ಕೊರೊನಾ ಮೊದಲನೇ ಅಲೆ ಹಾಗೂ ಎರಡನೇ ಅಲೆಯ ಕೊವಿಡ್-19 ರೋಗಲಕ್ಷಣಗಳಲ್ಲಿ ಹಾಗೂ ರೋಗ ಉಂಟುಮಾಡುವ ಪರಿಣಾಮ ಇತ್ಯಾದಿಗಳಲ್ಲಿ ಹಲವು ಬದಲಾವಣೆಗಳನ್ನು ಗುರುತಿಸಲಾಗಿತ್ತು. ಅದರಂತೆ, ಡೆಲ್ಟಾ ರೂಪಾಂತರಿ ಕೊರೊನಾ ರೋಗಲಕ್ಷಣಗಳ ಬಗ್ಗೆ ಇಲ್ಲಿ ತಿಳಿಸಲಾಗಿದೆ. ಡೆಲ್ಟಾ ಸ್ವರೂಪದ ಕೊವಿಡ್ ರೋಗ ಲಕ್ಷಣಗಳು ಈ ಮೊದಲು ಸೂಚಿಸಿದ ರೋಗಲಕ್ಷಣದಂತೆಯೇ ಇರಬೇಕು ಎಂದಿಲ್ಲ ಎಂದು ತಿಳಿಸಲಾಗಿದೆ. ಆಸ್ಟ್ರೇಲಿಯಾದ ಗ್ರಿಫಿತ್ ವಿಶ್ವವಿದ್ಯಾಲಯ ನಡೆಸಿರುವ ಅಧ್ಯಯನದಲ್ಲಿ ಈ ವಿಚಾರ ತಿಳಿದುಬಂದಿದೆ.
ವೈರಾಲಜಿ ಹಾಗೂ ಇನ್ಫೆಕ್ಷಿಯಸ್ ಡಿಸೀಸಸ್ ಸಂಶೋಧನಾ ವಿಭಾಗದ ಮುಖ್ಯಸ್ಥ ಲಾರಾ ಹರ್ರೆರೊ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಯುನೈಟೆಡ್ ಕಿಂಗ್ಡಮ್ನಿಂದ ಸಂಗ್ರಹಿಸಿರುವ ಮಾದರಿಗಳ ಅನ್ವಯ ಈ ಅಧ್ಯಯನ ನಡೆಸಲಾಗಿದೆ. ಇಲ್ಲಿ ಪ್ರತ್ಯೇಕವಾಗಿ ಡೆಲ್ಟಾ ಸೋಂಕಿತರನ್ನು ಮಾತ್ರ ಗಣನೆಗೆ ತೆಗೆದುಕೊಂಡು ಅಧ್ಯಯನ ನಡೆಸಿಲ್ಲ. ಆದರೆ, ಇಂಗ್ಲೆಂಡ್ನಲ್ಲಿ ಕೂಡ ಡೆಲ್ಟಾ ಕೊರೊನಾ ಪ್ರಕರಣವೇ ಅಧಿಕವಾಗಿ ಇರುವುದರಿಂದ ಬಹುತೇಕ ಡೆಲ್ಟಾ ರೂಪಾಂತರಿಯ ಲಕ್ಷಣಗಳ ವ್ಯತ್ಯಾಸಗಳನ್ನು ಕಂಡುಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. ಭಾರತದಲ್ಲಿ ಕೂಡ ಡೆಲ್ಟಾ ಮಾದರಿ ಕೊರೊನಾ ವೈರಾಣು ಎರಡನೇ ಅಲೆಯ ಮುಖ್ಯ ಪಾತ್ರ ವಹಿಸಿತ್ತು.
ಡೆಲ್ಟಾ ವೈರಸ್ 2020ರಲ್ಲಿ ಭಾರತದಲ್ಲಿ ಮೊದಲು ಕಾಣಿಸಿಕೊಂಡಿತ್ತು. ಆ ಬಳಿಕ, ಇದು ಸುಮಾರು 100 ದೇಶಗಳಲ್ಲಿ ಹರಡಿದೆ. ಈ ರೂಪಾಂತರಿ ವೈರಸ್, ಆಲ್ಫಾ ರೂಪಾಂತರಿಗಿಂತ ಹೆಚ್ಚು ಶಕ್ತಿಯುತ ಹಾಗೂ ಹೆಚ್ಚು ವೇಗವಾಗಿ ಹರಡಬಲ್ಲುದು ಎಂದು ನಂಬಲಾಗಿದೆ.
ಡೆಲ್ಟಾ ರೂಪಾಂತರಿ ಕೊರೊನಾ ಲಕ್ಷಣಗಳಲ್ಲಿ ವ್ಯತ್ಯಾಸವೇನು?
ಮೂಗು ತುರಿಕೆ ಅಥವಾ ಮೂಗಿನಲ್ಲಿ ಕಿರಿಕಿರಿ ಉಂಟಾಗುವುದು ಡೆಲ್ಟಾ ಪ್ರಬೇಧದ ಕೊರೊನಾದ ಮುಖ್ಯ ಲಕ್ಷಣ ಆಗಿರಬಹುದು. ಈ ಮೊದಲು ಸಾಮಾನ್ಯ ಎನಿಸಿಕೊಂಡಿದ್ದ ವಾಸನೆ ಇಲ್ಲವಾಗುವ ಲಕ್ಷಣ, ಡೆಲ್ಟಾ ರೂಪಾಂತರಿ ಕೊರೊನಾದಲ್ಲಿ ಕಾಣಿಸುವುದು ವಿರಳ. ಡೆಲ್ಟಾ ರೂಪಾಂತರಿ ಕೊರೊನಾ ವೈರಸ್ ಮುಖ್ಯ ಲಕ್ಷಣಗಳೇನು?
-ತಲೆನೋವು
-ಗಂಟಲು ನೋವು
-ಮೂಗು ಉರಿ, ಮೂಗಿನಲ್ಲಿ ಕಿರಿಕಿರಿ
-ಜ್ವರ
-ಕೆಮ್ಮು ಮತ್ತು ಕಫ
ರೋಗ ಲಕ್ಷಣದಲ್ಲಿ ಬದಲಾವಣೆ ಕಂಡುಬಂದದ್ದು ಏಕೆ?
ರೋಗಲಕ್ಷಣಗಳ ಈ ಬದಲಾವಣೆಯ ಹಿಂದೆ ಹಲವು ಸಾಧ್ಯತೆಗಳನ್ನು ಅಂದಾಜಿಸಲಾಗಿದೆ. ವೈರಸ್ನ ರೂಪಾಂತರ, ಬೆಳವಣಿಗೆ, ಮನುಷ್ಯರ ರೋಗನಿರೋಧಕ ಶಕ್ತಿ ಇತ್ಯಾದಿಗಳು ಕಾರಣವಾಗಿರಬಹುದು ಎಂದು ಹೇಳಲಾಗಿದೆ. ಭಾರತದಲ್ಲಿ ಏಪ್ರಿಲ್, ಮೇ ತಿಂಗಳಲ್ಲಿ ಬಹಳ ಸಂಕಷ್ಟ ಸೃಷ್ಟಿಮಾಡಿದ್ದ ಕೊರೊನಾ ಎರಡನೇ ಅಲೆ ಹಾಗೂ ಡೆಲ್ಟಾ ರೂಪಾಂತರಿ ವೈರಸ್, ದೇಶದ 174 ಜಿಲ್ಲೆಗಳಲ್ಲಿ ಕಂಡುಬಂದಿತ್ತು. ಆ ಬಳಿಕ, ಇದೀಗ ಡೆಲ್ಟಾದ ರೂಪಾಂತರಿ ಡೆಲ್ಟಾ ಪ್ಲಸ್ ವೈರಾಣು ಪತ್ತೆಯಾಗಿದೆ.
ಇದನ್ನೂ ಓದಿ: Explained: ಕೊವಿಡ್ ಆ್ಯಂಟಿಬಾಡಿ ಟೆಸ್ಟ್ ಎಂದರೇನು? ಆ್ಯಂಟಿಬಾಡಿ ಫಲಿತಾಂಶ ಪಾಸಿಟಿವ್, ನೆಗೆಟಿವ್ ಎಂದರೇನು? ಇಲ್ಲಿದೆ ವಿವರ
Published On - 5:22 pm, Sat, 3 July 21