ಬೀಟ್ರೂಟ್ (Beetroot)ನಿಂದ ಉಪಯೋಗಗಳು ಹತ್ತಾರು. ದೇಹದಲ್ಲಿ ಹಿಮೋಗ್ಲೋಬಿನ್ ಪ್ರಮಾಣ ಹೆಚ್ಚು ಮಾಡುವಲ್ಲಿಂದ ಹಿಡಿದು, ಸೌಂದರ್ಯ ವೃದ್ಧಿಯವರೆಗೆ ಹಲವು ಉಪಯೋಗಗಳು ಈ ಬೀಟ್ರೂಟ್ನಿಂದ ಇವೆ. ಇದೀಗ ಬೀಟ್ರೂಟ್ಗೆ ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸುವ ಶಕ್ತಿಯೂ ಇದೆ ಎಂಬುದು ಹೊಸದೊಂದು ಅಧ್ಯಯನದಿಂದ ಗೊತ್ತಾಗಿದೆ. ಈ ಬಗ್ಗೆ ಜರ್ನಲ್ ಆಫ್ ನ್ಯೂಟ್ರಿಷಿಯನ್ ವರದಿ ಮಾಡಿದೆ. ಪ್ರತಿದಿನ ನಿಯಮಿತವಾಗಿ ಒಂದು ಗ್ಲಾಸ್ ಬೀಟ್ರೂಟ್ ಜ್ಯೂಸ್ ಕುಡಿಯುವುದಿಂದ ಬ್ಲಡ್ ಪ್ರೆಷರ್ (ರಕ್ತದ ಒತ್ತಡ) ನಿಯಂತ್ರಣಕ್ಕೆ ಬರುತ್ತದೆ ಎಂದು ಅಧ್ಯಯನದಿಂದ ಸಾಬೀತಾಗಿದ್ದಾಗಿ ಹೇಳಲಾಗಿದೆ. ಅಂದರೆ ಕೆಲವರಲ್ಲಿ ಅತ್ಯಧಿಕ ಪ್ರಮಾಣದಲ್ಲಿ ರಕ್ತದೊತ್ತಡ ಇದ್ದು, ಔಷಧದಿಂದಲೂ ಅದು ನಿಯಂತ್ರಣ ಆಗುವ ಹಂತ ಕಳೆದುಹೋಗಿರುತ್ತದೆ. ಅಂಥವರು ಪ್ರತಿನಿತ್ಯ ಒಂದು ಗ್ಲಾಸ್ ಬೀಟ್ರೂಟ್ ಜ್ಯೂಸ್ ಕುಡಿದರೆ ಕ್ರಮೇಣ ರಕ್ತದೊತ್ತಡ ನಿಯಂತ್ರಣವಾಗುತ್ತದೆ ಎಂಬುದನ್ನು ಅಧ್ಯಯನ ಸಾಬೀತುಪಡಿಸಿದ್ದಾಗಿ ಜರ್ನಲ್ ಆಫ್ ಹೈಪರ್ಟೆನ್ಷನ್ ಕೂಡ ವರದಿ ಮಾಡಿದೆ.
ಹಾಗೇ ಇನ್ನೊಂದು ಅಧ್ಯಯನದ ಬಗ್ಗೆ ಜರ್ನಲ್ ಆಫ್ ಅಪ್ಲೈಡ್ ಸೈಕಾಲಜಿ ವರದಿ ಮಾಡಿದ್ದು ಅದರಲ್ಲಿ, ಬಾಹ್ಯ ನಾಳೀಯ (Peripheral Vascular) ಕಾಯಿಲೆಗಳು ಅಂದರೆ ಕಾಲು, ತೋಳುಗಳು, ಹೊಟ್ಟೆ, ಕಿಡ್ನಿಗಳಿಗೆ ರಕ್ತ ಸಾಗಿಸುವ ನಾಳಗಳಿಗೆ ಸಂಬಂಧಪಟ್ಟ ಕಾಯಿಲೆಗಳಿಂದ ಬಳಲುತ್ತಿರುವವರಿಗೂ ಬೀಟ್ರೂಟ್ ಜ್ಯೂಸ್ ತುಂಬ ಅನುಕೂಲ ಎಂದು ಹೇಳಿದೆ.
ಅಧಿಕರಕ್ತದೊತ್ತಡವನ್ನು ಬೀಟ್ರೂಟ್ ಹೇಗೆ ಕಡಿಮೆ ಮಾಡುತ್ತದೆ?
ಬೀಟ್ರೂಟ್ನಲ್ಲಿ ಇರುವ ನೈಟ್ರಿಕ್ ಆಕ್ಸೈಡ್ ಅಂಶದಿಂದ ಅಧಿಕ ರಕ್ತದೊತ್ತಡ ನಿಯಂತ್ರಣಕ್ಕೆ ಬರುತ್ತದೆ ಎಂಬುದನ್ನು ಅಧ್ಯಯನಗಳು ಹೇಳಿವೆ. ಈ ನೈಟ್ರಿಕ್ ಆಕ್ಸೈಡ್ ಒಂದು ಅಣು ಆಗಿದ್ದು, ದೇಹದಾದ್ಯಂತ ಸಂಕೇತಗಳನ್ನು ರವಾನಿಸುತ್ತದೆ ಮತ್ತು ದೇಹದಲ್ಲಿ ಕೋಶಗಳು ಪರಸ್ಪರ ಒಂದಕ್ಕೊಂದು ಪೂರಕವಾಗಿ ಕೆಲಸ ಮಾಡಲು ಸಹಕಾರಿಯಾಗಿದೆ. ಬೀಟ್ರೂಟ್ನಲ್ಲಿರುವ ಉತ್ಕರ್ಷಣ ನಿರೋಧಕಗಳು (antioxidants) ಕೊಬ್ಬಿನ ಅಂಶವನ್ನು ಕಡಿಮೆ ಮಾಡುತ್ತವೆ ಮತ್ತು ರಕ್ತದ ಒತ್ತಡವನ್ನು ನಿಯಂತ್ರಿಸುತ್ತವೆ ಎಂದು ಡಿ.ಕೆ.ಪ್ರಕಾಶನದ ಹೀಲಿಂಗ್ ಆಫ್ ಫುಡ್ ಪುಸ್ತಕದಲ್ಲಿ ಬರೆಯಲಾಗಿದೆ. ಹಾಗೇ ಇದರಲ್ಲಿರುವ ಬಿ ವಿಟಮಿನ್ಗಳು ನರಗಳ ಕಾರ್ಯವನ್ನು ಸುಗಮಗೊಳಿಸುತ್ತವೆ. ಇದರಿಂದಾಗಿ ಹೃದಯ ಬಡಿತವೂ ನಿಯಮಿತವಾಗಿ ಆಗುತ್ತದೆ.
ಬೀಟ್ರೂಟ್ನಲ್ಲಿರುವ ಕಬ್ಬಿಣಾಂಶ ಮತ್ತು ಉತ್ಕರ್ಷಣ ನಿರೋಧಕಗಳು ರಕ್ತ ಶುದ್ಧೀಕರಣವನ್ನು ಸುಗಮಗೊಳಿಸಿ, ಅನೀಮಿಯಾವನ್ನು ತಡೆಗಟ್ಟುತ್ತವೆ. ರಕ್ತಸಂಚಾರ ಸುಗಮವಾದಷ್ಟೂ ರಕ್ತದೊತ್ತಡ ಸಹಜವಾಗಿಯೇ ನಿಯಂತ್ರಿತವಾಗಿರುತ್ತದೆ. ಹೀಗಾಗಿ ಅಧಿಕ ರಕ್ತದೊತ್ತಡ ನಿಯಂತ್ರಣಕ್ಕೆ ಬೀಟ್ರೂಟ್ ಅತ್ಯುತ್ತಮ ತರಕಾರಿ ಎಂದು ಹಲವು ಅಧ್ಯಯನಗಳು ಹೇಳಿವೆ.
ಇದನ್ನೂ ಓದಿ: ಸಬ್ಬಸಿಗೆ ಸೊಪ್ಪು: ಮಲಬದ್ಧತೆ ಸಮಸ್ಯೆಯ ನಿವಾರಣೆಯ ಜತೆಗೆ ಎಷ್ಟೆಲ್ಲಾ ಆರೋಗ್ಯ ಪ್ರಯೋಜನಗಳಿವೆ ತಿಳಿಯಿರಿ
Health tips Beetroot Can help to control hypertension
Published On - 8:05 am, Wed, 21 July 21