ಅಡುಗೆ ಸೋಡಾ ಮತ್ತು ಬೇಕಿಂಗ್ ಪೌಡರ್ ನಡುವಿನ ವ್ಯತ್ಯಾಸವೇನು?
ಬೇಕಿಂಗ್ ಸೋಡಾ ಮತ್ತು ಬೇಕಿಂಗ್ ಪೌಡರ್ ಎರಡೂ ಬಿಳಿ ಪುಡಿಗಳಾಗಿದ್ದರೂ, ಅವುಗಳ ರಾಸಾಯನಿಕ ಸಂಯೋಜನೆ ಮತ್ತು ಬಳಕೆಯಲ್ಲಿ ಗಮನಾರ್ಹ ವ್ಯತ್ಯಾಸಗಳಿವೆ. ಅಡಿಗೆ ಸೋಡಾ ತ್ವರಿತ ಕ್ರಿಯೆಯ ಕ್ಷಾರೀಯ ಪದಾರ್ಥವಾಗಿದ್ದು, ಆಮ್ಲೀಯ ಪದಾರ್ಥಗಳೊಂದಿಗೆ ಸಂಯೋಜಿಸಿದಾಗ ಇಂಗಾಲದ ಡೈಆಕ್ಸೈಡ್ ಉತ್ಪಾದಿಸುತ್ತದೆ. ಬೇಕಿಂಗ್ ಪೌಡರ್, ಸೋಡಾ ಮತ್ತು ಆಮ್ಲೀಯ ಪದಾರ್ಥಗಳ ಮಿಶ್ರಣವಾಗಿದ್ದು, ಎರಡು ಹಂತದಲ್ಲಿ ಕಾರ್ಯನಿರ್ವಹಿಸುತ್ತದೆ. ಈ ಲೇಖನವು ಅವುಗಳ ನಡುವಿನ ವ್ಯತ್ಯಾಸ, ಸರಿಯಾದ ಬಳಕೆ ಮತ್ತು ಪಾಕವಿಧಾನಗಳಲ್ಲಿ ಅವುಗಳ ಬದಲಾವಣೆಗಳನ್ನು ವಿವರಿಸುತ್ತದೆ.

ಬಹಳ ಜನರು ಮಾತನಾಡುತ್ತಾ ಸೋಡಾ ಹಾಕ್ತಾರೆ, ಸೋಡಾ ಹಾಕ್ತರೆ ಎನ್ನುವ ಶಬ್ದ ಕೇಳಿಪಡುವುದು ಸಹಜ. ಆ ಸೋಡಾದ ಹಿಂದಿನ ವೈಜ್ಞಾನಿಕ ಸಂಗತಿಗಳ ಮಾಹಿತಿ. ಅಡುಗೆಮನೆಯಲ್ಲಿ ಒಂದೇ ರೀತಿಯ ಎರಡು ಬಿಳಿ ಪುಡಿಗಳನ್ನು ನೋಡಿ, “ಇವು ಒಂದೇನೇ? ಏನು ವ್ಯತ್ಯಾಸ?” ಎಂದು ಆಶ್ಚರ್ಯ ಪಟ್ಟಿರುವಿರಾ? ಬೇಕಿಂಗ್ ಪೌಡರ್ ಮತ್ತು ಅಡಿಗೆ ಸೋಡಾ (ಬೇಕಿಂಗ್ ಸೋಡಾ) ನೋಡಿದರೆ ಬಹಳ ವ್ಯತ್ಯಾಸಗಳಿವೆ. ಈ ಎರಡು ಸಾಮಗ್ರಿಗಳ ಸರಿಯಾದ ಬಳಕೆ ನಿಮ್ಮ ಕೇಕ್ ಅಥವಾ ಕುಕೀಜ್ ಅನ್ನು ಅತ್ಯುತ್ತಮವಾಗಿ ಹಿಗ್ಗಿಸುವಂತಾಗಿಸಬಹುದು ಅಥವಾ ಕುಗ್ಗಿದ ಕೇಕ್ ಆಗಬಹುದು .ನಾವು ಎರಡೂ ಪದಾರ್ಥಗಳ ನಡುವೆ ಇರುವ ತಂತ್ರಜ್ಞಾನದ, ರಸಾಯನಿಕ ಹಾಗೂ ಬಳಕೆಯ ವ್ಯತ್ಯಾಸದ ತಿಳುವಳಿಕೆ ಅವಶ್ಯಕ.
ಬೇಕರಿಯಲ್ಲಿ ಬೇಕಿಂಗ್ ಪೌಡರ್ ಮತ್ತು ಬೇಕಿಂಗ್ ಸೋಡಾಗಳು – ಅಂದರೆ ‘ಫುಗ್ಗಿಸುವ’ ಅಥವಾ ಹಿಗ್ಗಿಸುವ ,ಹುದುಗಿಸುವ (fermenting) ಸಹಾಯಕಗಳು. ಇಂಗಾಲದ ಡೈಆಕ್ಸೈಡ್ (CO₂) ಅನಿಲವನ್ನು ಉತ್ಪಾದಿಸಿ, ಕೇಕ್ ಅಥವಾ ಬ್ರೆಡ್ ಹಗುರವಾಗಲು ಕಾರಣವಾಗುತ್ತವೆ.
ಅಡಿಗೆ ಸೋಡಾ (Baking Soda):
- ರಾಸಾಯನಿಕ ಹೆಸರು: ಸೋಡಿಯಂ ಬೈಕಾರ್ಬನೇಟ್ (NaHCO₃)
- ಸ್ವರೂಪ: ಬಿಳಿ, ಸೂಕ್ಷ್ಮ ಪುಡಿ; ಸ್ವಲ್ಪ ಕ್ಷಾರೀಯ (alkaline)
- ಕಾರ್ಯ ಶೈಲಿ : ಯಾವುದೇ ಆಮ್ಲೀಯ ಪದಾರ್ಥ (ಮಜ್ಜಿಗೆ, ಮೊಸರು, ನಿಂಬೆ ರಸ, ವಿನೆಗರ್) ಮುಂತಾದವುಗಳೊಂದಿಗೆ ಸಂಯೋಜಿಸಿದಾಗ ತಕ್ಷಣವೇ ಪ್ರತಿಕ್ರಿಯೆ ಮಾಡುತ್ತದೆ. ಈ ಕ್ರಿಯೆಯಿಂದ ಇಂಗಾಲದ ಡೈಆಕ್ಸೈಡ್ ರಚನೆಯಾಗಿ ಬೇಯುವ ಆಹಾರ ಹಗುರವಾಗುತ್ತದೆ.
ಸಾಧಕಗಳು:
- ತ್ವರಿತ ಪ್ರತಿಕ್ರಿಯೆ
- ಕಂದು ಬಣ್ಣ ಹೆಚ್ಚಿಸುತ್ತದೆ
- ಆಮ್ಲೀಯ ಸುವಾಸನೆಯನ್ನು ಸಮತೋಲನಗೊಳಿಸುತ್ತದೆ.
- ಅಗ್ಗ, ಎಲ್ಲೆಡೆ ಲಭ್ಯವಿದೆ
ಬಾಧಕಗಳು:
- ಆಮ್ಲೀಯ ಪದಾರ್ಥ ಅಗತ್ಯ
- ಪ್ರಮಾಣ ತಪ್ಪಾದರೆ ಲೋಹೀಯ ಅಥವಾ ಸಾಬೂನು ರುಚಿ
- ಶಾಖ/ತೇವಾಂಶಕ್ಕೆ ಸಂವೇದನಶೀಲ
ಬೇಕಿಂಗ್ ಪೌಡರ್ (Baking Powder):
- ಘಟಕಗಳು: ಸೋಡಿಯಂ ಬೈಕಾರ್ಬನೇಟ್ + ಆಮ್ಲೀಯ ಪುಡಿ + ಕಾರ್ನ್‌ಸ್ಟಾರ್ಚ್
- ವಿಧಾನ: ಇದು ಎರಡು ಹಂತದಲ್ಲಿ ಕೆಲಸ ಮಾಡುತ್ತದೆ – ಮೊದಲು ದ್ರವ ಸೇರಿದಾಗ ಮತ್ತು ನಂತರ ತಾಪಮಾನ ಏರಿದಾಗ. ಎರಡೂ ಹಂತದಲ್ಲಿಯೂ ಇಂಗಾಲದ ಡೈಆಕ್ಸೈಡ್ ತಯಾರಾಗುತ್ತದೆ.
ಇದನ್ನೂ ಓದಿ: ಮಳೆಗಾಲದಲ್ಲಿ ಮಧುಮೇಹ ರೋಗಿಗಳು ಈ ಸಲಹೆಯನ್ನು ಪಾಲಿಸಲೇಬೇಕು
ಸಾಧಕಗಳು:
- ಸ್ವತಃ ಆಮ್ಲ+ಕ್ಷಾರ ಹೊಂದಿರುವುದು
- ಯಾವುದೇ ಪಾಕವಿಧಾನದಲ್ಲಿ ಬಳಸಬಹುದಾದದು
- ಸ್ಥಿರ ಪರಿಣಾಮ
ಬಾಧಕಗಳು:
- ಹೆಚ್ಚು ದುಬಾರಿ
- ಹೆಚ್ಚು ಬಳಸಿದರೆ ರುಚಿ ಬದಲಾವಣೆ
- ಶೇಖರಣೆಯಲ್ಲಿ ಗಮನವಿರಬೇಕಾದದು
ತಾಜಾತನ ಪರೀಕ್ಷೆ:
- ಅಡಿಗೆ ಸೋಡಾ – ವಿನೆಗರ್‌ನಲ್ಲಿ ಬೆರೆಸಿದಾಗ ಗುಳ್ಳೆಗಳು (ಬಬ್ಲಿಂಗ್) ಬಂದರೆ ಸರಿ.
- ಬೇಕಿಂಗ್ ಪೌಡರ್ – ಬಿಸಿ ನೀರಿನಲ್ಲಿ ಬೆರೆಸಿ; ಗುಳ್ಳೆ ಬಂದರೆ ಸರಿ.
ರಸಾಯನದಿಂದ ರುಚಿ
ಅಡಿಗೆ ಸೋಡಾ ಮತ್ತು ಬೇಕಿಂಗ್ ಪೌಡರ್ – ಇವು ಬಿಳಿ ಪುಡಿಗಳಾಗಿದ್ದರೂ, ಬೇಕರಿಯ ಹಿಂದಿನ ವಿಜ್ಞಾನವನ್ನು ನಿಭಾಯಿಸುವ ಕೀಲಿಕೈಗಳೆಂದು ಹೇಳಬಹುದು. ವಿಜ್ಞಾನ ಗೊತ್ತಿದ್ದರೆ ಬೇಕಿಂಗ್ ಕಲೆಯೂ ನಿಮ್ಮದಾಗುತ್ತದೆ. ಪ್ರತಿ ಕೇಕ್ ಅಥವಾ ಕುಕೀ ರುಚಿಯಾದ ವಿಜ್ಞಾನ ಪ್ರಯೋಗ!
ಲೇಖಕರು: ಡಾ. ರವಿಕಿರಣ ಪಟವರ್ಧನ, ಆಯುರ್ವೇದ ವೈದ್ಯರು, ಶಿರಸಿ
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




