ಮುಟ್ಟು ನಿಲ್ಲುವ ಅವಧಿಯಲ್ಲಿ ಮಹಿಳೆಯರು ತಪ್ಪದೆ ಈ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು ಎನ್ನುತ್ತಾರೆ ಡಾ. ಸಂಹಿತಾ
ಮಹಿಳೆಯರ ಜೀವನದಲ್ಲಿ ಮೆನೋಪಾಸ್ ಅಥವಾ ಋತುಬಂಧ ಎನ್ನುವಂತದ್ದು ಒಂದು ಸಹಜ ಹಾಗೂ ಬಹುಮುಖ್ಯ ಶಾರೀರಿಕ ಹಂತ. ಇದು ಮಹಿಳೆಯರಲ್ಲಿ ಋತುಚಕ್ರ ಸಂಪೂರ್ಣವಾಗಿ ನಿಲ್ಲುವ ಒಂದು ಪ್ರಕ್ರಿಯೆ. ಈ ಸಮಯದಲ್ಲಿ ಆಗುವ ಹಾರ್ಮೋನ್ ಗಳ ಬದಲಾವಣೆಗಳಿಂದ ದೈಹಿಕ, ಮಾನಸಿಕ ಮತ್ತು ಭಾವನಾತ್ಮಕ ಸ್ಥಿತಿಗಳಲ್ಲಿ ಹಲವು ಪರಿವರ್ತನೆಗಳು ಕಂಡುಬರುತ್ತದೆ. ಈ ಬಗ್ಗೆ, ಬೆಂಗಳೂರು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜಿನ ಸಂಹಿತಾ ಸಿದ್ಧಾಂತ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ. ಸಂಹಿತಾ ಉಲ್ಲೋಡು ಅವರು ಟಿವಿ9 ಕನ್ನಡ ಜೊತೆ ಕೆಲವು ಮಾಹಿತಿಗಳನ್ನು ಹಂಚಿಕೊಂಡಿದ್ದು ಮತ್ತಷ್ಟು ಮಾಹಿತಿ ಸ್ಟೋರಿಯಲ್ಲಿದೆ.

ಮಹಿಳೆಯರ ಜೀವನದಲ್ಲಿ ಮೆನೋಪಾಸ್ (Menopause) ಒಂದು ಸಹಜ ಹಾಗೂ ಬಹುಮುಖ್ಯ ಶಾರೀರಿಕ ಹಂತ. ನಿಮಗೂ ತಿಳಿದಿರಬಹುದು ಮೆನೋಪಾಸ್ ಎಂದರೆ ಋತುಚಕ್ರ (Menstrual Cycles) ಸಂಪೂರ್ಣವಾಗಿ ನಿಲ್ಲುವ ಒಂದು ಪ್ರಕ್ರಿಯೆ. ಸಾಮಾನ್ಯವಾಗಿ 45- 55 ವರ್ಷದೊಳಗಿನ ಅವಧಿಯಲ್ಲಿ ಋತು ಚಕ್ರ ನಿಲ್ಲುತ್ತದೆ. ಈ ಸಮಯದಲ್ಲಿ ಆಗುವ ಹಾರ್ಮೋನ್ ಗಳ ಬದಲಾವಣೆಗಳಿಂದ ದೈಹಿಕ, ಮಾನಸಿಕ ಮತ್ತು ಭಾವನಾತ್ಮಕ ಸ್ಥಿತಿಗಳಲ್ಲಿ ಹಲವು ಪರಿವರ್ತನೆಗಳು ಕಂಡುಬರುತ್ತದೆ. ಇಂತಹ ಸಂದರ್ಭದಲ್ಲಿ ಆರೋಗ್ಯಕರ ಜೀವನಶೈಲಿ ಮತ್ತು ಆರೈಕೆಯಿಂದ ಈ ಹಂತವನ್ನು ಸುಲಭವಾಗಿ ಎದುರಿಸಬಹುದು. ಈ ಕುರಿತು, ಬೆಂಗಳೂರು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜಿನ ಸಂಹಿತಾ ಸಿದ್ಧಾಂತ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ. ಸಂಹಿತಾ ಉಲ್ಲೋಡು ಅವರು ಟಿವಿ9 ಕನ್ನಡ ಜೊತೆ ಹಂಚಿಕೊಂಡಿದ್ದು ಈ ಬಗ್ಗೆ ಮತ್ತಷ್ಟು ಮಾಹಿತಿ ಸ್ಟೋರಿಯಲ್ಲಿದೆ.
ಡಾ. ಸಂಹಿತಾ ಉಲ್ಲೋಡು ಅವರು ಹೇಳುವ ಪ್ರಕಾರ, ಮೆನೋಪಾಸ್ ಸಮಯದಲ್ಲಿ ದೈಹಿಕವಾಗಿ ಮತ್ತು ಮಾನಸಿಕವಾಗಿ ಹಲವು ರೀತಿಯ ಬದಲಾವಣೆಗಳು ಉಂಟಾಗುತ್ತದೆ. ಹಾಗಂತ ಇದಕ್ಕೆ ಭಯಪಡುವ ಅವಶ್ಯಕತೆಯೂ ಇರುವುದಿಲ್ಲ. ಇದಕ್ಕೆ ಹಲವು ಪರಿಹಾರಗಳಿದ್ದು, ಇವುಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಆರೋಗ್ಯ ಕಾಪಾಡಿಕೊಳ್ಳಬಹುದು.
ಆಹಾರದಲ್ಲಿ ಸಮತೋಲನ:
ಮೆನೋಪಾಸ್ ನಂತರ ಎಲುಬುಗಳ ಸಾಂದ್ರತೆ ಕಡಿಮೆಯಾಗುವ ಅಪಾಯ ಹೆಚ್ಚಾಗಿರುತ್ತದೆ. ಆದ್ದರಿಂದ ಕ್ಯಾಲ್ಸಿಯಂ ಮತ್ತು ವಿಟಮಿನ್- ಡಿಯುಕ್ತ ಆಹಾರಗಳನ್ನು ಅಂದರೆ ಹಾಲು, ಮೊಸರು, ಎಳ್ಳು, ಹಸಿರು ಸೊಪ್ಪುಗಳನ್ನು ನಿಯಮಿತವಾಗಿ ಸೇವನೆ ಮಾಡುವುದು ಅಗತ್ಯ. ಜೊತೆಗೆ ಪ್ರೋಟೀನ್ ಯುಕ್ತ ಆಹಾರಗಳಾದ, ಹಣ್ಣು- ತರಕಾರಿ, ಧಾನ್ಯಗಳನ್ನು ದೈನಂದಿನ ಆಹಾರದಲ್ಲಿ ಸೇವನೆ ಮಾಡಬೇಕು. ಅತಿಯಾದ ಸಕ್ಕರೆ, ಉಪ್ಪು, ಪ್ಯಾಕೇಜ್ಡ್ ಮತ್ತು ತೈಲಯುಕ್ತ ಆಹಾರಗಳನ್ನು ಕಡಿಮೆ ಮಾಡುವುದು ಒಳಿತು.
ನಿಯಮಿತ ವ್ಯಾಯಾಮ:
ಮೆನೋಪಾಸ್ ಸಮಯದಲ್ಲಿ ತೂಕ ಹೆಚ್ಚಳ ಮತ್ತು ಎಲುಬು- ಸಂಧಿ ನೋವು ಸಾಮಾನ್ಯ. ಹಾಗಾಗಿ ಪ್ರತಿದಿನ 30 ರಿಂದ 40 ನಿಮಿಷಗಳ ಕಾಲ ನಡೆಯುವುದು, ಯೋಗ, ಪ್ರಾಣಾಯಾಮ, ಲಘು ಶಕ್ತಿ ಅಭ್ಯಾಸಗಳು ದೇಹದ ಮೆಟಾಬಾಲಿಸಂ ಸುಧಾರಿಸಿ, ಮನೋಸ್ಥಿತಿ ಸರಿಪಡಿಸುತ್ತವೆ. ಯೋಗದಲ್ಲಿ ಬದ್ಧಕೋಣಾಸನ, ಭುಜಂಗಾಸನ, ವಜ್ರಾಸನ, ಶವಾಸನ ಹಂತಗಳು ವಿಶೇಷವಾಗಿ ಸಹಾಯಕವಾಗುತ್ತದೆ.
ಮಾನಸಿಕ ಆರೈಕೆ:
ದಿನನಿತ್ಯ 10- 15 ನಿಮಿಷ ಧ್ಯಾನ, ಪ್ರಾಣಾಯಾಮ, ಮನಸ್ಸನ್ನು ಪ್ರಸನ್ನವಾಗಿಡುವ ಹವ್ಯಾಸಗಳು ಅಂದರೆ ಪಠಣ, ಸಂಗೀತ, ತೋಟಗಾರಿಕೆ ಮಾಡುವುದು ಉಪಯುಕ್ತ. ಅಗತ್ಯವಿದ್ದರೆ ಪರಿಣಿತರಿಂದ ಕೌನ್ಸೆಲಿಂಗ್ ಪಡೆಯುವುದು ಉತ್ತಮ.
ಇದನ್ನೂ ಓದಿ: ಹೆರಿಗೆ ನಂತರ ಮುಟ್ಟು ಯಾವಾಗ ಬರಬೇಕು ಎಂಬುದು ತಿಳಿದಿದೆಯೇ?
ರಾತ್ರಿ ಬೆವರುವಿಕೆ:
ಇದಕ್ಕೆ ಎಳನೀರು, ಶತಾವರಿ ಹಾಲು ಉಪಯುಕ್ತ ಅದರ ಜೊತೆಗೆ ತಂಪಾದ ಪರಿಸರದಲ್ಲಿ ವಾಯುವಿಹಾರ, ಕಾಫಿ/ ಚಹಾ/ಮಸಾಲೆ ಹೆಚ್ಚಿರುವ ಆಹಾರಗಳ ಬಳಕೆಯನ್ನು ಕಡಿಮೆ ಮಾಡುವುದು ಈ ಲಕ್ಷಣಗಳನ್ನು ತಗ್ಗಿಸುತ್ತದೆ. ಇದೆಲ್ಲದರ ಜೊತೆಗೆ ಸಾಕಷ್ಟು ನೀರು ಕುಡಿಯುವುದು ಅಗತ್ಯ.
ಜನನಾಂಗ ಮತ್ತು ಮೂತ್ರನಾಳ ಆರೈಕೆ:
ಈ ಅವಧಿಯಲ್ಲಿ ಯೋನಿ ಸುರಕ್ಷತೆ ಮತ್ತು ಸೋಂಕಿನ ಸಮಸ್ಯೆಗಳು ಹೆಚ್ಚಳವಾಗಬಹುದು. ಹಾಗಾಗಿ ನೀರು ಹೆಚ್ಚು ಕುಡಿಯುವುದು, ಸ್ವಚ್ಛತೆ ಕಾಪಾಡುವುದು, ಕೊಬ್ಬರಿ ಎಣ್ಣೆ ಬಳಕೆ ಮಾಡಬಹುದು ಅವಶ್ಯಕ.
ನಿಯಮಿತ ಆರೋಗ್ಯ ತಪಾಸಣೆ:
ರಕ್ತದ ಒತ್ತಡ, ಸಕ್ಕರೆ, ಲಿಪಿಡ್ ಪ್ರೊಫೈಲ್, ಥೈರಾಯ್ಡ್, ಮ್ಯಾಮೋಗ್ರಾಫಿ, ಪ್ಯಾಪ್ ಸ್ಮಿಯರ್ ಮುಂತಾದ ಮೂಲ ಪರಿಶೀಲನೆಗಳನ್ನು ವರ್ಷಕ್ಕೊಮ್ಮೆ ಮಾಡಿಸಿಕೊಳ್ಳುವುದು ಅತ್ಯವಶ್ಯಕ. ಆದರೆ ನಿರಂತರ ರಕ್ತಸ್ರಾವ, ತೀವ್ರ ನೋವು, ಅನಿರೀಕ್ಷಿತ ತೂಕ ಬದಲಾವಣೆಯನ್ನು ಯಾವುದೇ ಕಾರಣಕ್ಕೂ ನಿರ್ಲಕ್ಷಿಸಬಾರದು.
ಸಮರ್ಪಕ ನಿದ್ರೆ ಮತ್ತು ಒತ್ತಡ ನಿರ್ವಹಣೆ:
ರಾತ್ರಿ ಚೆನ್ನಾಗಿ ನಿದ್ರೆ ಮಾಡಿ ಒತ್ತಡ ಕಡಿಮೆ ಮಾಡಿಕೊಂಡರೆ ಮೆನೋಪಾಸ್ ನಿಂದ ಆಗುವ ಹಲವಾರು ತೊಂದರೆಗಳನ್ನು ತಡೆಯಬಹುದು.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
