
ಖರ್ಜೂರ ನಮ್ಮ ಆರೋಗ್ಯಕ್ಕೆ ಬಹಳ ಮುಖ್ಯ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ ಆದರೆ ಅದರ ಬೀಜಗಳು ಖರ್ಜೂರಕ್ಕಿಂತ ಎರಡು ಪಟ್ಟು ಹೆಚ್ಚು ಪ್ರಯೋಜನಗಳನ್ನು ನೀಡುತ್ತವೆ ಎಂದರೆ ನಂಬುತ್ತೀರಾ? ಹೌದು. ಖರ್ಜೂರದ ಮಾತ್ರವಲ್ಲ ಅದರ ಬೀಜಗಳು ಸಹ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ಆಯುರ್ವೇದ ತಜ್ಞರು ಹೇಳುತ್ತಾರೆ. ಅವರ ಪ್ರಕಾರ, ಖರ್ಜೂರದ ಬೀಜಗಳು ಹೃದಯಕ್ಕೆ ಹೆಚ್ಚು ಪ್ರಯೋಜನಕಾರಿ. ಇವು ರಕ್ತನಾಳಗಳಲ್ಲಿ ಸಂಗ್ರಹವಾದ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುವ ಮೂಲಕ ನಮ್ಮ ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ. ಹೃದಯಾಘಾತ, ಹೃದಯ ವೈಫಲ್ಯ, ಅರಿಥ್ಮಿಯಾ ಇತ್ಯಾದಿಗಳನ್ನು ತಡೆಯುತ್ತದೆ. ಇದು ದೇಹಕ್ಕೆ ತುಂಬಾ ಅಪಾಯಕಾರಿಯಾದ ಆಕ್ಸಿಡೇಟಿವ್ ಒತ್ತಡವನ್ನು ಕಡಿಮೆ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಆದ್ದರಿಂದ ಖರ್ಜೂರವನ್ನು ತಿಂದ ನಂತರ ಅದರ ಬೀಜಗಳನ್ನು ಎಸೆಯಬೇಡಿ ಬದಲಾಗಿ ಅವುಗಳನ್ನು ಸಂಗ್ರಹಿಸಿಟ್ಟುಕೊಂಡು ಇಲ್ಲಿ ಹೇಳಿರುವಂತೆ ಬಳಸಿದಲ್ಲಿ ಅನೇಕ ರೀತಿಯ ಪ್ರಯೋಜನಗಳನ್ನು ಪಡೆಯಬಹುದು. ಹಾಗಾದರೆ ಇದರಿಂದ ಸಿಗುವ ಮತ್ತಷ್ಟು ಆರೋಗ್ಯ ಪ್ರಯೋಜನಗಳು ಯಾವವು? ಸೇವನೆ ಮಾಡುವುದು ಹೇಗೆ ತಿಳಿದುಕೊಳ್ಳಿ.
ಖರ್ಜೂರದ ಬೀಜಗಳಲ್ಲಿ ಓಲಿಕ್ ಆಮ್ಲ, ಫೈಬರ್ ಮತ್ತು ಪಾಲಿಫಿನಾಲ್ ಗಳಿವೆ. ಇದು ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಲು ಅತ್ಯಗತ್ಯವಾಗಿದೆ. ಇನ್ನು ಖರ್ಜೂರದ ಬೀಜಗಳಲ್ಲಿ ಪೊಟ್ಯಾಸಿಯಮ್, ಮೆಗ್ನೀಸಿಯಮ್ ಮತ್ತು ರಂಜಕ ಸಮೃದ್ಧವಾಗಿದೆ. ಇದು ಹೃದಯದ ಆರೋಗ್ಯಕ್ಕೆ ಒಳ್ಳೆಯದು. ಸರಳವಾಗಿ ಹೇಳುವುದಾದರೆ ಈ ಬೀಜಗಳು ನಮ್ಮ ಹೃದಯದ ಆರೋಗ್ಯಕ್ಕೆ ಅಮೃತವಿದ್ದಂತೆ. ಇವುಗಳನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು.
ಖರ್ಜೂರದ ಬೀಜಗಳನ್ನು ತಿನ್ನುವುದು ತೂಕ ಕಡಿಮೆ ಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಇದರ ಫೈಬರ್ ಅಂಶದಿಂದಾಗಿ, ಹೊಟ್ಟೆಯು ದೀರ್ಘಕಾಲದ ವರೆಗೆ ತುಂಬಿರುತ್ತದೆ ಮತ್ತು ಹಸಿವನ್ನು ಕಡಿಮೆ ಮಾಡುತ್ತದೆ. ಇದರಿಂದ ಹೊಟ್ಟೆಯನ್ನು ಸ್ವಚ್ಛಗೊಳಿಸಲು ಸುಲಭಗೊಳಿಸುತ್ತದೆ. ಜೀರ್ಣಕ್ರಿಯೆ ಉತ್ತಮವಾಗಿರುತ್ತದೆ. ಇದು ರಕ್ತದೊತ್ತಡವನ್ನು ಕೂಡ ನಿಯಂತ್ರಿಸಲು ಸಹಾಯ ಮಾಡುತ್ತದೆ.
ಖರ್ಜೂರದ ಬೀಜಗಳು ಕ್ಯಾಲ್ಸಿಯಂ ಮತ್ತು ರಂಜಕದ ಉತ್ತಮ ಮೂಲವಾಗಿದೆ. ಇವು ಮೂಳೆಗಳನ್ನು ಬಲಪಡಿಸಲು ಸಹಾಯ ಮಾಡುತ್ತವೆ. ಅವು ಮೂತ್ರಪಿಂಡಗಳಿಗೂ ಒಳ್ಳೆಯದು. ಏಕೆಂದರೆ ಅವು ದೇಹದಿಂದ ವಿಷವನ್ನು ಹೊರಹಾಕಲು ಸಹಾಯ ಮಾಡುತ್ತವೆ.
ಜಿಮ್ ವ್ಯಾಯಾಮ ಮಾಡುವವರು ಖಂಡಿತವಾಗಿಯೂ ಈ ಖರ್ಜೂರದ ಬೀಜಗಳನ್ನು ತಿನ್ನಬೇಕು. ಇವು ಕಾರ್ಯಕ್ಷಮತೆಯನ್ನು ಸುಧಾರಿಸುತ್ತವೆ. ಸ್ನಾಯುಗಳಲ್ಲಿ ಉರಿಯೂತವನ್ನು ಕಡಿಮೆ ಮಾಡುತ್ತದೆ. ಆಕ್ಸಿಡೇಟಿವ್ ಒತ್ತಡದಿಂದ ಹಾನಿಯನ್ನು ತಡೆಯುತ್ತದೆ.
ಇದನ್ನೂ ಓದಿ: ಏನೇ ತಿಂದರೂ ಸರಿಯಾಗಿ ಜೀರ್ಣವಾಗದಿದ್ದಾಗ ಈ ಸರಳ ಸಲಹೆಯನ್ನು ಪಾಲಿಸಿ
ಖರ್ಜೂರದ ಬೀಜಗಳನ್ನು ಸಂಗ್ರಹಿಸಿಟ್ಟುಕೊಳ್ಳಿ ಅಥವಾ ಇದು ಮಾರುಕಟ್ಟೆಗಳಲ್ಲಿ ಲಭ್ಯವಿರುತ್ತದೆ ಅವುಗಳನ್ನು ಕೂಡ ಖರೀದಿಸಿ ತರಬಹುದು. ಈ ಬೀಜಗಳನ್ನು ಚೆನ್ನಾಗಿ ಸ್ವಚ್ಛಗೊಳಿಸಿ. ನಂತರ ಅವುಗಳನ್ನು ಬಿಸಿಲಿನಲ್ಲಿ ಒಣಗಿಸಿ ಮಧ್ಯಮ ಉರಿಯಲ್ಲಿ ಬಾಣಲೆಯಲ್ಲಿ ಹುರಿಯಬೇಕು. ಚೆನ್ನಾಗಿ ಪರಿಮಳ ಬಂದ ಮೇಲೆ ಅವುಗಳನ್ನು ಹೊರತೆಗೆದು ತಣಿಯಲು ಬಿಡಬೇಕು. ಬಳಿಕ ಅವುಗಳನ್ನು ಗ್ರೈಂಡರ್ ನಲ್ಲಿ ಪುಡಿ ಮಾಡಿಕೊಳ್ಳಬೇಕು. ಈ ಪುಡಿಯನ್ನು ಪ್ರತಿದಿನ 1 ಟೀ ಸ್ಪೂನ್ ಉಗುರು ಬೆಚ್ಚಗಿನ ಹಾಲಿಗೆ ಬೆರೆಸಿ ಸೇವನೆ ಮಾಡಬಹದು. ಇಲ್ಲದಿದ್ದರೆ, ಪುಡಿಯನ್ನು ನೀರು ಅಥವಾ ಜೇನುತುಪ್ಪದೊಂದಿಗೆ ಬೆರೆಸಿ ದಿನಕ್ಕೆ ಒಮ್ಮೆ ತಿನ್ನಬಹುದು. ಇದರಿಂದ ಅನೇಕ ರೀತಿಯ ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ