Green Fungus: ಕಪ್ಪು, ಬಿಳಿ ಮತ್ತು ಹಳದಿ ಫಂಗಸ್​ಗಳ ಜೊತೆ ಈಗ ಹಸಿರು ಫಂಗಸ್​ ಜೊತೆ ಸೆಣಸುವ ಸರದಿ, ಮಧ್ಯಪ್ರದೇಶದಲ್ಲಿ ಮೊದಲ ಪ್ರಕರಣ

|

Updated on: Jun 30, 2021 | 8:45 PM

ಆಸ್ಪರ್ಗಿ​ಲ್ಲೋಸಿಸ್ ಅಂತಲೂ ಕರೆಸಿಕೊಳ್ಳುವ ಗ್ರೀನ್ ಫಂಗಸ್ ಆಸ್ಪರ್ಗಿಲ್ಲಸ್​ನಿಂದ ಬರುವ ಸೋಂಕಾಗಿದೆ. ವಾತಾವರಣದಲ್ಲಿರುವ ಆಸ್ಪರ್ಗಿಲ್ಲಸ್ ಸೂಕ್ಷ್ಮಾಣು ಉಸಿರಾಟದ ಮೂಲಕ ದೇಹ ಸೇರಿಕೊಂಡಾಗ ಗ್ರೀನ್ ಫಂಗಸ್ ಸೋಂಕು ಬರುತ್ತದೆ.

Green Fungus: ಕಪ್ಪು, ಬಿಳಿ ಮತ್ತು ಹಳದಿ ಫಂಗಸ್​ಗಳ ಜೊತೆ ಈಗ ಹಸಿರು ಫಂಗಸ್​ ಜೊತೆ ಸೆಣಸುವ ಸರದಿ, ಮಧ್ಯಪ್ರದೇಶದಲ್ಲಿ ಮೊದಲ ಪ್ರಕರಣ
ಹಸಿರು ಫಂಗಸ್
Follow us on

ನವದೆಹಲಿ: ಭಾರತ ಕೋವಿಡ್​ ಎರಡನೇ ಅಲೆ ವಿರುದ್ಧ ಇನ್ನೂ ಹೋರಾಡುತ್ತಿರುವಾಗಲೇ, ಕೋವಿಡ್​-19 ಸೊಂಕಿನಿಂದ ಚೇತರಿಸಿಕೊಂಡವರನ್ನು ಕಾಡುತ್ತಿರುವ ಕಪ್ಪು ಫಂಗಸ್, ಬಿಳಿ ಫಂಗಸ್ ಮತ್ತು ಹಳದಿ ಫಂಗಸ್ ಸೋಂಕುಗಳ ಜೊತೆ ಈಗ ಹಸಿರು ಫಂಗಸ್ ಸಹ ಸೇರಿಕೊಂಡಿದೆ. ಮಧ್ಯಪ್ರದೇಶದ ಇಂದೋರ್​ನಲ್ಲಿ ಕೋವಿಡ್​ ಸೋಂಕಿನಿಂದ ಚೇತರಿಸಿಕೊಂಡಿರುವ 34 ವರ್ಷದ ವ್ಯಕ್ತಿಯೊಬ್ಬನಲ್ಲಿ ಕಾಣಿಸಿಕೊಂಡಿರುವ ಗ್ರೀನ್ ಫಂಗಸ್ ಭಾರತದ ಮೊದಲ ಪ್ರಕರಣವಾಗಿದೆ. ಈ ವ್ಯಕ್ತಿಯನ್ನು ಚಿಕಿತ್ಸೆಗಾಗಿ ಮುಂಬೈಗೆ ಸ್ಥಳಾಂತರಿಸಲಾಗಿದೆ. ಫಂಗಸ್ ಅನ್ನು ಎಲ್ಲ ರಾಜ್ಯಗಳಲ್ಲಿ ಸಾಂಕ್ರಾಮಿಕ ಎಂದು ಘೋಷಿಸಲಾಗಿದ್ದರೂ ಗ್ರೀನ್ ಫಂಗಸ್ ಬಗ್ಗೆ ಜನರಲ್ಲಿ ಗೊಂದಲ ಸೃಷ್ಟಿಯಾಗಿದೆ. ಮೊದಲ ಗ್ರೀನ್ ಫಂಗಸ್ ಪ್ರಕರಣವು ಸೋಂಕಿನಿಂದ ಚೇತರಿಸಿಕೊಂಡ ವ್ಯಕ್ತಿ ತಾನು ಬ್ಲ್ಯಾಕ್ ಫಂಗಸ್​ನಿಂದ ಪೀಡಿತನಾಗಿರುವ ಅನುಮಾನ ಮೂಡಿ ಟೆಸ್ಟ್​ ಮಾಡಿಸಿಕೊಳ್ಳಲು ಹೋದಾಗ ಆತನಲ್ಲಿ ಗ್ರೀನ್ ಫಂಗಸ್ ಸೋಂಕು ಪತ್ತೆಯಾಗಿದೆ.

ಗ್ರೀನ್ ಫಂಗಸ್ ಎಂದರೇನು?

ಆಸ್ಪರ್ಗಿ​ಲ್ಲೋಸಿಸ್ ಅಂತಲೂ ಕರೆಸಿಕೊಳ್ಳುವ ಗ್ರೀನ್ ಫಂಗಸ್ ಆಸ್ಪರ್ಗಿಲ್ಲಸ್​ನಿಂದ ಬರುವ ಸೋಂಕಾಗಿದೆ. ವಾತಾವರಣದಲ್ಲಿರುವ ಆಸ್ಪರ್ಗಿಲ್ಲಸ್ ಸೂಕ್ಷ್ಮಾಣು ಉಸಿರಾಟದ ಮೂಲಕ ದೇಹ ಸೇರಿಕೊಂಡಾಗ ಗ್ರೀನ್ ಫಂಗಸ್ ಸೋಂಕು ಬರುತ್ತದೆ.

ಗ್ರೀನ್ ಫಂಗಸ್​ನಲ್ಲಿ ಎಷ್ಟು ಬಗೆ

-ಶ್ವಾಸಕೋಶದ ಆಸ್ಪರ್ಗಿ​ಲ್ಲೋಸಿಸ್

-ಅಲರ್ಜಿಕ್ ಬ್ರಾಂಕೊಪುಲ್ಮೋನರಿ ಆಸ್ಪರ್ಗಿ​ಲ್ಲೋಸಿಸ್

ಉಸಿರಾಟದ ಮೂಲಕ ಫಂಗಲ್ ಸೂಕ್ಷ್ಮಾಣುಗಳು ದೇಹವನ್ನು ಸೇರಿಕೊಂಡಾಗ ಅಲರ್ಜಿಕ್ ಬ್ರಾಂಕೊಪುಲ್ಮೋನರಿ ಆಸ್ಪರ್ಗಿ​ಲ್ಲೋಸಿಸ್ ಸೋಂಕು ಉಂಟಾಗುತ್ತದೆ. ಇದು ಅಸ್ತಮಾ ತರಹದ ರೋಗಲಕ್ಷಣಗಳನ್ನು ಹೊಂದಿದೆ.

-ಕ್ರಾನಿಕ್ ಕ್ಯಾವಿಟರಿ ಶ್ವಾಸಕೋಶ ಆಸ್ಪರ್ಗಿ​ಲ್ಲೋಸಿಸ್

ಇದು ಪುಲ್ಮೋನರಿ ಆಸ್ಪರ್ಗಿ​ಲ್ಲೋಸಿಸ್​ನ ರೂಪಂತರಿಯಾಗಿದ್ದು, ಫಂಗಸ್ ದೀರ್ಘಾವಧಿಯವರೆಗೆ ಶ್ವಾಸಕೋಶದಲ್ಲಿದ್ದಾಗ ಇದು ಪತ್ತೆಯಾಗುತ್ತದೆ.ಇದು ಶ್ವಾಸಕೋಶದಲ್ಲಿ ರಂಧ್ರಗಳನ್ನು ಕೊರೆಯುತ್ತದೆ ಮತ್ತು ಶ್ವಾಸಕೋಶದಲ್ಲಿ ಕ್ಷಯರೋಗದಿಂದ ಉಂಟಾದ ರಂದ್ರಗಳು ಮೊದಲೇ ಇದ್ದರೆ ಅವುಗಳನ್ನು ದೊಡ್ಡದು ಮಾಡುತ್ತದೆ.

-ಅಲರ್ಜಿಕ್ ಆಸ್ಪರ್ಗಿಲ್ಲಸ್​ ಸೈನುಸೈಟಿಸ್

ಫಂಗಸ್ ಸೈನಸ್ ಮೇಲೆ ಪ್ರಭಾವ ಬೀರಿ ಅಲರ್ಜಿಕ್ ಮತ್ತು ಉರಿಯ ಪರಿಣಾಮಗಳನ್ನು ಉಂಟು ಮಾಡಿದಾಗ ಈ ಸೋಂಕು ತಲೆದೋರುತ್ತದೆ.

-ಆಸ್ಪರಗಿಲ್ಲೋಮ ಅಥವಾ ಫಂಗಲ್ ಬಾಲ್

ಇದು ಆಸ್ಪರ್ಗಿ​ಲ್ಲೋಸಿಸ್​ನ ತೀವ್ರ ಸ್ವರೂಪವಾಗಿದೆ ಎಂದು ವೈದ್ಯರು ಹೇಳುತ್ತಾರೆ. ಆಸ್ಪರ್ಗಿಲ್ಲಸ್​ ಫಂಗಸ್ ಬಹಳ ದುರ್ಬಲ ರೋಗ ನಿರೋಧಕ ಶಕ್ತಿ ಉಳ್ಳವರಲ್ಲಿ ಗಂಭೀರ ಸ್ವರೂಪದ ಸೋಂಕನ್ನು ಉಂಟು ಮಾಡುತ್ತದೆ.

-ಕುಟೇನಿಯಸ್ (ಚರ್ಮದ) ಆಸ್ಪರ್ಗಿ​ಲ್ಲೋಸಿಸ್​

ಸರ್ಜರಿ ಅಗಿದ್ದಲ್ಲಿ ಇಲ್ಲವೇ ದೇಹದ ಮೇಲೆ ಹಸಿ ಗಾಯವಿದ್ದರೆ ಅವುಗಳ ಮೂಲಕ ಇದು ಚರ್ಮದ ಮೇಲೆ ಪರಿಣಾಮ ಬೀರಬಹುದು. ಹಾಗೆಯೇ ದೇಹದ ಯಾವುದೋ ಭಾಗದಿಂದ ಈ ಸೋಂಕು ಚರ್ಮಕ್ಕೆ ಹರಡುವ ಸಾಧ್ಯತೆ ಇರುತ್ತದೆ.

ಬೇರೆ ವಿಧಗಳು

ಈ ಫಂಗಸ್ ದೇಹದ ಇತರ ಅಂಗಗಳನ್ನೂ ಸೋಂಕಿಗೊಳಪಡಿಸಬಹುದಾಗಿದೆ. ಕಿವಿ, ಮೆದುಳು ಮತ್ತು ಕರಳುಗಳನ್ನು ಈ ಫಂಗಸ್ ಸೋಂಕಿಗೀಡು ಮಾಡಬಹುದು

ಗ್ರೀನ್ ಫಂಗಸ್ ಲಕ್ಷಣಗಳೇನು?

-ಅಲರ್ಜಿಕ್ ಬ್ರಾಂಕೊಪುಲ್ಮೋನರಿ ಆಸ್ಪರ್ಗಿ​ಲ್ಲೋಸಿಸ್

ಕೆಮ್ಮು
ಏದುಸಿರು
ಉಸಿರಾಟದ ತೊಂದರೆ

-ಕ್ರಾನಿಕ್ ಕ್ಯಾವಿಟರಿ ಶ್ವಾಸಕೋಶದ ಆಸ್ಪರ್ಗಿ​ಲ್ಲೋಸಿಸ್

ಕೆಮ್ಮು
ಏದುಸಿರು
ನಿಶ್ಶಕ್ತಿ
ತೂಕ ಕಡಿಮೆಯಾಗುವುದು
ಹೆಮಾಪ್ಟಿಸಿಸ್

-ಅಲರ್ಜಿಕ್ ಆಸ್ಪರ್ಗಿಲ್ಲಸ್​ ಸೈನುಸೈಟಿಸ್

ಮೂಗು ಸೋರುವುದು
ತಲೆನೋವು
ಮೂಗಿನಲ್ಲಿ ಗೊಣ್ಣೆ ಶೇಖರಣೆ
ವಾಸನೆ ಗೊತ್ತಾಗದಿರುವುದು

-ಆಸ್ಪರಗಿಲ್ಲೋಮ ಅಥವಾ ಫಂಗಲ್ ಬಾಲ್

ಕೆಮ್ಮು
ಏದುಸಿರು
ಹೆಮಾಪ್ಟಿಸಿಸ್

-ಇನ್ವೇಸಿವ್ ಆಸ್ಪರ್ಗಿ​ಲ್ಲೋಸಿಸ್

ಗರಿಷ್ಠ ಪ್ರಮಾಣದ ಜ್ವರ
ಹೆಮಾಪ್ಟಿಸಿಸ್
ಮೂಗಿನಲ್ಲಿ ರಕ್ತ ಸೋರುವಿಕೆ
ಏದುಸಿರು
ತೂಕ ಕಡಿಮೆಯಾಗುವುದು

ಗ್ರೀನ್ ಫಂಗಸ್ ಸೋಂಕನ್ನು ತಡೆಯುವುದು ಹೇಗೆ?

ಸ್ವಚ್ಛತೆಯನ್ನು ಕಾಯ್ದುಕೊಳ್ಳುವುದು ಬಹಳ ಮುಖ್ಯ

ಜಾಸ್ತಿ ಧೂಳಿನಿಂದ ತುಂಬಿದ ಮತ್ತು ಕಲುಷಿತ ನೀರು ಬಹಳ ದಿನಗಳಿಂದ ಸಂಗ್ರಹವಾಗಿರುವ ಸ್ಥಳದ ಹತ್ತಿರ ಹೋಗಬಾರದು, ಹೋಗಲೇಬೇಕಾದ ಅನಿವಾರ್ಯತೆ ಇದ್ದರೆ ಉತ್ತಮ ಗುಣಮಟ್ಟದ ಮಾಸ್ಕ್ ಧರಿಸಬೇಕು.

ಮಣ್ಣು ಅಥವಾ ಧೂಳಿನ ಸಂಪರ್ಕಕ್ಕೆ ಬರುವ ಯಾವುದೇ ಚಟುವಟಿಕೆಯಲ್ಲಿ ಭಾಗಿಯಾಗಬಾರದು
ಕೈಕಾಲು ಮುಖವನ್ನು ಸೋಪಿನಿಂದ ತೊಳೆಯುತ್ತಿರಬೇಕು. ಮಣ್ಣು ಅಥವಾ ಧೂಳಿನಲ್ಲಿ ಸಂಪರ್ಕಕ್ಕೆ ಬಂದಿದ್ದರೆ, ಸೋಪು ನೀರಿನಿಂದ ತೊಳೆಯಲೇಬೇಕು.

ತೋಟದಲ್ಲಿ ಕೆಲಸ ಮಾಡುವಾಗ ಫುಲ್ ಪ್ಯಾಂಟ್​, ತುಂಬು ತೋಳಿನ ಶರ್ಟ್​ ಧರಸಿದ್ದರೆ ಒಳ್ಳೆಯದು.
ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಆರೋಗ್ಯಕರ ಮತ್ತು ಪೌಷ್ಟಿಕಾಂಶಭರಿತ ಆಹಾರ ಸೇವಿಸಬೇಕು.

ಇದನ್ನೂ ಓದಿ: Black Fungus ಕೊವಿಡ್ ರೋಗ ಇಲ್ಲದವರಿಗೂ ಬ್ಲಾಕ್ ಫಂಗಸ್ ರೋಗ ಬರುತ್ತದೆಯೇ; ತಜ್ಞರು ಏನಂತಾರೆ?