ಕಿವಿಯ ಸೋಂಕು ಹೆಚ್ಚಾಗುವುದಕ್ಕೆ ಈ ಅಂಶಗಳೇ ಕಾರಣ! ಇದನ್ನು ತಡೆಯಲು ಚಳಿಗಾಲದಲ್ಲಿ ಈ ಸಲಹೆಗಳನ್ನು ಪಾಲಿಸಿ
Ear Infection: ಹವಾಮಾನ ಬದಲಾಗುತ್ತಿದ್ದಂತೆ ಕಿವಿ ಸೋಂಕು ಕಂಡುಬರುವ ಸಾಧ್ಯತೆ ಹೆಚ್ಚಾಗಿರುತ್ತದೆ. ಇವುಗಳನ್ನು ಸಾಮಾನ್ಯ ಸಮಸ್ಯೆ ಎಂದು ನಿರ್ಲಕ್ಷಿಸುವುದರಿಂದ ಮತ್ತಷ್ಟು ಹಾನಿಯಾಗಬಹುದು. ಹಾಗಾಗಿ ಆದಷ್ಟು ಜಾಗೃತೆ ವಹಿಸಿವುದು ಬಹಳ ಮುಖ್ಯವಾಗುತ್ತದೆ. ಹಾಗಾದರೆ ಈ ಸಮಯದಲ್ಲಿ ಕಿವಿ ಸೋಂಕು ಹೆಚ್ಚಾಗಲು ಕಾರಣಗಳೇನು, ಇದನ್ನು ತಡೆಗಟ್ಟಲು ಏನು ಮಾಡಬೇಕು ಎಂಬುದನ್ನು ಡಾ. ಸುಭಾಷ್ ಗಿರಿ ಅವರು ತಿಳಿಸಿದ್ದು, ನೀವು ಕೂಡ ಅವುಗಳ ಲಕ್ಷಣಗಳನ್ನು ತಿಳಿದು ಅಂತಹ ಸಮಸ್ಯೆಗಳು ಬರದಂತೆ ತಡೆಯಬಹುದು. ಕಿವಿ ಸೋಂಕಿನ ಅಪಾಯ ಕುರಿತ ಮತ್ತಷ್ಟು ಮಾಹಿತಿ ಪಡೆಯಲು ಈ ಸ್ಟೋರಿ ಓದಿ.

ಹವಾಮಾನದಲ್ಲಿನ ಬದಲಾವಣೆಗಳು ತಾಪಮಾನ ಮತ್ತು ತೇವಾಂಶದಲ್ಲಿ ಏರಿಳಿತಗಳನ್ನು ಉಂಟುಮಾಡುತ್ತವೆ. ಈ ಸಮಯದಲ್ಲಿ, ಬ್ಯಾಕ್ಟೀರಿಯಾ ಮತ್ತು ವೈರಸ್‌ಗಳು ಕಿವಿಯೊಳಗೆ ವೇಗವಾಗಿ ಬೆಳೆದು, ಸೋಂಕಿನ ಅಪಾಯವನ್ನು ಹೆಚ್ಚಿಸುತ್ತವೆ. ಶೀತ, ಕೆಮ್ಮು, ಜ್ವರ ಅಥವಾ ಮೂಗು ಕಟ್ಟಿಕೊಂಡರೆ ಕಿವಿಯೊಳಗೆ ಒತ್ತಡ ಉಂಟಾಗಬಹುದು, ಸಾಮಾನ್ಯವಾಗಿ ಇದು ಕಿವಿಗಳಲ್ಲಿ ಭಾರ ಅಥವಾ ನೋವಿನಂತಹ ಸಮಸ್ಯೆಗಳಿಗೂ ಕಾರಣವಾಗಬಹುದು. ಹಾಗಾಗಿ ದೇಹದ ಯಾವುದೇ ಭಾಗವಾಗಲಿ ಅದನ್ನು ನಿರ್ಲಕ್ಷ್ಯ ಮಾಡಬಾರದು. ಅದರಲ್ಲಿಯೂ ಈ ಋತುವಿನಲ್ಲಿ ಅಂದರೆ ಚಳಿಗಾಲದ ಆರಂಭದಲ್ಲಿ ಕಿವಿಗೆ ಸಂಬಂಧಿಸಿದ ಸೋಂಕು (Ear Infections) ಹೆಚ್ಚಾಗುವುದರಿಂದ ಆದಷ್ಟು ಜಾಗೃತೆ ವಹಿಸಿವುದು ಬಹಳ ಮುಖ್ಯವಾಗುತ್ತದೆ. ಹಾಗಾದರೆ ಈ ಸಮಯದಲ್ಲಿ ಕಿವಿ ಸೋಂಕು ಹೆಚ್ಚಾಗಲು ಕಾರಣಗಳೇನು, ಇದನ್ನು ತಡೆಗಟ್ಟಲು ಏನು ಮಾಡಬೇಕು ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.
ಕಿವಿ ಸೋಂಕಿನ ಲಕ್ಷಣಗಳು:
ಆರಂಭಿಕ ಲಕ್ಷಣಗಳಲ್ಲಿ ಕಿವಿ ನೋವು, ಸ್ವಲ್ಪ ವಿಚಿತ್ರ ಶಬ್ದ, ಸ್ವಲ್ಪ ಶ್ರವಣ ನಷ್ಟ ಮತ್ತು ಕೆಲವೊಮ್ಮೆ ನೀರಿನಂತಹ ಸ್ರಾವ ಕಂಡು ಬರುತ್ತದೆ. ಈ ಸಮಸ್ಯೆಯು ಮಕ್ಕಳು, ವೃದ್ಧರು ಮತ್ತು ದುರ್ಬಲ ರೋಗನಿರೋಧಕ ಶಕ್ತಿ ಹೊಂದಿರುವವರಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಇನ್ನು ತೀವ್ರವಾದ ಕಿವಿ ನೋವು, ತಲೆತಿರುಗುವಿಕೆ ಅಥವಾ ಕಿವಿ ಭಾರವಾದಂತೆ ಅನಿಸಿದರೆ ವೈದ್ಯರನ್ನು ಸಂಪರ್ಕಿಸುವುದು ಮುಖ್ಯ, ಇಲ್ಲದಿದ್ದರೆ ಸಮಸ್ಯೆ ಇನ್ನಷ್ಟು ಹದಗೆಡಬಹುದು.
ಕಿವಿ ಸೋಂಕಿಗೆ ಕಾರಣವೇನು?
ಹವಾಮಾನದಲ್ಲಿನ ಬದಲಾವಣೆಗಳು ಕಿವಿ ಸೋಂಕುಗಳಿಗೆ ಮಾತ್ರವಲ್ಲದೆ ಕಿವಿಯಲ್ಲಿ ಮೇಣದ ಶೇಖರಣೆ, ಅಡಚಣೆ, ಒತ್ತಡಕ್ಕೆ ಕಾರಣವಾಗಬಹುದು. ಜೊತೆಗೆ ಜೋರಾಗಿ ಕೇಳಿಬರುವ ಶಬ್ದಗಳು ಕೆಲವೊಮ್ಮೆ ಅಸ್ವಸ್ಥತೆಯನ್ನು ಉಂಟುಮಾಡಬಹುದು. ಈ ಸಮಯದಲ್ಲಿ, ಸೈನಸ್‌ಗಳು ಮತ್ತು ಗಂಟಲಿನಲ್ಲಿ ಸೋಂಕುಗಳು ಹೆಚ್ಚಾಗುತ್ತವೆ, ಇದು ಕಿವಿಗಳ ಮೇಲೆ ಪರಿಣಾಮ ಬೀರುತ್ತದೆ. ತಣ್ಣನೆಯ ಗಾಳಿಗೆ ನೇರವಾಗಿ ಒಡ್ಡಿಕೊಳ್ಳುವುದರಿಂದ ಕಿವಿಗಳಲ್ಲಿ ಕಿರಿಕಿರಿ ಹೆಚ್ಚಾಗುತ್ತದೆ, ವಿಶೇಷವಾಗಿ ಬೈಸಿಕಲ್ ಅಥವಾ ಬೈಕ್ ಸವಾರಿ ಮಾಡುವಾಗ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳದಿದ್ದರೆ, ಕಿವಿ ಸಮಸ್ಯೆಗಳು ಉಲ್ಬಣಗೊಳ್ಳಬಹುದು ಮತ್ತು ಸೋಂಕುಗಳು ಬೇಗನೆ ಹರಡಬಹುದು.
ಇದನ್ನೂ ಓದಿ: ಚಿಕ್ಕ ಮಕ್ಕಳ ಕೆಮ್ಮು ಬೇಗ ಕಡಿಮೆ ಆಗಬೇಕು ಅಂದ್ರೆ ಆಯುರ್ವೇದದಲ್ಲಿ ತಿಳಿಸಿರುವ ಈ ಮದ್ದನ್ನೊಮ್ಮೆ ಟ್ರೈ ಮಾಡಿ
ಕಿವಿ ಸೋಂಕನ್ನು ತಡೆಗಟ್ಟಲು ಈ ರೀತಿ ಮಾಡಿ:
ಆರ್‌ಎಂಎಲ್ ಆಸ್ಪತ್ರೆಯ ವೈದ್ಯಕೀಯ ವಿಭಾಗದ ಡಾ. ಸುಭಾಷ್ ಗಿರಿ ಹೇಳುವ ಪ್ರಕಾರ, ತಾಪಮಾನದಲ್ಲಿ ಆದಂತಹ ಬದಲಾವಣೆಗಳಿಂದ ಕಿವಿಗಳನ್ನು ರಕ್ಷಿಸಿಕೊಳ್ಳುವುದು ಬಹಳ ಮುಖ್ಯ. ತಣ್ಣನೆಯ ಗಾಳಿಗೆ ನೇರವಾಗಿ ಒಡ್ಡಿಕೊಳ್ಳುವುದನ್ನು ತಪ್ಪಿಸಿ ಮತ್ತು ಬೈಸಿಕಲ್ ಅಥವಾ ಬೈಕ್ ನಲ್ಲಿ ಹೋಗುವಾಗ ಕಿವಿಗಳನ್ನು ಮುಚ್ಚಿಕೊಳ್ಳಿ. ಯಾವುದೇ ಕಾರಣಕ್ಕೂ ಶೀತ ಮತ್ತು ಕೆಮ್ಮನ್ನು ಹಗುರವಾಗಿ ತೆಗೆದುಕೊಳ್ಳಬೇಡಿ, ಏಕೆಂದರೆ ಇದು ಹೆಚ್ಚಾಗಿ ಕಿವಿ ಸೋಂಕನ್ನು ಉಲ್ಬಣಗೊಳಿಸುತ್ತದೆ. ನಿಮ್ಮ ಕಿವಿಗಳನ್ನು ಅತಿಯಾಗಿ ಸ್ವಚ್ಛಗೊಳಿಸುವುದನ್ನು ತಪ್ಪಿಸಿ ಮತ್ತು ಹತ್ತಿ ಸ್ವ್ಯಾಬ್‌ಗಳನ್ನು ತುಂಬಾ ಆಳವಾಗಿ ಸೇರಿಸಬೇಡಿ, ಏಕೆಂದರೆ ಇದು ನೋವನ್ನು ಮತ್ತಷ್ಟು ಹೆಚ್ಚಿಸುತ್ತದೆ.
ವೈದ್ಯರು ಕಿವಿ ಸೋಂಕಿಗೆ ಡ್ರಾಪ್ ಅಥವಾ ಇನ್ನಿತರ ಔಷಧಿಗಳನ್ನು ನೀಡಿದ್ದರೆ ಆ ಕೋರ್ಸ್ ಅನ್ನು ಪೂರ್ಣಗೊಳಿಸಿ. ಸ್ನಾನ ಮಾಡುವಾಗ ನಿಮ್ಮ ಕಿವಿಗಳಿಗೆ ನೀರು ಹೋಗುವುದನ್ನು ತಪ್ಪಿಸಿ. ನೋವು ತೀವ್ರವಾಗಿದ್ದರೆ, ಸಾಕಷ್ಟು ನೀರು ಕುಡಿಯುವುದು ಮತ್ತು ವಿಶ್ರಾಂತಿ ಪಡೆಯಿರಿ. ಮಕ್ಕಳಲ್ಲಿ, ಕಿವಿ ಸೆಳೆತವಾದಾಗ ಚಡಪಡಿಕೆ ಅಥವಾ ಆಗಾಗ ಅಳುವುದು ಮುಂತಾದ ಸೋಂಕಿನ ಲಕ್ಷಣಗಳನ್ನು ಕಾಣಬಹುದಾಗಿದೆ. ಆದರೆ ಇವುಗಳನ್ನು ನಿರ್ಲಕ್ಷಿಸಬೇಡಿ. 1- 2 ದಿನಗಳಲ್ಲಿ ಯಾವುದೇ ಸುಧಾರಣೆ ಇಲ್ಲದಿದ್ದರೆ ಅಥವಾ ತಲೆತಿರುಗುವಿಕೆ ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ.
ಈ ವಿಷಯ ನೆನಪಿನಲ್ಲಿರಲಿ:
- ನಿಮ್ಮ ಕಿವಿಗೆ ಚೂಪಾದ ವಸ್ತುಗಳನ್ನು ಯಾವುದೇ ಕಾರಣಕ್ಕೂ ಸೇರಿಸಬೇಡಿ.
- ದೀರ್ಘಕಾಲದ ವರೆಗೆ ಇಯರ್‌ಫೋನ್‌ಗಳ ಬಳಕೆ ಮಾಡಬೇಡಿ.
- ಅಲರ್ಜಿಗಳನ್ನು ನಿಯಂತ್ರಣದಲ್ಲಿಡಿ.
- ರೋಗನಿರೋಧಕ ಶಕ್ತಿ ಚೆನ್ನಾಗಿರುವಂತೆ ನೋಡಿಕೊಳ್ಳಿ
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




