
ಕಾಲುಗಳು ದೇಹದ ಭಾರ ಹೊರುವ ಕೆಲಸವನ್ನ ಮಾತ್ರ ಮಾಡುವುದಿಲ್ಲ, ನಮ್ಮ ಆರೋಗ್ಯ (Health) ಹೇಗಿದೆ ಎಂದು ತಿಳಿಸುವ ಕೆಲಸವನ್ನೂ ಕೂಡ ಮಾಡುತ್ತವೆ. ಅದರಲ್ಲಿಯೂ ನಮ್ಮ ಕಿಡ್ನಿಯ ಆರೋಗ್ಯ (Kidney Health) ಹೇಗಿದೆ ಎನ್ನುವುದನ್ನು ಕಾಲುಗಳಲ್ಲಿ ಉಂಟಾಗುವ ಕೆಲವು ಬದಲಾವಣೆಗಳ ಮೂಲಕವೇ ಹೇಳಬಹುದು. ಅತಿಯಾದ ಆಯಾಸ, ವಯೋ ಸಹಜ ಆರೋಗ್ಯ ಸಮಸ್ಯೆಗಳ ಸಂದರ್ಭದಲ್ಲೂ ಕಾಲುಗಳಲ್ಲಿ ಬದಲಾವಣೆ ಕಂಡುಬರುತ್ತದೆಯಾದರೂ ಇವುಗಳೆಲ್ಲದರ ಲಕ್ಷಣವನ್ನು ಬೇರೆ ಬೇರೆಯಾಗಿ ಗುರುತಿಸಬಹುದಾಗಿದೆ. ಹಾಗಾದರೆ ನಮ್ಮ ಕಾಲಿನಲ್ಲಿ ಕಂಡು ಬರುವ ಯಾವ ಲಕ್ಷಣಗಳು (Signs in Your Legs) ಕಿಡ್ನಿಯ ಆರೋಗ್ಯವನ್ನು ತಿಳಿಸುತ್ತದೆ ಎಂಬುದನ್ನು ತಿಳಿದುಕೊಳ್ಳಿ ಸಂಪೂರ್ಣ ಮಾಹಿತಿ ಇಲ್ಲಿದೆ.
ಪಾದದ ಭಾಗದಲ್ಲಿ ಊತ, ಅದರಲ್ಲಿಯೂ ಹೆಚ್ಚಾಗಿ ಸಂಜೆಯ ಸಮಯದಲ್ಲಿ ಕಂಡು ಬರುವ ಈ ಲಕ್ಷಣ ಕಿಡ್ನಿಯ ಆರೋಗ್ಯ ಹದಗೆಟ್ಟಿದೆ ಎಂಬುದರ ಸೂಚನೆಯಾಗಿದೆ. ಮೂತ್ರಪಿಂಡವು ದೇಹದ ವಿವಿಧ ದ್ರವಗಳ ಪರಿಮಾಣ, ದ್ರವದ ಆಸ್ಮೋಲಾಲಿಟಿ, ಆಸಿಡ್- ಬೇಸ್ ಸಮತೋಲನ ಮಾಡುವ ಕೆಲಸವನ್ನ ಪ್ರಮುಖವಾಗಿ ನಿರ್ವಹಿಸುತ್ತವೆ. ಹೀಗಾಗಿ ಮೂತ್ರಪಿಂಡ ಸಂಬಂಧಿತ ಆರೋಗ್ಯ ಸಮಸ್ಯೆಗಳು ಉಂಟಾದಾಗ ಈ ದ್ರವವು ಪಾದದ ಭಾಗದಲ್ಲಿ ಸಂಗ್ರಹವಾಗಿ ಊತ ಉಂಟಾಗುವ ಸಾಧ್ಯತೆ ಹೆಚ್ಚಾಗುತ್ತದೆ.
ಕಾಲಿನ ಭಾಗದಲ್ಲಿ ಚರ್ಮದ ಅತಿಯಾದ ತುರಿಕೆಯೂ ಕಿಡ್ನಿ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂಬ ಸೂಚನೆಯಾಗಿರಬಹುದು. ಮೂತ್ರಪಿಂಡದ ಸಮಸ್ಯೆ ಇದ್ದಲ್ಲಿ ಅದು ರಕ್ತದಲ್ಲಿ ತ್ಯಾಜ್ಯ ಸಂಗ್ರಹಕ್ಕೆ ಕಾರಣವಾಗುವ ಸಾಧ್ಯತೆ ಇದೆ. ರಕ್ತ ಸರಿಯಾಗಿ ಫಿಲ್ಟರ್ ಆಗದ ಕಾರಣ ಚರ್ಮದ ತುರಿಕೆ ಉಂಟಾಗಬಹುದು.
ರಾತ್ರಿ ವೇಳೆ ನಿದ್ದೆಯ ಸಮಯದಲ್ಲಿ ಅಥವಾ ವಿಶ್ರಾಂತಿ ಸಂದರ್ಭ ಹಠಾತ್ ಸ್ನಾಯು ಸೆಳೆತ, ಕಾಲುಗಳಲ್ಲಿ ಸೆಳೆತವೂ ಕಿಡ್ನಿಯ ಆರೋಗ್ಯ ಸರಿಯಿಲ್ಲ ಎಂಬುದರ ಸೂಚನೆಯಾಗಿದೆ. ಸ್ನಾಯುಗಳು ಸರಿಯಾಗಿ ಕಾರ್ಯನಿರ್ವಹಿಸಲು ಪೊಟ್ಯಾಸಿಯಮ್, ಕ್ಯಾಲ್ಸಿಯಂ ಮತ್ತು ಸೋಡಿಯಂನಂತಹ ಖನಿಜಗಳ ಸಮತೋಲನ ದೇಹಕ್ಕೆ ಅಗತ್ಯವಿದೆ. ಮೂತ್ರಪಿಂಡಗಳು ರಕ್ತವನ್ನು ಸರಿಯಾಗಿ ಫಿಲ್ಟರ್ ಮಾಡದಿದ್ದಾಗ ಇಂತಹ ಸಮಸ್ಯೆ ಉಂಟಾಗಬಹುದು.
ಮೂತ್ರಪಿಂಡದ ಸಮಸ್ಯೆ ಉಂಟಾದಾಗ ಕಾಲಿನ ಭಾಗದಲ್ಲಿ ಚರ್ಮದ ಬಣ್ಣವೂ ಬದಲಾಗುವ ಸಾಧ್ಯತೆ ಇರುತ್ತದೆ. ಮೂತ್ರಪಿಂಡದ ಆರೋಗ್ಯ ಮತ್ತು ರಕ್ತ ಪರಿಚಲನೆ ಪರಸ್ಪರ ಸಂಬಂಧ ಹೊಂದಿವೆ. ಮೂತ್ರಪಿಂಡದ ಕಾರ್ಯದಲ್ಲಿನ ಇಳಿಕೆ ಕೆಲವೊಮ್ಮೆ ರಕ್ತದ ಹರಿವಿನ ಮೇಲೆ ಪರಿಣಾಮ ಬೀರುತ್ತದೆ, ಇದರಿಂದಾಗಿ ಪಾದಗಳಿಗೆ ಆಮ್ಲಜನಕ ತಲುಪುವುದು ಕಡಿಮೆಯಾಗುವ ಕಾರಣ ಚರ್ಮದ ಬಣ್ಣದಲ್ಲಿ ಬದಲಾವಣೆ ಉಂಟಾಗಬಹುದು.
ಇದನ್ನೂ ಓದಿ: Kidney Health: ನಮ್ಮ ಕಿಡ್ನಿಯನ್ನು ಆರೋಗ್ಯವಾಗಿಡುವ ಬೆಸ್ಟ್ ಆಹಾರಗಳಿವು
ಸುಮ್ಮನೆ ಕುಳಿತಾಗಲೂ ಪಾದಗಳಲ್ಲಿ ಸ್ವಲ್ಪ ಜುಮ್ಮೆನಿಸುವಿಕೆ ಅಥವಾ ಮರಗಟ್ಟುವಿಕೆಯೂ ಕಿಡ್ನಿ ಆರೋಗ್ಯ ಸರಿ ಇಲ್ಲ ಎಂಬುದರ ಸೂಚನೆಯಾಗಿದೆ. ಮೂತ್ರಪಿಂಡಗಳು ಎಲೆಕ್ಟ್ರೋಲೈಟ್ ನಿಯಂತ್ರಣ ಮತ್ತು ತ್ಯಾಜ್ಯ ಶುದ್ಧೀಕರಣದ ಮೂಲಕ ನರಗಳ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಮೂತ್ರಪಿಂಡದ ಕಾರ್ಯದಲ್ಲಿನ ಕೊಂಚ ಬದಲಾವಣೆ ಪಾದಗಳ ನರದ ಮೇಲೆ ಪರಿಣಾಮ ಬೀರಲಿದೆ.
ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಯಾವುದೇ ರೀತಿಯಲ್ಲಿ ಅರ್ಹ ವೈದ್ಯಕೀಯ ಸಲಹೆಗೆ ಪರ್ಯಾಯವಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞರನ್ನು ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸುವುದನ್ನು ಮರೆಯಬೇಡಿ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ