
ಆರೋಗ್ಯಕರ ಆಹಾರಗಳ ವಿಷಯಕ್ಕೆ ಬಂದರೆ, ಸೌತೆಕಾಯಿ (Cucumber) ನಮ್ಮ ದೇಹಕ್ಕೆ ತುಂಬಾ ಒಳ್ಳೆಯದು. ಇದು ಸಾಮಾನ್ಯವಾಗಿ ಎಲ್ಲರಿಗೂ ತಿಳಿದ ವಿಚಾರ. ವೈದ್ಯರು ಕೂಡ ಇದನ್ನು ನಿಯಮಿತವಾಗಿ ಸೇವನೆ ಮಾಡಿ ಎಂದು ಹೇಳುತ್ತಾರೆ. ಇದನ್ನು ಸಲಾಡ್ ಅಥವಾ ಜ್ಯೂಸ್ ರೂಪದಲ್ಲಿ ಸೇವನೆ ಮಾಡಬಹುದು. ಇದರಲ್ಲಿ ವಿಟಮಿನ್ ಬಿ, ವಿಟಮಿನ್ ಸಿ, ವಿಟಮಿನ್ ಕೆ ಮತ್ತು ಪೊಟ್ಯಾಸಿಯಮ್ ನಂತಹ ಅನೇಕ ಅಗತ್ಯ ಪೋಷಕಾಂಶಗಳು ಇದರಲ್ಲಿ ಕಂಡುಬರುತ್ತವೆ. ಇದಲ್ಲದೆ, ಫಿಸೆಟಿನ್ ನಂತಹ ವಸ್ತುಗಳು ಸೌತೆಕಾಯಿಯಲ್ಲಿ ಹೇರಳವಾಗಿವೆ. ಅವುಗಳಿಂದ ಅನೇಕ ಆರೋಗ್ಯ ಪ್ರಯೋಜನಗಳಿವೆ ಎಂದು ತಜ್ಞರು ಹೇಳುತ್ತಾರೆ. ಹಾಗಾದರೆ ಇದನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ಯಾವ ರೀತಿಯ ಪ್ರಯೋಜನಗಳನ್ನು ಪಡೆಯಬಹುದು? ಯಾರಿಗೆ ಒಳ್ಳೆಯದು ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.
ಮಧುಮೇಹದಿಂದ ಬಳಲುತ್ತಿರುವವರು ಹೆಚ್ಚಾಗಿ ಮೂತ್ರ ವಿಸರ್ಜನೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಅನುಭವಿಸುತ್ತಾರೆ. ಜೊತೆಗೆ ಆಗಾಗ ಮೂತ್ರ ವಿಸರ್ಜನೆ ಮಾಡುವುದರಿಂದ ದೇಹದಲ್ಲಿ ನಿರ್ಜಲೀಕರಣ ಉಂಟಾಗುತ್ತದೆ. ಈ ಸಮಸ್ಯೆಯನ್ನು ತಪ್ಪಿಸಲು, ಸೌತೆಕಾಯಿಯನ್ನು ನಿಯಮಿತವಾಗಿ ಸೇವಿಸಬೇಕು ಎಂದು ಆರೋಗ್ಯ ತಜ್ಞರು ಸೂಚಿಸುತ್ತಾರೆ.
ನೀವು ನಿಯಮಿತವಾಗಿ ಸೌತೆಕಾಯಿ ತಿನ್ನುವ ಅಭ್ಯಾಸವನ್ನು ಹೊಂದಿದ್ದರೆ, ಮಧ್ಯಾಹ್ನದ ಮೊದಲು ಅದನ್ನು ಸೇವಿಸುವುದು ಒಳ್ಳೆಯದು ಎಂದು ಪೌಷ್ಟಿಕ ತಜ್ಞರು ಹೇಳುತ್ತಾರೆ. ಸೌತೆಕಾಯಿಯಲ್ಲಿ 95% ನೀರಿನಾಂಶದಿಂದ ಆವೃತವಾಗಿದ್ದು ದೇಹದಿಂದ ವಿಷಕಾರಿ ವಸ್ತುಗಳನ್ನು ಹೊರಹಾಕಲು ಸಹಾಯ ಮಾಡುತ್ತದೆ.
ಸೌತೆಕಾಯಿಯಲ್ಲಿರುವ ನಾರಿನ ಅಂಶಗಳು ಜೀರ್ಣಕ್ರಿಯೆಯ ಪ್ರಕ್ರಿಯೆಯಲ್ಲಿ ಸಹಾಯ ಮಾಡುತ್ತವೆ. ಇದನ್ನು ತಿನ್ನುವುದರಿಂದ ಮಲಬದ್ಧತೆ ಮುಂತಾದ ಸಮಸ್ಯೆಗಳು ನಿವಾರಣೆಯಾಗುತ್ತವೆ. ರಾತ್ರಿ ಸೌತೆಕಾಯಿಗಳನ್ನು ತಿನ್ನದಿರಲು ಮುಖ್ಯ ಕಾರಣವೆಂದರೆ ಅದರಲ್ಲಿರುವ ಲೋಳೆಯ ಅಂಶ. ಮಧ್ಯಾಹ್ನ- ಸಂಜೆಯ ನಂತರ ನಮ್ಮ ದೈಹಿಕ ಚಟುವಟಿಕೆ ಕಡಿಮೆಯಾಗುವುದರಿಂದ ಆದಷ್ಟು ಮಧ್ಯಾಹ್ನದ ಮೊದಲು ಇವುಗಳ ಸೇವನೆ ಮಾಡುವುದು ಒಳ್ಳೆಯದು. ಅದಲ್ಲದೆ ರಾತ್ರಿ ಸಮಯದಲ್ಲಿ ಇವುಗಳ ಸೇವನೆ ಮಾಡಿದರೆ ಅದರಲ್ಲಿರುವ ಫೈಬರ್ ಅಂಶ ಜೀರ್ಣಿಸಿಕೊಳ್ಳಲು ಕಷ್ಟವಾಗುತ್ತದೆ. ಪರಿಣಾಮವಾಗಿ, ಹೊಟ್ಟೆ ಉಬ್ಬರ ಮತ್ತು ಅನಿಲದಂತಹ ಸಮಸ್ಯೆ ಹೆಚ್ಚಾಗುತ್ತದೆ. ನಿದ್ರೆ ಕೂಡ ಬರುವುದಿಲ್ಲ.
ಇದನ್ನೂ ಓದಿ: ಸೌತೆಕಾಯಿ ಬಗ್ಗೆ ನೀವು ತಿಳಿಯಲೇಬೇಕಾದ 8 ಸಂಗತಿಗಳಿವು
ದೀರ್ಘಕಾಲ ನೀರು ಕುಡಿಯುವುದನ್ನು ಮರೆತಾಗ, ಈ ಸೌತೆಕಾಯಿ ದೇಹದಲ್ಲಿನ ನೀರಿನ ಕೊರತೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ. ಚರ್ಮದ ಅಲರ್ಜಿ ಮತ್ತು ಬಿಸಿಲಿನಿಂದ ಉಂಟಾದ ಸುಟ್ಟಗಾಯಗಳಿಂದ ಪರಿಹಾರ ನೀಡುತ್ತದೆ. ಈ ಸಮಸ್ಯೆಗಳು ಬಂದಾಗ ಸೌತೆಕಾಯಿ ತಿನ್ನುವುದು ತುಂಬಾ ಒಳ್ಳೆಯದು. ಮಾತ್ರವಲ್ಲ ಇದು ಮೂತ್ರಪಿಂಡಗಳನ್ನು ಆರೋಗ್ಯವಾಗಿರಿಸುತ್ತದೆ. ಸೌತೆಕಾಯಿ ತಿನ್ನುವುದರಿಂದ ದೇಹದಿಂದ ವಿಷವನ್ನು ಹೊರಹಾಕಿ ದೇಹದ ವ್ಯವಸ್ಥೆಯು ಸರಾಗವಾಗಿ ಕಾರ್ಯನಿರ್ವಹಿಸಲು ಅನುವು ಮಾಡಿಕೊಡುತ್ತದೆ. ಸೌತೆಕಾಯಿ ರಸವನ್ನು ಕುಡಿಯುವುದರಿಂದ ಮೂತ್ರಪಿಂಡಗಳು ಕೂಡ ಆರೋಗ್ಯವಾಗಿರುತ್ತದೆ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:50 pm, Thu, 4 September 25