
ಪ್ರತಿಯೊಂದು ಭಾರತೀಯ ಅಡುಗೆಯಲ್ಲೂ ಮೆಂತ್ಯೆ ಕಾಳುಗಳನ್ನು ಬಳಸಲಾಗುತ್ತದೆ. ಅಲ್ಲದೆ ಮೆಂತ್ಯ ಸೊಪ್ಪಿನಿಂದಲೂ ವಿವಿಧ ಬಗೆಯ ಅಡುಗೆಗಳನ್ನು ತಯಾರಿಸಲಾಗುತ್ತದೆ. ಮೆಂತ್ಯೆಬೀಜ ವಿವಿಧ ಉತ್ಕರ್ಷಣ ನಿರೋಧಕಗಳು ಮತ್ತು ಖನಿಜಗಳಲ್ಲಿ ಸಮೃದ್ಧವಾಗಿದೆ. ಅದಕ್ಕಾಗಿಯೇ ಅವುಗಳನ್ನು ಹಿಂದಿನಿಂದಲೂ ಆಯುರ್ವೇದ ಔಷಧಿ ಮತ್ತು ಮನೆಮದ್ದುಗಳಲ್ಲಿ ಉಪಯೋಗಿಸಲಾಗುತ್ತಿದೆ. ಮೆಂತ್ಯ ಬೀಜವು ನೋಡಲು ಸಾಸಿವೆ ಗಾತ್ರದಷ್ಟಿದ್ದರೂ ಸಹ ಇದರ ಸೇವನೆಯಿಂದ ಹಲವಾರು ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು. ಅದರಲ್ಲೂ ಮೆಂತ್ಯಕಾಳುಗಳು ಮಹಿಳೆಯರ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ.
ವಯಸ್ಸಾದಂತೆ ಮಹಿಳೆಯರ ಋತುಬಂಧವು ನಿಂತುಹೋಗುತ್ತದೆ. ಇದರ ನಂತರ ಹೆಚ್ಚಿನ ಮಹಿಳೆಯರಲ್ಲಿ ಕೀಲುನೋವಿನ ಸಮಸ್ಯೆ ಹಾಗೂ ಮೂಳೆಗಳ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಇಂತಹ ಪರಿಸ್ಥಿತಿಯಲ್ಲಿ ನಿಯಮಿತವಾಗಿ ಮೆಂತ್ಯ ಅಥವಾ ಮೆಂತ್ಯ ನೀರನ್ನು ಸೇವಿಸಿದರೆ ಈ ಸಮಸ್ಯೆ ಕಡಿಮೆಯಾಗುತ್ತದೆ. ಮೆಂತ್ಯವು ಉತ್ಕರ್ಷಣ ನಿರೋಧಕ ಮತ್ತು ಊರಿಯೂತ ವಿರೋಧಿ ಗುಣಲಕ್ಷಣಗಳಿಂದ ಸಮೃದ್ಧವಾಗಿದೆ. ಇದು ಮೂಳೆಗಳನ್ನು ಬಲಪಡಿಸಲು ಮತ್ತು ಉರಿಯೂತದಿಂದ ಉಂಟಾಗುವ ಕೀಲು ನೋವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಮೆಂತ್ಯವು ಮೂಳೆಗಳನ್ನು ಬಲವಾಗಿಡಲು ಒಂದು ಮೂಲಿಕೆಯಾಗಿ ಕಾರ್ಯನಿರ್ವಹಿಸುತ್ತದೆ.
ಮೆಂತ್ಯ ಉರಿಯೂತದ ವಿರೋಧಿ ಗುಣಲಕ್ಷಣವನ್ನು ಹೊಂದಿದೆ. ಅಲ್ಲದೆ ಮೆಂತ್ಯವು ಸಪೋನಿನ್ ಮತ್ತು ಡಯೋಸ್ಜೆನಿನ್ ಅಂಶವನ್ನು ಹೊಂದಿದೆ. ಇದು ದೇಹದಲ್ಲಿ ಸ್ಟೀರಾಯ್ಡ್ ಮತ್ತು ಈಸ್ಟ್ರೋಜೆನ್ಗಳಂತೆ ಕಾರ್ಯನಿರ್ವಹಿಸುತ್ತದೆ. ಈ ಕಾರಣದಿಂದ ಇದು ಮುಟ್ಟಿನ ಸೆಳೆತದಿಂದ ಪರಿಹಾರವನ್ನು ನೀಡುತ್ತದೆ ಮತ್ತು ಕಿಬ್ಬೊಟ್ಟೆಯ ನೋವನ್ನು ನಿವಾರಿಸುತ್ತದೆ. ಇದಕ್ಕಾಗಿ ಋತುಸ್ರಾವ ಪ್ರಾರಂಭವಾಗುವ ಎರಡು ಮೂರು ದಿನಗಳ ಮೊದಲು ಮುಂಜಾನೆ ಖಾಲಿಹೊಟೆಯಲ್ಲಿ ಮೆಂತ್ಯ ನೀರನ್ನು ಕುಡಿಯಿರಿ.
ಮಗುವಿನ ಜನನದ ನಂತರ ಅನೇಕ ಬಾರಿ, ಕೆಲವು ಮಹಿಳೆಯರು ಎದೆಹಾಲಿನ ಕೊರತೆಯನ್ನು ಎದುರಿಸಬೇಕಾಗುತ್ತದೆ. ಇದರಿಂದ ಶಿಶುವಿಗೆ ಸಾಕಷ್ಟು ಪ್ರಮಾಣದಲ್ಲಿ ಎದೆಹಾಲು ಉಣಿಸಲು ಸಾಧ್ಯವಾಗುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಮೆಂತ್ಯ ಪುಡಿಯನ್ನು ತಿನ್ನುವುದರಿಂದ ಈ ಸಮಸ್ಯೆಯಿಂದ ಮುಕ್ತಿಪಡೆಯಬಹುದು. ವಾಸ್ತವವಾಗಿ ಮೆಂತ್ಯ ಸೇವನೆಯು ದೇಹದಲ್ಲಿ ಈಸ್ಟ್ರೋಜೆನ್ ಉತ್ಪಾದನೆಯನ್ನು ಹೆಚ್ಚಿಸುತ್ತದೆ. ಈ ಅಂಶ ಎದೆಹಾಲಿನ ಉತ್ಪಾದನೆಯನ್ನು ಹೆಚ್ಚಿಸಲು ಸಹಕಾರಿಯಾಗಿದೆ.
ಮೆಂತ್ಯ ಬೀಜದಲ್ಲಿ ಕಬ್ಬಿಣಾಂಶ ಹೆಚ್ಚಿರುತ್ತದೆ. ಆದ್ದರಿಂದ ಗರ್ಭಾವಸ್ಥೆಯಲ್ಲಿ ಇದರ ಸೇವನೆಯು ತಾಯಿ ಮತ್ತು ಮಗುವಿನ ಆರೋಗ್ಯಕ್ಕೆ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ.
ಮೆಂತ್ಯದಲ್ಲಿರುವ ಡಯೋಸ್ಜೆನಿನ್ ಮಹಿಳೆಯರ ದೇಹದಲ್ಲಿ ಹಾರ್ಮೋನು ಸಮತೋಲನವನ್ನು ಕಾಪಾಡುತ್ತದೆ. ಇದು ಹಾರ್ಮೋನುಗಳಿಗೆ ಸಂಬಂಧಿಸಿದ ಸಮಸ್ಯೆಯನ್ನು ನಿವಾರಿಸಿ ಆರೋಗ್ಯವನ್ನು ಸುಧಾರಿಸುತ್ತದೆ.
ಇದನ್ನೂ ಓದಿ: ಮಧುಮೇಹಕ್ಕೆ ಮೆಂತ್ಯ ಬೀಜಗಳು: ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಯಾವ ಪ್ರಮಾಣದಲ್ಲಿ ಮೆಂತ್ಯ ಬೀಜ ಸೇವಿಸಬೇಕು?
ತಜ್ಞರ ಪ್ರಕಾರ, ಮೆಂತ್ಯೆ ವಿಟಮಿನ್ ಕೆ ಮತ್ತು ವಿಟಮಿನ್ ಸಿ ಯಿಂದ ಸಮೃದ್ಧವಾಗಿದೆ. ಇದು ತ್ವಚೆಯ ಕೊಳೆಯನ್ನು ಹೋಗಲಾಡಿಸುವುದರ ಜೊತೆಗೆ ಕಣ್ಣಿನ ಕೆಳಗಿನ ಕಪ್ಪು ವರ್ತುಲಗಳನ್ನು ಸಹ ತೊಡೆದುಹಾಕಲು ಸಹಕಾರಿ. ಬೆಳಗ್ಗೆ ಮೆಂತ್ಯ ನೀರನ್ನು ಕುಡಿದರೆ ತ್ವಚೆಗೆ ಸಂಬಂಧಿಸಿದ ಸಮಸ್ಯೆಗಳಿಂದ ದೂರವಿರಬಹುದು.
ಮೆಂತ್ಯ ಬೀಜದ ನೀರನ್ನು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸುವುದು ಸೂಕ್ತವಾಗಿದೆ. ಒಂದು ಚಮಚದಷ್ಟು ಮೆಂತ್ಯ ಬೀಜಗಳನ್ನು ಒಂದು ಲೋಟ ನೀರಿನಲ್ಲಿ ಹಾಕಿ ರಾತ್ರಿಯಿಡಿ ನೆನೆಹಾಕಿ. ನಂತರ ಬೆಳಗ್ಗೆ ಆ ನೀರನ್ನು ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡಿ. ಅದರ ಕಹಿ ಅಂಶದಿಂದ ಆ ನೀರನ್ನು ಸೇವನೆ ಮಾಡಲು ಸಾಧ್ಯವಾಗದಿದ್ದರೆ ಅದಕ್ಕೆ ಸ್ವಲ್ಪ ಜೇನು ತುಪ್ಪ ಮತ್ತು ನಿಂಬೆರಸವನ್ನು ಬೆರೆಸಿ ಕುಡಿಯಬಹುದು.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ