ಕೊಬ್ಬಿನಾಂಶವಿರುವ ಆಹಾರ ನಮ್ಮ ರಕ್ತದಲ್ಲಿನ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುತ್ತದೆ, ಇದರಿಂದ ಹೃದ್ರೋಗದ ಅಪಾಯ ಹೆಚ್ಚಾಗುತ್ತದೆ ಎಂಬ ನಂಬಿಕೆ ಜನಸಾಮಾನ್ಯರಲ್ಲಿದೆ. ಆದರೆ, ಇತ್ತೀಚಿನ ಸಂಶೋಧನೆಯೊಂದು ಆಹಾರದಲ್ಲಿರುವ ಕೊಲೆಸ್ಟ್ರಾಲ್ ಹೃದ್ರೋಗಕ್ಕೆ ಕಾರಣವಾಗುವುದಿಲ್ಲ ಎಂದು ಹೇಳಿದೆ. ಉದಾಹರಣೆಗೆ, ದಿನಕ್ಕೆ ಒಂದು ಮೊಟ್ಟೆಯನ್ನು ಸೇವಿಸಲು ನೀವು ಚಿಂತಿಸಬೇಕಾಗಿಲ್ಲ, ಅದು ನಿಮ್ಮ ದೇಹದ ಕೊಲೆಸ್ಟ್ರಾಲ್ ಅನ್ನು ಮಾತ್ರ ಹೆಚ್ಚಿಸುತ್ತದೆ. ಅದರಿಂದ ಬೇರೆ ರೀತಿಯ ಅಡ್ಡಪರಿಣಾಮಗಳು ಉಂಟಾಗುವುದಿಲ್ಲ. ಗೋಡಂಬಿ ಮತ್ತು ಕಡಲೆಕಾಯಿಯನ್ನು ಸೇವಿಸುವುದರಿಂದ ನಿಮ್ಮ ದೇಹದ ಕೊಲೆಸ್ಟ್ರಾಲ್ ಮಟ್ಟ ಕಡಿಮೆಯಾಗುತ್ತದೆ. ಇದು ಹೃದ್ರೋಗ ಮತ್ತು ಪಾರ್ಶ್ವವಾಯುವಿನ ತೊಂದರೆಯನ್ನು ನಿಯಂತ್ರಿಸುತ್ತದೆ.
ಡಯೆಟರಿ ಕೊಲೆಸ್ಟ್ರಾಲ್ ನಿಮ್ಮ ರಕ್ತದಲ್ಲಿನ ಒಟ್ಟು ಕೊಲೆಸ್ಟ್ರಾಲ್ನ ಮೂರನೇ ಒಂದು ಭಾಗವನ್ನು ನೀಡುತ್ತದೆ. ಉಳಿದ ಮೂರನೇ ಎರಡರಷ್ಟು ಭಾಗ ಯಕೃತ್ತಿನಿಂದ ಉತ್ಪತ್ತಿಯಾಗುತ್ತದೆ. ಹೀಗಾಗಿ, ಈ ಮಟ್ಟ ಹೆಚ್ಚಾದರೆ ಅದಕ್ಕೆ ಯಕೃತ್ತಿನ ಅತಿಯಾದ ಉತ್ಪಾದನೆಯೇ ಕಾರಣವೇ ಹೊರತು ನೀವು ಸೇವಿಸುವ ಆಹಾರ ಕಾರಣವಾಗುವುದಿಲ್ಲ. ಹೀಗಾಗಿಯೇ ಕೆಲವು ರೋಗಿಗಳು, ಡಾಕ್ಟರ್, ನಾನು ಕೊಬ್ಬಿನ ಆಹಾರವನ್ನು ಸೇವಿಸುವುದಿಲ್ಲ. ಆದರೆ, ಇನ್ನೂ ನನ್ನ ರಕ್ತದಲ್ಲಿನ ಕೊಲೆಸ್ಟ್ರಾಲ್ ಹೆಚ್ಚಾಗಿದೆ ಎನ್ನುತ್ತಾರೆ ಎಂದು ವೈದ್ಯರೊಬ್ಬರು ಹೇಳಿದ್ದಾರೆ.
ಆಹಾರದ ಕೊಲೆಸ್ಟ್ರಾಲ್ ಪ್ರಾಣಿ ಮೂಲದ ಆಹಾರಗಳಿಂದ ಬರುತ್ತದೆ. ಸಾಮಾನ್ಯವಾಗಿ ಮಾಂಸ, ಮೊಟ್ಟೆ, ಬೆಣ್ಣೆ ಮತ್ತು ಡೈರಿ ಉತ್ಪನ್ನಗಳಿಂದ ಇದು ಬರುತ್ತದೆ. ಸಂಸ್ಕರಿಸಿದ ಮಾಂಸಗಳು, ಸಾಸೇಜ್‌ಗಳು, ಬರ್ಗರ್‌ಗಳು ಮತ್ತು ಬೇಯಿಸಿದ ಸರಕುಗಳಲ್ಲಿ ಕೊಬ್ಬಿನಾಂಶ ಹೇರಳವಾಗಿರುತ್ತದೆ. ಆದರೆ, ಉತ್ತಮ ಆರೋಗ್ಯಕ್ಕಾಗಿ ಇವುಗಳನ್ನು ಮಿತವಾಗಿ ಸೇವಿಸಬೇಕು.
ನಟ್ಸ್ನಲ್ಲಿ ಕೊಲೆಸ್ಟ್ರಾಲ್ ಇದೆ ಎಂಬ ನಂಬಿಕೆಯಿದೆ. ಆದರೆ ಅವುಗಳಲ್ಲಿ ಯಾವುದೇ ಕೊಲೆಸ್ಟ್ರಾಲ್ ಇಲ್ಲ. ಹಾಲು, ಬೆಣ್ಣೆ, ಚೀಸ್ ಮತ್ತು ಮೊಟ್ಟೆಯಂತಹ ಎಲ್ಲಾ ಪ್ರಾಣಿ ಉತ್ಪನ್ನಗಳಲ್ಲಿ ಕೊಲೆಸ್ಟ್ರಾಲ್ ಇರುತ್ತದೆ. ಕಡಲೆಕಾಯಿ ಮತ್ತು ಗೋಡಂಬಿಯಲ್ಲಿ ಕೂಡ ಸ್ವಲ್ಪವೂ ಕೊಲೆಸ್ಟ್ರಾಲ್ ಇರುವುದಿಲ್ಲ. ಅಚ್ಚರಿಯ ಸಂಗತಿಯೆಂದರೆ, ಗೋಡಂಬಿ ನಿಮ್ಮ ದೇಹದ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುವುದಲ್ಲದೆ, ಅದರಲ್ಲಿರುವ ಹೆಚ್ಚಿನ ಮೆಗ್ನೀಸಿಯಮ್ ಅಂಶದಿಂದಾಗಿ ಹೃದ್ರೋಗವನ್ನು ತಡೆಯುತ್ತದೆ.
ಇದನ್ನೂ ಓದಿ: ಆರೋಗ್ಯಕರವಾಗಿ ಹೊಟ್ಟೆಯ ಕೊಬ್ಬು ಕರಗಿಸಲು ಸಿಂಪಲ್ ಟಿಪ್ಸ್
ಮೊಟ್ಟೆಗಳು ಹೃದಯದ ಆರೋಗ್ಯಕ್ಕೆ ಕೆಟ್ಟದು ಎಂಬ ನಂಬಿಕೆಯೂ ಇದೆ. ಆದರೆ, ಅದರ ಹಳದಿ ಭಾಗ ಸೇರಿದಂತೆ ಯಾವ ಅಂಶವೂ ಕೆಟ್ಟದ್ದಲ್ಲ. ಮೊಟ್ಟೆಯಲ್ಲಿನ ಹಳದಿ ಲೋಳೆಯಲ್ಲಿ 180 ಮಿಲಿಗ್ರಾಂ ಉತ್ತಮ ಕೊಲೆಸ್ಟ್ರಾಲ್ ಇದೆ. ಅದನ್ನು ತಿನ್ನುವುದರಿಂದ ಹೃದಯದ ಆರೋಗ್ಯಕ್ಕೆ ಯಾವ ಅಪಾಯವೂ ಇಲ್ಲ.