ಗರ್ಭಾವಸ್ಥೆ (pregnancy) ಎಂಬುದು ಹೆಣ್ಣಿಗೆ ಹೊಸ ಜೀವನದ ಆರಂಭದ ದಿನಗಳಿದ್ದಂತೆ. ಇಲ್ಲಿಂದ ಬಾಣಂತನ ಮುಗಿಯುವ ವರೆಗೂ ದೇಹದಲ್ಲಿ ನಾನಾ ರೀತಿಯ ಬದಲಾವಣೆಗಳಾಗುತ್ತದೆ ಹಾಗೂ ಹಲವಾರು ಆರೋಗ್ಯ (health) ಸಮಸ್ಯೆಗಳನ್ನೂ ಕೂಡ ಎದುರಿಸಬೇಕಾಗುತ್ತದೆ. ಹಾಗಾಗಿ ಈ ಸಮಯದಲ್ಲಿ ಮಹಿಳೆಯರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಅದರಲ್ಲಿಯೂ ಆಹಾರದಲ್ಲಿ ಸ್ವಲ್ಪ ವ್ಯತ್ಯಾಸವಾದರೂ ಕೂಡ ಮಹಿಳೆಯ ಸಂಪೂರ್ಣ ಆರೋಗ್ಯವನ್ನು ಹಾಳು ಮಾಡಬಹುದು.
ಹಾಗಾಗಿ ಅವುಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು. ಅದರಲ್ಲಿಯೂ ಗರ್ಭಾವಸ್ಥೆಯ ವೇಳೆ ವೈದ್ಯರು ಕೆಲವು ಆಹಾರಗಳ ಸೇವನೆ ಮಾಡಬಾರದು ಎಂದು ಸಲಹೆ ನೀಡುತ್ತಾರೆ. ಅವುಗಳಲ್ಲಿ ತಂಪು ಪಾನೀಯವೂ ಒಂದು. ಆದರೆ ಕೆಲವರು ಇಂತಹ ಸಲಹೆಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡುವುದಿಲ್ಲ. ಈ ರೀತಿಯ ನಿರ್ಲಕ್ಷ್ಯದಿಂದ ಆರೋಗ್ಯ ಹದಗೆಡುವ ಸಾಧ್ಯತೆ ಹೆಚ್ಚಾಗಿರುತ್ತದೆ. ಹಾಗಾದರೆ ಗರ್ಭಾವಸ್ಥೆಯಲ್ಲಿ ಕೊಲ್ಡ್ ಡ್ರಿಂಕ್ ಕುಡಿಯಬಹುದೇ? ಇದರಿಂದ ಶರೀರಕ್ಕೆ ಹಾನಿಯಾಗುತ್ತದೆಯೇ? ಇಂತಹ ಪ್ರಶ್ನೆಗಳಿಗೆ ತಜ್ಞರು ನೀಡಿದ ಮಾಹಿತಿ ಇಲ್ಲಿದೆ.
ಮತ್ತಷ್ಟು ಓದಿ: Pregnancy Care: ಗರ್ಭಿಣಿಯರು ತಮ್ಮ ಆರೋಗ್ಯ ಕಾಪಾಡಿಕೊಳ್ಳಲು ಈ ವಿಷಯಗಳನ್ನು ಪಾಲನೆ ಮಾಡಿ
ಡಾ. ಸಲೋನಿ ಚಡ್ಡಾ ಅವರು ಹೇಳಿರುವ ಪ್ರಕಾರ, “ಗರ್ಭಿಣಿಯರು ತಂಪು ಪಾನೀಯಗಳ ಸೇವನೆಯನ್ನು ತಪ್ಪಿಸಬೇಕು. ಕಾರಣವೆಂದರೆ ತಂಪು ಪಾನೀಯಗಳಲ್ಲಿ ಸಕ್ಕರೆ ಪ್ರಮಾಣ ಹೆಚ್ಚಾಗಿರುತ್ತದೆ, ಇದು ಆರೋಗ್ಯಕ್ಕೆ ಹೆಚ್ಚು ಅಪಾಯಕಾರಿಯಾಗಬಹುದು. ಕೆಲವು ತಂಪು ಪಾನೀಯಗಳಲ್ಲಿ ಕ್ಯಾಫೀನ್ ಸಹ ಇರುತ್ತದೆ, ಇದರಿಂದ ಮಹಿಳೆಗೆ ನಿದ್ದೆಗೆ ಸಂಬಂಧಿಸಿದ ಒತ್ತಡ ಉಂಟಾಗಬಹುದು. ತಿಂಗಳಲ್ಲಿ ಒಮ್ಮೆ ಇದನ್ನು ಕುಡಿಯಬಹುದು, ಆದರೆ ಕುಡಿದ ಮೇಲೆ ಶುಗರ್ ಮಟ್ಟವನ್ನು ಗಮನಿಸಿ. ಶುಗರ್ ಹೆಚ್ಚಾಗುತ್ತಿದ್ದರೆ ತಂಪು ಪಾನೀಯಗಳು ನಿಮಗೆ ಹಾನಿ ಮಾಡಬಹುದು. ಹಾಗಾಗಿ ಅದರಿಂದ ಸಾಧ್ಯವಾದಷ್ಟು ದೂರವಿರಿ” ಎಂದು ಅವರು ಹೇಳಿದ್ದಾರೆ.
ಗರ್ಭಾವಸ್ಥೆಯಲ್ಲಿ ಯಾವ ರೀತಿಯ ಆಹಾರ ಸೇವನೆ ಮಾಡಬೇಕು?
ಸಾಮಾನ್ಯವಾಗಿ ಗರ್ಭಾವಸ್ಥೆಯಲ್ಲಿ ಫೋಲಿಕ್ ಆಮ್ಲ ಮತ್ತು ಕಬ್ಬಿಣದ ಅಂಶ ದೇಹಕ್ಕೆ ಬಹಳ ಮುಖ್ಯ. ಇದಕ್ಕೆ ಔಷಧಿಗಳು ಬರುತ್ತವೆ, ಆದರೆ ಅದರ ಜೊತೆಗೆ ಆಹಾರದ ಬಗ್ಗೆಯೂ ವಿಶೇಷ ಕಾಳಜಿ ವಹಿಸಬೇಕು. ಇದಲ್ಲದೆ, ಕ್ಯಾಲ್ಸಿಯಂ, ಪ್ರೋಟೀನ್ ಮತ್ತು ಜೀವಸತ್ವಗಳು ಆಹಾರದಲ್ಲಿ ಉತ್ತಮ ಪ್ರಮಾಣದಲ್ಲಿರಬೇಕು. ಇದಕ್ಕಾಗಿ, ತಾಜಾ ಹಣ್ಣು, ತರಕಾರಿ, ದ್ವಿದಳ ಧಾನ್ಯ, ಹಾಲು, ಮೊಸರು ನಿಮ್ಮ ಊಟ- ತಿಂಡಿಯಲ್ಲಿರಲಿ. ಏಕೆಂದರೆ ಇವುಗಳಲ್ಲಿ ಪ್ರೋಟೀನ್- ಜೀವಸತ್ವಗಳು ಮತ್ತು ಕ್ಯಾಲ್ಸಿಯಂ ಸಮೃದ್ಧವಾಗಿದ್ದು, ಗರ್ಭಾವಸ್ಥೆಯಲ್ಲಿ ಇಂತಹ ಆಹಾರಗಳನ್ನು ಉತ್ತಮ ಪ್ರಮಾಣದಲ್ಲಿ ಸೇವಿಸಿದರೆ, ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿರುತ್ತಾರೆ.
ಗರ್ಭಾವಸ್ಥೆಯಲ್ಲಿ ಏನು ಮಾಡಬಾರದು?
ಗರ್ಭಾವಸ್ಥೆಯಲ್ಲಿ ಅತಿಯಾದ ವ್ಯಾಯಾಮ ಮಾಡುವುದನ್ನು ತಪ್ಪಿಸಿ. ಸಿಗರೇಟ್ ಮತ್ತು ಆಲ್ಕೋಹಾಲ್ ಸೇವನೆಯ ಅಭ್ಯಾಸವಿದ್ದರೆ ಬಿಟ್ಟುಬಿಡಿ. ಜ್ವರ, ವಾಂತಿ, ತಲೆನೋವಿನಂತಹ ರೋಗಲಕ್ಷಣಗಳು ನಿರಂತರವಾಗಿ ಕಂಡು ಬಂದರೆ ಫಾಸ್ಟ್ ಫುಡ್ ತಿನ್ನಬೇಡಿ ಮತ್ತು ತಕ್ಷಣ ವೈದ್ಯರನ್ನು ಸಂಪರ್ಕಿಸಿ. ಈ ವಿಷಯದಲ್ಲಿ ನಿರ್ಲಕ್ಷ್ಯ ವಹಿಸಬೇಡಿ.
ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಯಾವುದೇ ರೀತಿಯಲ್ಲಿ ಅರ್ಹ ವೈದ್ಯಕೀಯ ಸಲಹೆಗೆ ಪರ್ಯಾಯವಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞರನ್ನು ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸುವುದನ್ನು ಮರೆಯಬೇಡಿ.
ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ