ಒತ್ತಡದ ಜೀವನಶೈಲಿಯಿಂದಾಗಿ ಸಾಕಷ್ಟು ಜನರು ಪ್ರತಿದಿನ ತಲೆನೋವಿನ ಸಮಸ್ಯೆಯಿಂದ ಬಳಲುತ್ತಾರೆ. ಇದು ದೈನಂದಿನ ಚಟುವಟಿಕೆಯಲ್ಲಿ ಸಾಕಷ್ಟು ತೊಂದರೆಗಳನ್ನು ಉಂಟುಮಾಡುತ್ತದೆ. ಇದರಿಂದಾಗಿ ತಲೆನೋವು ತಕ್ಷಣಕ್ಕೆ ನಿವಾರಣೆಯಾಗಲು ಮಾತ್ರೆಗಳನ್ನು ನುಂಗುತ್ತಾರೆ. ಆದರೆ ಅತಿಯಾದ ಮಾತ್ರೆ ಸೇವನೆ ನಿಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮವನ್ನುಂಟು ಮಾಡಬಹುದು. ಆದ್ದರಿಂದ ಮಾತ್ರೆ ನುಂಗದೇ ತಲೆನೋವು ನಿವಾರಿಸಲು ಕೆಲವು ಸಿಂಪಲ್ ಮನೆಮದ್ದುಗಳನ್ನು ಬಳಸಿ, ಉತ್ತಮ ಫಲಿತಾಂಶ ಕಂಡುಕೊಳ್ಳಿ.
1. ಸಾಕಷ್ಟು ನೀರು ಕುಡಿಯಿರಿ:
ನಿರ್ಜಲೀಕರಣವು ಅನೇಕ ಜನರಲ್ಲಿ ತಲೆನೋವು ಉಂಟುಮಾಡುತ್ತದೆ, ಆದ್ದರಿಂದ ಸಾಕಷ್ಟು ನೀರು ಕುಡಿಯುವುದು ಅಗತ್ಯ. ದಿನಕ್ಕೆ 8-10 ಲೋಟ ನೀರು ಕುಡಿಯಬೇಕು. ದೇಹದಲ್ಲಿ ನೀರಿನ ಕೊರತೆಯಿಂದಲೂ ತಲೆನೋವು ಉಂಟಾಗುತ್ತದೆ, ಆದ್ದರಿಂದ ಸಾಕಷ್ಟು ನೀರು ಕುಡಿಯಿರಿ ಮತ್ತು ತಲೆನೋವಿನ ಸಂದರ್ಭದಲ್ಲಿಯೂ ನೀರನ್ನು ಕುಡಿಯುವುದು ನಿಮಗೆ ಪ್ರಯೋಜನಕಾರಿಯಾಗಿದೆ. ನೀರು ನಿಮಗೆ ತಲೆನೋವಿನಿಂದ ತ್ವರಿತ ಪರಿಹಾರವನ್ನು ನೀಡುತ್ತದೆ.
2. ಐಸ್ ಪ್ಯಾಕ್:
ಐಸ್ ಪ್ಯಾಕ್ ನಿಮಗೆ ತಲೆನೋವು ನಿವಾರಿಸಲು ಸಹಾಯ ಮಾಡುತ್ತದೆ, ಇದಕ್ಕಾಗಿ ಹಾಸಿಗೆಯಲ್ಲಿ ಮಲಗಿಕೊಳ್ಳಿ ಮತ್ತು ಕಣ್ಣುಗಳು ಮತ್ತು ಹಣೆಯ ಮೇಲೆ ಕೋಲ್ಡ್ ಕಂಪ್ರೆಸ್ ಅಥವಾ ಒದ್ದೆಯಾದ ಬಟ್ಟೆಯನ್ನು ಇರಿಸಿ. ಇದಕ್ಕಾಗಿ ನೀವು ಸಣ್ಣ ಐಸ್ ತುಂಡುಗಳನ್ನು ಸಹ ಬಳಸಬಹುದು. ಈ ಐಸ್ ಕ್ಯೂಬ್‌ಗಳಿಂದ ನೀವು ನಿಮ್ಮ ಹಣೆ ಮತ್ತು ನೆತ್ತಿಯನ್ನು 10 ನಿಮಿಷಗಳ ಕಾಲ ಮಸಾಜ್ ಮಾಡಬಹುದು . ಹೀಗೆ ಮಾಡುವುದರಿಂದ ತಲೆನೋವಿನಿಂದ ಬೇಗ ಪರಿಹಾರ ಸಿಗುತ್ತದೆ.
3. ಬೆಚ್ಚಗಿನ ನೀರಿನಲ್ಲಿ ಪಾದಗಳನ್ನು ಇರಿಸಿ:
ಬೆಚ್ಚಗಿನ ನೀರಿನಲ್ಲಿ ಪಾದಗಳನ್ನು ಅದ್ದಿ ಕುಳಿತುಕೊಳ್ಳುವುದು ಕೆಲವೊಮ್ಮೆ ತಲೆನೋವಿನಿಂದ ಪರಿಹಾರವನ್ನು ನೀಡುತ್ತದೆ. ಬೆಚ್ಚಗಿನ ನೀರು ನಿಮ್ಮ ತಲೆಗೆ ರಕ್ತ ಪೂರೈಕೆಗೆ ಸಹಾಯ ಮಾಡುತ್ತದೆ, ಇದು ತಕ್ಷಣದ ತಲೆನೋವು ಪರಿಹಾರವನ್ನು ನೀಡುತ್ತದೆ.
4. ಕೋಣೆಯ ದೀಪಗಳನ್ನು ಮಂದಗೊಳಿಸಿ:
ಅನೇಕ ಸಂದರ್ಭಗಳಲ್ಲಿ, ಕೋಣೆಯಲ್ಲಿನ ಬೆಳಕು ನಿಮ್ಮ ತಲೆನೋವನ್ನು ಉಲ್ಬಣಗೊಳಿಸಬಹುದು. ಈ ಸಮಯದಲ್ಲಿ ಮೊಬೈಲ್ ಅಥವಾ ಕೋಣೆಯ ಪ್ರಖರ ಬೆಳಕು ಕೂಡ ನಿಮ್ಮನ್ನು ತೊಂದರೆಗೊಳಿಸಬಹುದು. ಕೋಣೆಯಲ್ಲಿನ ದೀಪಗಳನ್ನು ಆಫ್ ಮಾಡಿ ಅಥವಾ ಮಂದಗೊಳಿಸುವುದರಿಂದ ಕೆಲವೊಮ್ಮೆ ತಲೆನೋವು ನಿವಾರಣೆಯಾಗುತ್ತದೆ.
5. ಸಾರಯುಕ್ತ ತೈಲದಿಂದ ಮಸಾಜ್:
ಪುದೀನಾ ಮತ್ತು ರೋಸ್ಮರಿಗಳಂತಹ ಸಾರಭೂತ ತೈಲಗಳು ನಿಮಗೆ ತಲೆನೋವನ್ನು ನಿವಾರಿಸಲು ಸಹಾಯ ಮಾಡುತ್ತದೆ. ಈ ತೈಲಗಳ ಬಳಕೆಯು ರಕ್ತನಾಳಗಳನ್ನು ಹಿಗ್ಗಿಸಲು ಸಹಾಯ ಮಾಡುತ್ತದೆ, ರಕ್ತ ಪರಿಚಲನೆ ಹೆಚ್ಚಿಸುತ್ತದೆ, ಮನಸ್ಸನ್ನು ಶಾಂತಗೊಳಿಸುತ್ತದೆ ಮತ್ತು ತಲೆನೋವು ನಿವಾರಿಸುತ್ತದೆ.
6. ಸಾಕಷ್ಟು ನಿದ್ರೆ ಮಾಡಿ:
ತಲೆನೋವಿನ ಸಮಯದಲ್ಲಿ ನಿದ್ದೆ ಬರುವುದೇ ಸ್ವಲ್ಪ ಕಷ್ಟ. ಆದರೆ ನೀವು ಕೋಣೆಯಲ್ಲಿ ದೀಪಗಳನ್ನು ಆಫ್ ಮಾಡಿ ಮಲಗಲು ಪ್ರಯತ್ನಿಸಿದರೆ, ನಿಮ್ಮ ತಲೆನೋವಿನಿಂದ ನೀವು ಖಂಡಿತವಾಗಿಯೂ ಪರಿಹಾರವನ್ನು ಪಡೆಯುತ್ತೀರಿ.‘
ಇದನ್ನೂ ಓದಿ: ಹೆರಿಗೆ ಬಳಿಕ ಮಹಿಳೆಯರಲ್ಲಿ ಹೆಚ್ಚುತ್ತಿದೆ ಶಾಶ್ವತ ಆರೋಗ್ಯ ಸಮಸ್ಯೆ
ಅನೇಕರು ತಲೆನೋವು ಬಂದ ತಕ್ಷಣ ಚಹಾ ಕುಡಿಯಲು ಪ್ರಾರಂಭಿಸುತ್ತಾರೆ. ಚಹಾವು ತಮ್ಮ ತಲೆನೋವನ್ನು ನಿವಾರಿಸುತ್ತದೆ ಎಂಬ ನಂಬಿಕೆ. ಆದರೆ ನಿಮಗೆ ತಲೆನೋವು ಇದ್ದರೆ, ಚಹಾವನ್ನು ಸೇವಿಸಬೇಡಿ. ಬದಲಾಗಿ, ನೀರನ್ನು ಕುಡಿಯುವ ಮೂಲಕ ವಿಶ್ರಾಂತಿ ಪಡೆಯಲು ಪ್ರಯತ್ನಿಸಿ. ಇದಲ್ಲದೆ, ಹಸಿವು ತಲೆನೋವು ಹೆಚ್ಚಾಗುತ್ತದೆ, ಆದ್ದರಿಂದ ಬೆಳಿಗ್ಗೆ ತಿಂಡಿ ತಿನ್ನಲು ಮರೆಯದಿರಿ.
ಈ ಸಣ್ಣ ಮನೆಮದ್ದುಗಳು ನಿಮಗೆ ತಲೆನೋವಿನಿಂದ ಉಪಶಮನವನ್ನು ನೀಡುತ್ತದೆ. ಆದರೆ ಪದೇ ಪದೇ ತಲೆನೋವಿನ ಸಮಸ್ಯೆಯಿಂದ ಬಳಲುತ್ತಿದ್ದರೆ, ವೈದ್ಯರನ್ನು ಸಂಪರ್ಕಿಸುವುದು ಅತ್ಯಂತ ಅಗತ್ಯ.
ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 1:13 pm, Sat, 9 December 23