ನಿಮಗೂ ಪದೇ ಪದೇ ತಲೆ ನೋವಿನ ಜೊತೆಗೆ ಕಣ್ಣು ನೋವು ಬರುತ್ತಾ? ಇದಕ್ಕೆ ಕಾರಣ ಏನ್ ಗೊತ್ತಾ?
ಇತ್ತೀಚಿನ ದಿನಗಳಲ್ಲಿ ಕಣ್ಣು ಮತ್ತು ಹಣೆಯ ಭಾಗದಲ್ಲಿ ಪದೇ ಪದೇ ನೋವು ಕಂಡುಬರುವುದು ಬಹಳ ಸಾಮಾನ್ಯವಾಗಿದೆ. ಆದರೆ ಇದನ್ನು ಆಯಾಸ ಎಂದು ಭಾವಿಸಿ ಜನ ನಿರ್ಲಕ್ಷ್ಯ ಮಾಡುತ್ತಾರೆ. ನಿಮಗೆ ಗೊತ್ತಾ? ಇದು ಕೆಲವು ಗಂಭೀರ ಕಾಯಿಲೆಗಳ ಲಕ್ಷಣವೂ ಆಗಿರಬಹುದು. ಈ ಬಗ್ಗೆ ಡಾ. ಸುಭಾಷ್ ಗಿರಿ ಅವರು ಒಂದಿಷ್ಟು ಮಾಹಿತಿ ಹಂಚಿಕೊಂಡಿದ್ದು ಕಣ್ಣು ಮತ್ತು ಹಣೆಯ ಭಾಗದಲ್ಲಿ ನೋವು ಕಂಡುಬರುವುದು ವಿವಿಧ ಕಾಯಿಲೆಗಳಿಗೆ ಸಂಬಂಧಿಸಿರಬಹುದು ಜೊತೆಗೆ ಅವುಗಳನ್ನು ಸಮಯಕ್ಕೆ ಸರಿಯಾಗಿ ಗುರುತಿಸುವುದು ಕೂಡ ಮುಖ್ಯವಾಗುತ್ತದೆ ಎಂದಿದ್ದಾರೆ. ಈ ಬಗ್ಗೆ ಮತ್ತಷ್ಟು ಮಾಹಿತಿ ಸ್ಟೋರಿಯಲ್ಲಿದೆ.

ಇತ್ತೀಚಿನ ದಿನಗಳಲ್ಲಿ, ಜೀವನಶೈಲಿಯಲ್ಲಿ ಮಾಡಿಕೊಂಡಿರುವ ಬದಲಾವಣೆ, ಸ್ಕ್ರೀನ್ ಸಮಯದ ಹೆಚ್ಚಳ ಮತ್ತು ಒತ್ತಡದಿಂದಾಗಿ, ಅನೇಕರಲ್ಲಿ ಕಣ್ಣು ಮತ್ತು ತಲೆ ನೋವು (Headache) ಹೆಚ್ಚಾಗಿ ಕಂಡುಬರುತ್ತಿದೆ. ಕೆಲವೊಮ್ಮೆ ಈ ನೋವು ಸೌಮ್ಯವಾಗಿರಬಹುದು ಇನ್ನು ಕೆಲವೊಮ್ಮೆ ತುಂಬಾ ತೀವ್ರವಾಗಿರಬಹುದು. ಈ ರೀತಿಯ ಸಮಸ್ಯೆಗಳು ದೈನಂದಿನ ಕೆಲಸ ಮಾಡಲು ತುಂಬಾ ಕಷ್ಟ ಉಂಟುಮಾಡುತ್ತದೆ. ಕೆಲವರಿಗೆ ಬೆಳಿಗ್ಗೆ ಎದ್ದ ತಕ್ಷಣ ಈ ಸಮಸ್ಯೆ ಆರಂಭವಾಗುತ್ತದೆ ಮತ್ತೊಂದಿಷ್ಟು ಜನರಲ್ಲಿ ಮೊಬೈಲ್ ಅಥವಾ ಲ್ಯಾಪ್‌ಟಾಪ್ ಅನ್ನು ದೀರ್ಘಕಾಲ ಬಳಸಿದ ನಂತರ ಈ ರೀತಿಯಾಗುತ್ತದೆ. ಆದರೆ ಇದನ್ನು ಸಾಮಾನ್ಯ ಆಯಾಸ ಎಂದು ಭಾವಿಸಿ ನಿರ್ಲಕ್ಷಿಸುವವರೇ ಹೆಚ್ಚು. ಕಣ್ಣು ಮತ್ತು ಹಣೆಯ ಭಾಗದಲ್ಲಿ ನೋವು ಕಂಡುಬರುವುದು ವಿವಿಧ ಕಾಯಿಲೆಗಳಿಗೆ ಸಂಬಂಧಿಸಿರಬಹುದು ಜೊತೆಗೆ ಅವುಗಳನ್ನು ಸಮಯಕ್ಕೆ ಸರಿಯಾಗಿ ಗುರುತಿಸುವುದು ಕೂಡ ಮುಖ್ಯವಾಗುತ್ತದೆ.
ಕಣ್ಣು ಮತ್ತು ಹಣೆಯ ಭಾಗದಲ್ಲಿ ನೋವು ಕಂಡುಬರುವುದಕ್ಕೆ ಕಾರಣವೇನು?
ಆರ್‌ಎಂಎಲ್ ಆಸ್ಪತ್ರೆಯ ವೈದ್ಯಕೀಯ ವಿಭಾಗದ ನಿರ್ದೇಶಕರಾದ ಪ್ರೊಫೆಸರ್ ಡಾ. ಸುಭಾಷ್ ಗಿರಿ ಅವರು ಹೇಳುವ ಪ್ರಕಾರ, ಕಣ್ಣು ಮತ್ತು ಹಣೆಯ ಭಾಗದಲ್ಲಿ ಅಥವಾ ತಲೆ ನೋವು ಕಂಡುಬರುವುದಕ್ಕೆ ಸೈನಸ್ ಕೂಡ ಕಾರಣವಾಗಿರಬಹುದು. ಸೈನಸ್‌ಗಳಲ್ಲಿ ಉರಿಯೂತ ಅಥವಾ ಸೋಂಕು ಇದ್ದಾಗ ಹಣೆ, ಮೂಗಿನ ಮೂಲ ಮತ್ತು ಕಣ್ಣುಗಳ ಸುತ್ತಲೂ ಭಾರವಾದ ಭಾವನೆ ಮತ್ತು ನೋವು ಕಂಡುಬರಬಹುದು. ಅಷ್ಟೇ ಅಲ್ಲ, ಮೈಗ್ರೇನ್ ಕೂಡ ಒಂದು ಪ್ರಮುಖ ಕಾರಣವಾಗಿದ್ದು, ಇದು ತಲೆಯ ಒಂದು ಭಾಗದಲ್ಲಿ ತೀವ್ರವಾದ ನೋವು, ವಾಕರಿಕೆ, ವಾಂತಿಯನ್ನು ಉಂಟುಮಾಡಬಹುದು. ಇದಲ್ಲದೆ, ಕಣ್ಣುಗಳ ದೌರ್ಬಲ್ಯ, ಕನ್ನಡಕ ಪ್ರಿಸ್ಕ್ರಿಪ್ಷನ್ ಸರಿಯಾಗಿ ಇರದಿರುವುದು ಅಥವಾ ದೀರ್ಘಕಾಲೀನ ಸ್ಕ್ರೀನ್ ಬಳಕೆಯಿಂದ ಕಣ್ಣಿನ ಒತ್ತಡ ಕೂಡ ಈ ರೀತಿಯ ನೋವನ್ನು ಹೆಚ್ಚಿಸಬಹುದು. ಕೆಲವು ಸಂದರ್ಭಗಳಲ್ಲಿ, ಅಧಿಕ ರಕ್ತದೊತ್ತಡ, ನಿರ್ಜಲೀಕರಣ ಮತ್ತು ಅತಿಯಾದ ಒತ್ತಡವು ಕಣ್ಣು ಮತ್ತು ಹಣೆಯಲ್ಲಿ ನಿರಂತರ ನೋವನ್ನು ಉಂಟುಮಾಡಬಹುದು. ಅಷ್ಟೇ ಅಲ್ಲ, ನಿದ್ರೆಯ ಕೊರತೆಯು ಈ ಸಮಸ್ಯೆಯನ್ನು ಇನ್ನಷ್ಟು ಹದಗೆಡಿಸಬಹುದು.
ಯಾರು ಹೆಚ್ಚು ಮುನ್ನೆಚ್ಚರಿಕೆ ವಹಿಸಬೇಕು?
ಮೊಬೈಲ್ ಫೋನ್, ಲ್ಯಾಪ್‌ಟಾಪ್ ಅಥವಾ ದೀರ್ಘಕಾಲ ಟಿವಿ ನೋಡಿದ ನಂತರ ಈ ನೋವು ಹೆಚ್ಚಾಗುತ್ತದೆ. ಬೆಳಿಗ್ಗೆ, ಸೈನಸ್ ಸಮಸ್ಯೆಗಳಿರುವ ರೋಗಿಗಳು ಹೆಚ್ಚಿನ ನೋವನ್ನು ಅನುಭವಿಸಬಹುದು. ಒತ್ತಡ, ಸಾಕಷ್ಟು ನಿದ್ರೆ ಮಾಡದಿದ್ದಾಗ ಮತ್ತು ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುವುದರಿಂದ ನೋವು ಇನ್ನಷ್ಟು ಹೆಚ್ಚಾಗಬಹುದು. ಮಕ್ಕಳು, ವೃದ್ಧರು ಮತ್ತು ಈಗಾಗಲೇ ಮೈಗ್ರೇನ್ ಅಥವಾ ಕಣ್ಣಿಗೆ ಸಂಬಂಧಪಟ್ಟ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ಇದು ಹೆಚ್ಚು ಅಪಾಯಕಾರಿ. ನೋವು, ಮಸುಕಾದ ದೃಷ್ಟಿ, ವಾಂತಿ, ಅಧಿಕ ಜ್ವರ ಅಥವಾ ಕಣ್ಣುಗಳಲ್ಲಿ ಊತ ಕಂಡುಬಂದರೆ, ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.
ಇದನ್ನೂ ಓದಿ: ಸಣ್ಣ ತಲೆನೋವು ಎಂದು ನಿರ್ಲಕ್ಷ್ಯ ಮಾಡಿದರೆ ದೃಷ್ಟಿ ಕಳೆದುಕೊಳ್ಳಬೇಕಾದೀತು ಎಚ್ಚರ!
ನಿಮ್ಮನ್ನು ನೀವು ಹೇಗೆ ರಕ್ಷಿಸಿಕೊಳ್ಳಬೇಕು?
- ಪ್ರತಿದಿನ ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯಿರಿ.
- ಅತಿಯಾದ ಸ್ಕ್ರೀನ್ ಬಳಕೆಯನ್ನು ತಪ್ಪಿಸಿ ಮತ್ತು ನಿಮ್ಮ ಕಣ್ಣುಗಳಿಗೆ ಮಧ್ಯಂತರವಾಗಿ ವಿಶ್ರಾಂತಿ ನೀಡಿ.
- ಸರಿಯಾದ ಕನ್ನಡಕವನ್ನು ಧರಿಸಿ ಮತ್ತು ನಿಮ್ಮ ಕಣ್ಣುಗಳನ್ನು ನಿಯಮಿತವಾಗಿ ಪರೀಕ್ಷಿಸಿಕೊಳ್ಳಿ.
- ಶೀತ, ಧೂಳು ಮತ್ತು ಮಾಲಿನ್ಯದಿಂದ ನಿಮ್ಮನ್ನು ನೀವು ರಕ್ಷಿಸಿಕೊಳ್ಳಿ; ನಿಮಗೆ ಸೈನಸ್ ಸಮಸ್ಯೆಗಳಿದ್ದರೆ ವಿಶೇಷ ಕಾಳಜಿ ವಹಿಸಿ.
- ಒತ್ತಡವನ್ನು ಕಡಿಮೆ ಮಾಡಲು ಸರಿಯಾಗಿ ನಿದ್ರೆ ಮಾಡಿ. ಅದರ ಜೊತೆಗೆ ಯೋಗ ಅಥವಾ ಧ್ಯಾನವನ್ನು ಅಭ್ಯಾಸ ಮಾಡಿ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
