ದಾಸವಾಳ ಹೂವಿಗಿದೆ ಅನೇಕ ಔಷಧೀಯ ಗುಣಗಳು; ಮನೆಯಂಗಳದ ಹೂವಿನ ಆರೋಗ್ಯ ಲಾಭಗಳನ್ನು ತಿಳಿದುಕೊಳ್ಳಿ

ದಾಸವಾಳವು ಬಹಳ ಆರೋಗ್ಯ ಉಪಯೋಗ ಹೊಂದಿರುವ ಹೂವಾಗಿದೆ. ಕೂದಲು, ಹೊಟ್ಟೆ ಹಾಗೂ ಸ್ತ್ರೀಯರ ಅನೇಕ ಸಮಸ್ಯೆಗಳನ್ನು ದಾಸವಾಳ ಪರಿಹರಿಸಬಲ್ಲದು. ರಕ್ತದೊತ್ತಡ ನಿಯಂತ್ರಣ, ಮುಟ್ಟು, ಕೂದಲು, ಬುದ್ಧಿಶಕ್ತಿ ಹೀಗೆ ಅನೇಕ ಸಮಸ್ಯೆಗಳಿಗೆ ದಾಸವಾಳ ಹೂ ಮತ್ತು ಅದರ ಎಲೆಗಳು ಉಪಯೋಗಿ.

  • TV9 Web Team
  • Published On - 19:40 PM, 5 Mar 2021
ದಾಸವಾಳ ಹೂವಿಗಿದೆ ಅನೇಕ ಔಷಧೀಯ ಗುಣಗಳು; ಮನೆಯಂಗಳದ ಹೂವಿನ ಆರೋಗ್ಯ ಲಾಭಗಳನ್ನು ತಿಳಿದುಕೊಳ್ಳಿ
ದಾಸವಾಳದಿಂದ ಆರೋಗ್ಯ ಸಮಸ್ಯೆಗಳಿಗೂ ಪರಿಹಾರ

ದಾಸವಾಳ ಎಂದರೆ ಮನೆಯ ಅಂಗಳದಲ್ಲಿ ಅರಳುವ ಹೂವಷ್ಟೇ. ದೇವರ ಪೂಜೆಗೆ, ಮಕ್ಕಳ ಆಟಕ್ಕೆ ಮಾತ್ರ ಈ ಹೂ ಬಳಕೆಯಾಗುತ್ತದೆ ಎಂದು ಅಂದುಕೊಂಡರೆ ನಿಮ್ಮ ಊಹೆ ತಪ್ಪು. ಕೆಂಪು, ಹಳದಿ, ಕೇಸರಿ ಹೀಗೆ ವಿವಿಧ ಬಣ್ಣಗಳಲ್ಲಿ ಕಾಣುವ ಈ ಹೂವು ಅಂಗಳದ ಅಂದಕ್ಕೆ ಮಾತ್ರವಲ್ಲ, ಆರೋಗ್ಯ ಕಾಪಾಡಿಕೊಳ್ಳಲೂ ಅತ್ಯುತ್ತಮ ಆಯ್ಕೆಯಾಗಿದೆ. ದಿನನಿತ್ಯದ ಜೀವನದಲ್ಲಿ ಹಲವು ಆರೋಗ್ಯ ಉಪಯೋಗಗಳನ್ನು ನೀಡುವ ಈ ಹೂವು ಎಲ್ಲಾ ವಯಸ್ಸಿನವರಿಗೆ ಉಪಯೋಗಿ. ದಾಸವಾಳದ ಮುಖ್ಯ ಆರೋಗ್ಯ ಗುಣಗಳೇನು ಎಂದು ತಿಳಿಯೋಣ.

ಕೂದಲಿನ ಸುರಕ್ಷತೆ ಕಾಪಾಡುವ ಹಲವು ಉತ್ಪನ್ನಗಳಲ್ಲಿ ದಾಸವಾಳ ಬಳಕೆಯಾಗಿರುವುದನ್ನು ನೀವು ಗಮನಿಸಿರಬಹುದು. ದಾಸವಾಳ ಕೂದಲಿನ ಸಮಸ್ಯೆಗೆ ಅತ್ಯುತ್ತಮ ಪರಿಹಾರವಾಗಿದೆ. ಕೂದಲು ಬೆಳವಣಿಗೆ, ತಲೆಹೊಟ್ಟು ಕಡಿಮೆ ಮಾಡಲು ಸಹಕಾರಿಯಾಗಿದೆ. ರಾತ್ರಿ ಮಲಗುವ ವೇಳೆಗೆ ಹೂ ಮುಡಿದು ಮಲಗಿದರೂ ಸಾಕು. ಕೂದಲಿನ ಆರೋಗ್ಯ ಕಾಪಾಡಿಕೊಳ್ಳಲು ದಾಸವಾಳ ಸಹಾಯ ಮಾಡುತ್ತದೆ.

ಮಹಿಳೆಯರ ಆರೋಗ್ಯ ಸಮಸ್ಯೆಗಳಿಗೂ ದಾಸವಾಳ ರಾಮಬಾಣವಾಗಿದೆ. ಋತುಚಕ್ರದ ಸಂದರ್ಭದಲ್ಲಿ ಹೆಚ್ಚು ರಕ್ತಸ್ರಾವವಾದರೆ ದಾಸವಾಳದ ಹೂವಿನ ದಳವನ್ನು ಜಗಿಯಬಹುದು. ಬೆಳಗ್ಗೆ ಎದ್ದು, ಐದಾರು ದಾಸವಾಳದ ಎಸಳು ಜಗಿದು, ನೀರು ಕುಡಿದರೆ ಗಂಭೀರ ಸಮಸ್ಯೆ ದೂರವಾಗಲು ಸಹಕಾರಿಯಾಗುತ್ತದೆ. ಮಹಿಳೆಯರ ಆರೋಗ್ಯ ಸಮಸ್ಯೆಗಳಿಗೆ ಸಂಬಂಧಿಸಿ, ಎರಡು ಅಥವಾ ಮೂರು ದಾಸವಾಳಗಳ ದಳಗಳನ್ನು ಜಗಿದು, ಹಾಲು ಕುಡಿದರೆ ಅದರಿಂದಲೂ ತೊಂದರೆ ದೂರೀಕರಿಸಬಹುದು. ಕೆಳ ಬೆನ್ನು ನೋವು ಮತ್ತು ಅನಿಮಿಯಾ ಸಮಸ್ಯೆಗೂ ದಾಸವಾಳ ಮದ್ದಾಗಿ ಕೆಲಸ ಮಾಡುತ್ತದೆ. ಋತುಚಕ್ರ ಸರಿಯಾದ ಸಮಯದಲ್ಲಿ ಆಗುತ್ತಿಲ್ಲವಾದರೆ ದಾಸವಾಳದ ಜ್ಯೂಸ್ ಮಾಡಿ, ಅದನ್ನು ಕುಡಿದರೆ ಕೂಡ ಆರೋಗ್ಯ ಸರಿ ಹೋಗುತ್ತದೆ.

ಗಂಡಸರು, 48 ದಿನಗಳ ಕಾಲ ಪ್ರತಿನಿತ್ಯ ಐದು ದಾಸವಾಳ ಹೂಗಳ ಎಸಳನ್ನು ಜಗಿದರೆ, ಹಲವು ಲೈಂಗಿಕ ಸಂಬಂಧಿ ಸಮಸ್ಯೆಗಳು ಸರಿಯಾಗುತ್ತವೆ. ಮಕ್ಕಳು ದಾಸವಾಳದ ದಳ ತಿಂದರೆ ಅದರಿಂದ ಅವರ ಬುದ್ಧಿಮತ್ತೆ ಚುರುಕಾಗುವುದರೊಂದಿಗೆ, ನೆನಪಿನ ಶಕ್ತಿಯೂ ಹೆಚ್ಚಾಗುತ್ತದೆ. ಆದರೆ, ಹೂವಿನೊಂದಿಗೆ ಅದರ ಪರಾಗವನ್ನು ಸೇವಿಸಬಾರದು.

ದಾಸವಾಳವನ್ನು ಡಯೆಟ್​ನ ಭಾಗವಾಗಿಯೂ ಬಳಸಬಹುದು. ಡಯೆಟ್ ಮಾಡಿ ಸುಸ್ತಾಗುವ ಅನುಭವ ಆಗಿದ್ದರೆ, ದಾಸವಾಳದ ಎಸಳುಗಳಿಂದ ಅಂತಹ ಅನುಭವವನ್ನು ಇಲ್ಲವಾಗಿಸಬಹುದು. ರಕ್ತದೊತ್ತಡ ನಿಯಂತ್ರಿಸುವಲ್ಲಿಯೂ ದಾಸವಾಳ ಕೆಲಸ ಮಾಡುತ್ತದೆ. ದಾಸವಾಳದ ಎಲೆಗಳನ್ನು ನೀರಿನಲ್ಲಿ ಕುದಿಸಿ ಕುಡಿದರೆ, ರಕ್ತದೊತ್ತಡ ನಿಯಂತ್ರಣಕ್ಕೆ ಸಹಾಯ ಮಾಡುತ್ತದೆ.

ದಾಸವಾಳವು ಬಹಳ ಆರೋಗ್ಯ ಉಪಯೋಗ ಹೊಂದಿರುವ ಹೂವಾಗಿದೆ. ಕೂದಲು, ಹೊಟ್ಟೆ ಹಾಗೂ ಸ್ತ್ರೀಯರ ಅನೇಕ ಸಮಸ್ಯೆಗಳನ್ನು ದಾಸವಾಳ ಪರಿಹರಿಸಬಲ್ಲದು. ರಕ್ತದೊತ್ತಡ ನಿಯಂತ್ರಣ, ಮುಟ್ಟು, ಕೂದಲು, ಬುದ್ಧಿಶಕ್ತಿ ಹೀಗೆ ಅನೇಕ ಸಮಸ್ಯೆಗಳಿಗೆ ದಾಸವಾಳ ಹೂ ಮತ್ತು ಅದರ ಎಲೆಗಳು ಉಪಯೋಗಿ.

ಇದನ್ನೂ ಓದಿ: Benefits of Mint Leaves: ಸುವಾಸನೆಯುಕ್ತ ಮೂಲಿಕೆ ಪುದೀನಾದಿಂದ ಇರುವ ವೈದ್ಯಕೀಯ ಉಪಯೋಗಗಳು ಒಂದೆರಡಲ್ಲ..!

Bad Breath: ಬಾಯಿ ದುರ್ವಾಸನೆಯ ಶೀಘ್ರ ಶಮನಕ್ಕೆ ಇಲ್ಲಿದೆ ಮನೆ ಮದ್ದು