ನವದೆಹಲಿ: ನಿಮಗೆ ಪದೇಪದೆ ಉಗುರು (Fingernails) ಕಚ್ಚುವ ಅಭ್ಯಾಸವಿದೆಯಾ? ನಿಮಗೆ ಅದು ಬಹಳ ಸಾಮಾನ್ಯ ವಿಷಯವಾಗಿರಬಹುದು. ಆದರೆ, ಅದರ ಹಿಂದೆ ದೊಡ್ಡ ಸಮಸ್ಯೆಯೇ ಅಡಗಿದೆ ಎಂಬುದು ನೀವು ತಿಳಿದುಕೊಳ್ಳಲೇಬೇಕಾದ ಸಂಗತಿ. ಆಗಾಗ ಉಗುರು ಕಚ್ಚುವುದು ಅನೈರ್ಮಲ್ಯ ಮತ್ತು ಸೋಂಕುಗಳಿಗೆ ಕಾರಣವಾಗಬಹುದು. ಇದರಿಂದ ನಿಮ್ಮ ಆರೋಗ್ಯಕ್ಕೆ ಸಮಸ್ಯೆ ಉಂಟಾಗುತ್ತದೆ. ಉಗುರು ಕಚ್ಚುವಿಕೆಯು (Nail Bite) ಉರಿಯೂತವನ್ನು ಉಂಟುಮಾಡುತ್ತದೆ. ಇದು ಉಗುರಿನ ಸುತ್ತಲಿನ ಚರ್ಮದ ಮೇಲೆ ಕಿರಿಕಿರಿಯನ್ನು ಉಂಟುಮಾಡಬಹುದು.
ಪರೋನಿಕಿಯಾ ಎಂದು ಕರೆಯಲ್ಪಡುವ ಈ ಸ್ಥಿತಿಯು ಬ್ಯಾಕ್ಟೀರಿಯಾಗಳು ಒಣಗಿದ ಚರ್ಮದ ಹೊರಪೊರೆ ಮತ್ತು ಉಗುರಿನ ಪದರವನ್ನು ಪ್ರವೇಶಿಸಿದಾಗ ಉಂಟಾಗುತ್ತದೆ. ವೈದ್ಯರ ಪ್ರಕಾರ, ಪರೋನಿಕಿಯಾವು ಕೀವು ಮತ್ತು ಊತವನ್ನು ಉಂಟುಮಾಡುತ್ತದೆ. ಇದೇ ರೀತಿಯ ಸೋಂಕು ಮುಂದುವರಿದರೆ ಮತ್ತು ಚಿಕಿತ್ಸೆ ನೀಡದಿದ್ದರೆ ಜ್ವರ, ಆಯಾಸ ಮತ್ತು ತಲೆತಿರುಗುವಿಕೆಯಂತಹ ಸಮಸ್ಯೆ ಕೂಡ ಎದುರಾಗುತ್ತದೆ.
ತೀವ್ರವಾದ ಮತ್ತು ದೀರ್ಘಕಾಲದ ಪರೋನಿಕಿಯಾ ಹೆಚ್ಚಾಗಿ ಮಧುಮೇಹ ಹೊಂದಿರುವ ಜನರ ಮೇಲೆ ಪರಿಣಾಮ ಬೀರುತ್ತದೆ ಎಂದು ವೈದ್ಯರು ಹೇಳುತ್ತಾರೆ. ಪರೋನಿಕಿಯಾ ಹೆಚ್ಚಾಗಿ ಬೆರಳಿನ ಉಗುರುಗಳ ಸುತ್ತಲೂ ಇರುತ್ತದೆ ಮತ್ತು ತ್ವರಿತವಾಗಿ ಬೆಳವಣಿಗೆಯಾಗುತ್ತದೆ. ಇದು ಸ್ಟ್ಯಾಫಿಲೋಕೊಕಸ್ ಮತ್ತು ಎಂಟರೊಕೊಕಸ್ ಬ್ಯಾಕ್ಟೀರಿಯಾದಿಂದ ಉಂಟಾಗುತ್ತದೆ ಎಂದು ವೈದ್ಯರು ಹೇಳುತ್ತಾರೆ.
ಇದನ್ನೂ ಓದಿ: Nail Health: ಆರೋಗ್ಯಕರ ಉಗುರುಗಳಿಗಾಗಿ ಈ ಆಹಾರ ಸೇವಿಸಿ, ವೈದ್ಯರ ಸಲಹೆ ಇಲ್ಲಿದೆ
ನಿಮ್ಮ ಬೆರಳುಗಳು ಅಥವಾ ಕಾಲ್ಬೆರಳುಗಳ ಮೇಲೆ ದೀರ್ಘಕಾಲದ ಪರೋನಿಕಿಯಾ ಉಂಟಾಗುತ್ತದೆ. ಇದು ಇದ್ದಕ್ಕಿಂತೆ ಬೆಳೆಯುವುದಿಲ್ಲ, ನಿಧಾನವಾಗಿ ರೂಪ ತಳೆಯುತ್ತದೆ. ಇದು ಹೆಚ್ಚಾಗಿ ಯೀಸ್ಟ್ ಸೋಂಕು ಮತ್ತು ನಿರಂತರವಾಗಿ ನೀರಿನಲ್ಲಿ ಕೆಲಸ ಮಾಡುವ ಜನರಲ್ಲಿ ಸಂಭವಿಸುತ್ತದೆ. ಒದ್ದೆಯಾದ ಚರ್ಮ ಮತ್ತು ಅತಿಯಾದ ನೆನೆಸುವಿಕೆಯು ಚರ್ಮದ ಹೊರಪೊರೆಯ ನೈಸರ್ಗಿಕ ತಡೆಗೋಡೆಗೆ ಧಕ್ಕೆ ತರುತ್ತದೆ. ಇದು ಯೀಸ್ಟ್ ಮತ್ತು ಬ್ಯಾಕ್ಟೀರಿಯಾಗಳು ಬೆಳೆಯಲು ಅನುವು ಮಾಡಿಕೊಡುತ್ತದೆ.
ರೋಗ ಲಕ್ಷಣಗಳು:
– ಉಗುರಿನ ಸುತ್ತ ಕೆಂಪನೆಯ ಚರ್ಮ
– ಚರ್ಮದ ಮೃದುತ್ವ
– ಕೀವು ತುಂಬಿದ ಗುಳ್ಳೆಗಳು
– ಉಗುರಿನ ಆಕಾರ, ಬಣ್ಣ ಅಥವಾ ವಿನ್ಯಾಸದಲ್ಲಿ ಬದಲಾವಣೆಗಳು
– ಉಗುರು ಬೇರ್ಪಡುವಿಕೆ
– ನೋವು
– ಜ್ವರ ಮತ್ತು ತಲೆತಿರುಗುವಿಕೆ
ಇದನ್ನೂ ಓದಿ: Nail Art: ನಿಮ್ಮ ಉಗುರುಗಳ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಲು ವಿವಿಧ ವಿನ್ಯಾಸಗಳ ನೈಲ್ ಆರ್ಟ್ ಇಲ್ಲಿವೆ
ಉಗುರಿನ ಸೋಂಕನ್ನು ತಡೆಯುವುದು ಹೇಗೆ?:
ಉಗುರಿನ ಸೋಂಕುಗಳು ಅಥವಾ ಅದರಿಂದ ಉಂಟಾಗುವ ಕಾಯಿಲೆಗಳನ್ನು ತಡೆಯಬೇಕೆಂದರೆ,
– ನಿಮ್ಮ ಕೈಗಳನ್ನು ತೊಳೆದ ನಂತರ ಯಾವಾಗಲೂ ಮಾಯಿಶ್ಚರೈಸರ್ ಹಚ್ಚಿಕೊಳ್ಳಿ.
– ಉಗುರುಗಳನ್ನು ಕಚ್ಚುವುದು ಅಥವಾ ಅಗಿಯುವುದನ್ನು ನಿಲ್ಲಿಸಿ.
– ನಿಮ್ಮ ನೇಲ್ ಕಟರ್ ಅನ್ನು ಬೇರೆಯವರೊಂದಿಗೆ ಎಂದಿಗೂ ಹಂಚಿಕೊಳ್ಳಬೇಡಿ. ನೇಲ್ ಕಟ್ ನಂತರ ಅದನ್ನು ತೊಳೆಯಲು ಮರೆಯಬೇಡಿ.
– ನಿಮ್ಮ ಕೈ ಮತ್ತು ಉಗುರುಗಳನ್ನು ಸ್ವಚ್ಛವಾಗಿಟ್ಟುಕೊಳ್ಳಿ ಮತ್ತು ಒಣಗಿಸಿಕೊಳ್ಳಿ.
– ದೀರ್ಘಕಾಲದವರೆಗೆ ಕೈಗಳನ್ನು ನೀರಿನಲ್ಲಿ ಮುಳುಗಿಸುವುದನ್ನು ತಪ್ಪಿಸಿ.
– ಉಗುರುಗಳನ್ನು ಚಿಕ್ಕದಾಗಿ ಕಟ್ ಮಾಡಿ.