ಡೆಲಿವರಿ ಆದ ನಂತರದಲ್ಲಿ ಕಂಡು ಬರುವ ಮಾನಸಿಕ ಅಸ್ವಸ್ಥತೆ (Postpartum Mental Health), ಖಿನ್ನತೆಯನ್ನು ಸಾಮಾನ್ಯ ಭಾಷೆಯಲ್ಲಿ ಬಾಣಂತಿ ಸನ್ನಿ (Postpartum Depression) ಎಂದು ಕರೆಯಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಈ ರೀತಿಯ ಸಮಸ್ಯೆ ಹೆಚ್ಚಾಗುತ್ತಿದ್ದು, ಇದರ ಬಗ್ಗೆ ಎಲ್ಲರಿಗೂ ಸರಿಯಾದ ಮಾಹಿತಿ ಇರುವುದು ಬಹಳ ಅವಶ್ಯಕವಾಗಿದೆ. ಸಾಮಾನ್ಯವಾಗಿ ಡೆಲಿವರಿ ಆದ ಬಳಿಕ ಮಂಕಾಗಿರುವುದು, ಆಸಕ್ತಿ ಇಲ್ಲದಿರುವುದು, ಸರಿಯಾಗಿ ನಿದ್ರೆ ಮಾಡಲು, ಊಟ ಮಾಡಲು ಆಗದಿರುವುದು, ಜೊತೆಗೆ ಡೆಲಿವರಿ ಸಮಯದಲ್ಲಿ ಆದಂತಹ ನೋವು ಈ ರೀತಿ ಸಾಕಷ್ಟು ರೀತಿಯಲ್ಲಿ ತೊಂದರೆ ಅನುಭವಿಸಿರುವುದರಿಂದ ಇಂತಹ ಸಮಯದಲ್ಲಿ ಕುಂಟುಂಬದವರ ಬೆಂಬಲ ಆಕೆಗೆ ಅಗತ್ಯವಾಗಿ ಬೇಕಾಗಿರುತ್ತದೆ. ಆಗ ಅವಳಿಗೆ ಅವಶ್ಯಕತೆ ಇರುವಂತಹದ್ದು ಸಿಗದಿದ್ದಾಗ ಮಾನಸಿಕವಾಗಿ ಆಕೆ ಕುಗ್ಗುತ್ತಾಳೆ. ಇದು ಖಿನ್ನತೆಗೆ ಕಾರಣವಾಗುತ್ತದೆ. ಹಾಗಾದರೆ ಯಾರಲ್ಲಿ ಈ ರೀತಿಯ ಸಮಸ್ಯೆ ಕಂಡು ಬರುತ್ತದೆ? ಲಕ್ಷಣಗಳೇನು? ಸನ್ನಿ ಬರದಂತೆ ತಡೆಯಲು ಏನು ಮಾಡಬೇಕು ಎಂಬುದರ ಬಗ್ಗೆ ಬೆಂಗಳೂರು ಹಳೆ ವಿಮಾನ ನಿಲ್ದಾಣ ರಸ್ತೆ, ಮಣಿಪಾಲ್ ಆಸ್ಪತ್ರೆಯ ಕನ್ಸಲ್ಟೆಂಟ್ ಒಬ್ಸ್ಟೆಟ್ರಿಕ್ಸ್ ಮತ್ತು ಗೈನಾಕಾಲಜಿ, ಡಾ. ಜಯಶ್ರೀ ವೀರಪ್ಪ ಕಣವಿ ಅವರು ಟಿವಿ9 ಕನ್ನಡ ಜೊತೆ ಮಾತನಾಡಿದ್ದು ಈ ಕುರಿತ ಮತ್ತಷ್ಟು ಮಾಹಿತಿ ಇಲ್ಲಿದೆ.
ಡಾ. ಜಯಶ್ರೀ ಅವರು ಹೇಳುವ ಪ್ರಕಾರ, ಇತ್ತೀಚಿಗೆ ಬಾಣಂತಿ ಸನ್ನಿ ಹೆಚ್ಚಾಗಿ ಕಂಡು ಬರುತ್ತಿದ್ದು, ಡೆಲಿವರಿಯಾದ ಹತ್ತು ಮಹಿಳೆಯರಲ್ಲಿ ಒಬ್ಬರಲ್ಲಿ ಈ ರೀತಿಯ ಸಮಸ್ಯೆ ಕಾಣಸಿಗುತ್ತಿದೆ. ಆದರೆ ಈ ರೀತಿಯಾಗಲು ಮುಖ್ಯ ಕಾರಣ ಹಾರ್ಮೋನ್ ಗಳ ಏರಿಳಿತ. ಈಸ್ಟ್ರೋಜೆನ್, ಪ್ರೋಜೆಸ್ಟಿರೋನ್ ಎನ್ನುವಂತಹ ಹಾರ್ಮೋನ್ ಗರ್ಭಾವಸ್ಥೆಯ ಸಮಯದಲ್ಲಿ ಇರುವುದಕ್ಕಿಂತ ಹತ್ತು ಪಟ್ಟು ಹೆಚ್ಚಾಗುತ್ತದೆ. ಬಳಿಕ ಡೆಲಿವರಿಯಾದ ನಂತರ ತಕ್ಷಣ ಅದು ತನ್ನ ಮೊದಲಿನ ಸ್ಥಿತಿಗೆ ಬಂದು ತಲುಪುತ್ತದೆ. ಈ ರೀತಿ ಹೆಚ್ಚು, ಕಡಿಮೆ ಆಗುವುದರಿಂದ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದಿದ್ದಾರೆ.
ಡಾ. ಜಯಶ್ರೀ ಹಂಚಿಕೊಂಡ ಮಾಹಿತಿಯ ಆಧಾರದ ಮೇಲೆ, “ಎಲ್ಲರಲ್ಲಿಯೂ ಈ ರೀತಿ ಸಮಸ್ಯೆ ಕಂಡು ಬರುವುದಿಲ್ಲ. ಆದರೆ ಡೆಲಿವರಿಗೂ ಮೊದಲೇ ಆಕೆಗೆ ಪಿಎಂಎಸ್ (ಪ್ರೀ ಮೆನ್ಸ್ಟ್ರುವಲ್ ಸಿಂಡ್ರೋಮ್), ಆತಂಕ ಈ ರೀತಿಯ ಸಮಸ್ಯೆಗಳು ಇದ್ದರೆ ಡೆಲಿವರಿ ಆದ ಬಳಿಕ ಮಾನಸಿಕ ಅಸ್ವಸ್ಥತೆ ಕಂಡು ಬರಬಹುದು ಅಥವಾ ಮೊದಲ ಬಾರಿಗೆ ಗರ್ಭಿಣಿಯಾದಾಗ, ಅದು ಕೂಡ ಬಹಳ ಚಿಕ್ಕ ವಯಸ್ಸಿಗೆ ತಾಯಿ ಆಗುತ್ತಿದ್ದರೆ ಅಂತವರಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಂಡು ಬರುತ್ತದೆ. ಏಕೆಂದರೆ ಈ ರೀತಿಯಾದಾಗ ತಿಳುವಳಿಕೆ ಬಹಳ ಕಡಿಮೆ ಇರುತ್ತದೆ. ಜೊತೆಗೆ ಕುಟುಂಬದಿಂದ ದೂರ ಇದ್ದು, ಹಿರಿಯರೊಂದಿಗೆ ಒಡನಾಟ ಜಾಸ್ತಿ ಇರದಿದ್ದಾಗಲೂ ಈ ರೀತಿಯ ಸಮಸ್ಯೆ ಕಂಡು ಬರುತ್ತದೆ. ಏಕೆಂದರೆ ಈ ಸಮಯದಲ್ಲಿ ದೊಡ್ಡವರ ಸಲಹೆ, ಕಾಳಜಿ ಸಿಗದ ಕಾರಣ ಮನಸ್ಸಿನಲ್ಲಿ ನೊರೆಂಟು ಆಲೋಚನೆ ಹರಿದಾಡುತ್ತದೆ ಜೊತೆಗೆ ಸರಿಯಾದ ಮಾಹಿತಿಯ ಕೊರತೆ ಇಲ್ಲದಿರುವುದು ಕೂಡ ಖಿನ್ನತೆಗೆ ಕಾರಣವಾಗುತ್ತದೆ. ಇದೆಲ್ಲದರ ಜೊತೆಗೆ ಡೆಲಿವರಿ ಆದ ನಂತರ ಅವಳ ಜೊತೆಗೆ ಮಗುವು ಬರುವುದರಿಂದ ಅದರ ಬಗ್ಗೆಯೂ ಕಾಳಜಿ ವಹಿಸಬೇಕಾಗುತ್ತದೆ. ಈ ರೀತಿಯ ಸಮಯದಲ್ಲಿ ಆಕೆಗೆ ಅದರ ಬಗ್ಗೆ ತಿಳವಳಿಕೆ ಇಲ್ಲದಿದ್ದಾಗ ಅವಳಿಗೆ ಎಲ್ಲವೂ ಹೊಸತಾದಾಗ ಅದೆಲ್ಲವನ್ನೂ ನಿಭಾಯಿಸುವ ಶಕ್ತಿ ಆಕೆಗೆ ಇಲ್ಲದಿದ್ದಾಗ ಮಾನಸಿಕವಾಗಿ ಆಕೆ ಖಿನ್ನತೆಗೆ ಜಾರುತ್ತಾಳೆ. ಹಾಗಾಗಿ ಇಂತಹ ಸಮಯದಲ್ಲಿ ಆಕೆಯ ಮನೆಯವರು ಅವಳಿಗೆ ಬೆಂಬಲ ನೀಡಿ ಕಾಳಜಿ ತೋರಿಸಬೇಕಾಗುತ್ತದೆ” ಎಂದು ಅವರು ಹೇಳಿದ್ದಾರೆ.
ಡಾ. ಜಯಶ್ರೀ ಅವರ ಪ್ರಕಾರ, ಅವಳು ಮಾತನಾಡುವುದನ್ನು ನಿಲ್ಲಿಸಿಬಿಡಬಹುದು. ಅಂತರ್ಮುಖಿಯಾಗಬಹುದು. ಯಾವಾಗಲೂ ಸಪ್ಪೆ ಮುಖ ಮಾಡಿಕೊಂಡು ಕುಳಿತುಕೊಳ್ಳಬಹುದು ಅಥವಾ ಕಾರಣವಿಲ್ಲದೆ ಅಳಬಹುದು. ಅತಿರೇಕವಾಗಿ ಕೋಪ ಮಾಡಿಕೊಳ್ಳಬಹುದು. ಮಗುವಿನ ಮುಖ ನೋಡದೆಯೇ ಅವಳಿಂದಲೇ ಇಷ್ಟೆಲ್ಲಾ ತೊಂದರೆಯಾಗುತ್ತಿದೆ ಎಂದು ತಿಳಿದು ಮಗುವಿನ ಮೇಲೆ ಕೋಪ ಮಾಡಿಕೊಳ್ಳುವುದು, ಹಾಲು ಉಣಿಸುವುದಕ್ಕೆ ನಿರಾಕರಿಸುವುದು. ಇನ್ನು ತೀವ್ರವಾದ ಸಂದರ್ಭಗಳಲ್ಲಿ ಮಗುವಿಗೆ ತೊಂದರೆ ಮಾಡುವುದು, ಕೊಲ್ಲಲು ಹೋಗಬಹುದು ಇನ್ನು ಕೆಲವರು ತಾವೇ ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೂ ಪ್ರಯತ್ನಿಸಬಹುದು” ಎಂದಿದ್ದಾರೆ.
ಇದನ್ನೂ ಓದಿ: ಡಿಜೆ ಸೌಂಡ್, ಅತಿಯಾದ ಬೆಳಕು ಹೃದಯಾಘಾತಕ್ಕೆ ಕಾರಣವಾಗುತ್ತದೆಯೇ? ಮಣಿಪಾಲದ ವೈದ್ಯರು ಹೇಳೋದೇನು?
ಡಾ. ಜಯಶ್ರೀ ವೀರಪ್ಪ ಕಣವಿ ಅವರು ತಿಳಿಸಿರುವ ಮಾಹಿತಿ ಪ್ರಕಾರ, “ಗರ್ಭಾವಸ್ಥೆಯಲ್ಲಿರುವಾಗಲೇ ವೈದ್ಯರು ಆಕೆಯನ್ನು ನೋಡಿ, ಅವಳು ಮಾನಸಿಕವಾಗಿ ಹೇಗಿದ್ದಾಳೆ ಎಂಬುದನ್ನು ಪರೀಕ್ಷಿಸಬೇಕಾಗುತ್ತದೆ. ಅವಳಿಗೆ ಮುಂದೆ ಈ ರೀತಿ ಸಮಸ್ಯೆ ಬರುತ್ತದೆ ಎನಿಸಿದರೆ, ಆಕೆಗೆ ಒಳ್ಳೆಯ ಕೋನ್ಸಿಲಿಂಗ್ ಕೊಡಿಸಬೇಕು. ಆಕೆಗೆ ಯಾವುದೇ ರೀತಿಯ ಪ್ರಶ್ನೆ ಅಥವಾ ಗೊಂದಲಗಳಿದ್ದಲ್ಲಿ ಕೇಳಿ, ಆಕೆಗೆ ಸಮಾಧಾನ ಮಾಡಬೇಕಾಗುತ್ತದೆ. ಯಾವುದೇ ರೀತಿಯ ತೊಂದರೆ ಆಗುವುದಿಲ್ಲ ಏನೇ ಆಗಲಿ ನಿಮ್ಮ ಕುಟುಂಬ ಮತ್ತು ವೈದ್ಯರು ನಿನ್ನ ಜೊತೆಗೆ ಇರುತ್ತಾರೆ ಎಂಬುದನ್ನು ಮನವರಿಕೆ ಮಾಡಬೇಕಾಗುತ್ತದೆ. ಯಾವುದೇ ವಿಷಯವನ್ನು ಮುಚ್ಚಿಟ್ಟುಕೊಳ್ಳದೆಯೇ ಅದನ್ನು ಹಂಚಿಕೊಂಡು ಆ ಗೊಂದಲ ಬಗೆಹರಿಸಿಕೊಳ್ಳಬೇಕು ಎಂಬುದನ್ನು ಆಕೆಗೆ ಮನದಟ್ಟು ಮಾಡಬೇಕಾಗುತ್ತದೆ ಎಂದು ಅವರು ಸಲಹೆ ನೀಡಿದ್ದಾರೆ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ