ಮಕ್ಕಳಲ್ಲಿ ಕಾಣಿಸಿಕೊಳ್ಳುವ ಹೊಟ್ಟೆನೋವಿಗೆ ಇಲ್ಲಿದೆ ಮನೆಮದ್ದು

| Updated By: ಅಕ್ಷಯ್​ ಪಲ್ಲಮಜಲು​​

Updated on: Aug 04, 2023 | 5:35 PM

ಹೊಟ್ಟೆ ನೋವು ವಿವಿಧ ಕಾರಣಗಳಿಂದ ಬರಬಹುದು. ಕೆಲವರಿಗೆ ಮಲಬದ್ದತೆಯಿಂದ, ಇನ್ನು ಕೆಲವರಲ್ಲಿ ಗ್ಯಾಸ್, ಅಲ್ಸರ್ ಕಾರಣದಿಂದ ಹೊಟ್ಟೆ ನೋವು ಕಾಣಿಸಿಕೊಳ್ಳುತ್ತದೆ. ಇನ್ನು ಸಾಮಾನ್ಯವಾಗಿ ಅಜೀರ್ಣ ಸಮಸ್ಯೆಯಿಂದಲೂ ಈ ತೊಂದರೆ ಉಂಟಾಗಬಹುದು. ಹಾಗಾಗಿ ಇದನ್ನು ತಿಳಿದು ಮಕ್ಕಳಿಗೆ ಮದ್ದನ್ನು ನೀಡಬೇಕು.

ಮಕ್ಕಳಲ್ಲಿ ಕಾಣಿಸಿಕೊಳ್ಳುವ ಹೊಟ್ಟೆನೋವಿಗೆ ಇಲ್ಲಿದೆ ಮನೆಮದ್ದು
ಸಾಂದರ್ಭಿಕ ಚಿತ್ರ
Image Credit source: stockphoto
Follow us on

ಹೊಟ್ಟೆ ನೋವು ಎಲ್ಲಾ ವಯಸ್ಸಿನವರಲ್ಲಿಯೂ ಸಾಮಾನ್ಯ. ಅದರಲ್ಲಿಯೂ ಮಕ್ಕಳಿಗೆ ಕಾಡುವುದು ಸಾಮಾನ್ಯವಾಗಿದೆ. ಹಾಗಾಗಿ ಪ್ರತಿ ಬಾರಿ ಮಕ್ಕಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವ ಬದಲು ಸಣ್ಣ ಪುಟ್ಟ ಸಮಸ್ಯೆಗಳಿಗೆ ಮನೆಯಲ್ಲಿ ಉತ್ತಮ ಮದ್ದನ್ನು ನೀಡಬಹುದು. ನಮ್ಮ ಮನೆಯಲ್ಲಿರುವ ಪದಾರ್ಥಗಳೇ ರೋಗ ಶಮನಕ್ಕೆ ದಾರಿ ಮಾಡಿ ಕೊಡುತ್ತದೆ. ಆದರೆ ಅದನ್ನು ತಿಳಿದುಕೊಳ್ಳಬೇಕಷ್ಟೆ. ಹೊಟ್ಟೆ ನೋವು ವಿವಿಧ ಕಾರಣಗಳಿಂದ ಬರಬಹುದು. ಕೆಲವರಿಗೆ ಮಲಬದ್ದತೆಯಿಂದ ಇನ್ನು ಕೆಲವರಲ್ಲಿ ಗ್ಯಾಸ್, ಅಲ್ಸರ್ ಕಾರಣದಿಂದ ಹೊಟ್ಟೆ ನೋವು ಕಾಣಿಸಿಕೊಳ್ಳುತ್ತದೆ. ಇನ್ನು ಸಾಮಾನ್ಯವಾಗಿ ಅಜೀರ್ಣ ಸಮಸ್ಯೆಯಿಂದಲೂ ಈ ತೊಂದರೆ ಉಂಟಾಗಬಹುದು. ಇದನ್ನು ತಿಳಿದು ಮನೆಯಲ್ಲಿಯೇ ಇರುವ ಸಾಮಗ್ರಿ ಬಳಸಿಕೊಂಡು ಮದ್ದನ್ನು ತಯಾರಿಸಬಹುದು ಈ ಬಗ್ಗೆ ಕೆಲವು ಸಲಹೆಗಳು ಇಲ್ಲಿವೆ.

-ಇಂತಹ ಸಾಮಾನ್ಯ ಹೊಟ್ಟೆ ನೋವಿಗೆ ಅತ್ಯುತ್ತಮ ಮನೆಮದ್ದೆಂದರೆ ಶುಂಠಿ. ಇದನ್ನು ತೊಳೆದು ಸಣ್ಣಕ್ಕೆ ಹೆಚ್ಚಿಕೊಂಡು ನೀರಿನಲ್ಲಿ ಚೆನ್ನಾಗಿ ಕುದಿಸಿ ಬಳಿಕ ಆ ನೀರನ್ನು ಕುಡಿಯುವುದರಿಂದ ಹೊಟ್ಟೆ ನೋವು ಅಥವಾ ಅಜೀರ್ಣದಂತಹ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ. ಇದನ್ನು ಮಕ್ಕಳು ಮಾತ್ರವಲ್ಲ ದೊಡ್ಡವರಿಗೂ ಕೂಡ ಹೊಟ್ಟೆ ನೋವಿನಿಂದ ಆರಾಮ ಪಡೆಯಲು ಒಂದು ಸರಳ ಮನೆ ಮದ್ದಾಗಿದೆ.

-ಇನ್ನು ಮೆಂತೆ ಕೂಡ ಹೊಟ್ಟೆ ನೋವಿಗೆ ರಾಮಬಾಣವಾಗಿದೆ. ಇದನ್ನು ಚೆನ್ನಾಗಿ ಕುದಿಸಿ ಕುಡಿಯಬಹುದು ಆದರೆ ಕಹಿ ಜಾಸ್ತಿ ಇರುವುದರಿಂದ ಸ್ವಲ್ಪ ಬೆಲ್ಲ ಸೇರಿಸಿಕೊಳ್ಳಬಹುದು. ಮಕ್ಕಳಿಗೆ, ಇದು ಸ್ವಲ್ಪ ಕಹಿ ಎನಿಸಿದರೂ ಕೂಡ ಹೊಟ್ಟೆ ನೋವನ್ನು ವೇಗವಾಗಿ ಕಡಿಮೆ ಮಾಡುತ್ತದೆ.

-ಹೊಟ್ಟೆ ನೋವು ಬಂದಾಗ ಪುದೀನಾ ಎಲೆಗಳನ್ನು ಚೆನ್ನಾಗಿ ತೊಳೆದು ಅದರಲ್ಲಿರುವ ನೀರನ್ನು ತೆಗೆದು ಜಗಿಯಬೇಕು. ಅಥವಾ ನೀವು ಚಹಾ ಪ್ರೀಯರಾಗಿದ್ದರೆ ನಿಮ್ಮ ಚಹಾದಲ್ಲಿ ಕೆಲವು ಪುದೀನಾ ಎಲೆ ಸೇರಿಸಿ ಕುಡಿಯಬಹುದು. ಹೀಗೆ ಮಾಡುವುದರಿಂದ ಹೊಟ್ಟೆ ನೋವು ಶಮನವಾಗುತ್ತದೆ. ಮಕ್ಕಳಿಗೆ ಚಹಾ ಕೊಡುವ ಬದಲು ಅದರ ರಸ ತೆಗೆದು ಸ್ವಲ್ಪ ಕುಡಿಯಲು ಕೊಡಬಹುದು. ಅಥವಾ ಚಹಾದಲ್ಲಿಯೇ ಅದನ್ನು ಸೇರಿಸಬಹುದು.

-ಅಲೋವೆರಾ ನಿಮಗೆ ಅನೇಕ ರೀತಿಯಲ್ಲಿ ಉಪಯೋಗಕ್ಕೆ ಬರುತ್ತದೆ ಎಂಬುದು ನಿಮಗೆ ತಿಳಿದಿರಬಹುದು. ಇದನ್ನು ಜ್ಯೂಸ್ ಮಾಡಿ ಕುಡಿಯುವುದರಿಂದ ಕೂಡ ಹೊಟ್ಟೆ ನೋವಿಗೆ ಪರಿಹಾರ ಕಾಣಬಹುದು. ಅಲೋವೆರಾದ ಒಳಗಿನ ಭಾಗವನ್ನು ತೆಗೆದು ಅರ್ಧ ಕಪ್ ಜ್ಯೂಸ್ ಮಾಡಿ ಮಕ್ಕಳಿಗೆ ಕುಡಿಸಬಹುದು. ಹಾಗೆಯೇ ಮಲಬದ್ಧತೆ, ಗ್ಯಾಸ್ ಮತ್ತು ಹೊಟ್ಟೆ ಉಬ್ಬುವ ಸಮಸ್ಯೆಗಳಿಗೂ ಇದರಿಂದ ಪರಿಹಾರ ದೊರೆಯುತ್ತದೆ.

ಇದನ್ನೂ ಓದಿ: ಪುದೀನಾ ಜ್ಯೂಸ್ ಕುಡಿದರೆ, ಈ ಎಲ್ಲಾ ಸಮಸ್ಯೆಗಳು ದೂರವಾಗುತ್ತೆ..!

-ಸಾಮಾನ್ಯವಾಗಿ ಹೊಟ್ಟೆ ನೋವು ಬಂದರೆ ಎಲ್ಲರೂ ನಿಂಬೆ ರಸದ ಮೊರೆ ಹೋಗುವುದು ಸಾಮಾನ್ಯ. ಆದರೆ ಸಕ್ಕರೆಯನ್ನು ಸೇರಿಸದೆಯೇ ಬಿಸಿ ನೀರಿಗೆ ನಿಂಬೆ ರಸವನ್ನು ಚೆನ್ನಾಗಿ ಮಿಶ್ರಣ ಮಾಡಿ ಕುಡಿಯಿರಿ. ಇದರಿಂದ ಕೂಡ ಹೊಟ್ಟೆ ನೋವು ಶಮನವಾಗುತ್ತದೆ.

-ಮಕ್ಕಳಲ್ಲಿ ಪದೇ ಪದೇ ಹೊಟ್ಟೆ ನೋವು ಕಾಣಿಸಿಕೊಳ್ಳುತ್ತಿದ್ದರೇ ಅದಕ್ಕೆ ಉತ್ತಮ ಪರಿಹಾರವೆಂದರೆ ಜಿರಿಗೆ ಹಾಕಿ ನೀರನ್ನು ಚೆನ್ನಾಗಿ ಕುದಿಸಿ ಅದನ್ನು ಒಂದು ಲೋಟಕ್ಕೆ ಹಾಕಿ ಅದಕ್ಕೆ ಸ್ವಲ್ಪ ಉಪ್ಪು ಮತ್ತು ನಿಂಬೆ ರಸ ಸೇರಿಸಿ ಮಕ್ಕಳಿಗೆ ಕೊಡುವುದರಿಂದ ಹೊಟ್ಟೆ ನೋವು ಮಾಯವಾಗುತ್ತದೆ. ಆದರೆ ಮಕ್ಕಳಿಗೆ ಇದನ್ನು ಜಾಸ್ತಿ ಕುಡಿಸಬಾರದು.

-ಒಂದು ಗ್ಲಾಸ್​ನಲ್ಲಿ ಬಿಸಿ ನೀರು ತೆಗೆದು ಅದಕ್ಕೆ ಒಂದು ಚಮಚ ನಿಂಬೆ ರಸ, ಒಣಶುಂಠಿ ಪುಡಿ ಮತ್ತು ಒಂದು ಸಣ್ಣ ಚಮಚ ಅಡುಗೆ ಸೋಡಾ ಮಿಶ್ರ ಮಾಡಿ ಕುಡಿಯಲು ಕೊಡಬೇಕು. ಇದರಿಂದ ಅಜೀರ್ಣ ಸಮಸ್ಯೆ ದೂರವಾಗುತ್ತದೆ. ಅಲ್ಲದೆ ತಕ್ಷಣ ಹೊಟ್ಟೆ ನೋವಿನಿಂದ ಮುಕ್ತಿ ಪಡೆಯಬಹುದು. ಆದರೆ ಅಡುಗೆ ಸೋಡಾ ಜಾಸ್ತಿಯಾಗಬಾರದು.

-ಪ್ರತಿದಿನ ಮುಂಜಾನೆ ಖಾಲಿ ಹೊಟ್ಟೆಯಲ್ಲಿ ಬಿಸಿ ನೀರಿಗೆ ಸ್ವಲ್ಪ ಜೇನುತುಪ್ಪ ಸೇರಿಸಿ ಸರಿಯಾಗಿ ಮಿಶ್ರಣ ಮಾಡಿ ಕುಡಿಯುವುದರಿಂದ ಸಹ ಹೊಟ್ಟೆ ನೋವಿನ ನಾನಾ ಸಮಸ್ಯೆಗಳಿಗೆ ಪರಿಹಾರ ಕಾಣಬಹುದು.

ಮಕ್ಕಳಲ್ಲಿ ಹೊಟ್ಟೆ ನೋವು ಯಾವುದೇ ಚಿಕಿತ್ಸೆಯಿಲ್ಲದೆ ಶೀಘ್ರವಾಗಿ ಗುಣವಾಗುತ್ತದೆ. ಈ ಸ್ಥಿತಿಯಲ್ಲಿ ವೈದ್ಯರನ್ನು ಕಾಣುವ ಅಗತ್ಯವಿಲ್ಲ. ಆದರೆ ನೋವು ಒಂದು ದಿನವಾದರೂ ಕಡಿಮೆಯಾಗದೇ ಇದ್ದರೆ ಆಗ ವೈದ್ಯರಲ್ಲಿ ಬಳಿಗೆ ಕರೆದುಕೊಂಡು ಹೋಗಿ.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ