ಹೆಚ್ಚಿನ ಜನರು ನಿದ್ರೆಯ ಸಮಯದಲ್ಲಿ ಗೊರಕೆ ಹೊಡೆಯುವ ಅಭ್ಯಾಸವನ್ನು ಹೊಂದಿರುತ್ತಾರೆ. ಇದರಿಂದ ಅವರ ಅಕ್ಕಪಕ್ಕದಲ್ಲಿ ಮಲಗುವವರಿಗೆ ಕಿರಿಕಿರಿಯಾಗುತ್ತದೆ. ಅಷ್ಟೇ ಅಲ್ಲ ಮುಜುಗರಕ್ಕೆ ಗುರಿಯಾಗುವ ಸಾಧ್ಯತೆಯೂ ಇರುತ್ತದೆ. ಹೀಗಾಗಿ ಗೊರಕೆಯಿಂದ (Snoring) ಮುಕ್ತಿ ಪಡೆಯಲು ಕೆಲವು ಸಲಹೆಗಳನ್ನು ಅನುಸರಿಸುವುದು ಸೂಕ್ತ. ಹಾಗಿದ್ದರೆ ಗೊರಕೆಗೆ ಏನು ಕಾರಣ? ಇದರಿಂದ ದೂರ ಇರಲು ಏನು ಮಾಡಬೇಕು ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ.
ಗೊರಕೆ ಏಕೆ ಬರುತ್ತದೆ?
ನಿದ್ರೆಯ ಸಮಯದಲ್ಲಿ ಮೂಗಿನ ಹೊಳ್ಳೆಯಿಂದ ಶ್ವಾಸಕೋಶಕ್ಕೆ ಗಾಳಿಯು ಹಾದುಹೋಗಲು ಅಡ್ಡಿಯಾದಾಗ ಗೊರಕೆ ಉಂಟಾಗುತ್ತದೆ. ಹಾಗೆಯೇ ಈ ಸಮಯದಲ್ಲಿ ಬಾಯಿಯ ಮೂಲಕ ಉಸಿರಾಡುವ ಪ್ರಯತ್ನವೂ ಕೂಡ ಆರಂಭವಾಗುತ್ತದೆ. ಗಾಳಿ ಒಳಹೋಗುವ ಕ್ರಿಯೆಗೆ ಅಡಚಣೆಗಳಿದ್ದರೆ ಸುತ್ತಲಿನ ಅಂಗಾಂಶಗಳು ಚಲನೆಗೆ ಒಳಗಾಗುತ್ತವೆ ಏಕೆಂದರೆ ಮೂಗಿನ ಕಿರಿದಾದ ಹಾದಿಯಿಂದ ಗಾಳಿಯು ಹೋಗಬೇಕಾಗುತ್ತದೆ ಇದು ಕ್ರಮೇಣ ಗೊರಕೆಗೆ ಕಾರಣವಾಗುತ್ತದೆ. ಆದರೆ, ವಾಸ್ತವದಲ್ಲಿ ಇನ್ನೂ ಹಲವು ವಿಷಯಗಳಿವೆ. ಮಾನಸಿಕ ಒತ್ತಡ, ಖಿನ್ನತೆ, ವಿಪರೀತ ಚಿಂತನೆಗಳು ಕೂಡ ಗೊರಕೆಗೆ ಕೆಲವೊಮ್ಮೆ ಕಾರಣವಾಗಬಹುದು.
ಬಾಯಿಯ ಮೂಲಕ ಉಸಿರಾಡುವುದು
ನಾವು ಸಾಮಾನ್ಯವಾಗಿ ಮೂಗಿನ ಹೊಳ್ಳೆಗಳ ಮೂಲಕ ಗಾಳಿಯನ್ನು ತೆಗೆದುಕೊಳ್ಳುತ್ತೇವೆ. ಆದರೆ, ಮೂಗಿನ ಹಾದಿಯಲ್ಲಿನ ಅಡಚಣೆಯಿಂದಾಗಿ ಕೆಲವರು ಬಾಯಿಯ ಮೂಲಕ ಉಸಿರಾಡುತ್ತಾರೆ. ಅಲರ್ಜಿ, ಸೈನಸ್ ಸೋಂಕು, ಮೂಗಿನ ದಟ್ಟಣೆ ಮತ್ತು ಅಡೆನಾಯ್ಡ್‌ಗಳು ಇವೆಲ್ಲವೂ ವಾಯುಮಾರ್ಗದ ಅಡಚಣೆಗೆ ಸಾಮಾನ್ಯ ಕಾರಣಗಳಾಗಿವೆ.
ಮಧ್ಯ ವಯಸ್ಸು ಮತ್ತು ನಂತರದ ವಯಸ್ಸಿಗೆ ಬಂದಾಗ ಗಂಟಲು ತೆಳುವಾಗುವುದು ಸಹಜ. ಇದು ಗೊರಕೆಗೆ ಕಾರಣವಾಗಬಹುದು. ಅಲ್ಲದೆ, ಗೊರಕೆ ಮಹಿಳೆಯರಿಗಿಂತ ಪುರುಷರಲ್ಲಿ ಹೆಚ್ಚು ಸಾಮಾನ್ಯವಾಗಿದೆ. ಗಾಳಿಯ ನಾಳಗಳು ಕಡಿಮೆ ಹಿಗ್ಗುತ್ತವೆ. ಹೀಗಾಗಿ ಅತಿಯಾದ ತೂಕ ಹೊಂದಿರುವವರು ಕುತ್ತಿಗೆ ಮತ್ತು ಗಂಟಲಿನ ಮೇಲೆ ಹೆಚ್ಚು ಭಾರವನ್ನು ಹಾಕಿದರೂ ಗೊರಕೆಗೆ ಕಾರಣವಾಗಬಹುದು.
ಸೈನಸ್ ಸಮಸ್ಯೆಯಿಂದ ಮೂಗು ಮತ್ತು ಮೂಗಿನ ಕುಳಿಗಳು ಬಂದ್ ಆಗುತ್ತವೆ. ಇದರಿಂದ ಗಾಳಿಯು ಗಟ್ಟಿಯಾಗಿ ಹೋಗುತ್ತದೆ ಮತ್ತು ಶಬ್ದ ಹೊರಬರುತ್ತದೆ. ಆಲ್ಕೊಹಾಲ್, ಧೂಮಪಾನದಂತಹ ಅಭ್ಯಾಸವನ್ನು ಹೊಂದಿರುವವರಲ್ಲಿ ಗೊರಕೆ ಕಂಡುಬರುತ್ತದೆ. ಹೆಚ್ಚಿನ ಕಾರ್ಪೊರೇಟ್ ಉದ್ಯೋಗಿಗಳು ಗೊರಕೆಯಿಂದ ಬಳಲುತ್ತಿದ್ದಾರೆ. ಇದಕ್ಕೆ ಕಾರಣ ಕೆಲಸದ ಒತ್ತಡ.
ಗೊರಕೆ ಸಮಸ್ಯೆಗಳನ್ನು ನಿವಾರಿಸಲು ಸಲಹೆಗಳು
1. ಪ್ರತಿದಿನ ರಾತ್ರಿ ಮಲಗುವ ಮುನ್ನ ಸೊಪ್ಪು ಮತ್ತು ತರಕಾರಿಗಳನ್ನು ತಿನ್ನುವುದರಿಂದ ಗೊರಕೆಯನ್ನು ನಿಯಂತ್ರಿಸಬಹುದು.
2. ರಾತ್ರಿ ಮಲಗುವ ಮುನ್ನ ಅರ್ಧ ಚಮಚ ಜೇನುತುಪ್ಪವನ್ನು, ಅರ್ಧ ಚಮಚ ಆಲಿವ್ ಎಣ್ಣೆಯೊಂದಿಗೆ ಬೆರೆಸಿ ಸೇವಿಸಿದರೆ ಉತ್ತಮ ಫಲಿತಾಂಶ ಸಿಗುತ್ತದೆ.
3. ಒಂದು ಲೋಟ ನೀರಿನಲ್ಲಿ ಒಂದು ಅಥವಾ ಎರಡು ಹನಿ ಪುದೀನಾ ಎಣ್ಣೆಯನ್ನು ಸೇರಿಸಿ ಸೇವಿಸಿ. ಇದು ಕೂಡ ಗೊರಕೆಯನ್ನು ಕಡಿಮೆ ಮಾಡುವಲ್ಲಿ ಉತ್ತಮ ಫಲಿತಾಂಶ ನೀಡುತ್ತದೆ.
4. ಸ್ವಲ್ಪ ಪುದೀನಾ ಎಣ್ಣೆಯನ್ನು ಬೆರಳುಗಳಿಗೆ ಹಚ್ಚಿ ವಾಸನೆ ತೆಗೆದುಕೊಳ್ಳುವುದರಿಂದ ಗೊರಕೆ ಕಡಿಮೆಯಾಗುತ್ತದೆ.
5. ಒಂದು ಲೋಟ ಬಿಸಿ ನೀರಿನಲ್ಲಿ ಅರ್ಧ ಚಮಚ ಪುಡಿ ಮಾಡಿದ ಬೆಲ್ಲ ಸೇರಿಸಿ ರಾತ್ರಿ ಮಲಗುವ ಮುನ್ನ ಕುಡಿಯಿರಿ.
6. ರಾತ್ರಿ ಮಲಗುವ ಮುನ್ನ 4 ರಿಂದ 5 ಹನಿ ನೀಲಗಿರಿ ಎಣ್ಣೆಯನ್ನು ಕುದಿಯುವ ನೀರಿನಲ್ಲಿ ಸೇರಿಸಿ ಸ್ಟೀಮ್ ರೂಪದಲ್ಲಿ ತೆಗೆದುಕೊಳ್ಳಿ ಇದರಿಂದ ಗೊರಕೆ ಬಹಳ ಬೇಗ ದೂರವಾಗುತ್ತದೆ.
ಇದನ್ನೂ ಓದಿ:
Health Tips: ಬೆಳಿಗ್ಗೆ ಎದ್ದ ತಕ್ಷಣ ಈ ರೀತಿ ಮಾಡುವುದರಿಂದ ಅನೇಕ ಆರೋಗ್ಯಕರ ಪ್ರಯೋಜನಗಳಿವೆ
Left Side Sleeping: ಎಡಭಾಗಕ್ಕೆ ತಿರುಗಿ ಮಲಗುವುದು ನಮ್ಮ ಆರೋಗ್ಯಕ್ಕೆ ಎಷ್ಟು ಮುಖ್ಯ?
Published On - 9:14 am, Tue, 31 August 21