ಮಡದಿ ಗರ್ಭಿಣಿಯಾಗಿರುವಾಗ ಪತಿಧರ್ಮ ಪಾಲಿಸಲೇಬೇಕು
ಆರೋಗ್ಯಕರ ಗರ್ಭಾವಸ್ಥೆ: ಹೆಣ್ಣಿನ ಜೀವನದ ಪ್ರಮುಖ ಘಟ್ಟದಲ್ಲಿ ಗರ್ಭಾವಸ್ಥೆಯೂ ಒಂದು. ಈ ಸಮಯದಲ್ಲಿ ಆಕೆಗೆ ಕುಟುಂಬದವರ ಪ್ರೀತಿ, ಕಾಳಜಿಯ ಜೊತೆಗೆ ಗಂಡನ ಬೆಂಬಲ ಕೂಡ ಅಷ್ಟೇ ಮುಖ್ಯವಾಗುತ್ತದೆ. ಹಾಗಾಗಿ ಪತಿಯಾದವನು ತನ್ನ ಪತ್ನಿಯ ಪ್ರಗ್ನೆನ್ಸಿ ಪಯಣದಲ್ಲಿ ಮಾಡಬೇಕಾದ ಆರೈಕೆ ಮತ್ತು ಹೊಣೆಗಾರಿಕೆಗಳ ಬಗ್ಗೆ ಸ್ತ್ರೀ ರೋಗ ತಜ್ಞೆಯಾಗಿರುವ ಡಾ. ಶಿಲ್ಪಾ ಜಿಬಿ ಅವರು ಕೆಲವು ಸಲಹೆಗಳನ್ನು ಹಂಚಿಕೊಂಡಿದ್ದಾರೆ.

ಗರ್ಭಾವಸ್ಥೆ (Pregnancy) ಹೆಣ್ಣಿನ ಜೀವನದ ಪ್ರಮುಖ ಘಟ್ಟ. ಈ ಸಮಯದಲ್ಲಿ ಹೆಣ್ಣಾದವಳು ಮಾತ್ರವಲ್ಲ ಆಕೆಯ ಗಂಡ ಕೂಡ ಅಷ್ಟೇ ಜವಾಬ್ದಾರನಾಗಿರುತ್ತಾನೆ. ಇಬ್ಬರೂ ಒಟ್ಟಿಗೆ ನಡೆದಾಗ ಮಾತ್ರ ಜೀವನ ಸುಖಮಯವಾಗಿರುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ತುಂಬಾ ಮನೆಗಳಲ್ಲಿ, ಗಂಡಸರಿಗೆ ಕೆಲಸದ ಒತ್ತಡ ಜಾಸ್ತಿಯಾಗುತ್ತಿದ್ದು, ಹೀಗಾಗಿ ಹೆಂಡತಿಯೇ ಎಲ್ಲವನ್ನೂ ನಿಭಾಯಿಸುವ ಪರಿಸ್ಥಿತಿ ಬಂದಿದೆ. ಹೀಗಿದ್ದಾಗ ಗರ್ಭಾವಸ್ಥೆಯ ಸಂದರ್ಭದಲ್ಲಿಯೂ ಕೂಡ ಪ್ರತಿಯೊಂದು ಕೆಲಸವನ್ನು ಆಕೆಯೇ ಮಾಡಿಕೊಳ್ಳಬೇಕಾಗುತ್ತದೆ. ಇದರಿಂದ ಆಕೆಗೆ ಒತ್ತಡ (Stress) ಹೆಚ್ಚಾಗುತ್ತದೆ. ಎಲ್ಲಕ್ಕಿಂತ ಮಿಗಿಲಾಗಿ ಗಂಡನ ಬೆಂಬಲ (Husband’s Support) ಅಥವಾ ಸಹಾಯ ಇಲ್ಲದಿದ್ದಾಗ ಆಕೆ ಮತ್ತಷ್ಟು ಕುಗ್ಗುತ್ತಾಳೆ. ಇದು ಅವಳ ಮೇಲೆ ಮತ್ತು ಹುಟ್ಟಲಿರುವ ಮಗುವಿನ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ ಗರ್ಭಾವಸ್ಥೆ ಸಮಯದಲ್ಲಿ ಗಂಡನ ಬೆಂಬಲ ಎಷ್ಟು ಮುಖ್ಯ ಎಂಬುದರ ಬಗ್ಗೆ ಶಾಂತಿ ಗೈನೆಕ್ (Shanthi Gynec) ಆಸ್ಪತ್ರೆಯ ಸ್ತ್ರೀ ರೋಗ ತಜ್ಞೆಯಾಗಿರುವ ಡಾ. ಶಿಲ್ಪಾ ಜಿಬಿ ಅವರು ತಮ್ಮ ಇನ್ಸ್ಟಾ ಖಾತೆಯಲ್ಲಿ (drshilpagbkannada) ಹಂಚಿಕೊಂಡಿದ್ದು ಅವರು ನೀಡಿರುವ ಮಾಹಿತಿ ಇಲ್ಲಿದೆ.
ಡಾ. ಶಿಲ್ಪಾ ಜಿಬಿ ಅವರು ಹೇಳುವ ಪ್ರಕಾರ, ಗರ್ಭಾವಸ್ಥೆ ಸಮಯದಲ್ಲಿ ಗಂಡನ ಬೆಂಬಲ ಬಹಳ ಮುಖ್ಯವಾಗಿರುತ್ತದೆ. ಕೆಲವೊಮ್ಮೆ ಗರ್ಭಿಣಿಯರು ತಮ್ಮ ಚೆಕಪ್ ಗಳಿರುವಾಗ ಅಥವಾ ಸ್ಕ್ಯಾನಿಂಗ್ ಇರುವಾಗ ಒಬ್ಬರೇ ಆಸ್ಪತ್ರೆಗೆ ಬಂದು ಹೋಗುತ್ತಾರೆ. ಕೆಲಸದ ಒತ್ತಡದಲ್ಲಿ ಗಂಡಂದಿರು ಹೆಂಡತಿ ಜೊತೆಗೆ ಆಸ್ಪತ್ರೆಗೂ ಹೋಗುವುದೇ ಇಲ್ಲ. ಆದರೆ ಇಂತಹ ಸಮಯದಲ್ಲಿ ಗರ್ಭಿಣಿಯರಿಗೆ ತಮ್ಮ ಗಂಡನ ಬೆಂಬಲ ಬಹಳ ಮುಖ್ಯವಾಗಿರುತ್ತದೆ. ಕೊನೆಪಕ್ಷ ಹೆಂಡತಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಬರುವುದಕ್ಕಾದರೂ ಅವರು ತಮ್ಮ ಸಮಯವನ್ನು ಹೊಂದಿಸಿಕೊಳ್ಳಬೇಕಾಗುತ್ತದೆ. ಜೊತೆಗೆ ಗರ್ಭಾವಸ್ಥೆ ಸಮಯದಲ್ಲಿ ಯಾವುದಾದರೂ ಸಮಸ್ಯೆಗಳಾದಲ್ಲಿ ಹೆಂಡತಿಯ ಜೊತೆಗೆ ನಿಲ್ಲಬೇಕು. ಆಕೆಗೆ ಸಮಾಧಾನ ಮಾಡಬೇಕು. ಧೈರ್ಯ ತುಂಬಬೇಕು. ಪ್ರತಿ ಹಂತದಲ್ಲಿಯೂ ಜೊತೆಯಾಗಿ ಇರುತ್ತೇನೆ ಎಂಬುದನ್ನು ಮನವರಿಕೆ ಮಾಡಿಸಬೇಕು ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: Pregnancy tips for husbands: ಹೆಂಡತಿ ಗರ್ಭಿಣಿ ಇರುವಾಗ ಗಂಡ ತಿಳಿದಿರಬೇಕಾದ ವಿಚಾರಗಳು
ಡಾ. ಶಿಲ್ಪಾ ಜಿಬಿ ಅವರ ವಿಡಿಯೋ ಇಲ್ಲಿದೆ
View this post on Instagram
ಗಂಡನ ಬೆಂಬಲ ಗರ್ಭಿಣಿಯರಿಗೆ ಏಕೆ ಮುಖ್ಯ?
ಡಾ. ಶಿಲ್ಪ ಜಿ.ಬಿ ಅವರು, ಪತಿಯು ಪ್ರಗ್ನೆನ್ಸಿಯಲ್ಲಿ ಮಾಡಬೇಕಾದ ಆರೈಕೆಗಳು ಮತ್ತು ಹೊಣೆಗಾರಿಕೆಗಳ ಬಗ್ಗೆ ತಿಳಿಸಿದ್ದು ಅವರ ಪ್ರಕಾರ, ಎಷ್ಟೋ ಸಮಯದಲ್ಲಿ ಗರ್ಭಿಣಿಯರಲ್ಲಿ ಕಂಡು ಬರುವ ಬಯಕೆ, ಮನಸ್ಥಿತಿ ಬದಲಾವಣೆಗಳು (ಮೂಡ್ ಸ್ವಿಂಗ್), ಹತಾಶೆಗಳನ್ನು ಕಡಿಮೆ ಮಾಡಿಕೊಳ್ಳಲು ಗಂಡನ ಸಹಾಯ ಬೇಕಾಗಿರುತ್ತದೆ. ಮನೆಯಲ್ಲಿ ಎಷ್ಟೇ ಜನರಿದ್ದರೂ ಕೂಡ ಗಂಡ ನೀಡುವಂತಹ ಬೆಂಬಲ ಯಾರಿಂದಲೂ ಸಿಗುವುದಕ್ಕೆ ಸಾಧ್ಯವಿಲ್ಲ. ಈ ರೀತಿ ಗಂಡನಿಂದ ಪ್ರೀತಿ, ಕಾಳಜಿ, ಬೆಂಬಲ ಸಿಕ್ಕಾಗ ಸಕಾರಾತ್ಮಕ ಬದಲಾವಣೆಗಳು ಗರ್ಭಿಣಿಯರಲ್ಲಿ ಹೆಚ್ಚಾಗುತ್ತದೆ. ಇದರಿಂದ ಅವರ ಗರ್ಭಾವಸ್ಥೆಯ ಪಯಣ ತುಂಬಾ ಸುಖಮಯವಾಗಿರುತ್ತದೆ. ಜೊತೆಗೆ ತಾಯಿ ಮತ್ತು ಮಗುವಿನ ಆರೋಗ್ಯವೂ ಕೂಡ ಚೆನ್ನಾಗಿರುತ್ತದೆ. ಅಲ್ಲದೆ ಮಗು ಬಂದಾಗಲೂ ಕೂಡ ಗಂಡ- ಹೆಂಡತಿಯ ಭಾಂದವ್ಯ ಚೆನ್ನಾಗಿರುತ್ತದೆ.
ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಯಾವುದೇ ರೀತಿಯಲ್ಲಿ ಅರ್ಹ ವೈದ್ಯಕೀಯ ಸಲಹೆಗೆ ಪರ್ಯಾಯವಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞರನ್ನು ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸುವುದನ್ನು ಮರೆಯಬೇಡಿ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








