆ. ಇದರ ಜೊತೆಗೆ, ಕೆಲಸ ಮಾಡುವ ಸ್ಥಳ ಅಥವಾ ಆಫೀಸ್ ತಲುಪುವುದಕ್ಕಾಗಿ ಕೆಟ್ಟ ಕೆಟ್ಟ ರಸ್ತೆಗಳಲ್ಲಿ ಎರಡು ಮೂರು ಗಂಟೆಗಳ ಕಾಲ ಸಂಚರಿಸುತ್ತಾರೆ. ಹೀಗೆ ನಮ್ಮ ಮಧ್ಯೆ ಇರುವ ಅತ್ಯಧಿಕ ಜನ ತಮ್ಮ ದಿನದ ಹೆಚ್ಚಿನ ಅವಧಿಯನ್ನು ಕುಳಿತುಕೊಂಡೇ ಕಳೆಯುತ್ತಾರೆ. ಹಾಗಾಗಿ ಕುಳಿತುಕೊಳ್ಳುವ ಭಂಗಿ ಸರಿಯಾಗಿ ಇಲ್ಲದಿದ್ದರೆ ಯಾವ ರೀತಿಯ ಸಮಸ್ಯೆಗಳು ಉಂಟಾಗುತ್ತದೆ ಎಂಬುದರ ಬಗ್ಗೆ ಸರ್ಜಾಪುರ ರಸ್ತೆಯಲ್ಲಿರುವ ಮಣಿಪಾಲ ಆಸ್ಪತ್ರೆಯ ಕನ್ಸಲ್ಟೆಂಟ್- ನ್ಯೂರೊ ಸ್ಪೈನ್ ಸರ್ಜರಿ ಡಾ ಅಜಯ್ ಹೆಗ್ಡೆ (Dr. Ajay Hegde) ಅವರು ಈ ಕುರಿತು ಕೆಲವು ವಿಷಯಗಳನ್ನು ಟಿವಿ9 ಕನ್ನಡ ಜೊತೆ ಹಂಚಿಕೊಂಡಿದ್ದು ಈ ಬಗ್ಗೆ ಮತ್ತಷ್ಟು ಮಾಹಿತಿ ಸ್ಟೋರಿಯಲ್ಲಿದೆ.
ಡಾ ಅಜಯ್ ಹೆಗ್ಡೆ ಹೇಳುವ ಪ್ರಕಾರ, ಒಂದೇ ಜಾಗದಲ್ಲಿ ದೀರ್ಘಕಾಲ ಕುಳಿತುಕೊಳ್ಳುವುದು ಅಥವಾ ನಿಂತುಕೊಳ್ಳುವುದು, ದೇಹಕ್ಕೆ ಮತ್ತು ಭಂಗಿಗೆ ಪೂರಕವಲ್ಲದ ವಿನ್ಯಾಸ ಮತ್ತು ಚಲನಶೀಲತೆಯ ಕೊರತೆ, ಭಂಗಿಯ ಅಸಮತೋಲನ ಸೇರಿದಂತೆ ದಿನನಿತ್ಯ ರೂಢಿಸಿಕೊಂಡ ಹಲವಾರು ಅಭ್ಯಾಸಗಳು ಸ್ನಾಯು ಮತ್ತು ಮೂಳೆಗೆ ಸಂಬಂಧ ಪಟ್ಟ ಕಾಯಿಲೆಗಳಿಗೆ ಕಾರಣವಾಗುತ್ತದೆ. ಇವುಗಳಲ್ಲಿ ಹರ್ನಿಯೇಟೆಡ್ ಡಿಸ್ಕ್, ಕಾರ್ಪಲ್ ಟನಲ್ ಸಿಂಡ್ರೋಮ್ ಮತ್ತು ದೀರ್ಘಕಾಲದ ಬೆನ್ನು ನೋವು ಪ್ರಮುಖವಾಗಿವೆ. ವಿಶೇಷವಾಗಿ ಯುವ ಜನತೆಯಲ್ಲಿ ಕುತ್ತಿಗೆ ನೋವು, ಭುಜದ ಬಿಗಿತದಂತಹ ಪ್ರಕರಣಗಳಲ್ಲಿ ಗಣನೀಯ ಏರಿಕೆಯಾಗುತ್ತಿರುವುದನ್ನು ಆರೋಗ್ಯ ತಜ್ಞರು ಗಮನಿಸಿದ್ದಾರೆ ಎಂದು ಹೇಳಿದ್ದಾರೆ.
ಬೆನ್ನು ನೋವಿನ ಸಮಸ್ಯೆ ಹೆಚ್ಚಳಕ್ಕೆ ಕಾರಣವೇನು?
- ಕೊರೊನಾ ಸಾಂಕ್ರಾಮಿಕ ಕಡಿಮೆಯಾದ ನಂತರ ಉದ್ಯೋಗಿಗಳು ಮತ್ತೆ ಪುನಃ ಆಫೀಸ್ ಗಳಿಗೆ ಹೋಗಲು ಆರಂಭಿಸಿದ್ದು ಸಹಜವಾಗಿ ಪ್ರಯಾಣವನ್ನು ಪುನರಾರಂಭಿಸಿದ್ದಾರೆ. ಈ ಬದಲಾವಣೆಯು ಬೆನ್ನು ನೋವಿನ ಸಮಸ್ಯೆ 10 ರಿಂದ 30% ರಷ್ಟು ಹೆಚ್ಚಳಕ್ಕೆ ಕಾರಣವಾಗಿದೆ.
- ಸ್ಥಿರವಾಗಿ ಕುಳಿತುಕೊಳ್ಳುವುದು, ದೀರ್ಘ ಪ್ರಯಾಣ ಮಾಡುವುದು ಮತ್ತು ಹೆಚ್ಚಿನ ಒತ್ತಡದಿಂದ ಸ್ನಾಯು- ಮೂಳೆಗೆ ಸಂಬಂಧಿಸಿದ ಕಾಯಿಲೆಗಳ ಹೆಚ್ಚಳಕ್ಕೆ ಕಾರಣವಾಗಿದೆ. ಕೇವಲ ವೃತ್ತಿಪರರು ಮಾತ್ರವಲ್ಲದೇ, ವಿದ್ಯಾರ್ಥಿಗಳು ಮತ್ತು ವಯಸ್ಕರನ್ನೂ ಸಹ ಈ ರೀತಿಯ ಸಮಸ್ಯೆ ವ್ಯಾಪಕವಾಗಿ ಬಾಧಿಸುತ್ತಿವೆ.
- ವಾರಕ್ಕೆ 40 ಗಂಟೆಗಳಿಗಿಂತ ಹೆಚ್ಚು ಸಮಯ ಕುಳಿತು ಕೆಲಸ ಮಾಡುವವರು ಮತ್ತು ದೀರ್ಘ ಪ್ರಯಾಣ ಮಾಡುವವರಲ್ಲಿ ಈ ರೀತಿಯ ಸ್ನಾಯು- ಮೂಳೆಗಳ ನೋವು ಹೆಚ್ಚಾಗಿ ಕಂಡುಬರುತ್ತಿದೆ.
ಇದನ್ನೂ ಓದಿ: ಮುಟ್ಟು ನಿಲ್ಲುವ ಅವಧಿಯಲ್ಲಿ ಮಹಿಳೆಯರು ತಪ್ಪದೆ ಈ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು ಎನ್ನುತ್ತಾರೆ ಡಾ. ಸಂಹಿತಾ
ಈ ಸಮಸ್ಯೆ ತಡೆಯಲು ಮಾರ್ಗೋಪಾಯಗಳು:
ದೈನಂದಿನ ಪ್ರಯಾಣದಿಂದಾಗುವ ಸಮಸ್ಯೆಗಳನ್ನು ಕಡಿಮೆ ಮಾಡಲು ರಸ್ತೆಗಳ ಗುಣಮಟ್ಟವನ್ನು ಸುಧಾರಿಸುವುದು ಮುಖ್ಯ. ಜೊತೆಗೆ ಕಚೇರಿಗಳಲ್ಲಿ ಸಮಯ ಸಿಕ್ಕಾಗ ವಿರಾಮ ತೆಗೆದುಕೊಂಡು ಸ್ವಲ್ಪ ಚಲಿಸಬೇಕು. ಒಂದೇ ಕಡೆಯಲ್ಲಿ ಗಂಟೆಗಟ್ಟಲೆ ಕುಳಿತುಕೊಳ್ಳುವುದಕ್ಕಿಂತ ಗಂಟೆಗೊಮ್ಮೆಯಾದರೂ ಎದ್ದು ತಿರುಗಾಡುವುದು ಒಳ್ಳೆಯದು. ಸಾಧ್ಯವಾದಲ್ಲಿ ಸಾರ್ವಜನಿಕ ಸಾರಿಗೆಯ ಬಳಕೆ ಮಾಡುವುದು. ಒಟ್ಟಾರೆ, ಬೆಂಗಳೂರಿನಲ್ಲಿ ಕೆಲಸ ಮತ್ತು ಪ್ರಯಾಣ ಸೇರಿದಂತೆ ದೈನಂದಿನ ಒತ್ತಡಗಳು ನಗರದ ಉದ್ಯೋಗಿಗಳ ಆರೋಗ್ಯ ಮತ್ತು ಭಂಗಿಯ ಮೇಲೆ ಗಂಭೀರ ಪರಿಣಾಮ ಬೀರುತ್ತಿವೆ. ಇದನ್ನು ಎದುರಿಸಲು ಕೆಲವು ಬದಲಾವಣೆ ಮಾಡಿಕೊಳ್ಳುವುದು ಬಹಳ ಒಳ್ಳೆಯದು.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
