Curry Leaves: ಸರ್ವೇ ಸಾಮಾನ್ಯವಾಗಿ ಎಲ್ಲರನ್ನೂ ಕಾಡುವ ಈ 4 ಸಮಸ್ಯೆಗಳಿಗೆ ಕರಿಬೇವು ಸುಲಭ ಮದ್ದು

| Updated By: ಆಯೇಷಾ ಬಾನು

Updated on: Aug 16, 2021 | 7:23 AM

ಕೆಲವೊಂದಷ್ಟು ಜನ ಊಟದಲ್ಲಿ ಕರಿಬೇವಿನ ಎಲೆ ಸಿಕ್ಕ ತಕ್ಷಣ ಅದನ್ನು ಗುಂಪಿಗೆ ಸೇರದ ವಸ್ತು ಎಂಬಂತೆ ಪಕ್ಕಕ್ಕೆ ತಳ್ಳಿಬಿಡುತ್ತಾರೆ. ಒಂದುವೇಳೆ ನೀವೂ ಅದೇ ರೀತಿ ಮಾಡುತ್ತಿದ್ದರೆ ಈ ಲೇಖನವನ್ನು ಅತ್ಯವಶ್ಯಕವಾಗಿ ಓದಿ.

Curry Leaves: ಸರ್ವೇ ಸಾಮಾನ್ಯವಾಗಿ ಎಲ್ಲರನ್ನೂ ಕಾಡುವ ಈ 4 ಸಮಸ್ಯೆಗಳಿಗೆ ಕರಿಬೇವು ಸುಲಭ ಮದ್ದು
ಕರಿಬೇವು
Follow us on

ಆರೋಗ್ಯದ ವಿಚಾರದಲ್ಲಿ ಬೇರೆ ದೇಶಗಳ ಜನರಿಗೆ ಹೋಲಿಸಿದರೆ ಭಾರತೀಯರು ಒಂದು ಕೈ ಮೇಲೆ ಎನ್ನಲು ಮೂಲ ಕಾರಣ ಇಲ್ಲಿನ ಆಹಾರ ಪದ್ಧತಿ. ಈಗೀಗ ನಗರ ಪ್ರದೇಶಗಳಲ್ಲಿ ಫಾಸ್ಟ್​ಫುಡ್​ ಸಂಸ್ಕೃತಿ ಆವರಿಸಿಕೊಂಡಿದೆಯಾದರೂ ಹಳ್ಳಿಗಳಲ್ಲಿ ಸಾಂಪ್ರದಾಯಿಕ ಆಹಾರ ಪದ್ಧತಿಯದ್ದೇ ಪಾರುಪತ್ಯ. ಕೊರೊನಾ ಆರಂಭವಾದಾಗಲೂ ನಮ್ಮ ಜನ ಹಿಂದಿನ ತಲೆಮಾರಿನಿಂದ ಬಳುವಳಿಯಾಗಿ ಬಂದ ಜ್ಞಾನವನ್ನೆಲ್ಲಾ ಪ್ರಯೋಗಿಸಿ ವಿವಿಧ ಗಿಡಮೂಲಿಕೆಗಳ ಕಷಾಯ, ಔಷಧಿ ಮಾಡಿಕೊಂಡು ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಂಡವರು. ಹೀಗಾಗಿ ನಮ್ಮ ಸುತ್ತಮುತ್ತಲೂ ಇರುವ ಸಸ್ಯ ಸಂಪತ್ತು ಔಷಧೀಯ ಕಣಜವೂ ಹೌದು. ಆ ಪೈಕಿ ನಿತ್ಯವೂ ಅಡುಗೆ ಮನೆಯಲ್ಲಿ ಸರ್ವೇ ಸಾಮಾನ್ಯವಾಗಿ ಬಳಸಲ್ಪಡುವ ಕರಿಬೇವಿನ ಮಹತ್ವದ ಬಗ್ಗೆ ಇಂದು ತಿಳಿದುಕೊಳ್ಳೋಣ.

ಕರಿಬೇವು ಔಷಧೀಯ ಗುಣಗಳನ್ನು ಮೈಗೂಡಿಸಿಕೊಂಡ ಒಂದು ವಿಶಿಷ್ಟ ಸಸ್ಯ. ಇದನ್ನು ರುಚಿ ಹಾಗೂ ಪರಿಮಳದ ಕಾರಣಕ್ಕಾಗಿ ಅಡುಗೆಯಲ್ಲಿ ಸಾಧಾರಣವಾಗಿ ಬಳಸಲಾಗುತ್ತದೆ. ಮೂಲತಃ ಭಾರತ ನೆಲಕ್ಕೆ ಸೇರಿದ ಈ ಸಸ್ಯ ಇಂದು ಬೇರೆ ಬೇರೆ ಕಡೆಗೂ ಪ್ರಚಲಿತದಲ್ಲಿದೆಯಾದರೂ ಅದರ ಬಳಕೆ ಹೆಚ್ಚಾಗಿರುವುದು ತವರು ನೆಲದಲ್ಲೇ. ಹಾಗಿದ್ದರೂ, ಕೆಲವೊಂದಷ್ಟು ಜನ ಊಟದಲ್ಲಿ ಕರಿಬೇವಿನ ಎಲೆ ಸಿಕ್ಕ ತಕ್ಷಣ ಅದನ್ನು ಗುಂಪಿಗೆ ಸೇರದ ವಸ್ತು ಎಂಬಂತೆ ಪಕ್ಕಕ್ಕೆ ತಳ್ಳಿಬಿಡುತ್ತಾರೆ. ಒಂದುವೇಳೆ ನೀವೂ ಅದೇ ರೀತಿ ಮಾಡುತ್ತಿದ್ದರೆ ಈ ಲೇಖನವನ್ನು ಅತ್ಯವಶ್ಯಕವಾಗಿ ಓದಿ.

1. ಹೃದಯದ ಆರೋಗ್ಯಕ್ಕೆ ಕರಿಬೇವು ಒಳ್ಳೆಯದು
ಕರಿಬೇವಿನ ಎಲೆ ಸೇವಿಸುವುದರಿಂದ ನಾಲಗೆಗೆ ರುಚಿ ಸಿಗುವುದಷ್ಟೇ ಅಲ್ಲದೇ ನಮ್ಮ ಆರೋಗ್ಯಕ್ಕೂ ಸಾಕಷ್ಟು ಪ್ರಯೋಜನಗಳು ದೊರೆಯುತ್ತವೆ. ಬಹುಮುಖ್ಯವಾಗಿ ಹೃದಯಕ್ಕೆ ಕರಿಬೇವಿನ ಸೇವನೆಯಿಂದ ಅನೇಕ ಪ್ರಯೋಜನಗಳಿವೆ ಎಂದು ಹಲವು ಸಂಶೋಧನೆಗಳು ತಿಳಿಸಿವೆ. ಅದರನ್ವಯ, ಈ ಎಲೆಗಳಲ್ಲಿರುವ ಮಹಾನಿಂಬೈನ್ ಎಂಬ ಆಲ್ಕಲಾಯ್ಡ್‌ಗಳು ದೇಹದಲ್ಲಿರುವ ಕೊಲೆಸ್ಟ್ರಾಲ್ ಮತ್ತು ಟ್ರೈಗ್ಲಿಸರೈಡ್ ಅಂಶದ ಪ್ರಮಾಣವನ್ನು ನಿಯಂತ್ರಿಸಲು ಉಪಯುಕ್ತವಾಗಿದೆ.

2. ಮಧುಮೇಹಕ್ಕೆ ಸರಳ ಮದ್ದು ಕರಿಬೇವು
ಕರಿಬೇವಿನ ಎಲೆಯನ್ನು ನಿಯಮಿತವಾಗಿ ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಬಹುದು. ಅದು ಮಧುಮೇಹದಿಂದ ಹಿಡಿದು ಮೂತ್ರಪಿಂಡದ ಸಮಸ್ಯೆ, ನರಶೂಲೆಯಂತಹ ಸಾಕಷ್ಟು ಸಮಸ್ಯೆಗಳಿಗೆ ಪರಿಹಾರ ಒದಗಿಸಲು ಸಹಕಾರಿಯಾಗಿದೆ ಎಂದು ಹೇಳಲಾಗುತ್ತದೆ.

3. ತೂಕ ಇಳಿಸಲು ಕರಿಬೇವು ಸಹಾಯಕ
ಕರಿಬೇವಿನ ಎಲೆ ಸೇವಿಸುವುದರಿಂದ ಅನೇಕ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಸಿಗುವ ಜತೆಜತೆಗೆ ತೂಕ ಇಳಿಸಿಕೊಳ್ಳುವುದಕ್ಕೂ ಸಹಾಯವಾಗುತ್ತದೆ. ಕರಿಬೇವಿನಲ್ಲಿ ಅಧಿಕ ಪ್ರಮಾಣದ ಫೈಬರ್ ಇದ್ದು, ಇದು ದೇಹದಲ್ಲಿರುವ ಹೆಚ್ಚುವರಿ ಕೊಬ್ಬು ಮತ್ತು ಅನಾರೋಗ್ಯಕರ ಅಂಶಗಳನ್ನು ತೆಗೆದುಹಾಕಲು ಪ್ರಯತ್ನಿಸುತ್ತದೆ. ಕೊಲೆಸ್ಟ್ರಾಲ್ ಮಟ್ಟಕ್ಕೂ ಕಡಿವಾಣ ಹಾಕುವ ಮೂಲಕ ಆರೋಗ್ಯಕರ ತೂಕ ಪಡೆಯಲು ಕರಿಬೇವು ಸಹಾಯ ಮಾಡುತ್ತದೆ.

4. ಉರಿಯೂತ, ಅತಿಸಾರಕ್ಕೆ ಕರಿಬೇವು ಸುಲಭ ಔಷಧಿ
ಕರಿಬೇವಿನ ಎಲೆ ಉರಿಯೂತವನ್ನು ಶಮನ ಮಾಡುವ ಗುಣಗಳ ಆಗರವಾಗಿದ್ದು, ಪಿತ್ತ ದೋಷವನ್ನು ಸರಿಪಡಿಸುವ ಮೂಲಕ ಅತಿಸಾರವನ್ನು ನಿವಾರಿಸಲು ಕೂಡಾ ಸಹಕರಿಸುತ್ತವೆ. ಆಯುರ್ವೇದದ ಪ್ರಕಾರ, ಕರಿಬೇವಿನ ಎಲೆಗಳು ನಮ್ಮ ಸಕಲ ಅಂಗಾಂಗಳಿಗೂ ವಿಧವಿಧವಾದ ಉಪಯೋಗಗಳನ್ನು ನೀಡುತ್ತವೆ.

(Benefits of Curry Leaves know 4 major health issues that can be controlled by using Curry leaves)

ಇದನ್ನೂ ಓದಿ:
Curry Leaves: ಕರಿಬೇವಿನ ಚಹಾ ಮಾಡಿ ಸವಿಯಿರಿ; ಇದರಲ್ಲಿರುವ ಔಷಧೀಯ ಗುಣ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ

ಜೋಳದ ಹಿಟ್ಟಿನಲ್ಲೂ ಇಡ್ಲಿ ಮಾಡಬಹುದು; ಸರಳ ವಿಧಾನದಲ್ಲಿ ಮಾಡಿ ಸವಿಯಿರಿ