ದಹಿ ಚುರಾ ಬಗ್ಗೆ ನೀವು ಕೇಳಿದ್ದೀರಾ? ಇದೊಂದು ಸಾಂಪ್ರದಾಯಿಕವಾಗಿ ಉಪಾಹಾರವಾಗಿದ್ದು, ವಿಶೇಷವಾಗಿ ಇದನ್ನು ಬಿಹಾರ, ಜಾರ್ಖಂಡ್ ಮತ್ತು ಉತ್ತರ ಪ್ರದೇಶದಲ್ಲಿ ಹೆಚ್ಚಾಗಿ ತಯಾರಿಸಲಾಗುತ್ತದೆ. ಈ ಖಾದ್ಯವು ರುಚಿಕರ ಮಾತ್ರವಲ್ಲ ತುಂಬಾ ಸರಳವಾಗಿದೆ. ತುಂಬಾ ಹಸಿವಾಗುತ್ತಿದ್ದು ಬೇಗ ಏನಾದರೂ ತಿನ್ನಬೇಕು ಜೊತೆಗೆ ಅದು ಆರೋಗ್ಯಕರವಾಗಿರಬೇಕು ಎನ್ನುವವರು ಈ ಖಾದ್ಯವನ್ನು ತಯಾರಿಸಬಹುದು. ಇದು ಕೇವಲ 10 ನಿಮಿಷಗಳಲ್ಲಿ ನಿಮ್ಮ ಹಸಿವನ್ನು ನೀಗಿಸುತ್ತದೆ. ಇದನ್ನು ದಹಿ ಚುರಾ, ದಹಿ ಚುಡಾ ಅಥವಾ ದಹಿ ಚಿಡ್ವಾ ಎಂದು ಕೂಡ ಕರೆಯಲಾಗುತ್ತದೆ. ಇದರ ತಯಾರಿಯ ವಿಧಾನ ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಹಾಗಾದರೆ ಇದನ್ನು ಬೇಗ ತಯಾರಿಸುವುದು ಹೇಗೆ? ಇದರಿಂದ ಸಿಗುವ ಆರೋಗ್ಯ ಪ್ರಯೋಜನಗಳೇನು? ಇಲ್ಲಿದೆ ಸಂಪೂರ್ಣ ಮಾಹಿತಿ.
ಇದನ್ನು ತಯಾರಿಸಲು ಮೊದಲು, ಪೋಹಾ ಅಥವಾ ಅವಲಕ್ಕಿಯನ್ನು ಚೆನ್ನಾಗಿ ತೊಳೆದುಕೊಳ್ಳಬೇಕು. ನಂತರ ಅದನ್ನು 2 ನಿಮಿಷಗಳ ಕಾಲ ನೀರಿನಲ್ಲಿ ನೆನೆಸಿಡಿ. ಬಳಿಕ ಒಂದು ಬಟ್ಟಲಿಗೆ ಮೊಸರನ್ನು ಸೇರಿಸಿಕೊಂಡು, ಅದಕ್ಕೆ ಪುಡಿ ಬೆಲ್ಲ ಹಾಕುವ ಮೂಲಕ ಚೆನ್ನಾಗಿ ಮಿಶ್ರಣ ಮಾಡಿ. ಬೆಲ್ಲ ಬೇಡದಿದ್ದರೆ ಇದಕ್ಕೆ ಸಕ್ಕರೆ ಅಥವಾ ಜೇನುತುಪ್ಪವನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಬಳಿಕ ಅದಕ್ಕೆ ನೆನೆಸಿದ ಪೋಹಾ ಸೇರಿಸಿ ಯಾವುದೇ ರೀತಿಯ ಗಂಟುಗಳಿಲ್ಲದಂತೆ ಮಿಶ್ರಣ ಮಾಡಿರಿ. ಹೆಚ್ಚುವರಿ ಪರಿಮಳಕ್ಕಾಗಿ ಕತ್ತರಿಸಿದ ಬಾದಾಮಿ, ಗೋಡಂಬಿ ಮತ್ತು ಒಣದ್ರಾಕ್ಷಿಯನ್ನು ಸೇರಿಸಿ. ನಿಮಗೆ ಬೇಕಾದರೆ ಇವುಗಳಿಗೆ ನೀವು ಹಣ್ಣುಗಳನ್ನು ಸಹ ಸೇರಿಸಬಹುದು. ಮಿಶ್ರಣವನ್ನು ಸರ್ವಿಂಗ್ ಬೌಲ್ ಗೆ ವರ್ಗಾಯಿಸಿ, ಕತ್ತರಿಸಿದ ಬಾದಾಮಿಯಿಂದ ಅಲಂಕರಿಸಿ.
ದಹಿ ಚುರಾ ಸೇವನೆ ಮಾಡುವುದರಿಂದ ಸಿಗುವ ಪ್ರಯೋಜನಗಳು?
ನಿಮ್ಮ ಉಪಾಹಾರದಲ್ಲಿ ನಿಯಮಿತವಾಗಿ ಈ ದಹಿ ಚುರಾ ಸೇರಿಸಿದರೆ ವಿವಿಧ ರೀತಿಯ ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು.
ಮಲಬದ್ಧತೆಯನ್ನು ನಿವಾರಿಸುತ್ತದೆ: ಬೆಳಗಿನ ಉಪಾಹಾರದಲ್ಲಿ ದಹಿ ಚುರಾ ಸೇವನೆ ಮಾಡುವುದರಿಂದ ಜೀರ್ಣಕ್ರಿಯೆ ಹೆಚ್ಚಾಗುತ್ತದೆ. ಏಕೆಂದರೆ ಇದರಲ್ಲಿರುವ ಮೊಸರು ಜೀರ್ಣಕ್ರಿಯೆಗೆ ಸಹಾಯ ಮಾಡುವ ಪ್ರಯೋಜನಕಾರಿ ಬ್ಯಾಕ್ಟೀರಿಯಾವನ್ನು ಹೊಂದಿರುತ್ತದೆ. ಅಲ್ಲದೆ ಈ ಖಾದ್ಯದಲ್ಲಿ ಬಳಸಲಾದ ಅವಲಕ್ಕಿಯು ಮಲಬದ್ಧತೆಯನ್ನು ನಿವಾರಿಸುತ್ತದೆ.
ತೂಕ ಕಡಿಮೆ ಮಾಡಲು ಸಹಾಯ ಮಾಡುತ್ತದೆ: ನೀವು ತೂಕ ಇಳಿಸುವ ಪ್ರಕ್ರಿಯೆಯಲ್ಲಿದ್ದರೆ ಈ ಖಾದ್ಯ ಅದಕ್ಕೆ ಸಹಾಯ ಮಾಡುತ್ತದೆ. ಇದರಲ್ಲಿರುವ ಫೈಬರ್ ಮತ್ತು ಕಾರ್ಬೋಹೈಡ್ರೇಟ್ ಅಂಶವು ದೀರ್ಘಕಾಲದ ವರೆಗೆ ಹೊಟ್ಟೆ ತುಂಬಿರುವಂತೆ ಮಾಡುತ್ತದೆ, ಜೊತೆಗೆ ಪ್ರೋಟೀನ್ ಅತಿಯಾಗಿ ತಿನ್ನುವುದನ್ನು ತಡೆಯುತ್ತದೆ.
ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ: ನಿಯಮಿತವಾಗಿ ದಹಿ ಚುರಾ ಸೇವನೆ ಮಾಡುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಅಲ್ಲದೆ ಇದು ಪ್ರೋಟೀನ್, ಕಬ್ಬಿಣ, ಕಾರ್ಬೋಹೈಡ್ರೇಟ್ ಮತ್ತು ಫೈಬರ್ ನಂತಹ ಅಗತ್ಯ ಪೋಷಕಾಂಶಗಳನ್ನು ಒದಗಿಸುತ್ತದೆ.
ಶಕ್ತಿಯುತ ಆಹಾರ: ಹೆಚ್ಚಿನ ಶಕ್ತಿ ಇರುವ ಕಡಿಮೆ ಕ್ಯಾಲೊರಿ ಇರುವ ಉಪಾಹಾರ ಬಯಸುವವರಿಗೆ ಈ ಖಾದ್ಯವು ಉತ್ತಮವಾಗಿದೆ, ಇದು ನಿಮ್ಮನ್ನು ದಿನವಿಡೀ ಶಕ್ತಿಯುತವಾಗಿರಿಸುತ್ತದೆ.
ಮೂಳೆಯ ಆರೋಗ್ಯಕ್ಕೆ ಒಳ್ಳೆಯದು: ಇದರಲ್ಲಿರುವ ಕ್ಯಾಲ್ಸಿಯಂ ಅಂಶವು ಮೂಳೆಯ ಆರೋಗ್ಯಕ್ಕೆ ಒಳ್ಳೆಯದು, ಇದು ಮೂಳೆಗಳನ್ನು ಬಲಪಡಿಸುತ್ತದೆ.
ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ: ನಮ್ಮ ಆರೋಗ್ಯಕ್ಕೆ ಕೆಟ್ಟ ಕೊಲೆಸ್ಟ್ರಾಲ್ ಹಾನಿಕಾರಕವಾಗಬಹುದು, ಆದ್ದರಿಂದ ದೇಹದಲ್ಲಿ ಅದನ್ನು ನಿಯಂತ್ರಿಸುವುದು ಅತ್ಯಗತ್ಯ. ಈ ದಹಿ ಚುರಾ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ, ಆ ಮೂಲಕ ಹೃದಯಾಘಾತದ ಅಪಾಯವನ್ನು ಕಡಿಮೆ ಮಾಡುತ್ತದೆ.
ರಕ್ತಹೀನತೆಯ ಅಪಾಯವನ್ನು ಕಡಿಮೆ ಮಾಡುತ್ತದೆ: ದೇಹದಲ್ಲಿ ಕಬ್ಬಿಣದ ಕೊರತೆಯು ರಕ್ತಹೀನತೆಗೆ ಕಾರಣವಾಗಬಹುದು, ಹಾಗಾಗಿ ಬೆಲ್ಲದೊಂದಿಗೆ ಬೆರೆಸಿದ ಮೊಸರನ್ನು ಸೇವಿಸುವುದರಿಂದ ರಕ್ತಹೀನತೆಯ ಅಪಾಯವನ್ನು ಕಡಿಮೆ ಮಾಡಬಹುದಾಗಿದೆ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ