Food For Eyes: ಕಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಕಾರಿ ಈ ಆಹಾರಗಳು
ಇತ್ತೀಚಿನ ದಿನಗಳಲ್ಲಿ ಎಲ್ಲಾ ವಯೋಮಾನದವರಲ್ಲಿಯೂ ಕಣ್ಣಿನ ಸಮಸ್ಯೆ ಹೆಚ್ಚಾಗುತ್ತಿದೆ. ಹೆಚ್ಚು ಹೊತ್ತು ಮೊಬೈಲ್, ಟಿವಿ ಪರದೆಯ ಮುಂದೆ ಸಮಯ ಕಳೆಯುವುದರಿಂದ ಅದು ಕಣ್ಣುಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಹೀಗಿರುವಾಗ ನೀವು ದಿನನಿತ್ಯ ನಿಮ್ಮ ಆಹಾರಕ್ರಮದಲ್ಲಿ ಈ ಕೆಲವೊಂದು ಆಹಾರಗಳನ್ನು ಸೇರಿಸುವ ಮೂಲಕ ಕಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಇದಕ್ಕಾಗಿ ನೀವು ಬೀಟಾ ಕ್ಯಾರೋಟಿನ್, ಒಮೆಗಾ-3 ಕೊಬ್ಬಿನಾಮ್ಲ, ವಿಟಮಿನ್ ಸಿ ಮುಂತಾದ ಪೋಷಕಾಂಶಗಳಲ್ಲಿ ಸಮೃದ್ಧವಾಗಿರುವ ಆಹಾರಗಳನ್ನು ಸೇವನೆ ಮಾಡಬೇಕು.
ದೇಹವನ್ನು ಆರೋಗ್ಯಕರವಾಗಿಡಲು ಪೌಷ್ಟಿಕಾಂಶದ ಅಗತ್ಯವಿರುವಂತೆ ಕಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಕೂಡಾ ಆರೋಗ್ಯಕರ ಆಹಾರ ಸೇವನೆಯ ಅಗತ್ಯವಿದೆ. ಇಂದಿನ ಬದಲಾಗುತ್ತಿರುವ ಜೀವನಶೈಲಿ, ಆಹಾರ ಪದ್ಧತಿ, ಕಂಪ್ಯೂಟರ್ ಮುಂದೆ ಕುಳಿತು ದಿನಗಟ್ಟಲೆ ಕೆಲಸ ಮಾಡುವುದು ಅಥವಾ ಗಂಟೆಗಟ್ಟಲೆ ಮೊಬೈಲ್ ನೋಡುತ್ತಾ ಕೂರುವುದು ಇವೆಲ್ಲವೂ ಕಣ್ಣಿನ ದೃಷ್ಟಿ ದುರ್ಬಲಗೊಳ್ಳಲು ಕಾರಣವಾಗುತ್ತದೆ. ಕಣ್ಣುಗಳನ್ನು ಇಂತಹ ಹಾನಿಯಿಂದ ರಕ್ಷಿಸಲು ಮತ್ತು ಅವುಗಳನ್ನು ಆರೋಗ್ಯಕರವಾಗಿಡಲು ನಿಮ್ಮ ಆಹಾರದಲ್ಲಿ ಜೀವಸತ್ವಗಳು, ಖನಿಜಗಳು ಮತ್ತು ಪೋಷಕಾಂಶಗಳಲ್ಲಿ ಸಮೃದ್ಧವಾಗಿರುವ ಆಹಾರವನ್ನು ಸೇರಿಸಬೇಕು. ಹಾಗಾದರೆ ದೃಷ್ಟಿ ಸುಧಾರಿಸಲು ಏನು ತಿನ್ನಬೇಕು ಎಂಬುದನ್ನು ನೋಡೋಣ.
ಕಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಕಾರಿ ಈ ಆಹಾರಗಳು:
ಕ್ಯಾರೆಟ್:
ಬೀಟಾ-ಕ್ಯಾರೋಟಿನ್ ಸಾಕಷ್ಟು ಪ್ರಮಾಣದಲ್ಲಿ ಕ್ಯಾರೆಟ್ ನಲ್ಲಿ ಕಂಡುಬರುತ್ತದೆ. ಇದು ದೇಹಕ್ಕೆ ವಿಟಮಿನ್-ಎ ಜೀವಸತ್ವವನ್ನು ಪೂರೈಸುತ್ತದೆ. ಈ ಪೋಷಕಾಂಶವು ಕಣ್ಣುಗಳಿಗೆ ತುಂಬಾ ಪ್ರಯೋಜಕಾರಿ ಎಂದು ಪರಿಗಣಿಸಲಾಗಿದೆ. ಇದು ದೃಷ್ಟಿಯನ್ನು ಸುಧಾರಿಸುತ್ತದೆ ಮತ್ತು ಇರುಳುಕುರುಡು ರೋಗಗಳನ್ನು ಬಾರದಂತೆ ತಡೆಯುತ್ತದೆ.
ಪಪ್ಪಾಯಿ:
ಪಪ್ಪಾಯಿಯಲ್ಲಿ ಬೀಟಾ-ಕ್ಯಾರೋಟಿನ್, ವಿಟಮಿನ್ ಸಿ ಮತ್ತು ವಿಟಮಿನ್ ಇ ಜೀವಸತವಗಳು ಸಮೃದ್ಧವಾಗಿದೆ. ಇದು ಕಣ್ಣುಗಳಿಗೆ ತುಂಬಾ ಪ್ರಯೋಜನಕಾರಿಯಾಗಿದೆ. ಇದರಲ್ಲಿರುವ ವಿಟಮಿನ್ ಇ ಉತ್ಕರ್ಷಣ ನಿರೋಧಕವಾಗಿ ಕಾರ್ಯನಿರ್ವಹಿಸುತ್ತದೆ, ಇದು ಜೀವಕೋಶಗಳನ್ನು ಆಕ್ಸಿಡೇಟಿವ್ ಒತ್ತಡದಿಂದ ರಕ್ಷಿಸುತ್ತದೆ ಮತ್ತು ಬೀಟಾ ಕ್ಯಾರೋಟಿನ್ ದೃಷ್ಟಿಯನ್ನು ಸುಧಾರಿಸುತ್ತದೆ.
ಸಿಟ್ರಸ್ ಹಣ್ಣುಗಳು:
ನಿಮ್ಮ ಆಹಾರದಲ್ಲಿ ಕಿತ್ತಳೆ, ದ್ರಾಕ್ಷಿ, ನಿಂಬೆ ಮತ್ತು ಬ್ಯಾಕ್ಬೆರಿಗಳಂತ ಹಣ್ಣುಗಳನ್ನು ನೀವು ಸೇರಿಸಿದರೆ ಕಣ್ಣುಗಳನ್ನು ಮಾತ್ರವಲ್ಲದೆ ಇಡೀ ದೇಹವನ್ನು ಆರೋಗ್ಯಕರವಾಗಿಡಬಹುದು. ಸಿಟ್ರಸ್ ಹಣ್ಣುಗಳು ವಿಟಮಿನ್ ಸಿ ಮತ್ತು ವಿಟಮಿನ್ ಇ ಜೀವಸತ್ವಗಳಿಂದ ಸಮೃದ್ಧವಾಗಿದೆ. ಇದು ದೃಷ್ಟಿ ಸುಧಾರಿಸಲು ಸಹಾಯ ಮಾಡುತ್ತದೆ.
ಇದನ್ನೂ ಓದಿ: ಕಿಡ್ನಿ ಸ್ಟೋನ್ ಅಥವಾ ಮೂತ್ರಪಿಂಡದ ಕಲ್ಲುಗಳು: ಕಾರಣ ಮತ್ತು ಪರಿಹಾರಗಳು ಇಲ್ಲಿವೆ
ಸಿಹಿ ಗೆಣಸು:
ಕಣ್ಣುಗಳ ಆರೋಗ್ಯವನ್ನು ಕಾಪಾಡಿಕೊಳ್ಳಲು ನೀವು ನಿಮ್ಮ ಆಹಾರದಲ್ಲಿ ಸಿಹಿ ಗೆಣಸನ್ನು ಸೇರಿಸಬಹುದು. ಇದರಲ್ಲಿರುವ ಬೀಟಾ ಕ್ಯಾರೋಟಿನ್ ಇರುಳು ಕುರುಡು ಕಾಯಿಲೆಯನ್ನು ತಡೆಯುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ.
ಹಸಿರು ಎಲೆ ತರಕಾರಿಗಳು:
ಹಸಿರು ಎಲೆತರಕಾರಿಗಳು ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಹಸಿರು ಎಲೆ ತರಕಾರಿಗಳಲ್ಲಿ ಕಬ್ಬಿಣಾಂಶ ಮತ್ತು ವಿಟಮಿನ್ ಗಳು ಹೇರಳವಾಗಿ ಕಂಡುಬರುತ್ತದೆ. ಇದು ದೃಷ್ಟಿ ಸುಧಾರಿಸಲು ಮತ್ತು ಕಣ್ಣನ್ನು ಆರೋಗ್ಯಕರವಾಗಿರಿಸಲು ಸಹಾಯ ಮಾಡುತ್ತದೆ.
ಪಾಲಕ್ ಸೊಪ್ಪು:
ಪಾಲಕ್ ನಲ್ಲಿ ಕ್ಯಾರೊಟಿನಾಯ್ಡ್ಗಳಾದ ಲುಟೀನ್ ಮತ್ತು ಜಿಯಾಕ್ಸಾಂಥಿನ್ ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಇದು ಆಂಟಿಆಕ್ಸಿಡೆಂಟ್ ಆಗಿದ್ದು, ದೃಷ್ಟಿ ಸುಧಾರಿಸಲು ಸಹಾಯ ಮಾಡುತ್ತದೆ. ಇದಲ್ಲದೆ ಇವುಗಳು ಆಕ್ಸಿಡೇಟಿವ್ ಒತ್ತಡಗಳಿಂದ ಕಣ್ಣುಗಳನ್ನು ರಕ್ಷಿಸುತ್ತದೆ.
ಕಿವಿ ಹಣ್ಣು:
ಕಿವಿ ಹಣ್ಣು ವಿಟಮಿನ್ ಸಿ ಜೀವಸತ್ವಗಳಿಂದ ಸಮೃದ್ಧವಾಗಿದೆ. ಇದು ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಇದರಿಂದಾಗಿ ನೀವು ಅನೇಕ ರೋಗಗಳನ್ನು ಬಾರದಂತೆ ತಡೆಯಬಹುದು. ಈ ಹಣ್ಣಿನಲ್ಲಿರುವ ಪೋಷಕಾಂಶಗಳು ಕಣ್ಣುಗಳಲ್ಲಿ ಕಾಲಜನ್ ಉತ್ಪಾದನೆಯನ್ನು ಉತ್ತೇಜಿಸುತ್ತದೆ, ಇದು ಕಣ್ಣುಗಳನ್ನು ಆರೋಗ್ಯಕರವಾಗಿರಿಸಲು ಸಹಾಯ ಮಾಡುತ್ತದೆ.
ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: