ನಿಮ್ಮ ದೇಹಕ್ಕಷ್ಟೇ ಅಲ್ಲ ಹೃದಯಕ್ಕೂ ಬೇಕು ಸೂರ್ಯನ ಬೆಳಕು!

|

Updated on: Oct 28, 2023 | 2:40 PM

ಸೂರ್ಯನ ಕಿರಣಗಳು ಹಲವು ರೀತಿಯಲ್ಲಿ ನಮ್ಮ ಹೃದಯದ ಆರೋಗ್ಯವನ್ನು ಕಾಪಾಡುತ್ತದೆ. ನಿಮ್ಮ ಹೃದಯವನ್ನು ಆರೋಗ್ಯವಾಗಿಡಲು ಸೂರ್ಯನ ಬೆಳಕು ಕೂಡ ಸಾಕಷ್ಟು ಮುಖ್ಯವಾಗಿದೆ ಎಂಬುದು ನಿಮ್ಮಲ್ಲಿ ಅನೇಕರಿಗೆ ತಿಳಿದಿರುವುದಿಲ್ಲ.

ನಿಮ್ಮ ದೇಹಕ್ಕಷ್ಟೇ ಅಲ್ಲ ಹೃದಯಕ್ಕೂ ಬೇಕು ಸೂರ್ಯನ ಬೆಳಕು!
ಸೂರ್ಯನ ಬೆಳಕು
Image Credit source: iStock
Follow us on

ಹೃದಯ ಮತ್ತು ರಕ್ತನಾಳಗಳ ಕಾಯಿಲೆಗಳು ವಿಶ್ವದಾದ್ಯಂತ ಅತಿ ಹೆಚ್ಚು ಸಾವುಗಳಿಗೆ ಕಾರಣವಾಗುತ್ತವೆ. ಜಗತ್ತಿನಲ್ಲಿ ಉಂಟಾಗುತ್ತಿರುವ ಸಾವಿನ ಪ್ರಕರಣಗಳಲ್ಲಿ ಶೇ. 32ರಷ್ಟು ಸಾವುಗಳು ಹೃದಯಕ್ಕೆ ಸಂಬಂಧಿಸಿದ ಸಮಸ್ಯೆಗಳಿಂದ ಉಂಟಾಗುತ್ತಿದೆ. ಹೃದಯರಕ್ತನಾಳದ ಕಾಯಿಲೆಯ ಅಪಾಯವನ್ನು ಜನರು ಹೇಗೆ ಕಡಿಮೆ ಮಾಡಬಹುದು? ಎಂಬ ಬಗ್ಗೆ ಹಲವು ರೀತಿಯ ಸಲಹೆಗಳು ಬರುತ್ತಲೇ ಇರುತ್ತವೆ. ಹೆಚ್ಚು ಹಣ್ಣುಗಳು ಮತ್ತು ತರಕಾರಿಗಳನ್ನು ತಿನ್ನುವುದು, ಉಪ್ಪು ಸೇವನೆಯನ್ನು ಕಡಿಮೆ ಮಾಡುವುದು, ನಿಯಮಿತ ದೈಹಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವುದು, ತಂಬಾಕು ಸೇವನೆ ಮಾಡದಿರುವುದು ಮತ್ತು ಮದ್ಯಪಾನ ಮಾಡದಿರುವುದು, ಆರೋಗ್ಯಕರ ಜೀವನಶೈಲಿಯನ್ನು ರೂಢಿಸಿಕೊಳ್ಳುವುದರಿಂದ ಹೃದ್ರೋಗದ ಅಪಾಯವನ್ನು ಕಡಿಮೆ ಮಾಡಬಹುದು ಎನ್ನಲಾಗುತ್ತದೆ. ಆದರೆ, ನಿಮ್ಮ ಹೃದಯವನ್ನು ಆರೋಗ್ಯವಾಗಿಡಲು ಸೂರ್ಯನ ಬೆಳಕು ಕೂಡ ಸಾಕಷ್ಟು ಮುಖ್ಯವಾಗಿದೆ ಎಂಬುದು ನಿಮ್ಮಲ್ಲಿ ಅನೇಕರಿಗೆ ತಿಳಿದಿರುವುದಿಲ್ಲ.

ವಿಟಮಿನ್ ಡಿಯನ್ನು ಸೂರ್ಯನ ಕಿರಣಗಳ ವಿಟಮಿನ್ ಎಂದು ಕರೆಯಲಾಗುತ್ತದೆ. ಕ್ಯಾಲ್ಸಿಯಂ ಸಮತೋಲನ, ಅಸ್ಥಿಪಂಜರದ ಆರೋಗ್ಯ, ರೋಗನಿರೋಧಕ ಶಕ್ತಿ, ಹೃದಯದ ರಕ್ತನಾಳದ ಮತ್ತು ಸಂತಾನೋತ್ಪತ್ತಿ ವ್ಯವಸ್ಥೆಯ ಕಾರ್ಯನಿರ್ವಹಣೆಯಲ್ಲಿ ವಿಟಮಿನ್ ಡಿ ಪ್ರಮುಖ ಪಾತ್ರ ವಹಿಸುತ್ತದೆ. ಜಾಗತಿಕವಾಗಿ ಸುಮಾರು 100 ಜನರು ವಿಟಮಿನ್ ಡಿಯಿಂದ ಬಳಲುತ್ತಿದ್ದಾರೆ. ವಿಟಮಿನ್ ಡಿ ಕೊರತೆಯು ಮಧುಮೇಹ, ಸಂಧಿವಾತ, ಮೂಳೆಗಳ ಸವಕಳಿ ಮತ್ತು ಕ್ಯಾನ್ಸರ್‌ನಂತಹ ವಿವಿಧ ಆರೋಗ್ಯ ಸಮಸ್ಯೆಗಳಿಗೆ ಸಂಬಂಧಿಸಿದೆ. ಸೂರ್ಯನ ಬೆಳಕಿಗೆ ಮೈಯನ್ನು ಒಡ್ಡಿಕೊಳ್ಳದೆ ಇರುವುದು ವಿಟಮಿನ್ ಡಿ ಕಡಿಮೆಯಾಗಲು ಮುಖ್ಯ ಕಾರಣ.

ಇದನ್ನೂ ಓದಿ: ವಿಟಮಿನ್ ಡಿ ಕೊರತೆಯಿಂದ ಸ್ತನ ಕ್ಯಾನ್ಸರ್​ ಬರುತ್ತಾ?

ನಿಮ್ಮ ಹೃದಯಕ್ಕೂ ಸೂರ್ಯನ ಬೆಳಕು ಬೇಕು ಎಂಬುದು ನಿಮಗೆ ಗೊತ್ತಾ?:

ಸೂರ್ಯನ ಕಿರಣಗಳು ಹಲವು ರೀತಿಯಲ್ಲಿ ನಮ್ಮ ಹೃದಯದ ಆರೋಗ್ಯವನ್ನು ಕಾಪಾಡುತ್ತದೆ. ಸೂರ್ಯನ ಬೆಳಕಿಗೆ ಒಡ್ಡಿಕೊಂಡಾಗ ಚರ್ಮದಲ್ಲಿರುವ 7-ಡಿಹೈಡ್ರೊಕೊಲೆಸ್ಟರಾಲ್ UVB ವಿಕಿರಣವನ್ನು ಹೀರಿಕೊಳ್ಳುತ್ತದೆ. ಅದು ವಿಟಮಿನ್ ಡಿ3 ಆಗಿ ಪರಿವರ್ತನೆಗೊಳ್ಳುತ್ತದೆ. ವಿಟಮಿನ್ ಡಿ ಕೊರತೆಯು ಉರಿಯೂತದ ಸ್ಥಿತಿಯನ್ನು ಉಂಟುಮಾಡುತ್ತದೆ ಮತ್ತು ಪರಿಧಮನಿಯ ಕಾಯಿಲೆಯ ಪ್ರಕ್ರಿಯೆಯನ್ನು ವೇಗಗೊಳಿಸುತ್ತದೆ ಎಂದು ಅನೇಕ ಸಂಶೋಧಕರು ಸಾಬೀತುಪಡಿಸಿದ್ದಾರೆ. ಸಾಕಷ್ಟು ಪ್ರಮಾಣದ ವಿಟಮಿನ್ ಡಿ ಉತ್ಪಾದಿಸಲು ದಿನಕ್ಕೆ 15 ರಿಂದ 20 ನಿಮಿಷಗಳ ಕಾಲ ಸೂರ್ಯನಿಗೆ ಒಡ್ಡಿಕೊಳ್ಳುವುದು ಅಗತ್ಯ.

ಇದನ್ನೂ ಓದಿ: Heart Health: ನಿಮ್ಮ ಹೃದಯದ ಆರೋಗ್ಯಕ್ಕೆ ದಿನಕ್ಕೆ 50 ಮೆಟ್ಟಿಲು ಹತ್ತಿ

ಚರ್ಮವು ಸಾರಜನಕ ಆಕ್ಸೈಡ್‌ನ ಗಮನಾರ್ಹ ಮೂಲವನ್ನು ಹೊಂದಿರುತ್ತದೆ. ಇದು ಸೂರ್ಯನ ಬೆಳಕಿಗೆ ಒಡ್ಡಿಕೊಂಡಾಗ ನೇರಳಾತೀತ ವಿಕಿರಣದಿಂದ ನೈಟ್ರಿಕ್ ಆಕ್ಸೈಡ್ ಆಗಿ ಬದಲಾಗುತ್ತದೆ. ಈ ನೈಟ್ರಿಕ್ ಆಕ್ಸೈಡ್ ವ್ಯವಸ್ಥಿತ ರಕ್ತಪರಿಚಲನೆಗೆ ಉಪಯುಕ್ತವಾಗಿದೆ. ಇದು ರಕ್ತದೊತ್ತಡವನ್ನು ಗಣನೀಯ ಪ್ರಮಾಣದಲ್ಲಿ ಕಡಿಮೆ ಮಾಡುತ್ತದೆ ಮತ್ತು ಹೃದಯರಕ್ತನಾಳದ ಪರಿಚಲನೆಯನ್ನು ಹೆಚ್ಚಿಸುತ್ತದೆ.

ಆದ್ದರಿಂದ, ಸಾಕಷ್ಟು ಸೂರ್ಯನ ಬೆಳಕು ನಿಮ್ಮ ಹೃದಯರಕ್ತನಾಳದ ಆರೋಗ್ಯಕ್ಕೆ ಅತ್ಯಂತ ಸಹಕಾರಿಯಾಗಿದೆ. ಆದರೆ, ಹೆಚ್ಚು ಸೂರ್ಯನ ಬೆಳಕು ಚರ್ಮವನ್ನು ಸುಡುತ್ತದೆ ಮತ್ತು ಚರ್ಮದ ಕ್ಯಾನ್ಸರ್​ಗೂ ಕಾರಣವಾಗಬಹುದು. ಹೀಗಾಗಿ, ಮುಂಜಾನೆ ಸೂರ್ಯನ ಬಿಸಿಲಿನಲ್ಲಿ 10-15 ನಿಮಿಷಗಳ ಕಾಲ ಮಾತ್ರ ಕುಳಿತುಕೊಳ್ಳುವುದು ನಿಮಗೆ ಅಗತ್ಯವಿರುವ ವಿಟಮಿನ್ ಡಿ ಅನ್ನು ಸುರಕ್ಷಿತವಾಗಿ ಪಡೆಯಲು ಸಹಾಯ ಮಾಡುತ್ತದೆ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ