ಪಾಲಕ್, ಪೋಷಕಾಂಶ ಭರಿತ ಹಸಿರು ತರಕಾರಿ, ಅದರಿಂದ ಸಿಗುವ ಹೆಚ್ಚು ಪೌಷ್ಟಿಕಾಂಶದಿಂದಲೇ ಅದು ಎಲ್ಲೆಡೆ ಹೆಸರುವಾಸಿಯಾಗಿದೆ. ಅಗತ್ಯ ಜೀವಸತ್ವಗಳು, ಖನಿಜಗಳು ಮತ್ತು ಉತ್ಕರ್ಷಣ ನಿರೋಧಕಗಳಿಂದ ತುಂಬಿರುವ ಪಾಲಕ್ ನಮ್ಮ ಆಹಾರದಲ್ಲಿ ಜನಪ್ರಿಯ ಘಟಕಾಂಶವಾಗಿದೆ. ಆದರೆ, ರಸಗಳು ಮತ್ತು ಸ್ಮೂಥಿಗಳ ರೂಪದಲ್ಲಿ ಪಾಲಕ್ ಸೇವನೆಯಿಂದ ಮೂತ್ರಪಿಂಡದಲ್ಲಿ ಕಲ್ಲುಗಳ ಬೆಳವಣಿಗೆಯಾಗುತ್ತವೆ ಎಂಬ ಬಗ್ಗೆ ಕಳವಳಕಾರಿ ಸುದ್ದಿಯೊಂದು ಹೊರಬಿದ್ದಿದೆ. ಈ ಚರ್ಚೆ ತುಂಬಾ ಹಳೆಯದಾದರೂ ಈಗ ಮತ್ತೆ ಮುನ್ನೆಲೆಗೆ ಬಂದಿದೆ. ಪಾಲಕ್ ಸೊಪ್ಪಿನ ಅಡ್ಡಪರಿಣಾಮಗಳು ಮತ್ತು ಅದು ಮೂತ್ರಪಿಂಡದ ಕಲ್ಲುಗಳಿಗೆ ಹೇಗೆ ಕಾರಣವಾಗಬಹುದು ಎಂಬುದರ ಬಗೆಗಿನ ಸಂಪೂರ್ಣ ಮಾಹಿತಿ ಇಲ್ಲಿದೆ.
ಆಯುರ್ವೇದ ಮತ್ತು ಕರುಳಿನ ಆರೋಗ್ಯ ತರಬೇತುದಾರ ಡಾ. ಡಿಂಪಲ್ ಜಂಗ್ಡಾ ಇತ್ತೀಚೆಗೆ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಷಯವನ್ನು ಹಂಚಿಕೊಂಡಿದ್ದಾರೆ. ಅಲ್ಲಿ ಅವರು ಹೆಚ್ಚುವರಿ ಪಾಲಕ್ ಸ್ಮೂಥಿಗಳು ಮತ್ತು ಪಾಲಕ್ ರಸವನ್ನು ಸೇವಿಸುವುದರ ವಿರುದ್ಧ ಎಲ್ಲರಿಗೂ ಎಚ್ಚರಿಕೆ ನೀಡಿದ್ದಾರೆ. ಏಕೆಂದರೆ ಅವು ಮೂತ್ರಪಿಂಡದ ಕಲ್ಲುಗಳ ಬೆಳವಣಿಗೆಗೆ ಕಾರಣವಾಗಬಹುದು. ಹಾಗಾದರೆ ಈ ವಿಷಯವನ್ನು ನಂಬಲೂ ನಮ್ಮಲ್ಲಿ ಪುರಾವೆಗಳಿವೆಯಾ? ಇಲ್ಲಿದೆ ಮಾಹಿತಿ.
“ಪಾಲಕ್ ಕಬ್ಬಿಣದ ಶಕ್ತಿ ಕೇಂದ್ರವಾಗಿದೆ. ಆದರೆ ಇದು ಆಕ್ಸಲೇಟ್ ಎಂಬ ಸಂಯುಕ್ತದಿಂದ ಕೂಡಿದೆ, ಇದನ್ನು ದೇಹಕ್ಕೆ ಹೀರಿಕೊಳ್ಳಲು ಮತ್ತು ಜೀರ್ಣಿಸಿಕೊಳ್ಳಲು ತುಂಬಾ ಕಷ್ಟ. ಆದ್ದರಿಂದ, ಇತ್ತೀಚಿನ ದಿನಗಳಲ್ಲಿ ಮೂತ್ರಪಿಂಡದ ಕಲ್ಲುಗಳು ಮತ್ತು ಪಿತ್ತಕೋಶದ ಕಲ್ಲುಗಳ ರಚನೆಗೆ ಇದು ಪ್ರಮುಖ ಕಾರಣವಾಗಿದೆ” ಎಂದು ಡಾ. ಡಿಂಪಲ್ ಜಂಗ್ಡಾ ತಿಳಿಸಿದ್ದಾರೆ.
“ಒಂದು ಲೋಟ ಪಾಲಕ್ ರಸ ಅಥವಾ ಪಾಲಕ್ ಸ್ಮೂಥಿ ನಿಮ್ಮ ದೇಹದಲ್ಲಿರುವ ಕ್ಯಾಲ್ಸಿಯಂನನ್ನು ಹಿಡಿದಿಟ್ಟುಕೊಳ್ಳುತ್ತದೆ. ಇದರ ಪರಿಣಾಮವಾಗಿ ಮೂತ್ರಪಿಂಡಗಳು ಮತ್ತು ಪಿತ್ತಕೋಶದಲ್ಲಿ ಕ್ಯಾಲ್ಸಿಫೈಡ್ ಕಲ್ಲುಗಳು ರೂಪುಗೊಳ್ಳುತ್ತವೆ” ಎಂದು ಅವರು ಹೇಳಿದ್ದಾರೆ.
ಪಾಲಕ್ ತಿನ್ನುವುದು ಸಾಮಾನ್ಯವಾಗಿ ಆರೋಗ್ಯಕರ ಆಯ್ಕೆ ಎಂದು ಪರಿಗಣಿಸಲಾಗುತ್ತದೆ. ಏಕೆಂದರೆ ಅದು ಹಲವಾರು ಪ್ರಯೋಜನಗಳನ್ನು ಒಳಗೊಂಡಿದೆ. ಆದರೆ ಅದರ ಆಕ್ಸಲೇಟ್ ಸಂಯುಕ್ತದಿಂದಾಗಿ, ಅತಿಯಾದ ಸೇವನೆ ಅಥವಾ ಕೆಲವು ಪರಿಸ್ಥಿತಿಗಳು, ಸಂಭಾವ್ಯ ಅಡ್ಡಪರಿಣಾಮಗಳಿಗೆ ಕಾರಣವಾಗಬಹುದು. ಪಾಲಕ್ ತಿನ್ನುವುದರಿಂದ ಉಂಟಾಗುವ 4 ಅಡ್ಡಪರಿಣಾಮಗಳ ಬಗ್ಗೆ ಇಲ್ಲಿದೆ ಮಾಹಿತಿ.
ಇದನ್ನೂ ಓದಿ: 100 ಗ್ರಾಂ ಪಾಲಕ್‌ನಲ್ಲಿ ಏನೆಲ್ಲಾ ಇರುತ್ತದೆ ಎಂದು ತಿಳಿಯಿರಿ
ಪಾಲಕ್ ಸೊಪ್ಪಿನಲ್ಲಿ ಫೈಬರ್ ಸಮೃದ್ಧವಾಗಿದೆ, ಇದು ಮಧ್ಯಮ ಪ್ರಮಾಣದಲ್ಲಿ ಜೀರ್ಣಕ್ರಿಯೆಗೆ ಪ್ರಯೋಜನಕಾರಿಯಾಗಿದೆ. ಆದರೆ ಡಾ. ಜಂಗ್ಡಾ ಹೇಳುವ ಪ್ರಕಾರ “ಪಾಲಕ್ ರೂಪದಲ್ಲಿ ಅತಿಯಾದ ಫೈಬರ್ ಸೇವನೆಯು ಅಜೀರ್ಣ, ಗ್ಯಾಸ್, ಹೊಟ್ಟೆಯುಬ್ಬರ, ಮಲಬದ್ಧತೆ, ಅತಿಸಾರ ಮತ್ತು ಕಿರಿಕಿರಿಯ ಕರುಳಿನ ಸಿಂಡ್ರೋಮ್ಗೆ ಕಾರಣವಾಗಬಹುದು, ವಿಶೇಷವಾಗಿ ಸೂಕ್ಷ್ಮ ಜೀರ್ಣಾಂಗ ವ್ಯವಸ್ಥೆ ಹೊಂದಿರುವ ವ್ಯಕ್ತಿಗಳಲ್ಲಿ ಇದರ ಪರಿಣಾಮ ವಿಪರೀತವಾಗಿ ಕಾಡಬಹುದು.
ಪಾಲಕ್ ಸೊಪ್ಪಿನಲ್ಲಿ ಫೈಟೇಟ್ ಗಳಂತಹ ಸಂಯುಕ್ತಗಳಿವೆ, ಇದು ಕಬ್ಬಿಣ, ಕ್ಯಾಲ್ಸಿಯಂ ಮತ್ತು ಸತುವಿನಂತಹ ಅಗತ್ಯ ಖನಿಜಗಳನ್ನು ಹೀರಿಕೊಳ್ಳಲು ಅಡ್ಡಿಯಾಗುತ್ತದೆ. ಖನಿಜ ಕೊರತೆಯ ಅಪಾಯದಲ್ಲಿರುವವರಿಗೆ ಅಥವಾ ಕಳಪೆ ಪೋಷಕಾಂಶ ಹೀರಿಕೊಳ್ಳುವ ಅಥವಾ ಅಶಕ್ತ ವ್ಯಕ್ತಿಗಳಿಗೆ ಇದು ಕಳವಳಕಾರಿಯಾಗಿದೆ.
ಪಾಲಕ್ ಸೊಪ್ಪಿನಲ್ಲಿ ನೈಸರ್ಗಿಕವಾಗಿ ಕಂಡು ಬರುವ ಗೊಯಿಟ್ರೋಜೆನ್ಗಳು ಥೈರಾಯ್ಡ್ ಗ್ರಂಥಿಯ ಸಾಮಾನ್ಯ ಕಾರ್ಯನಿರ್ವಹಣೆಗೆ ಅಡ್ಡಿಪಡಿಸುತ್ತವೆ. ದೊಡ್ಡ ಪ್ರಮಾಣದಲ್ಲಿ, ಗೊಯಿಟ್ರೋಜೆನ್ಗಳು ಅಯೋಡಿನ್ ತೆಗೆದುಕೊಳ್ಳುವಿಕೆಗೆ ಅಡ್ಡಿಯಾಗಬಹುದು, ಹಾಗಾಗಿ ಇದು ಥೈರಾಯ್ಡ್ ಹಾರ್ಮೋನ್ ಉತ್ಪಾದನೆಯ ಮೇಲೆ ಪರಿಣಾಮ ಬೀರುತ್ತದೆ.
ಕೆಲವು ವ್ಯಕ್ತಿಗಳಿಗೆ ಪಾಲಕ್ ಸೊಪ್ಪಿನಿಂದ ಅಲರ್ಜಿ ಯಾಗಬಹುದು, ತುರಿಕೆ ಅಥವಾ ಉಸಿರಾಟದ ತೊಂದರೆಯಂತಹ ರೋಗಲಕ್ಷಣಗಳನ್ನು ಅನುಭವಿಸಬಹುದು. ಪಾಲಕ್ ಸೇವಿಸಿದ ನಂತರ ಯಾವುದೇ ಅಲರ್ಜಿ ಲಕ್ಷಣಗಳು ಕಾಣುತ್ತವೆಯಾ ಎಂದು ಮೇಲ್ವಿಚಾರಣೆ ಮಾಡುವುದು ಅತ್ಯಗತ್ಯ.
ಸಮತೋಲಿತ ಆಹಾರದ ಭಾಗವಾಗಿ ಮಿತವಾಗಿ ಸೇವಿಸಿದಾಗ ಪಾಲಕ್ ಹೆಚ್ಚು ಪೌಷ್ಟಿಕ ತರಕಾರಿಯಾಗಿದೆ, ಆದರೆ ಪಾಲಕ್ನ ಸೂಕ್ತ ಸೇವನೆಗಾಗಿ ಆರೋಗ್ಯ ವೃತ್ತಿಪರರನ್ನು ಸಂಪರ್ಕಿಸುವುದು ಸೂಕ್ತ.
ಜಂಗ್ಡಾ ಅವರ ಪ್ರಕಾರ, “ಯಾರಾದರೂ ಸಲಹೆ ನೀಡಿದರೂ ಸಹ, ಪಾಲಕ್ ರಸ ಅಥವಾ ಸ್ಮೂಥಿಗಳನ್ನು ಸೇವಿಸುವುದನ್ನು ತಪ್ಪಿಸುವುದು ಹೆಚ್ಚು ಸೂಕ್ತವಾಗಿದೆ. ಬದಲಾಗಿ, ಪಾಲಕ್ ಅನ್ನು ಚೆನ್ನಾಗಿ ಕುದಿಸಿ ಬಳಿಕ ಅದನ್ನು ಉಪಯೋಗಿಸಿ. ಈ ಅಡುಗೆ ವಿಧಾನಗಳು ಆಕ್ಸಲೇಟ್ ಮಟ್ಟವನ್ನು ಸುಮಾರು 30 ರಿಂದ 87 ಪ್ರತಿಶತದಷ್ಟು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ ಎಂದು ಸಂಶೋಧನೆ ಸೂಚಿಸುತ್ತದೆ. ಬೇಯಿಸಿದ ಅಥವಾ ಬ್ಲಾಂಚ್ ಮಾಡಿದ ನಂತರ, ನೀವು ಪಾಲಕ್ ಅನ್ನು ಪಲ್ಯ ಅಥವಾ ಪೇಸ್ಟ್ ರೂಪದಲ್ಲಿ ರುಚಿಕರವಾದ ತರಕಾರಿ ಸೈಡ್ ಡಿಶ್ ತಯಾರಿಸಲು ಬಳಸಬಹುದು ಅಥವಾ ಅದನ್ನು ಸೂಪ್ನಲ್ಲಿ ಸೇರಿಸಬಹುದು. ಇದರಿಂದ ಯಾವುದೇ ಅಡ್ಡಪರಿಣಾಮಗಳನ್ನು ಉಂಟಾಗುವುದಿಲ್ಲ.
ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಯಾವುದೇ ರೀತಿಯಲ್ಲಿ ಅರ್ಹ ವೈದ್ಯಕೀಯ ಅಭಿಪ್ರಾಯಕ್ಕೆ ಪರ್ಯಾಯವಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞರನ್ನು ಅಥವಾ ವೈದ್ಯರನ್ನು ಸಂಪರ್ಕಿಸಿ.
ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ