
ಬ್ರೈನ್ ಟ್ಯೂಮರ್ (Brain Tumor) ಬಗ್ಗೆ ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರಬಹುದು. ಇದೊಂದು ಗಂಭೀರ ಕಾಯಿಲೆ. ಸಕಾಲದಲ್ಲಿ ಚಿಕಿತ್ಸೆ ನೀಡದಿದ್ದರೆ, ರೋಗಿ ಸಾಯಲೂಬಹುದು. ಆದರೆ ಕೆಲವು ಲಕ್ಷಣಗಳ ಮೂಲಕ ಈ ರೋಗವನ್ನು ಮೊದಲೇ ಪತ್ತೆ ಹಚ್ಚಬಹುದು ಎಂದರೆ ನಂಬುತ್ತೀರಾ? ಹೌದು. ಬ್ರೈನ್ ಟ್ಯೂಮರ್ ಬರುವ ಸಂದರ್ಭದಲ್ಲಿ, ರಾತ್ರಿ ಮಲಗಿರುವಾಗ ಕೆಲವು ಲಕ್ಷಣಗಳು ಕಾಣಿಸಿಕೊಳ್ಳುತ್ತವೆ ಮತ್ತು ಇವುಗಳನ್ನು ಎಂದಿಗೂ ನಿರ್ಲಕ್ಷಿಸಬಾರದು ಎಂದು ವೈದ್ಯರು ಹೇಳುತ್ತಾರೆ. ಇವುಗಳ ಬಗ್ಗೆ ಸರಿಯಾದ ಮಾಹಿತಿ ಇದ್ದಲ್ಲಿ ಇದರಿಂದಾಗುವ ಪರಿಣಾಮವನ್ನು ಕಡಿಮೆ ಮಾಡಬಹುದು. ಹಾಗಾದರೆ ರಾತ್ರಿ ಸಮಯದಲ್ಲಿ ಯಾವ ರೀತಿಯ ಲಕ್ಷಣ ಕಂಡುಬಂದಾಗ ನಿರ್ಲಕ್ಷ್ಯ ಮಾಡಬಾರದು, ಯಾವ ಸಂದರ್ಭಗಳಲ್ಲಿ ವೈದ್ಯರನ್ನು ಸಂಪರ್ಕಿಸಬೇಕು ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.
ಮೆದುಳಿನಲ್ಲಿ ಗಡ್ಡೆಗಳು ಬೆಳೆಯುವುದು ಅಂದರೆ ಬ್ರೈನ್ ಟ್ಯೂಮರ್ ಎನ್ನುವುದು ಬಹಳ ಗಂಭೀರವಾದಂತಹ ಕಾಯಿಲೆಯಾಗಿದೆ. ಚಿಕಿತ್ಸೆಯನ್ನು ವಿಳಂಬ ಮಾಡಿದಷ್ಟು ಇದರಿಂದ ಉಂಟಾಗುವ ತೊಂದರೆಗಳು ಹೆಚ್ಚಾಗಬಹುದು. ಒಬ್ಬ ವ್ಯಕ್ತಿಯಲ್ಲಿ ಮೆದುಳಿನ ಗಡ್ಡೆಯಾದಾಗ ರಾತ್ರಿ ಸಮಯದಲ್ಲಿ ಕೆಲವು ಲಕ್ಷಣಗಳು ಕಂಡುಬರುತ್ತವೆ ಎಂದು ತಜ್ಞರು ಹೇಳುತ್ತಾರೆ. ಈ ಲಕ್ಷಣಗಳನ್ನು ನಿರ್ಲಕ್ಷಿಸದಿದ್ದರೆ ಬ್ರೈನ್ ಟ್ಯೂಮರ್ ನಿಂದ ಪರಿಹಾರ ಕಂಡುಕೊಳ್ಳಬಹುದು.
ಸಾಮಾನ್ಯವಾಗಿ ಮೆದುಳಿನಲ್ಲಿನ ಜೀವಕೋಶಗಳು ಇದ್ದಕ್ಕಿದ್ದಂತೆ ಬೆಳೆಯಲು ಪ್ರಾರಂಭಿಸಿದಾಗ ಮೆದುಳಿನ ಗಡ್ಡೆ ಉಂಟಾಗುತ್ತದೆ. ಹಾನಿಕರವಲ್ಲದ ಗೆಡ್ಡೆಗಳು ಕ್ಯಾನ್ಸರ್ ಅಲ್ಲ, ಆದರೆ ಅವು ನಿಧಾನವಾಗಿ ಬೆಳೆಯುತ್ತವೆ. ಮತ್ತೊಂದೆಡೆ, ಮಾರಕ ಗಡ್ಡೆಗಳು ವೇಗವಾಗಿ ಬೆಳೆಯುತ್ತವೆ ಮಾತ್ರವಲ್ಲ ಇದು ಜೀವಕ್ಕೆ ಅಪಾಯಕಾರಿಯಾಗಬಹುದು. ಚಿಕಿತ್ಸೆಯು ಗಡ್ಡೆಯ ಲಕ್ಷಣಗಳು, ಅದು ಎಲ್ಲಿದೆ, ಅದರ ಗಾತ್ರ ಮತ್ತು ಅದು ಕ್ಯಾನ್ಸರ್ ಆಗಿದೆಯೇ ಅಥವಾ ಇಲ್ಲವೇ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ ಎಂದು ತಜ್ಞರು ಹೇಳುತ್ತಾರೆ.
ನಿದ್ರೆ ಮಾಡುತ್ತಿರುವ ಸಮಯದಲ್ಲಿ ಹಠಾತ್ ಮೂರ್ಛೆ ಹೋಗುವುದು ಅಥವಾ ಪ್ರಜ್ಞೆ ಕಳೆದುಕೊಳ್ಳುವುದು ಮೆದುಳಿನಲ್ಲಿ ಗಡ್ಡೆ ಇರುವ ಲಕ್ಷಣವಾಗಿದೆ. ಈ ರೀತಿಯಾಗುವುದನ್ನು ಎಂದಿಗೂ ನಿರ್ಲಕ್ಷ್ಯ ಮಾಡಬೇಡಿ. ಏಕೆಂದರೆ ಅವು ಮುಂದೆ ತುಂಬಾ ಗಂಭೀರವಾಗಬಹುದು. ಹಾಗಾಗಿ ಈ ರೀತಿಯ ಲಕ್ಷಣ ಕಂಡುಬಂದರೆ ತಕ್ಷಣ ವೈದ್ಯರ ಸಹಾಯವನ್ನು ಪಡೆಯಲು ಮರೆಯಬೇಡಿ.
ಇದನ್ನೂ ಓದಿ: ಕೇರಳದಲ್ಲಿ ಮೆದುಳು ತಿನ್ನುವ ಅಮೀಬಾ ಆತಂಕ: ಅಯ್ಯಪ್ಪ ಭಕ್ತರಿಗೆ ಆರೋಗ್ಯ ಇಲಾಖೆಯಿಂದ ಮಾರ್ಗಸೂಚಿ ಬಿಡುಗಡೆ
ರಾತ್ರಿ ಸಮಯದಲ್ಲಿ ತೀವ್ರ ತಲೆನೋವಿನ ಜೊತೆಗೆ, ರಾತ್ರಿ ಮಲಗಿದ್ದಾಗ ವಾಂತಿ ಮಾಡುವುದು ಸಹ ಮೆದುಳಿನ ಗೆಡ್ಡೆಯ ಸಂಕೇತವಾಗಿರಬಹುದು. ಮಾತ್ರವಲ್ಲ ಬೆಳಿಗ್ಗೆ ಎದ್ದ ತಕ್ಷಣ ವಾಂತಿ ಮಾಡುವುದು ಕೂಡ ಮೆದುಳಿನಲ್ಲಿ ಗಡ್ಡೆ ಇರುವ ಲಕ್ಷಣವಾಗಿರಬಹುದು. ಇನ್ನು ತೀವ್ರ ತಲೆನೋವಿದ್ದಾಗ ವಾಂತಿ ಮಾಡುವುದು ಕೂಡ ಮೆದುಳಿನಲ್ಲಿ ಗಡ್ಡೆ ಇರುವುದರ ಸೂಚನೆಯಾಗಿರಬಹುದು. ಗಡ್ಡೆಯಿಂದ ಮೆದುಳಿನ ಮೇಲೆ ಒತ್ತಡ ಉಂಟಾಗುವುದು ವಾಂತಿಗೆ ಕಾರಣವಾಗಬಹುದು.
ನಿದ್ರೆಯಲ್ಲಿ ಆಗಾಗ ಕಂಡುಬರುವ ಅಡಚಣೆಗಳು ಮೆದುಳಿನಲ್ಲಿ ಗಡ್ಡೆ ಇರುವುದರ ಸಂಕೇತವಾಗಿರಬಹುದು. ಮಾತ್ರವಲ್ಲ ಕೆಲವರಲ್ಲಿ ಕಂಡು ಬರುವ ಅತಿಯಾದ ನಿದ್ರಾಹೀನತೆ ಅಥವಾ ದಿನವಿಡೀ ದಣಿದ ಭಾವನೆಯೂ ಕೂಡ ಮೆದುಳಿನಲ್ಲಿ ಗಡ್ಡೆ ಬೆಳೆದಿರುವ ಲಕ್ಷಣಗಳಾಗಿರಬಹುದು ಎಂದು ತಜ್ಞರು ಹೇಳುತ್ತಾರೆ.
ಇದರೊಂದಿಗೆ ಆಗಾಗ ಕಂಡುಬರುವ ತೀವ್ರ ತಲೆನೋವು, ಮಸುಕಾದ ದೃಷ್ಟಿ ಅಥವಾ ನಡವಳಿಕೆಯಲ್ಲಿನ ಬದಲಾವಣೆಗಳು ಕೂಡ ಟ್ಯೂಮರ್ ಲಕ್ಷಣಗಳಾಗಿರಬಹುದು. ಈ ರೀತಿ ನಿಮಗೂ ಆಗುತ್ತಿದ್ದರೆ ಸಾಧ್ಯವಾದಷ್ಟು ಬೇಗ ವೈದ್ಯರನ್ನು ಸಂಪರ್ಕಿಸಿ. ಅಮೂಲ್ಯವಾಗಿರುವ ಜೀವವನ್ನು ಕಾಪಾಡಿಕೊಳ್ಳಿ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ