ಹಸಿ ಮೆಣಸಿನಕಾಯಿಯನ್ನು (Green Chilli) ಪ್ರತಿದಿನವೂ ಎಲ್ಲಾ ಬಗೆಯ ಅಡುಗೆಯಲ್ಲೂ ಬಳಸಲಾಗುತ್ತದೆ. ಅಡುಗೆಯ ಮಸಾಲೆಯುಕ್ತ ರುಚಿಯನ್ನು ಹೆಚ್ಚಿಸಲು ಈ ಮೆಣಸಿನಕಾಯಿಯನ್ನು ವ್ಯಾಪಕವಾಗಿ ಬಳಸಲಾಗುತ್ತದೆ. ಹೆಚ್ಚಾಗಿ ಜನರು ಹಸಿಮೆಣಸಿನಕಾಯಿಯನ್ನು ಅಡುಗೆಯ ರುಚಿಯನ್ನು ಹೆಚ್ಚಿಸಲು ಸೇರಿಸುತ್ತಾರೆಯಾದರೂ, ಇದನ್ನು ಸೇವಿಸುವುದರಿಂದ ಹಲವು ಆರೋಗ್ಯ ಪ್ರಯೋಜನಗಳು ಕೂಡಾ ಲಭಿಸುತ್ತದೆ. ಹೌದು ಹಸಿಮೆಣಸಿನಕಾಯಿ ಅನೇಕ ಪೌಷ್ಟಿಕಾಂಶ ಗುಣಗಳಿಂದ ಸಮೃದ್ಧವಾಗಿದ್ದು, ಇದು ಆರೋಗ್ಯ ಸಂಬಂಧಿತ ಸಮಸ್ಯೆಗಳನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ. ಇದು ವಿಟಮಿನ್ ಎ, ವಿಟಮಿನ್ ಬಿ6, ಕಬ್ಬಿಣಾಂಶ, ತಾಮ್ರ, ಪೊಟ್ಯಾಸಿಯಂ, ಪ್ರೋಟೀನ್ ಮತ್ತು ಕಾರ್ಬೋಹೈಡ್ರೇಟ್ಗಳಂತ ಅನೇಕ ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಹಾಗೂ ಇದರಲ್ಲಿ ಬೀಟಾ ಕ್ಯಾರೋಟಿನ್, ಕ್ರಿಪ್ಟೋಕ್ಸಾಂಥಿನ್, ಲುಟೀನ್-ಝೀಕ್ಸಾಂಥಿನ್ ಮ್ಯಾಕ್ರೋನ್ಯೂಟ್ರಿಯೆಂಟ್, ಕಾರ್ಬೋಹೈಡ್ರೇಟ್, ಕ್ಯಾಪ್ಸೈಸಿನ್ ಇತ್ಯಾದಿ ಸಂಯುಕ್ತಗಳಿವೆ. ಇವೆಲ್ಲವೂ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ.
ಆರೋಗ್ಯಕ್ಕೆ ಅತೀ ಮುಖ್ಯವಾದ ಫೈಬರ್ ಅಂಶವು ಹಸಿಮೆಣಸಿನಕಾಯಿಯಲ್ಲಿ ಹೇರಳವಾಗಿ ಕಂಡುಬರುತ್ತದೆ. ಇದನ್ನು ಸೇವಿಸುವುದರಿಂದ ದೇಹವು ಸಾಕಷ್ಟು ಪ್ರಮಾಣದ ಫೈಬರ್ ಅಂಶವನ್ನು ಪಡೆಯುತ್ತದೆ. ಇದು ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯಕರವಾಗಿರಿಸಲು ಉಪಯುಕ್ತವೆಂದು ಪರಿಗಣಿಸಲಾಗಿದೆ. ಇದಲ್ಲದೆ ದೇಹದಲ್ಲಿ ಸಾಕಷ್ಟು ಪ್ರಮಾಣದ ಫೈಬರ್ ಅಜೀರ್ಣ ಮತ್ತು ಮಲಬದ್ಧತೆಯಂತಹ ಜೀರ್ಣಕ್ರಿಯೆ ಸಂಬಂಧಿ ಸಮಸ್ಯೆಗಳನ್ನು ತೊಡೆದುಹಾಕಲು ಸಹಕಾರಿ.
ಹಸಿಮೆಣಸಿನಕಾಯಿಯ ಸೇವನೆಯು ಕೂದಲಿಗೆ ಸಹ ಪ್ರಯೋಜನಕಾರಿಯಾಗಿದೆ. ಇದರಲ್ಲಿರುವ ನೈಸರ್ಗಿಕ ಸಿಲಿಕಾನ್, ವಿಟಮಿನ್ ಸಿ ಮತ್ತು ಕಬ್ಬಿಣಾಂಶವು ಕೂದಲಿಗೆ ತುಂಬಾ ಪ್ರಯೋಜನಕಾರಿಯಾಗಿದೆ. ಹಸಿಮೆಣಸಿನಕಾಯಿಯಲ್ಲಿರುವ ನೈಸರ್ಗಿಕ ಸಿಲಿಕಾನ್ ನೆತ್ತಿಯಲ್ಲಿನ ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ. ಮತ್ತು ಕೂದಲನ್ನು ರಕ್ಷಿಸುತ್ತದೆ. ಹಾಗೂ ಇದರಲ್ಲಿರುವ ವಿಟಮಿನ್ ಸಿ ಜೀವಸತ್ವವು ಕೂದಲು ಉದುರುವಿಕೆಯನ್ನು ತಡೆಯುತ್ತದೆ.
ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿರುವ ಹಸಿ ಮೆಣಸಿನಕಾಯಿ ರೋಗನಿರೋಧಕಶಕ್ತಿಯನ್ನು ಬಲಪಡಿಸಲು ತುಂಬಾ ಸಹಕಾರಿಯಾಗಿದೆ. ಅಲ್ಲದೆ ಇದರಲ್ಲಿ ವಿಟಮಿನ್ ಎ, ವಿಟಮಿನ್ ಸಿ, ಕಬ್ಬಿಣಾಂಶ ಮತ್ತು ಪೊಟ್ಯಾಸಿಯಂ ನಂತಹ ಹಲವು ಪೋಷಕಾಂಶಗಳಿದ್ದು, ಇದು ದೇಹದ ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸಲು ತುಂಬಾ ಸಹಕಾರಿ.
ಮಧುಮೇಹ ಕಾಯಿಲೆಯಿಂದ ಬಳಲುತ್ತಿರುವವರಿಗೂ ಹಸಿಮೆಣಸಿನಕಾಯಿ ಸೇವನೆಯು ಪ್ರಯೋಜನಕಾರಿಯಾಗಿದೆ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅಲ್ಲದೆ ಇದು ದೇಹದ ಚಯಾಪಚಯಕ್ರಿಯೆಯನ್ನು ಸುಧಾರಿಸುತ್ತದೆ ಮತ್ತು ಕಬ್ಬಿಣಾಂಶದ ಕೊರತೆಯನ್ನು ನೀಗಿಸುತ್ತದೆ.
ಇದನ್ನೂ ಓದಿ: ಖಾರ ಖಾರ ಊಟ ಇಷ್ಟಪಡುವವರಿಗೆ ಇಲ್ಲಿದೆ ಗ್ರೀನ್ ಚಿಲ್ಲಿ ಫ್ರೈ ರೆಸಿಪಿ
ಆಂಟಿ ಬ್ಯಾಕ್ಟೀರಿಯಲ್ ಗುಣಲಕ್ಷಣಗಳು ಹಸಿಮೆಣಸಿನಕಾಯಲ್ಲಿ ಕಂಡುಬರುತ್ತವೆ, ಇದು ಚರ್ಮದ ಸೋಂಕುಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಹಾಗೂ ಇದರಲ್ಲಿರುವ ವಿಟಮಿನ್ ಎ ಮತ್ತು ವಿಟಮಿನ್ ಸಿ ಜೀವಸತ್ವವು ಚರ್ಮವನ್ನು ಆರೋಗ್ಯಕರವಾಗಿಡಲು ಮತ್ತು ತ್ವಚೆಯ ನೈಸರ್ಗಿಕ ಹೊಳಪನ್ನು ಕಾಪಾಡಿಕೊಳ್ಳಲು ಸಹಕಾರಿ.
ಹಸಿಮೆಣಸಿನಕಾಯಿಯಲ್ಲಿ ಯಾವುದೇ ರೀತಿಯ ಕ್ಯಾಲೋರಿ ಇಲ್ಲ. ಇದು ತೂಕ ಇಳಿಸಿಕೊಳ್ಳಲು ಬಯಸುವವರಿಗೆ ತುಂಬಾ ಪ್ರಯೋಜನಕಾರಿಯಾಗಿದೆ. ಹಸಿಮೆಣಸಿನಕಾಯಿಯ ಸೇವನೆಯು ಚಯಾಪಚಯ ದರವನ್ನು ಶೇಕಡಾ 50% ರಷ್ಟು ಹೆಚ್ಚಿಸುತ್ತದೆ ಎಂದು ಹೇಳಲಾಗುತ್ತದೆ. ಇದು ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಹಸಿ ಮೆಣಸಿನಕಾಯಿಯನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ಕೀಲು ನೋವಿನಿಂದಲೂ ಸಹ ನಿಮಗೆ ಪರಿಹಾರ ದೊರೆಯುತ್ತದೆ. ಕ್ಯಾಪ್ಸೈಸಿನ್ ಎಂಬ ಸಂಯುಕ್ತವು ಹಸಿ ಮೆಣಸಿನಕಾಯಿಯಲ್ಲಿ ಕಂಡುಬರುತ್ತದೆ. ಇದು ನೈಸರ್ಗಿಕ ನೋವು ನಿವಾರಕವಾಗಿ ಕಾರ್ಯನಿರ್ವಹಿಸುತ್ತದೆ.
ಒಟ್ಟಾರೆಯಾಗಿ ಹಸಿಮೆಣಸಿನಕಾಯಿಯ ನಿಯಮಿತ ಸೇವನೆಯು ನಮ್ಮ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ತಜ್ಞರ ಪ್ರಕಾರ ದಿನಕ್ಕೆ ಸುಮಾರು 20 ಗ್ರಾಂ ಹಸಿ ಮೆಣಸಿನಕಾಯಿ ಸೇವಿಸಿದರೆ ಸಾಕು. ಇದಕ್ಕಿಂತ ಹೆಚ್ಚು ಸೇವನೆ ಮಾಡುವುದರಿಂದ ದೇಹಕ್ಕೆ ಲಾಭದ ಬದಲು ಹಾನಿಯಾಗುವ ಸಾಧ್ಯತೆ ಹೆಚ್ಚು. ಹಸಿ ಮೆಣಸಿನಕಾಯಿಯನ್ನು ಸರಿಯಾಗಿ ಸೇವಿಸಲು ಅದನ್ನು ಸಲಾಡ್, ಚಟ್ನಿ, ಅಥವಾ ದಿನನಿತ್ಯದ ಅಡುಗೆಗಳಲ್ಲೂ ಸೇರಿಸಬಹುದು. ಅಥವಾ ರೊಟ್ಟಿ, ಅನ್ನ ತಿನ್ನುವಾಗ ಅದರೊಂದಿಗೆ ಒಂದು ಮೆಣಸಿನಕಾಯಿಯನ್ನು ತಿನ್ನಬಹುದು.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: