ಕೋವಿಡ್-19 ಇನ್ನು ಮುಂದೆ ಜಾಗತಿಕ ಆರೋಗ್ಯ ತುರ್ತುಸ್ಥಿತಿ ಅಲ್ಲ; ವಿಶ್ವ ಆರೋಗ್ಯ ಸಂಸ್ಥೆ
ಕೋವಿಡ್-19 ಇನ್ನು ಮುಂದೆ ಜಾಗತಿಕ ಆರೋಗ್ಯ ತುರ್ತುಸ್ಥಿತಿ ಅಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಶುಕ್ರವಾರ ಹೇಳಿದೆ.
ಲಂಡನ್: ಕೋವಿಡ್-19 ಇನ್ನು (Covid-19) ಮುಂದೆ ಜಾಗತಿಕ ಆರೋಗ್ಯ ತುರ್ತುಸ್ಥಿತಿ ಅಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ (WHO) ಶುಕ್ರವಾರ ಹೇಳಿದೆ. ಇದು 6.9 ದಶಲಕ್ಷಕ್ಕೂ ಹೆಚ್ಚು ಜನರನ್ನು ಬಲಿ ಪಡೆದ, ಜಾಗತಿಕ ಆರ್ಥಿಕತೆಯನ್ನು ಹಳ್ಳಹಿಡಿಸಿದ ಹಾಗೂ ಸಮುದಾಯಗಳ ವಿನಾಶಕ್ಕೆ ಕಾರಣವಾದ ಸಾಂಕ್ರಾಮಿಕ ರೋಗವೊಂದರ ಅಂತ್ಯದತ್ತ ಪ್ರಮುಖ ಹೆಜ್ಜೆಯಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. 2020ರ ಜನವರಿ 30ರಂದು ಕೋವಿಡ್ ಸಾಂಕ್ರಾಮಿಕವನ್ನು ಜಾಗತಿಕ ಆರೋಗ್ಯ ತುರ್ತುಸ್ಥಿತಿ ಎಂದು ಮೊದಲು ಘೋಷಣೆ ಮಾಡಲಾಗಿತ್ತು. ಆರೋಗ್ಯದ ಪರಿಸ್ಥಿತಿಯ ಮೇಲೆ ಅಂತರರಾಷ್ಟ್ರೀಯ ಸಮುದಾಯದ ಗಮನವನ್ನು ಕೇಂದ್ರೀಕರಿಸಲು ಈ ತುರ್ತುಸ್ಥಿತಿ ಘೋಷಣೆ ಸಹಾಯ ಮಾಡುತ್ತದೆ, ಜೊತೆಗೆ ಲಸಿಕೆಗಳು ಮತ್ತು ಚಿಕಿತ್ಸೆಗಳ ಸಹಯೋಗವನ್ನು ಹೆಚ್ಚಿಸುತ್ತದೆ. ಆ ಕಾರಣದಿಂದ ಅಂದು ಆರೋಗ್ಯ ತುರ್ತುಸ್ಥಿತಿ ಘೋಷಣೆ ಮಾಡಲಾಗಿತ್ತು.
ಆರೋಗ್ಯ ತುರ್ತು ಪರಿಸ್ಥಿತಿಯನ್ನು ವಾಪಸ್ ಪಡೆದಿರುವುದು ಕೋವಿಡ್ ವಿರುದ್ಧದ ಹೋರಾಟದಲ್ಲಿ ಬಲುದೊಡ್ಡ ಗೆಲುವಾಗಿದೆ. ಆದಾಗ್ಯೂ ಕೋವಿಡ್ ಅಸ್ತಿತ್ವದಲ್ಲಿ ಇದೆ. ಎಚ್ಚರಿಕೆಯಿಂದ ಇರುವುದು ಅಗತ್ಯ. ಹಾಗೆಂದು ತುರ್ತು ಪರಿಸ್ಥಿತಿ ಇಲ್ಲ ಎಂದು ಆರೋಗ್ಯ ಸಂಸ್ಥೆ ಹೇಳಿದೆ.
2021ರ ಜನವರಿಯಲ್ಲಿ ವಿಶ್ವದಾದ್ಯಂತ ಕೋವಿಡ್ನಿಂದ ವಾರಕ್ಕೆ ಒಂದು ಲಕ್ಷ ಜನ ಮೃತಪಡುತ್ತಿದ್ದರು. ಇದು 2023ರ ಏಪ್ರಿಲ್ 24ರ ವೇಳೆಗೆ ವಾರಕ್ಕೆ ಕೇವಲ 3,500ಕ್ಕೆ ಇಳಿಕೆಯಾಗಿದೆ ಎಂಬುದು ವಿಶ್ವ ಆರೋಗ್ಯ ಸಂಸ್ಥೆಯ ದತ್ತಾಂಶಗಳಿಂದ ತಿಳಿದುಬಂದಿದೆ.
ಇದನ್ನೂ ಓದಿ: ಸಾಂಕ್ರಾಮಿಕ ರೋಗ ಇನ್ನೂ ಮುಗಿದಿಲ್ಲ: ಕೋವಿಡ್ ಪ್ರಕರಣಗಳ ಬಗ್ಗೆ ನಿಗಾ ಇರಿಸುವಂತೆ 8 ರಾಜ್ಯಗಳಿಗೆ ಕೇಂದ್ರ ಸೂಚನೆ
2019 ರ ಡಿಸೆಂಬರ್ನಲ್ಲಿ ಚೀನಾದ ವುಹಾನ್ ನಗರದಲ್ಲಿ ಮೊದಲ ಬಾರಿ ಕೋವಿಡ್ ಸೋಂಕು ಪತ್ತೆಯಾಗಿತ್ತು. ನಂತರ ಶರವೇಗದಲ್ಲಿ ವಿಶ್ವದಾದ್ಯಂತ ಸೋಂಕು ಹರಡಿತ್ತು. 2020ರ ಮಾರ್ಚ್ ವೇಳೆಗೆ ಭಾರತದಲ್ಲಿಯೂ ಪರಿಸ್ಥಿತಿ ಹದಗೆಡಲು ಆರಂಭವಾಗಿತ್ತು. ಪರಿಣಾಮವಾಗಿ, ಸೋಂಕು ಹರಡುವುದನ್ನು ತಡೆಯುವುದಕ್ಕಾಗಿ 2020 ರ ಮಾರ್ಚ್ 22ರಂದು ಪ್ರಧಾನಿ ನರೇಂದ್ರ ಮೋದಿ ಅವರು ಮಾರ್ಚ್ 24ರಿಂದ ಅನ್ವಯವಾಗುವಂತೆ ಲಾಕ್ಡೌನ್ ಘೋಷಣೆ ಮಾಡಿದ್ದರು.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:18 pm, Fri, 5 May 23