ಪ್ರತಿಯೊಬ್ಬರಿಗೂ ತಮ್ಮ ದೇಹ ಸುಂದರವಾಗಿರಬೇಕು ಎಂಬ ಆಸೆ ಇರುವುದು ಸಹಜ. ಗಂಡಸರೇ ಇರಲಿ, ಮಹಿಳೆಯರೇ ಇರಲಿ ತಮ್ಮ ಚರ್ಮ ಆರೋಗ್ಯದಿಂದ ಇರಬೇಕೆಂದು ಬಯಸುತ್ತಾರೆ. ನಿಮ್ಮ ಕೈಗಳು ಮತ್ತು ಮುಖದಂತೆಯೇ, ನಿಮ್ಮ ಪಾದಗಳಿಗೂ ತೇವಾಂಶದ ಅಗತ್ಯವಿದೆ. ಚಳಿಗಾಲದಲ್ಲಿ ನಿಮ್ಮ ಚರ್ಮಕ್ಕೆ ಸ್ವಲ್ಪ ಹೆಚ್ಚುವರಿ ನೀರಿನ ಅಂಶ ಬೇಕಾಗುತ್ತದೆ. ಒಡೆದ ಹಿಮ್ಮಡಿ ಕೂಡ ಚಳಿಗಾಲದಲ್ಲಿ ಸಾಮಾನ್ಯ ಸಮಸ್ಯೆಯಾಗಿದೆ. ಕೆಲವೊಮ್ಮೆ ಇದು ಆಳವಾದ ಬಿರುಕು, ಊತ ಮತ್ತು ನೋವಿಗೂ ಕಾರಣವಾಗಬಹುದು. ಈ ಚಳಿಗಾಲದಲ್ಲಿ, ನಿಮ್ಮ ಚರ್ಮದ ಬಗ್ಗೆ ಕಾಳಜಿಯನ್ನು ತೆಗೆದುಕೊಳ್ಳಲು ಸರಳವಾದ ಮಾರ್ಗಗಳು ಇಲ್ಲಿವೆ. ಈ ಚಳಿಗಾಲದಲ್ಲಿ ಬಿರುಕು ಬಿಟ್ಟ ಹಿಮ್ಮಡಿಯನ್ನು ತಡೆಗಟ್ಟಲು ಮತ್ತು ನಿರ್ವಹಿಸಲು ನೀವು ಅನುಸರಿಸಬಹುದಾದ ಮುಖ್ಯವಾದ ಹಂತಗಳು ಇಲ್ಲಿವೆ.
ಒಡೆದ ಹಿಮ್ಮಡಿಯನ್ನು ಸರಿಯಾಗಿಸಲು ನಿಮ್ಮ ಮನೆಯಲ್ಲೇ ಪರಿಹಾರವಿದೆ. ಎಣ್ಣೆ, ಲಿಂಬೆಹಣ್ಣು, ಹಣ್ಣುಗಳು, ಅಕ್ಕಿ ಹಿಟ್ಟು, ಬೇವಿನ ಎಲೆ, ಗ್ಲಿಸರಿನ್ ಮತ್ತು ರೋಸ್ ವಾಟರ್ ಬಳಸಿದರೆ ಒಡೆದ ಹಿಮ್ಮಡಿ ಕೂಡಿಕೊಳ್ಳುತ್ತದೆ.
ಎಣ್ಣೆ:
ಮನೆಯಲ್ಲಿರುವ ಆಲಿವ್ ಆಯಿಲ್, ಕೊಬ್ಬರಿ ಎಣ್ಣೆ, ಸಾಸಿವೆ ಎಣ್ಣೆ ಅಥವಾ ಯಾವುದೇ ತರಕಾರಿ ಎಣ್ಣೆಯನ್ನು ಆಗಾಗ ಹಚ್ಚುತ್ತಿದ್ದರೆ ಒಡೆದ ಹಿಮ್ಮಡಿ ಬೇಗ ಸರಿಯಾಗುತ್ತದೆ. ರಾತ್ರಿ ಮಲಗುವ ಮೊದಲು ನಿಮ್ಮ ಪಾದಗಳನ್ನು ಅರ್ಧ ಗಂಟೆ ನೀರಿನಲ್ಲಿ ಮುಳುಗಿಸಿ. ನಂತರ ಹಿಮ್ಮಡಿಗೆ ಮೆದುವಾಗಿ ಮಸಾಜ್ ಮಾಡಿ. ನಂತರ ಯಾವುದಾದರೂ ಎಣ್ಣೆಯನ್ನು ಹಚ್ಚಿಕೊಂಡು, ಸಾಕ್ಸ್ ಹಾಕಿಕೊಳ್ಳಿ.
ಲಿಂಬೆ ಹಣ್ಣು:
ಆ್ಯಸಿಡಿಕ್ ಅಂಶವಿರುವ ಲಿಂಬೆ ಹಣ್ಣಿನಿಂದ ಒಡೆದ ಹಿಮ್ಮಡಿ ಬೇಗ ಸರಿಯಾಗುತ್ತದೆ. ಉಗುರು ಬೆಚ್ಚಗಿನ ನೀರಿಗೆ ಲಿಂಬೆ ಹಣ್ಣಿನ ರಸವನ್ನು ಹಾಕಿ. ಆ ನೀರಿನಲ್ಲಿ ನಿಮ್ಮ ಕಾಲನ್ನು ಮುಳುಗಿಸಿಡಿ. ನಂತರ ಹಿಮ್ಮಡಿಯನ್ನು ಮಸಾಜ್ ಮಾಡಿ. ಅಥವಾ ಕಲ್ಲಿನ ಮೇಲೆ ಕಾಲನ್ನು ಉಜ್ಜಿರಿ. ನಂತರ ಆ ಕಾಲನ್ನು ನೀರಿನಿಂದ ತೊಳೆದು, ಟವೆಲ್ನಿಂದ ಒರೆಸಿಕೊಳ್ಳಿ.
ಹಣ್ಣುಗಳು:
ಬೆಣ್ಣೆ ಹಣ್ಣು, ಪಪ್ಪಾಯ, ಪೈನಾಪಲ್, ಬಾಳೆ ಹಣ್ಣು ಮುಂತಾದ ಹಣ್ಣುಗಳಿಂದ ಹಿಮ್ಮಡಿಯ ಬಿರುಕು ಬೇಗ ಸರಿಯಾಗುತ್ತದೆ. ಬೆಣ್ಣೆ ಹಣ್ಣು, ತುರಿದ ತೆಂಗಿನಕಾಯಿ, ಬಾಳೆಹಣ್ಣನ್ನು ಸರಿಯಾಗಿ ಮಿಕ್ಸ್ ಮಾಡಿ. ಈ ಮಿಶ್ರಣವನ್ನು ಒಡೆದ ಹಿಮ್ಮಡಿಯ ಜಾಗಕ್ಕೆ ಹಚ್ಚಿರಿ. ಹಿಮ್ಮಡಿಗೆ ಆ ಮಿಶ್ರಣದಿಂದ ಮಸಾಜ್ ಮಾಡಿ. ಅದಾದ 15 ನಿಮಿಷಗಳ ನಂತರ ತಣ್ಣೀರಿನಿಂದ ಕಾಲನ್ನು ತೊಳೆಯಿರಿ. ಪಪ್ಪಾಯ ಹಣ್ಣನ್ನು ಕೂಡ ಹಿಮ್ಮಡಿಗೆ ಮಸಾಜ್ ಮಾಡಬಹುದು.
ಅಕ್ಕಿ ಹಿಟ್ಟು:
ಒಂದು ಮುಷ್ಠಿ ಅಕ್ಕಿ ಹಿಟ್ಟನ್ನು ಒಂದು ಬೌಲ್ಗೆ ಹಾಕಿ. ಅದಕ್ಕೆ 2 ಟೇಬಲ್ ಸ್ಪೂನ್ ಜೇನುತುಪ್ಪ ಸೇರಿಸಿ. ಅದಕ್ಕೆ ಸ್ವಲ್ಪ ವನೇಗರ್ ಸೇರಿಸಿ, ಪೇಸ್ಟ್ ಮಾಡಿಕೊಳ್ಳಿ. ನಂತರ ಆ ಪೇಸ್ಟನ್ನು ಒಡೆದ ಹಿಮ್ಮಡಿಯ ಮೇಲೆ ಹಚ್ಚಿ ಮಸಾಜ್ ಮಾಡಿ. ಹಿಮ್ಮಡಿಯ ಬಿರುಕು ಆಳವಾಗಿದ್ದರೆ ಆ ಮಿಶ್ರಣದ ಮೇಲೆ ಸ್ವಲ್ಪ ಆಲಿವ್ ಎಣ್ಣೆ ಹಚ್ಚಿ. ಈ ಮಿಶ್ರಣವನ್ನು ಹಚ್ಚಿಕೊಳ್ಳುವ ಮೊದಲು ಕಾಲನ್ನು ಸ್ವಚ್ಛವಾಗಿ ತೊಳೆದುಕೊಳ್ಳಲು ಮರೆಯಬೇಡಿ.
ಬೇವಿನ ಎಲೆ:
ಬೇವಿನ ಎಲೆ ಮತ್ತು ಅರಿಶಿಣ ಗಾಯವಾದ ಜಾಗಕ್ಕೆ ಅಥವಾ ಬಿರುಕು ಬಿಟ್ಟ ಜಾಗವನ್ನು ಸರಿಯಾಗಿಸಲು ಬಹಳ ಸಹಾಯಕಾರಿ. ಬೇವಿನ ಎಲೆ ಹಾಗೂ ಅರಿಶಿಣವನ್ನು ರೊಬ್ಬಿ ಪೇಸ್ಟ್ ಮಾಡಿಕೊಳ್ಳಿ. ಅದನ್ನು ಹಿಮ್ಮಡಿಗೆ ಹಚ್ಚಿರಿ. ಅರ್ಧ ಗಂಟೆಯ ನಂತರ ತಣ್ಣೀರಿನಿಂದ ತೊಳೆಯಿರಿ.
ರೋಸ್ ವಾಟರ್:
ಗ್ಲಿಸರಿನ್ ಅಥವಾ ರೋಸ್ ವಾಟರ್ನಿಂದ ಹಿಮ್ಮಡಿಯ ಗಾಯವನ್ನು ಬೇಗ ಸರಿ ಮಾಡಬಹುದು. ಇವೆರಡನ್ನೂ ರಾತ್ರಿ ಮಲಗುವ ಮೊದಲು ಹಿಮ್ಮಡಿಯ ಗಾಯಕ್ಕೆ ಹಚ್ಚಿರಿ.
ನಿಮ್ಮ ಪಾದಗಳನ್ನು ತೇವಗೊಳಿಸುವುದರಿಂದ ಪಾದಗಳು ಒಣಗುವುದನ್ನು ತಡೆಯಬಹುದು. ದಪ್ಪ ಕೆನೆ ಅಥವಾ ಮಾಯಿಶ್ಚರೈಸರ್ ಕ್ರೀಮನ್ನು ಬಳಸುವುದರಿಂದ ನಿಮ್ಮ ಚರ್ಮವನ್ನು ಆರೋಗ್ಯಕರವಾಗಿಡಬಹುದು. ಸ್ನಾನ ಮಾಡಿದ ತಕ್ಷಣ ನಿಮ್ಮ ಪಾದಗಳಿಗೆ ದಪ್ಪವಾದ ಮಾಯಿಶ್ಚರೈಸರ್/ಮುಲಾಮು ಹಚ್ಚಿ ಮತ್ತು ಸಾಕ್ಸ್‌ನಿಂದ ಕವರ್ ಮಾಡಿ.
ಅಲೋವೆರಾ ಜೆಲ್ ಸೌಂದರ್ಯದ ಪ್ರಯೋಜನಗಳಿಂದ ತುಂಬಿದೆ. ಇದು ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣಗಳನ್ನು ಹೊಂದಿದೆ. ಮೊದಲಿಗೆ, ನಿಮ್ಮ ಪಾದಗಳನ್ನು ಸರಿಯಾಗಿ ಸ್ವಚ್ಛಗೊಳಿಸಿ ಮತ್ತು ತಾಜಾ ಅಲೋವೆರಾ ಜೆಲ್ ಅನ್ನು ಸರಿಯಾಗಿ ಹಚ್ಚಿರಿ. ಸಾಕ್ಸ್ ಧರಿಸಿ ಮತ್ತು ಅಲೋವೆರಾ ಜೆಲ್ ಅನ್ನು ಹಚ್ಚಿಕೊಂಡು ರಾತ್ರಿ ಮಲಗಿರಿ.
ಇದನ್ನೂ ಓದಿ: Health Tips: ಮೊಟ್ಟೆಗಿಂತಲೂ ಹೆಚ್ಚು ಪ್ರೋಟೀನ್ ಇರುವ 5 ಸಸ್ಯಾಹಾರಿ ಆಹಾರಗಳಿವು
Beauty Tips: ಕತ್ತೆ ಹಾಲಿನಿಂದ ಮುಖದ ಸೌಂದರ್ಯ ಹೆಚ್ಚಾಗುತ್ತಾ?; ಅಚ್ಚರಿಯ ಸಂಗತಿ ಇಲ್ಲಿದೆ