ಇಂದಿನ ಜನರ ಜೀವನ ಶೈಲಿ ಹಾಗೂ ಆಹಾರ ಕ್ರಮದಿಂದ ಒಂದಲ್ಲ ಒಂದು ಆರೋಗ್ಯ ಸಮಸ್ಯೆಗಳು ಕಾಡುತ್ತಿರುತ್ತದೆ. ಅದರಲ್ಲೂ ನಮ್ಮ ಊಟ ತಿಂಡಿಯಿಂದ ಪ್ರಾರಂಭವಾಗಿ ಮಲಗುವ ಸಮಯದವರೆಗಿನ ಸಣ್ಣ ಸಣ್ಣ ತಪ್ಪುಗಳಿಂದಲೇ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಕೆಲವರಿಗೆ ಊಟ ಮಾಡಿದ ತಕ್ಷಣವೇ ಹೊಟ್ಟೆ ನೋವು ಶುರುವಾಗುತ್ತದೆ. ಸ್ವಲ್ಪ ಊಟ ಮಾಡಿದರೂ ಹೆಚ್ಚು ಊಟ ಮಾಡಿದ್ದಂತೆ ಅನಿಸುತ್ತದೆ. ಆದರೆ ಹೊಟ್ಟೆಯಲ್ಲಿ ಹುಣ್ಣು, ಥೈರಾಯ್ಡ್, ಎದೆಯುರಿ, ಮಲಬದ್ಧತೆ, ಒತ್ತಡದಿಂದ ಏನಾದ್ರು ತಿಂದ ನಂತರವೂ ಹೊಟ್ಟೆ ನೋವು ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಹಾಗಾದ್ರೆ ಊಟ ಮಾಡಿದ ತಕ್ಷಣ ಹೊಟ್ಟೆ ನೋವು ಬಾರದಂತೆ ತಡೆಯಲು ಈ ಕೆಲವು ಸಲಹೆಗಳನ್ನು ಅನುಸರಿಸುವುದು ಉತ್ತಮ.
ಸೇವಿಸಿದ ಆಹಾರ ಜೀರ್ಣವಾಗಬೇಕಾದರೆ ನೀರು ಬೇಕೇ ಬೇಕು. ಆದರೆ ಹೆಚ್ಚಿನವರು ಅಗತ್ಯಕ್ಕಿಂತ ಕಡಿಮೆ ಪ್ರಮಾಣದಲ್ಲಿ ನೀರು ಕುಡಿಯುತ್ತಾರೆ. ಇದರಿಂದ ದೇಹದಲ್ಲಿ ನೀರಿನ ಕೊರತೆ ಉಂಟಾಗಿ ಸೇವಿಸಿದ ಆಹಾರವು ಸರಿಯಾಗಿ ಜೀರ್ಣವಾಗುವುದಿಲ್ಲ. ಹೀಗಾಗಿ ಹೊಟ್ಟೆಯೊಳಗೆ ನೋವು ಅಥವಾ ಸೆಳೆತದಂತಹ ಅನುಭವವಾಗುತ್ತದೆ. ಆದ ಕಾರಣ ಊಟವಾದ ಬಳಿಕ ಹಾಗೂ ದಿನನಿತ್ಯ ಇಂತಿಷ್ಟು ಲೀಟರ್ ನೀರು ಕುಡಿಯುವ ಅಭ್ಯಾಸವನ್ನು ಬೆಳೆಸಿಕೊಳ್ಳಿ.
ಹೆಚ್ಚಿನವರು ಊಟ ಮಾಡಿದ ತಕ್ಷಣವೇ ಹಾಸಿಗೆಯ ಮೇಲೆ ಒರಗಿಕೊಳ್ಳುತ್ತಾರೆ. ಮಲಗಿದ್ದಾಗ ಹೊಟ್ಟೆಯ ಆಮ್ಲವು ಹಿಂದಕ್ಕೆ ಮತ್ತು ಮೇಲಕ್ಕೆ ಚಲಿಸುತ್ತದೆ. ಊಟವಾದ ತಕ್ಷಣವೇ ಮಲಗುವ ಅಭ್ಯಾಸವು ಹೊಟ್ಟೆ ನೋವು ಮತ್ತು ಸೆಳೆತಕ್ಕೆ ಕಾರಣವಾಗಬಹುದು.
ಕೆಲವರು ಅತಿಯಾಗಿ ತಿನ್ನುತ್ತಾರೆ. ಒಂದೇ ಬಾರಿಗೆ ಸಾಕಷ್ಟು ಆಹಾರ ಸೇವಿಸಿದ್ರೆ, ಹೊಟ್ಟೆ ನೋವು ಉಂಟಾಗಬಹುದು. ಅದಲ್ಲದೇ, ಕಳಪೆ ಜೀರ್ಣಕ್ರಿಯೆಯು ಹೊಟ್ಟೆ ನೋವಿಗೆ ಕಾರಣ ಎನ್ನಬಹುದು. ಹೀಗಾಗಿ ನಿಧಾನವಾಗಿ ಜೀರ್ಣವಾಗುವ, ಜೀರ್ಣಿಸಿಕೊಳ್ಳಲು ಕಷ್ಟಕರವಾದ ಆಮ್ಲೀಯ ಆಹಾರ, ಬ್ರೆಡ್, ಮಸಾಲೆಯುಕ್ತ ಆಹಾರವನ್ನು ಆದಷ್ಟು ಕಡಿಮೆ ಮಾಡುವುದು ಉತ್ತಮ.
ಇದನ್ನೂ ಓದಿ : ಮುಟ್ಟಿನ ಸಮಯದಲ್ಲಿ ಹೊಟ್ಟೆಯುಬ್ಬರಕ್ಕೆ ಕಾರಣವೇನು? ತಜ್ಞರ ಮಾಹಿತಿ ಇಲ್ಲಿದೆ
ಅಸಿಡಿಕ್ ಆಹಾರಗಳಾದ ಹಣ್ಣಿನ ರಸ, ಸಂಸ್ಕರಿಸಿದ ಚೀಸ್ ಗಳ ಸೇವನೆಯೂ ಹೊಟ್ಟೆ ನೋವಿಗೆ ಆಹ್ವಾನಕೊಟ್ಟಂತೆ. ಅದಲ್ಲದೇ, ಊಟ ಮಾಡಿದ ತಕ್ಷಣವೇ ಸಿಹಿ ಸೇವಿಸುವುದನ್ನು ಕಡಿಮೆ ಮಾಡುವುದರಿಂದ ಈ ಸಮಸ್ಯೆಯನ್ನು ದೂರವಾಗಿಸಬಹುದು.
ಊಟದ ನಂತರ ಹೊಟ್ಟೆ ನೋವನ್ನು ತಪ್ಪಿಸಲು ಬಯಸಿದರೆ, ಸ್ವಲ್ಪ ಸಮಯದವರೆಗೆ ನಡೆಯುವ ಅಭ್ಯಾಸವಿರಲಿ. ರಾತ್ರಿಯ ಊಟದ ನಂತರ ಅರ್ಧ ಗಂಟೆಯಾದರೂ ನಡೆಯಬೇಕು ಎನ್ನುತ್ತಾರೆ ತಜ್ಞರು. ಒಂದು ಸಣ್ಣ ನಡಿಗೆಯೂ ಸೇವಿಸಿದ ಆಹಾರವು ಜೀರ್ಣವಾಗಲು ಸಹಾಯ ಮಾಡುತ್ತದೆ. ಇದು ಹೊಟ್ಟೆಗೆ ಸಂಬಂಧ ಪಟ್ಟಂತಹ ಸಮಸ್ಯೆಗಳು ಬಾರದಂತೆ ತಡೆಯುತ್ತದೆ.
ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ